ಬಿನ್ನಾಳದಲ್ಲೊಂದು ವಿಶಿಷ್ಠ ಸಾರ್ವಜನಿಕ ಗ್ರಂಥಾಲಯ

ಕೊಪ್ಪಳ: ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಕಳೆದ ೨ ವರ್ಷಗಳಿಂದ ಶ್ರೀ ಸಾಯಿ ಕಲ್ಪತರು ಫೌಂಡೇಶನ್ ಸಂಸ್ಥೆಯ ಅಡಿಯಲ್ಲಿ ಸಾರ್ವಜನಿಕ ಗ್ರಂಥಾಲಯವೊಂದನ್ನು ತೆರೆಯಲಾಗಿದ್ದು ಇಂದು ೨ ವರ್ಷಗಳನ್ನು ಪೋರೈಸಿ ೩ ನೇ ವರ್ಷಕ್ಕೆ ಕಾಲಿಟ್ಟಿದೆ.
 ನಮ್ಮ ಅಭಿವೃದ್ಧಿಗೆ ನಾವೇ ದಾರಿದೀಪ ಸರಕಾರ ಅನ್ನೋ ಕುರುಡು ವ್ಯವಸ್ಥೆಯ ಮುಂದೆ ಕೈ ಚಾಚಿ ಬೇಡುವುದನ್ನು ಬಿಟ್ಟು ನಮ್ಮ ಮೂಲಭೂತ ಸೌಲಭ್ಯಗಳನ್ನು ಸಾಧ್ಯವಾದಷ್ಟು ನಾವೇ ಕಲ್ಪಿಸಿಕೊಂಡಾಗ ನಮ್ಮ ಸಂಪೂರ್ಣ ಅಭಿವೃದ್ಧಿ ಸಾಧ್ಯ, ಬಹುತೇಕ ರಾಜಕಾರಿಣಿಗಳು ಜನರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಸತತ ಎರಡು ವರ್ಷಗಳಿಂದ ನಾವು ನಮ್ಮ ಭಾಗದ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಹಿಡಿದು ಪ್ರಧಾನಮಂತ್ರಿವರೆಗೂ ನಮ್ಮೂರಿಗೊಂದು ಗ್ರಂಥಾಲಯ ನಿರ್ಮಿಸಿಕೊಡಲು ಪತ್ರ ಬರೆದಿದ್ದೇವೆ. ಯಾರು ಅದಕ್ಕೆ ಸ್ಪಂದಿಸಲಿಲ್ಲ.  
ಇದರಿಂದ ಬೇಸತ್ತು ಸ್ನೇಹಿತರೆಲ್ಲರೂ ಸೇರಿ ಗ್ರಂಥಾಲಯವೊಂದನ್ನು ತೆರೆಯುವ ನಿರ್ಧಾರ ಮಾಡಿ ಜನೇವರಿ ೨೦೧೨ರಲ್ಲಿ ಗ್ರಾಮೀಣ ಭಾಗದಲ್ಲೊಂದು ಗ್ರಂಥಾಲಯ ನಿರ್ಮಿಸುತ್ತಿದ್ದೇವೆ ಆಸಕ್ತರು ತಮ್ಮಲ್ಲಿರುವ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿ ಎಂಬ ಪ್ರಕಟಣೆಯನ್ನು  ಹಲವಾರು ಪತ್ರಿಕೆಗಳಿಗೆ ನೀಡಿದ್ದೆವು. 
