ಬದುಕಿನ ಸಂವೇದನೆಗಳ ತುಡಿತದ ಕವಿಯತ್ರಿ ಅನಸೂಯಾ ಜಹಗೀರದಾರ

ಕೊಪ್ಪಳ : ಕವಿತೆಯ ಸಾರ್ಥಕತೆ ಅದರ ಒಳತುಡಿದಲ್ಲಿರುತ್ತೆ.ಬರೆದವರಿಗಿಂತಲೂ ಅದು ಓದಿದವನಿಗೆ ದಕ್ಕುವ,ಆಪ್ತವಾಗುವ ರೀತಿಯಲ್ಲಿಯೇ ಕಾವ್ಯದ ಯಶಸ್ಸು ಅಡಗಿದೆ. ಇನ್ನೂ ಉತ್ತಮವಾದದ್ದನ್ನು ಬರೆಯಬೇಕೆನ್ನುವ ಅತೃಪ್ತಿ ನಿರಂತರವಾಗಿ ಕಾಡುತ್ತಲೇ ಇರುತ್ತದೆ. ನಿರಂತರವಾಗಿ ಒಡಲು ಸುಟ್ಟಾಗಲೇ  ಒಡಲಬೆಂಕಿಯಂತ ಅದ್ಬುತ ಕವನ ಸಂಕಲನ ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಕವಿಯತ್ರಿ ಅನಸೂಯಾ ಜಹಗೀರದಾರ ತಮ್ಮೊಳಗಿನ ಬದುಕಿನ ಸಂವೇದನೆಗಳ ತುಡಿತವನ್ನು ಸಮರ್ಥವಾಗಿ ಬಿಂಬಿಸಿದ್ದಾರೆ ಎಂದು ಹಿರಿಯ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೧೭೮ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಒಡಲಬೆಂಕಿಯ ಕುರಿತು ಚರ್ಚೆ ಮತ್ತು ಸಂವಾದ ಹಾಗೂ ಅಲ್ಲಾಗಿರಿರಾಜ್‌ರಿಗೆ ಸನ್ಮಾನ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಅನಸೂಯಾ ಜಹಗೀರದಾರ ವಿಶಿಷ್ಟ ಕವಿಯತ್ರಿ, ಅದ್ಭುತ ಹಾಡುಗಾರ್ತಿ. ಶ್ರಾವಣದ ರಿಂಗಣದಂತಹ ಅತ್ಯುತ್ತಮ ಕವನಗಳನ್ನು ಬರೆದಿರುವ ಅವರು ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಹಿರಿಯ ಬರಹಗಾರ,ವಿಮರ್ಶಕ ಎ.ಎಂ.ಮದರಿ- ನಿಜವಾದ ಸಾಹಿತ್ಯಕ್ಕೆ ಬಹಳಷ್ಟು ಆಯಾಮಗಳಿರುತ್ತವೆ. ಬರೆದಾದ ನಂತರ ಓದುಗನಿಗೆ ದಕ್ಕುವ ರೀತಿಯಲ್ಲಿಯೇ ಅದು ಆಪ್ತವಾಗುತ್ತದೆ. ಇವರ ಕವನಗಳು  ಸಮಾಜದ ಅಮಾನವೀಯತೆಗೆ ದಿಕ್ಕಾರ ಕೂಗುತ್ತವೆ. ಸಮಾಜಕ್ಕೆ ನಿರಂತರ ಸ್ಪಂದಿಸುವ ಗುಣವುಳ್ಳ ಅನುಸೂಯಾ ಜಹಗೀರದಾರ ಕವನಗಳು ಗಮನಾರ್ಹವಾಗಿವೆ. ಇವರದು ಒಡಲಮೂಲದ ಬರವಣಿಗೆ ಎಂದರು.
ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಬಿ.ಎಂ.ಪುಟ್ಟಯ್ಯನವರು – ಕ್ರಿಯಾಶೀಲತೆಗೆ ಸಾಣೆ ಹಿಡಿಯುವ ಕಾರ‍್ಯಕ್ರಮಗಳ ಮೂಲಕ ಕೊಪ್ಪಳ ಹಲವಾರು ಹೋರಾಟದ ಮೂಲ ನೆಲೆಯಾಗಿದೆ. ಸಾಹಿತ್ಯಕ್ಕೆ ಒಳಗಿನಿಂದ ಶಕ್ತಿಯಿರುತ್ತೆ. ಅದಕ್ಕೆ ಓದುವ ಕ್ರಮದಿಂದಲೂ ಇನ್ನಷ್ಟು ಶಕ್ತಿಯನ್ನು ತುಂಬಬಹುದು. ಜಹಗೀರದಾರ ಕವನಗಳು ಓದುಗನಿಗೆ ಹತ್ತಿರವಾಗುತ್ತವೆ. ಸ್ಪೂರ್ತಿ ನೀಡುತ್ತವೆ ಎಂದರು.
ಹಲವಾರು ವರ್ಷಗಳ ತಾಳ್ಮೆಯ ಫಲದಿಂದ ಈ ಕವನಸಂಕಲನ ಮೂಡಿಬಂದಿದೆ. ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುವ ಆ ಮೂಲಕ ಸ್ತ್ರೀ ಸಂವೇಧನೆಗಳನ್ನು ಯಶಸ್ವಿಯಾಗಿ ಒಡಮೂಡಿಸಿವೆ. ಎರವಲು ಚಂದ್ರನ ಬೆಳಕಿನ ಹಂಗು ಬೇಕಿಲ್ಲ ಎನ್ನುವ ಕವಿಯತ್ರಿಯ ನಿಲುವು,ಸಮಾಜ ಮುಖಿ ಧೋರಣೆ ಸ್ಪಷ್ಟವಾಗಿ ಕಾವ್ಯದಲ್ಲಿ ಮೂಡಿ ಬಂದಿದೆ ಎಂದು ಮಹೇಶ ಬಳ್ಳಾರಿ ಹೇಳಿದರು.
ಇದಕ್ಕೂ ಮೊದಲು ಕಸಾಪದ ಮುದ್ದಣ ಕಾವ್ಯ ದತ್ತಿ ಪ್ರಶಸ್ತಿ,ಲಂಕೇಶ್ ಪ್ರಶಸ್ತಿ,ಸಂಗಮ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿರುವ ಕನಕಗಿರಿಯ ಅಲ್ಲಾಗಿರಿರಾಜ್‌ರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅಲ್ಲಾಗಿರಿರಾಜ್ ರವರು ಗಜಲ್ ಕಾವ್ಯ ಪರಂಪರೆ ಇಡೀ ರಾಜ್ಯದಲ್ಲಿ ಬೆಳೆದು ಬರುತ್ತಿರುವ ಬಗ್ಗೆ ಹಾಗೂ ತಮ್ಮ ಗಜಲ್ ಕಾವ್ಯ ರಚನೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು.ಅನಸೂಯಾ ಜಹಗೀರದಾರರು ತಮ್ಮ ಬರವಣಿಗೆಯ ಕುರಿತು ಮಾತನಾಡಿದರು.  
ಕವಿಗಳಾದ ಎ.ಪಿ.ಅಂಗಡಿ,ಲಲಿತಾ ಭಾವಿಕಟ್ಟಿ,ಶಾಂತಾದೇವಿ ಹಿರೇಮಠ, ಸಿರಾಜ್ ಬಿಸರಳ್ಳಿ ಒಡಲಬೆಂಕಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ‍್ಯಕ್ರಮದಲ್ಲಿ ಶಿವಾನಂದ ಹೊದ್ಲೂರ,ಶಿವಪ್ರಸಾದ ಹಾದಿಮನಿ, ಪುಷ್ಪಲತಾ ಏಳುಬಾವಿ,ತುಕಾರಾಮ್ ನಾಯಕ್, ಗವಿಸಿದ್ದಪ್ಪ ಹಂದ್ರಾಳ, ವೆಂಕನಗೌಡ,ಮನೋಜ ಚಿಲಕಮುಖಿ,ಬೀರಪ್ಪ ಅಂಡಗಿ,ಸತ್ಯನಾರಾಯಣ ರಾವ್ ಸೇರಿದಂತೆ ಇತರ ಕಾವ್ಯಾಸಕ್ತರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಬಸವರಾಜ್ ಸಂಕನಗೌಡರ ಮತ್ತು ವಂದನಾರ್ಪಣೆಯನ್ನು ಮಾನಪ್ಪ ಬೆಲ್ಲದ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು. 
Please follow and like us:
error