‘ಆರ್‌ಡಿಎಕ್ಸ್ಎಂದರೆ ಗೊಬ್ಬರದ ದಾಸ್ತಾನೇ?’ : ಟೈಮ್ಸ್ ಆಫ್ ಇಂಡಿಯಾಕ್ಕೆ ಪೊಲೀಸರ ಛೀಮಾರಿ

     
 ಭಟ್ಕಳದಲ್ಲಿ ಆರ್‌ಡಿಎಕ್ಸ್: ಕತೆ ಕಟ್ಟಿದ ಮಾಧ್ಯಮಗಳು
ಭಟ್ಕಳ, ಮಾ.24: ಭಟ್ಕಳ ಆರ್‌ಡಿಎಕ್ಸ್‌ನ ಭಾರೀ ಗೊದಾಮು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟ ವಾದ ವರದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆರ್‌ಡಿಎಕ್ಸ್ ಎಂದರೆ ಈ ಪತ್ರಕರ್ತರು ಗೊಬ್ಬರದ ದಾಸ್ತಾನು ಎಂದು ತಿಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮಾಚ್ 23, 2012ರ ಟೈಮ್ಸ್ ಆಫ್ ಇಂಡಿಯಾ ಸಂಚಿಕೆಯಲ್ಲಿ ರಾಜೀವ್ ಕೊಲ್ಲದ್ ಎಂಬಾತ ಆಧಾರ ರಹಿತ ವರದಿಯೊಂದನ್ನು ಛಾಪಿಸಿದ್ದು, ಭಟ್ಕಳದಲ್ಲಿ ಭಾರೀ ಆರ್‌ಡಿಎಕ್ಸ್ ಗೋದಾಮೊಂದಿದೆ ಎಂದು ಬರೆದಿದ್ದು, ಈ ಮೂಲಕ ಭಟ್ಕಳದಲ್ಲಿ ಆತಂಕದ ವಾತಾವರಣ ಮೂಡಿಸಲು ಪ್ರಯತ್ನಿಸಿದ್ದ. ಇದೀಗ, ಈತನ ವರದಿಯನ್ನು ಪೊಲೀಸರು ಸಾರಸಗಟಾಗಿ ಅಲ್ಲಗಳೆದಿದ್ದಾರೆ.
 ಈ ಹಿಂದೆಯೂ ಭಟ್ಕಳ ಕುರಿತಂತೆ ಹಲವಾರು ಊಹಾಪೋಹಗಳ ಕಪೋಲಕಲ್ಪಿತ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದು, ಇದು ಕೂಡ ಅವುಗಳ ಸಾಲಿನಲ್ಲಿ ಸೇರಿಕೊಂಡಿದೆ. ಕೇರಳದಲ್ಲಿ ಬಂಧಿತ ನಾಸಿರ್ ಎಂಬ ವ್ಯಕ್ತಿಯು ಪೋಲಿಸರಿಗೆ ಮಾಹಿತಿ ನೀಡಿದ್ದಾನೆ ಎಂದೆಲ್ಲ ತನ್ನ ವರದಿಯಲ್ಲಿ ಗೀಚಿದ್ದು, ಭಟ್ಕಳದಲ್ಲಿ ಆರ್‌ಡಿಎಕ್ಸ್ ಸಂಗ್ರಹದ ದೊಡ್ಡ ಗೋದಾಮು ಇದೆ. ಬೇರೆಡೆಯಿಂದ ಸಾಗಿಸಲು ಆಗದೆ ಇರುವುದರಿಂದ ಭಟ್ಕಳದಲ್ಲಿಯೆ ಆರ್‌ಡಿಎಕ್ಸ್ ತಯಾರು ಮಾಡಲಾಗುತ್ತಿದೆ ಎಂಬೆಲ್ಲ ಕಟ್ಟುಕತೆಯನ್ನು ಹಣೆಯಲಾಗಿದೆ.
