ಹೆಚ್ಚಿನ ಬಡ್ಡಿ ವಸೂಲಿ ದೂರು ಪೆಟ್ಟಿಗೆ ಸ್ಥಾಪನೆಗೆ ಡಿಸಿ ಆರ್.ಆರ್. ಜನ್ನು ಸೂಚನೆ.

ಕೊಪ್ಪಳ, ಜು.೧೭ಸರ್ಕಾರ ನಿಗದಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡಿ, ಸಾರ್ವಜನಿಕರು ಹಾಗೂ ರೈತರನ್ನು ಶೋಷಿಸುತ್ತಿರುವ ಬಗ್ಗೆ, ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ದೂರುಪೆಟ್ಟಿಗೆಗಳನ್ನು ಕೂಡಲೆ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ರೈತರ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ವರದಿಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ, ಲೇವಾದೇವಿ ವ್ಯವಹಾರದ ನಿಯಮಗಳು ಮತ್ತು ಕಾನೂನು ಪಾಲನೆ ಬಗ್ಗೆ ನಿಗಾ ವಹಿಸಲು ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಅಧಿಕ ಬಡ್ಡಿ ದರ ವಿಧಿಸಿ ಶೋಷಿಸುತ್ತಿರುವವರ ಬಗ್ಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿ, ಎಲ್ಲ ತಹಸಿಲ್ದಾರರ ಕಚೇರಿ, ನಾಡ ಕಚೇರಿ, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಹಾಗೂ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿಯಲ್ಲಿ ದೂರು ಪೆಟ್ಟಿಗೆಯನ್ನು ಕೂಡಲೆ ಸ್ಥಾಪಿಸಬೇಕು.  ದಿನಕ್ಕೆ ಎರಡು ಬಾರಿ ದೂರುಪೆಟ್ಟಿಗೆಯನ್ನು ತೆರೆದು, ದೂರುಗಳನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಲುಪಿಸಿ, ದೂರು ದಾಖಲಿಸಲು ಕ್ರಮ ಕೈಗೊಳ್ಳಬೇಕು.  ಅಲ್ಲದೆ ಪೊಲೀಸ್ ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆಯೂ ಪ್ರತಿದಿನ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಅನಧಿಕೃತವಾಗಿ ನಡೆಯುತ್ತಿರುವ ಸಾಲ ವ್ಯವಹಾರ, ಲೇವಾದೇವಿ ಹಾಗೂ ಚಿಟ್ ಫಂಡ್ ಫೈನಾನ್ಸ್ ಕಂಪನಿ ವ್ಯವಹಾರಗಳನ್ನು ಹಾಗೂ ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ನೀಡಲಾಗುವ ಸಾಲಗಳ ಮೇಲೆ ಅತಿಯಾಗಿ ವಿಧಿಸಲಾಗುತ್ತಿರುವ ಬಡ್ಡಿಯನ್ನು ನಿಯಂತ್ರಿಸಲು ಈಗಾಗಲೆ ಕಾನೂನು ಜಾರಿಯಲ್ಲಿದೆ.  ಇತ್ತೀಚಿನ ದಿನಗಳಲ್ಲಿ
ದೂರುಗಳು ಪ್ರಾರಂಭ : ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಲೇವಾದೇವಿ ನಿಬಂಧಕ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಡಾ. ಜಿ. ಉಮೇಶ ಅವರು ಮಾತನಾಡಿ,  ನಿಗದಿತ ದರಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ಸಹಾಯವಾಣಿಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಕೊಪ್ಪಳ ದೂ: ೦೮೫೩೯-೨೨೧೧೦೯ ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರು,   ಕೊಪ್ಪಳ ದೂ: ೦೮೫೩೯-೨೨೧೬೦೧ ಇಲ್ಲಿ ಪ್ರಾರಂಭಿಸಲಾಗಿದೆ.  ಈಗಾಗಲೆ ದೂರುಗಳು ಬರಲು ಆರಂಭವಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ದೂರುಗಳನ್ನು ಕಳುಹಿಸಿ, ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅನ್ಯಾಯವೆಸಗುವವರ ವಿರುದ್ಧ ಕಠಿಣ ಕ್ರಮ : ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಮಾತನಾಡಿ, ನಿಗದಿತ ದರಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡಿ ಶೋಷಿಸುವ ಲೇವಾದೇವಿಗಾರರು, ಫೈನಾನ್ಸ್ ನವರು, ಅಥವಾ ಅಕ್ರಮವಾಗಿ ಲೇವಾದೇವಿ ವ್ಯವಹಾರ ನಡೆಸುವವರ ವಿರುದ್ಧ ಈಗಾಗಲೆ ಕಾನೂನು ಕ್ರಮ ಜರುಗಿಸು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.  ಗಂಗಾವತಿ ತಾಲೂಕಿನಲ್ಲಿ ಕೆಲವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಎಲ್ಲ ತಾಲೂಕುಗಳಲ್ಲಿಯೂ ದಾಳಿ ನಡೆಸಲಾಗುವುದು.  ಅನ್ಯಾಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಮಳೆ-ಬೆಳೆ ಪರಿಸ್ಥಿತಿ ಅವಲೋಕನ : ಸಭೆಯಲ್ಲಿ ಉಪಸ್ಥಿತರಿದ್ದ ಕೃಷಿ ಇಲಾಖೆ ಉಪನಿರ್ದೇಶಕ ವೀರೇಶ್ ಹುನಗುಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಶೇ. ೪೦ ರಷ್ಟು ಮಾತ್ರ ಬಿತ್ತನೆಯಾಗಿದೆ.  ಬಿತ್ತನೆಯಾಗಿರುವ ಬೆಳೆಗಳು ಮಳೆಯ ಕೊರತೆಯಿಂದ ಬಾಡುತ್ತಿವೆ.  ವಾರದೊಳಗೆ ಮಳೆ ಅತ್ಯವಶ್ಯಕವಾಗಿದ್ದು, ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.  ಮೇ ತಿಂಗಳಲ್ಲಿ ೫೩ ಮಿ.ಮೀ. ವಾಡಿಕೆ ಮಳೆ ಆಗಬೇಕಿದ್ದು ೨೨ ಮಿ.ಮೀ. ಮಾತ್ರ ಮಳೆಯಾಗಿದೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ೭೨ ಮಿ.ಮೀ. ಬದಲಿಗೆ ೫೭ ಮಿ.ಮೀ. ಆಗಿದೆ.  ಜುಲೈ ತಿಂಗಳಿನಲ್ಲಿ ಈವರೆಗೆ ೨೪ ಮಿ.ಮೀ. ವಾಡಿಕೆ ಮಳೆಯ ಬದಲಿಗೆ ಕೇವಲ ೦೫ ಮಿ.ಮೀ. ಮಳೆಯಾಗಿದೆ ಎಂದರು. 