ಇದನ್ನೊದಿದ ಹಲವಾರು ಸಾಹಿತಿಗಳು, ಶಿಕ್ಷಣ ಪ್ರೇಮಿಗಳು ನಮ್ಮನ್ನು ಬೆನ್ನುತಟ್ಟಿ ಹುರಿದುಂಬಿಸಿದರು, ಅದರಲ್ಲಿ ಕೊಪ್ಪಳದ ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ ಅವರು ನಮ್ಮ ಆಸೆಗೆ ಒತ್ತಾಸೆಯಾಗಿ, ನಮ್ಮ ಪ್ರಯತ್ನಕ್ಕೆ ಪುಷ್ಠಿ ನೀಡಿ ತಮ್ಮಲ್ಲಿರುವ ನೂರಾರು ಪುಸ್ತಕಗಳನ್ನು ನಮ್ಮ ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಅವಶ್ಯಕತೆ ಇದೆ. ನಿಮ್ಮ ಸಂಸ್ಥೆಯಿಂದ ಗ್ರಂಥಾಲಯ ತೆರೆಯುವ ಉದ್ದೇಶ ಕೈಗೊಂಡಿರುವುದು ಒಂದು ಉತ್ತಮ ಕೆಲಸ ಎಂದು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದರಂತೆ ಸಾಹಿತಿಗಳಾದ ಅಕ್ಬರ ಕಾಲಿಮಿರ್ಚಿ, ಹನುಮಂತಪ್ಪ ಅಂಡಗಿ ಚಿಲವಾಡಗಿ ಮುಂತಾದವರು ತಮ್ಮಲ್ಲಿರುವ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ನಮ್ಮ ಗ್ರಾಮದ ಹಲವಾರು ಸ್ನೇಹಿತರು ಗ್ರಂಥಾಲಯಕ್ಕೆ ದಿನ ಪತ್ರಿಕೆಗಳನ್ನು ಹಾಕಿಸುವುದರ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ, ಪ್ರತಿದಿನ ೩ ದಿನಪತ್ರಿಕೆಗಳನ್ನೊಳಗೊಂಡು ಹಲವು ಪುಸ್ತಕಗಳಿರುವ ಈ ಗ್ರಂಥಾಲಯ ಇವತ್ತಿಗೆ ಪ್ರಾರಂಭವಾಗಿ ೨ ವರ್ಷಗಳು ತುಂಬಿವೆ. 
ಈ ಸಂದರ್ಭದಲ್ಲಿ ಗ್ರಂಥಾಲಯದ ವ್ಯವಸ್ಥಾಪಕರಾದ ಶ್ರೀ ಸಾಯಿ ಕಲ್ಪತರು ಫೌಂಡೇಶನ್ ಸಂಸ್ಥಾಪಕ ಜಗದೀಶ್ ಚಟ್ಟಿ ಮತ್ತು ಅಧ್ಯಕ್ಷ ಬಸವರಾಜ ಹನಮಂತಪ್ಪ ಚಟ್ಟಿ, ಮತ್ತು ಸದಸ್ಯರಾದ ಅಂದಪ್ಪ ಬಂಡ್ರಿ, ಸುರೇಶ್ ಕೊಪ್ಪದ, ಮಂಜುನಾಥ, ಮುನ್ನಾಸಾಬ್, ಶಿವುಕುಮಾರ ಮುತ್ತಾಳ, ಗುರುಲಿಂಗ್ಪಪ ಆರೇರ ಪ್ರೋತ್ಸಾಹಿಸಿದವರಿಗೆಲ್ಲ ವಂದನೆಗಳನ್ನು ಸಲ್ಲಿಸಿದ್ದಾರೆ.  ಗ್ರಂಥಾಲಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು ಆಸಕ್ತರು ತಾವು ಓದಿ ಮುಗಿಸಿದ ತಮ್ಮಲ್ಲಿರುವ ಪುಸ್ತಕಗಳ್ನು ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ, 
ಶ್ರೀ ಸಾಯಿ ಕಲ್ಪತರು ಫೌಡೇಶನ್ (ರಿ) ಬಿನ್ನಾಳ   
ಅಂಚೆ: ಬಿನ್ನಾಳ, ತಾ: ಯಲಬುರ್ಗ  ಜಿ: ಕೊಪ್ಪಳ – ೫೮೩೨೩೨, 
 ದೂರವಾಣಿ : ೯೯೪೫೬೬೧೫೭೨, 

Leave a Reply