fbpx

ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು : ಸಿ.ವಿ. ಜಡಿಯವರ್

 

ದೇಶದ ನಿಜವಾದ ಸಂಪತ್ತು ಯುವಜನತೆ. ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣರಾಬೇಕು ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರು ಯುವಕರಿಗೆ ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಕ್ಕಳ ಸಹಾಯವಾಣಿ ೧೦೯೮, ಇವರ ಸಂಯುಕ್ತ ಆಶ್ರಯದಲ್ಲಿ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ’ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಹಾಗೂ ಜನಜಾಗೃತಿ ಕುರಿತ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದ್ದು ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಅವಧಿಯಲ್ಲಿ ದುಶ್ಚಟಗಳಿಂದ ದೂರವಿದ್ದು ನಿರಂತರ ಅಧ್ಯಯನ ನಡೆಸಿದರೆ ಗುರಿ ತಲುಪಬಹುದು. ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವಿ.ಹೆಚ್. ಮಂಡಸೊಪ್ಪಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಮೂರು ತತ್ವಗಳಾದ ಕೆಟ್ಟದನ್ನು ಕೇಳಬಾರದು, ಕೆಟ್ಟದನ್ನು ಮಾತನಾಡಬಾರದು, ಕೆಟ್ಟದ್ದನ್ನು ನೋಡಬಾರದು ಎನ್ನುವ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಗುಟ್ಕಾ ಸೇವನೆ ಮೊದಲಾದ ಕೆಟ್ಟ ಚಟಗಳಿಗೆ ಬಲಿಯಾಗದಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ವಾರ್ತಾ ಇಲಾಖೆಯ ಎಂ. ಅವಿನಾಶ್, ಉಪನ್ಯಾಸಕರಾದ ರಂಗಮ್ಮ ಹೆಚ್.ಕೆ., ಜಮುನಾ, ಎಂ.ಎಫ್.ಸೂಡಿ, ನಾಗಲಿಂಗಪ್ಪ ಖಂಡ್ರಿ, ಬಸವರಾಜ ಹಂದ್ರಾಳ, ವಿನಯ್, ಶ್ಯಾಮಶಾವಿ, ವಿದ್ಯಾದರ ಉಪಸ್ಥಿತರಿದ್ದರು. ರಾಜಶೇಖರ ಪಾಟೀಲ್ ಸ್ವಾಗತಿಸಿದರು, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಲ್‌ವಿಆರ್ ಪ್ರಸಾದರವರು ಮಕ್ಕಳ ಸಹಾಯವಾಣಿ-೧೦೯೮ ಕಾರ್ಯವೈಖರಿ ಕುರಿತು ವಿವರಿಸಿದರು, ಅಶ್ವೀನಿ ಭಾವಿಕಟ್ಟಿ ಪ್ರಾರ್ಥಿಸಿದರು, ಮಕ್ಕಳ ಸಹಾಯವಾಣಿ-೧೦೯೮ ತಂಡದ ಸದಸ್ಯ ಶಾಂತಕುಮಾರ ಗೌರಿಪುರ ಕಾರ್ಯಕ್ರಮವನ್ನು ನಿರೂಪಿಸಿದರು.
Please follow and like us:
error

Leave a Reply

error: Content is protected !!