ಬೆಳೆ ವಿವರವನ್ನು ಪಹಣಿಯಲ್ಲಿ ದಾಖಲಿಸಲಿಸಿಕೊಳ್ಳಲು ರೈತರು ಮುಂದಾಗಬೇಕು- ಜ್ಯೋತಿ ಬಿಲ್ಗಾರ್

ಕೊಪ್ಪಳ   ರೈತರು ಪ್ರತಿ ಹಂಗಾಮಿನಲ್ಲಿ ತಮ್ಮ ಹೊಲಗಳಲ್ಲಿ ಬೆಳೆಯುವ ಬೆಳೆಗಳ ವಿವರವನ್ನು ಪಹಣಿ ಪತ್ರಿಕೆಯಲ್ಲಿ ದಾಖಲಿಸಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಮನವಿ ಮಾಡಿದರು.
  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಪಹಣಿಯಲ್ಲಿ ಬೆಳೆ ವಿವರ ದಾಖಲು ಮತ್ತು ಕಟಾವು ಪ್ರಯೋಗಗಳ ಮಹತ್ವದ ಬಗ್ಗೆ ಪಂಚಾಯತ್‌ರಾಜ್ ಪ್ರತಿನಿಧಿಗಳಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
  ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಅಭಿವೃದ್ಧಿಗಾಗಿ ಸರ್ಕಾರ ಪ್ರತಿ ವರ್ಷವೂ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.  ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸುವಲ್ಲಿ, ಕೃಷಿ ಕ್ಷೇತ್ರದ ಅಂಕಿ-ಅಂಶಗಳ ಮಾಹಿತಿಗಳು ಪ್ರಮುಖ ಸಾಧನಗಳಾಗಿವೆ.  ಕೃಷಿಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ರೂಪಿಸುವಾಗ ಆಯಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆಗಳು, ಅಲ್ಲಿನ ಇಳುವರಿ ಪ್ರಮಾಣ ಮುಂತಾದ ವಿವರಗಳ ನಿಖರ ಮಾಹಿತಿ ಸರ್ಕಾರಕ್ಕೆ ಬೇಕಾಗುತ್ತದೆ. ಇದರಿಂದಾಗಿ ಕೃಷಿ ಬೆಳೆಯಲ್ಲಿನ ಏರು-ಪೇರು ತಿಳಿಯಲು, ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯ ಬೆಳೆಗಳ ನಷ್ಟದ ಪ್ರಮಾಣ ನಿರ್ಧರಿಸಲು ಸಾಧ್ಯವಾಗಲಿದೆ.  ಇವುಗಳ ಸಮರ್ಪಕ ಮಾಹಿತಿ ಇಲ್ಲದಿದ್ದಲ್ಲಿ ಯೋಜನೆಗಳು ವಿಫಲಗೊಳ್ಳುವ ಸಾಧ್ಯತೆಗಳೆ ಹೆಚ್ಚು.  ರೈತರು ಸ್ವಯಂ ಪ್ರೇರಿತರಾಗಿ ಗ್ರಾಮ ಲೆಕ್ಕಿಗರ ಬಳಿಗೆ ತೆರಳಿ, ತಾವು ಪ್ರತಿ ಹಂಗಾಮಿನಲ್ಲಿ ಬೆಳೆಯುವ ಬೆಳೆಗಳ ನಿಖರ ವಿವರವನ್ನು ದಾಖಲಿಸಲು ಮುಂದಾಗಬೇಕು.  ಅಲ್ಲದೆ ಇಲಾಖೆಯವರು ಬೆಳೆ ಕಟಾವು ಪ್ರಯೋಗ, ಇಳುವರಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಅವರೊಂದಿಗೆ ರೈತರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಕರೆನೀಡಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಮಾತನಾಡಿ, ವಿವಿಧ ಇಲಾಖೆಗಳು, ಕ್ಷೇತ್ರಗಳಲ್ಲಿನ ಅಂಕಿ-ಅಂಶ ಸಂಗ್ರಹಣೆಯ ಬಲವರ್ಧನೆಗಾಗಿ ೧೩ನೇ ಹಣಕಾಸು ಆಯೋಗ ರಾಜ್ಯಕ್ಕೆ ಸುಮಾರು ೨೩ ಕೋಟಿ ರೂ.