ಮೇವಿನ ಕೊರತೆ ಇಲ್ಲ : ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ, ಸದ್ಯ ಮೇವಿನ ಕೊರತೆ ಉಂಟಾಗಿಲ್ಲ.  ಈಗ ಜಿಲ್ಲೆಯಲ್ಲಿರುವ ಮೇವಿನ ದಾಸ್ತಾನು ೮ ರಿಂದ ೧೦ ವಾರಗಳಿಗೆ ಆಗುವಷ್ಟು ಇದೆ.  ಸದ್ಯ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ ನಾಯಕ್ ಅವರು ಸಭೆಗೆ ವಿವರಿಸಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಂಟಿಕೃಷಿ ನಿರ್ದೇಶಕ ರಾಮದಾಸ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್, ಕೊಪ್ಪಳ ನಗರ ಠಾಣೆ ಪಿಐ ಮೋಹನ ಪ್ರಸಾದ್, ಸೇರಿದಂತೆ ಕೃಷಿ, ಸಹಕಾರ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೇವಾದೇವಿಗಾರರು ಕಾನೂನು ಉಲ್ಲಂಘಿಸಿ, ಹೆಚ್ಚು ಪ್ರಮಾಣದಲ್ಲಿ ಬಡ್ಡಿಯನ್ನು ವಸೂಲಿ ಮಾಡಿ, ಸಾರ್ವಜನಿಕರನ್ನು ಹಾಗೂ ರೈತರನ್ನು ಶೋಷಿಸುತ್ತಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ.  ಕರ್ನಾಟಕ ಲೇವಾದೇವಿ ಅಧಿನಿಯಮದಲ್ಲಿ ಭದ್ರತಾ ಸಾಲಗಳಿಗೆ ವಾರ್ಷಿಕ ಗರಿಷ್ಠ ಶೇ. ೧೪ ಹಾಗೂ ಭದ್ರತಾ ರಹಿತ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. ೧೬ ಬಡ್ಡಿ ಮಾತ್ರ ವಿಧಿಸಲು ಅವಕಾಶವಿದೆ.  ಇದನ್ನು ಮೀರಿ ಹೆಚ್ಚಿನ ಬಡ್ಡಿದರ ವಿಧಿಸುವಂತಿಲ್ಲ.  ಈ ನಿಯಮವನ್ನು ಉಲ್ಲಂಘಿಸಿದಲ್ಲಿ ೬ ತಿಂಗಳ ಸಜೆ ಮತ್ತು ೫ ಸಾವಿರ ರೂ. ಗಳ ದಂಡ ಶಿಕ್ಷೆ ವಿಧಿಸಲು ಅವಕಾಶವಿದೆ.  ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮದನ್ವಯ, ಸಾಲ ನೀಡಿದ ವ್ಯಕ್ತಿಯ ಕಿರುಕುಳ ಅಥವಾ ಹಿಂಸೆಗೆ ಒಳಗಾಗಿ ಯಾವುದೇ ಸಾಲಗಾರ ಅಥವಾ ಆ ವ್ಯಕ್ತಿಯ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಲ್ಲಿ, ಅದು ಸಾಲ ನೀಡಿದ ವ್ಯಕ್ತಿಯೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತೆ ಎಂದು ಪರಿಗಣಿಸಲಾಗುತ್ತದೆ.  ಈ ನಿಯಮಗಳ ಪಾಲನೆಯ ಬಗ್ಗೆ ಸರ್ಕಾರ ಜಿಲ್ಲಾ ಮತ್ತು ಉಪವಿಭಾಗೀಯ ಮಟ್ಟದ ಸಮಿತಿಯನ್ನು ರಚಿಸಿದೆ.  ಈ ಸಮಿತಿಗಳು ಕನಿಷ್ಟ ೧೫ ದಿನಕ್ಕೊಮ್ಮೆ ಅಥವಾ ಅಗತ್ಯವಿದ್ದ ಸಂದರ್ಭಗಳಲ್ಲಿ ಸಭೆ ಕೈಗೊಂಡು, ಆತ್ಮಹತ್ಯೆ ಪ್ರಕರಣಗಳು ಹಾಗೂ ಲೇವಾದೇವಿಗಾರರು ನಿಯಮಗಳನ್ನು ಪಾಲಿಸುತ್ತಿರುವ ಹಾಗೂ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಿದೆ.  ಅಧಿಕಾರಿಗಳು ಯಾವುದೇ ಪ್ರಕರಣ ಅಥವಾ ದೂರುಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Related posts

Leave a Comment