ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕ ಸ್ವಾವಲಂಬಿಗಳಾಗಿ- ಡಾ. ಪ್ರವೀಣಕುಮಾರ್.

ಕೊಪ್ಪಳ, ಮಾ.೧೯ ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಹಾಗೂ ಪ್ರಗತಿಪರ ಮಹಿಳಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಮಹಿಳಾ ಸಬಲೀಕರಣದ ಧ್ಯೇಯೋದ್ದೇಶವನ್ನಿಟ್ಟುಕೊಂಡು, ಮಹಿಳೆಯರನ್ನು ಸಬಲರನ್ನಾಗಿಸಲು ಪೂರಕ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ.  ಆದರೆ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರು ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ.  ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ವಿಮರ್ಶೆ ನಡೆಯಬೇಕಾದ ಅಗತ್ಯವಿದೆ.  ತಾಯಿ, ತಂಗಿಯರು, ಹೆಣ್ಣು ಮಕ್ಕಳನ್ನು ವಯಕ್ತಿಕ ಸಂಬಂಧಗಳಲ್ಲಿ ಮಾತ್ರ ಪ್ರೀತಿಸುತ್ತೇವೆ.  ಆದರೆ, ಅವರ ಆಸೆ, ಆಕಾಂಕ್ಷೆಗಳಿಗೆ ಕುಟುಂಬದಲ್ಲಿ ಮನ್ನಣೆ ದೊರೆಯುತ್ತಿಲ್ಲ.  ಸಮಾಜದ ಶೇ. ೫೦ ರಷ್ಟು ಜನಸಂಖ್ಯೆಯಷ್ಟು ಇರುವ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರೆಯುತ್ತಿಲ್ಲ.  ಅವರ ಶಕ್ತಿ ಸಾಮರ್ಥ್ಯಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಕೆ ಆಗುತ್ತಿಲ್ಲ.  ಈ ರೀತಿ ಅವಕಾಶಗಳಿಂದ ವಂಚಿತರಾದರೆ, ಸಮಾಜದ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದರು.   ಐತಿಹಾಸಿಕ, ಧಾರ್ಮಿಕ ಹಾಗೂ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜ್ಯತಾ ಭಾವದಿಂದ ನೋಡುವ ಪರಿಕಲ್ಪನೆ ಬೆಳೆದುಬಂದಿದೆ.  ಆದರೆ ಸಮಾಜದಲ್ಲಿ ಅವರಿಗೆ ಸಿಗಬೇಕಾದ ಗೌರವ, ಅವಕಾಶಗಳು ದೊರೆಯುತ್ತಿಲ್ಲ.  ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಷ್ಟೇ ಅಲ್ಲ, ಸಬಲರೂ ಆಗಬೇಕಿದೆ.  ಹೆಣ್ಣು ಮಕ್ಕಳನ್ನು ೧೮ ವರ್ಷ ಅಲ್ಲ, ಕನಿಷ್ಟ ೨೧ ವರ್ಷದವರೆಗೂ ಮದುವೆ ಮಾಡಬೇಡಿ, ಅವರನ್ನು ಚೆನ್ನಾಗಿ ಓದಿಸಿ, ಅವರು ಇಚ್ಛಿಸುವ ವಿಷಯದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸಿ.  ಮಹಿಳೆಯರನ್ನು ಪೂಜ್ಯತಾ ಭಾವದಿಂದ ನೋಡುವುದಷ್ಟೇ ಅಲ್ಲ, ಧನ್ಯತಾ ಭಾವವೂ ಮೂಡುವಂತೆ ಮಾಡುವ ಅಗತ್ಯವಿದೆ.  ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ಸರ್ಕಾರ ರೂಪಿಸಿ, ಜಾರಿಗೊಳಿಸುವ ಯೋಜನೆಗಳ ಸದುಪಯೋಗ ಪಡೆದುಕೊಂಡು, ಮಹಿಳೆಯರು ಸ್ವಾವಲಂಬಿಗಳಾಗಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಕರೆ ನೀಡಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯರಿಗೆ ಇರುವ ಗೌರವ, ಜಗತ್ತಿನ ಬೇರ್‍ಯಾವುದೇ ದೇಶದಲ್ಲಿ ಇಲ್ಲ.  ಆದರೂ, ದೇಶದಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುವ ಕುಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತವೆ.  ಹೆಣ್ಣು ಸಮಾಜದ ಕಣ್ಣು ಎನ್ನುವ ಮಾತಿದೆ.  ಹೆಣ್ಣು ಭ್ರೂಣ ಹತ್ಯೆ ಯಾರೂ ಮಾಡಬೇಡಿ.  ಎಲ್ಲರೂ ಸಹ ಇದನ್ನು ತಡೆಗಟ್ಟಲು ಶ್ರಮಿಸಬೇಕಿದೆ.  ಈ ನಾಡಿನಲ್ಲಿ ಮೂಢನಂಬಿಕೆಗಳಿಂದಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಮಹಿಳಾ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
     ಕಾರ್ಯಕ್ರಮದ ಅಂಗವಾಗಿ ಬ್ರಹ್ಮಕುಮಾರಿ ಯೋಗಿನಿ ಅವರು, ಪ್ರಸ್ತುತ ವಿದ್ಯಮಾನದಲ್ಲಿ ಮಹಿಳಾ ಸಂಘರ್ಷ ಮತ್ತು ಮನಶಾಂತಿ ಕುರಿತು ಮತ್ತು ಲಲಿತಾ ಅಂಗಡಿಯವರು ಮಹಿಳಾ ಸಬಲೀಕರಣ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.  ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು ಸ್ವಾಗತಿಸಿದರು.  ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Please follow and like us:
error