ಈ ಸಲದ ಬಜೆಟ್‌ನಲ್ಲಿ ೧೫೦ ಕೋಟಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ : ನಾಗೇಂದ್ರ

         ಕೊಪ್ಪಳ : ಕಳೆದ ವರ್ಷದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ೭೦ ಕೋಟಿ ರುಪಾಯಿ ನೀಡಲಾಗಿತ್ತು. ಕಳೆದ ವರ್ಷ ನೀಡಿದ ಹಣದಲ್ಲಿ ಎಲ್ಲವೂ ಖರ್ಚಾಗಿದ್ದು ಈ ವರ್ಷ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಲಿರುವ ಬಜೆಟ್‌ನಲ್ಲಿ ನಿಗಮಕ್ಕೆ ೧೫೦ ಕೋಟಿ ರುಪಾಯಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಕೆ.ವಿ.ನಾಗೇಂದ್ರ ಹೇಳಿದರು.
         ಕೊಪ್ಪಳದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ೨೦೦೭-೦೮ ರಿಂದ ೨೦೧೨-೧೩ರ (ಡಿಸೆಂಬರ್) ವರೆಗಿನ ಅವಽಯಲ್ಲಿ ನಿಗಮವು ಮಾಡಿದ ವಿವಿಧ ಯೋಜನೆಗಳ ಪ್ರಗತಿ ವಿವರಿಸಿದರು. ಕಳೆದ ೫ ವರ್ಷಗಳಲ್ಲಿ ೬೦,೩೫೪ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ೪೯೨.೫೨ ಕೋಟಿ ರುಪಾಯಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.
         ಗಂಗಾ ಕಲ್ಯಾಣ ಯೋಜನೆಯಡಿ ೨೫,೧೬೯ ಕೊಳವೆಬಾವಿಗಳನ್ನು ಕೊರೆದು ೩೩೪.೬೬ ಕೋಟಿ ರುಪಾಯಿ ವೆಚ್ಚ ಮಾಡಿದ್ದು ಜೊತೆಗೆ ೧೭,೬೫೪ ಕೊಳವೆಬಾವಿಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ತಾಲೂಕುಗಳಲ್ಲಿ ಕೊರೆದ ಬಾವಿಗಳಿಗೆ ವಿದ್ಯುದ್ಧೀಕರಣಗೊಳಿಸಲು ೮೮.೮೨ ಕೋಟಿ ರುಪಾಯಿಗಳನ್ನು ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗಿದೆ. ಭೂ ಒಡೆತನ ಯೋಜನೆಯಡಿ ೧,೨೪೮ ಮಹಿಳಾ ಫಲಾನುಭವಿಗಳಿಗೆ ೧೩.೬೧ ಕೋಟಿ ರುಪಾಯಿ ವೆಚ್ಚದಲ್ಲಿ ಜಮೀನು ಖರೀದಿಸಿ ಕೊಡಲಾಗಿದೆ. ಸ್ವಯಂ ಉದ್ಯೋಗ ಯೋಜನೆಯಲ್ಲಿ ೨೦,೫೧೫ ಫಲಾನುಭವಿಗಳಿಗೆ ೪೮.೫೧ ಕೋಟಿ ರುಪಾಯಿ ಸಾಲ ಸೌಲಭ್ಯ ಒದಗಿಸಲಾಗಿದೆ. ಕಿರುಸಾಲ ಯೋಜನೆಯಡಿ ೧೩,೪೨೨ ಮಹಿಳಾ ಫಲಾನುಭವಿಗಳಿಗೆ ೬.೯೨ ಕೋಟಿ ರು.ಗಳ ಸಾಲ ಸೌಲಭ್ಯ ನೀಡಲಾಗಿದೆ ಎಂದು ಅವರು ವಿವರಿಸಿದರು.
          ಈಚೆಗೆ ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ರಚಿಸುವ ಕುರಿತು ಚರ್ಚಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗವನ್ನು ಪ್ರತ್ಯೇಕಗೊಳಿಸುವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ. ೧ ಎಕರೆ ಜಮೀನು ಹೊಂದಿದವರೂ ಕೂಡಾ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಾಗುವ ಕುರಿತು ನಿರ್ಧರಿಸಲಾಗಿದೆ. ಹೈನುಗಾರಿಕೆ ಸಬ್ಸಿಡಿಯನ್ನು ೫೦ ಸಾವಿರ ರು.ಗೆ ಹೆಚ್ಚಿಸಲಾಗಿದೆ. ಹಸು ಖರೀದಿಗೆ ಇದುವರೆಗು ೨೫ ಸಾವಿರ ರುಪಾಯಿವರೆಗೆ ನೀಡುತ್ತಿದ್ದ ಸಾಲ ಯೋಜನೆಯನ್ನು ೧ ಲಕ್ಷಕ್ಕೆ ಏರಿಸಲಾಗಿದೆ. ೧೬ ಜಿಲ್ಲೆಗಳಲ್ಲಿ ಇರುವಂತೆ ಎಲ್ಲ ಜಿಲ್ಲೆಗಳಲ್ಲೂ ನಿಗಮದ ಪ್ರತ್ಯೇಕ ಕಚೇರಿ ಸ್ಥಾಪಿಸುವಂತೆ ಸರಕಾರಕ್ಕೆ ಕೋರಲಾಗಿದೆ. ಎಂದರು.
         ಈಗಿರುವ ನಿಗಮದ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ ೧೭೮ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಕುರಿತು ಬಜೆಟ್ ನಂತರ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಽಸೂಚನೆ ಹೊರಬೀಳಲಿದೆ ಎಂದು ಅವರು ತಿಳಿಸಿದರು.
        ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ,ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಸುಂದರ್ ಹಾಗೂ ಬಿಜೆಪಿ ಎಸ್.ಟಿ.ಮೋರ್ಚಾದ ಕೊಪ್ಪಳ ಜಿಲ್ಲಾಧ್ಯಕ್ಷ ಚೌಡ್ಕಿ ಹನುಮಂತಪ್ಪ ಇದ್ದರು. ಸುದ್ದಿಗೋಷ್ಠಿಯ ನಡುವೆ ಶಾಸಕ ಕರಡಿ ಸಂಗಣ್ಣ ಆಗಮಿಸಿ ನಿಗಮದ ನೂತನ ಅಧ್ಯಕ್ಷರನ್ನು ಭೇಟಿಯಾಗಿ ಶುಭ ಕೋರಿ ತೆರಳಿದರು.
Please follow and like us:
error