ಗಳನ್ನು ಒದಗಿಸಿದೆ.  ನಿಖರ ಅಂಕಿ-ಅಂಶಗಳ ಸಂಗ್ರಹಣೆಯಿಂದಾಗಿಯೇ ನಮ್ಮ ದೇಶ, ರಾಜ್ಯಗಳ ಅಭಿವೃದ್ಧಿ ಸೂಚ್ಯಂಕಗಳನ್ನು ಕಂಡುಹಿಡಿಯಬಹುದಾಗಿದೆ.  ಸರ್ಕಾರ ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿಯೂ ಸಹ ನಿಖರ ಅಂಕಿ-ಅಂಶಗಳ ಸಂಗ್ರಹಣೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಿಂದಾಗಿ ಆಯಾ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿಯೂ ಸಹ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ಆಯಾ ಪ್ರದೇಶದ ತಲಾದಾಯ ಗುರುತಿಸಲು ಸಾಧ್ಯವಾಗಲಿದೆ.  ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೆ ಕೃಷಿ ಇಲಾಖೆ, ಕಂದಾಯ, ತೋಟಗಾರಿಕೆ, ಮೀನುಗಾರಿಕೆ ಮುಂತಾದ ಇಲಾಖೆಗಳಿಂದ ಅಂಕಿ-ಅಂಶ ಸಂಗ್ರಹಣೆಗೆ ಮುಂದಾಗಿದೆ.  ರೈತರು ಹಂಗಾಮುವಾರು ತಾವು ಬೆಳೆಯುವ ಬೆಳೆಗಳ ವಿವರವನ್ನು ಪಹಣಿಯಲ್ಲಿ ನಿಖರವಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದಲ್ಲಿ, ಆಯಾ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ವಿವರಕ್ಕೂ ಪಹಣಿಯಲ್ಲಿ ಲಭ್ಯವಿರುವ ವಿವರಕ್ಕೂ ವ್ಯತ್ಯಾಸ ಉಂಟಾಗಿ, ಯಾವುದೇ ಯೋಜನೆಗಳ ಜಾರಿಗೆ ಅಥವಾ ಬೆಳೆಗಳಿಗೆ ಸಂಬಂಧಿಸಿದ ವಿಮಾ ಪರಿಹಾರ ಒದಗಿಸಲು ತಾಂತ್ರಿಕ ತೊಂದರೆಗಳು ಉಂಟಾಗಲಿದೆ ಎಂದು ವಿವರಿಸಿದರು.
  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಲೆಕ್ಕಿಗರು ಪ್ರತಿ ಹಂಗಾಮಿನಲ್ಲಿ ಬೆಳೆ ವಿವರಗಳನ್ನು ದಾಖಲು ಮಾಡುವಾಗ ರೈತರಿಂದ ನಿಖರ ಮಾಹಿತಿ ಪಡೆಯಬೇಕು.  ಇದರಿಂದ ಬೆಳೆ ವಿಮೆ/ ಸಾಲ ಪಡೆಯಲು, ಕೃಷಿ ಭೂಮಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಯೋಜನ ಪಡೆಯಲು, ರಾಜ್ಯ ಹಾಗೂ ಕೇಂದ್ರ ಆದಾಯಗಳ ಅಂದಾಜು ತಯಾರಿಸಲು ಅಲ್ಲದೆ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಲು ಸಹಾಯಕಾರಿಯಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅನ್ನದಾನಯ್ಯ, ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ, ತೋಟಗಾರಿಕೆ ಇಲಾಖೆ ಅಧಿಕಾರಿ ವಸಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 
Please follow and like us:
error