 ಈ ಕುರಿತು ‘ವಾರ್ತಾಭಾರತಿ’ ಉತ್ತರಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣರನ್ನು ವಿಚಾರಿಸಿದಾಗ ಅವರು ಹೌಹಾರಿ ಹೋದರು. ಆರ್‌ಡಿಎಕ್ಸ್ ಗೋದಾಮು ಹೊಂದಲು ಅದೇನು ಗೊಬ್ಬರದ ದಾಸ್ತಾನಾಗಿದೆಯೆ? ಎಂದು ಮರುಪ್ರಶ್ನಿಸಿದರು. ಕೇಂದ್ರ ಗುಪ್ತಚರ ಇಲಾಖೆ, ಪೋಲಿಸ್ ಇಲಾಖೆ ಮತ್ತು ಇನ್ನಿತರ ಎಜೆನ್ಸಿಗಳಿಗೆ ತಿಳಿಯದ ವಿಚಾರ ಆ ಪತ್ರಿಕೆಗೆ ಹೇಗೆ ತಿಳಿಯಿತು? ಭಟ್ಕಳದ ಹೆಸರಿಗೆ ಕಳಂಕವನ್ನು ತರುವ ಪ್ರಯತ್ನ ಇದಾಗಿದೆ ಎಂದು ನುಡಿದ ಅವರು, ನಾನು ಭಟ್ಕಳಕ್ಕೆ ಹಲವಾರು ಬಾರಿ ಹೋಗಿದ್ದೇನೆ. ಅಂತಹ ಯಾವುದೇ ಕುರುಹುಗಳಾಗಲಿ, ಚಟುವಟಿಕೆಗಳಾಗಿ ಅಲ್ಲಿ ನಡೆಯುತ್ತಿಲ್ಲ. ಇದೆಲ್ಲ ಮಾಧ್ಯಮದವರ ಕಟ್ಟುಕತೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಭಟ್ಕಳದಲ್ಲಿ ಅಂತಹದ್ದೇನಾದರೂ ಇದೆ ಎಂದು ಮಾಹಿತಿ ಇದ್ದರೆ ಇಂದು ನಾನು ಕಾರವಾರದ ಬದಲು ಭಟ್ಕಳದಲ್ಲಿ ಇರಬೇಕಾಗಿತ್ತು. ಇದೆಲ್ಲ ಸುಳ್ಳು ಸುದ್ದಿ. ಇಂತಹ ಸುಳ್ಳು ಹಾಗೂ ಗಾಳಿ ಸುದ್ದಿಗಳಿಗೆ ಯಾವುದೇ ಆಧಾರವಿಲ್ಲ. ಇದಕ್ಕೆ ರಾಜ್ಯದ ಜನತೆ ಕಿವಿಗೊಡಬಾರದು ಎಂದು ಅವರು ತಿಳಿಸಿದರು.
ಗುಪ್ತಚರ ಇಲಾಖೆಯು ಇದನ್ನು ಅಲ್ಲಗೆಳೆದಿದ್ದು, ಭಟ್ಕಳದಲ್ಲಿ ಆರ್‌ಡಿಎಕ್ಸ್ಸ್ ಇರುವುದರ ಬಗ್ಗೆ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ತಿಳಿಸಿದ್ದಾರೆ. ಆಂಗ್ಲ ಪತ್ರಿಕೆಯ ವರದಿಯನ್ನು ಆಧರಿಸಿದ ಶನಿವಾರದಂದು ದೈನಿಕ ಭಾಸ್ಕರ ಅಂತರ್ಜಾಲ ಆವೃತ್ತಿಯು ಭಟ್ಕಳದಲ್ಲಿ ಆರ್‌ಡಿಎಕ್ಸ್ಸ್ ಇರುವ ಹಿನ್ನೆಲೆಯಲ್ಲಿ ಇಂದು ಪೋಲಿಸರು ಹಲವಾರು ಕಡೆ ವಿಚಾರಣೆಯನ್ನು ಮಾಡಲಾಗಿದೆ. ಅಂತಹ ಯಾವುದೆ ವಸ್ತು ಇರುವ ಬಗ್ಗೆ ಪೋಲಿಸರಿಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಬರೆದಿದೆ.
 ಆದರೆ ಪೋಲಿಸ್ ಮೂಲಗಳು ಇದನ್ನು ಅಲ್ಲಗೆಳೆದಿದ್ದು ಇಲ್ಲಿ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಯಾಗಲಿ, ದಾಳಿಗಳಾಗಲಿ ನಡೆದಿಲ್ಲ. ಇದು ಕೂಡ ಮಾಧ್ಯಮಗಳ ಸೃಷ್ಟಿ ಎಂದು ಹೇಳಿವೆ. ಭಟ್ಕಳ ಡಿಎಸ್ಪಿಯಾದ ಎಂ.ನಾರಾಯಣ ಅವರು ಇಂತಹ ಘಟನೆ ಕುರಿತಂತೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Leave a Reply