fbpx

ಅರಸು ಅವರು ದೇಶ ಕಂಡ ಮಹಾನ್ ಮುತ್ಸದ್ದಿ ರಾಜಕಾರಣಿ ಅಮರೇಶ ಕುಳಗಿ.

ಕೊಪ್ಪಳ, ಆ.೨೦ (ಕ ವಾ) ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬಯಕೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಠಿಸಿದ ದಿ||ಡಿ.ದೇವರಾಜ ಅರಸು ಅವರು ಇಡೀ ದೇಶ ಕಂಡ ಮಹಾನ್ ಮುತ್ಸದ್ದಿ ರಾಜಕಾರಣಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ಧೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು, ಬಡವರು ಸೇರಿದಂತೆ ಸಾಮಾನ್ಯರು ಸಹಿತ ಅಧಿಕಾರ ಪಡೆಯುವಂತೆ ಮಾಡುವಲ್ಲಿ ಅರಸು ಸಫಲರಾಗಿದ್ದರು.  ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಅವರು ಮೌನಕ್ರಾಂತಿಯ ಹರಿಕಾರ ಎಂದೇ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ೧೯೬೯ ರಿಂದ ೧೯೭೯ ರ ದಶಕವನ್ನು ರಾಜ್ಯದಲ್ಲಿ ಅರಸು ಯುಗ ಎಂದು ಕರೆಯಲಾಗುತ್ತದೆ ಎಂದರೆ ಅವರ ಆಡಳಿತ ಎಷ್ಟು ಅಚ್ಚುಕಟ್ಟಾಗಿತ್ತು ಎಂದು ತಿಳಿದುಬರುತ್ತದೆ. ಅಲ್ಲದೇ ಮಹತ್ತರ ಯೋಜನೆಗಳ ಮೂಲಕ ಅರಸು ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಅರಸು ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಅವರ ಜನ್ಮ ಶತಮಾನೋತ್ಸವವನ್ನು ಪ್ರತಿದಿನ ಆಚರಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|| ಪ್ರಭುರಾಜ್ ನಾಯಕ ಮಾತನಾಡಿ, ನಮ್ಮ ನಾಡಿನ ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿದೆ. ಇಂತಹ ವ್ಯಕ್ತಿಗಳ ಪೈಕಿ ನಾಡು ಕಂಡ ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸು ಕೂಡಾ ಒಬ್ಬರು. ಅವರ ಬುದ್ದಿ, ಚೇತನ, ಪ್ರೇರಣೆ ನಮ್ಮಲ್ಲಿ ಇಂದಿಗೂ ಚಿಂತನೆಗೀಡುಮಾಡಿರುವುದು ಅವರ ವ್ಯಕ್ತಿತ್ವವನ್ನು ಸಾರಿ ಹೇಳುತ್ತವೆ. ಊಳುವವನೇ ಭೂಮಿಯ ಒಡೆಯ ಎಂಬ ಕಾನೂನು ರಾಜ್ಯದಲ್ಲಿ ಜಾರಿಗೆ ಬಂದದ್ದು ಅರಸು ಕಾಲದಲ್ಲಿಯೇ. ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಭೂ ಸುಧಾರಣೆಯನ್ನು ಅತ್ಯದ್ಭುತ ರೀತಿಯಲ್ಲಿ ಜಾರಿಗೆ ತಂದವರು ಅರಸು ಅವರು. ಈ ಯೋಜನೆಯಡಿ ಅರಸು ಅವರೇ ಸ್ವತಃ ತಮ್ಮ ಐದು ಎಕರೆ ಭೂಮಿಯನ್ನು ರೈತರಿಗೆ ಹಂಚಿದ್ದರು. ಅಸಮಾನತೆಯನ್ನು ತೊಡೆದು ಹಾಕಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದ ಅರಸು ಅವರು ಮಲ ಹೊರುವಂತಾ ಅಮಾನುಷ ಪದ್ಧತಿ ಇವರ ಆಡಳಿತದಲ್ಲಿ ಕೊನೆಗೊಂಡಿತು. ಯಾವ ದೇಶದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ತೃಪ್ತರಾಗಿರುತ್ತಾರೋ, ಆ ದೇಶ ಸುಭೀಕ್ಷವಾಗಿರುತ್ತದೆ ಎಂಬುದರಲ್ಲಿ ಅರಸು ಅವರು ಅಪಾರ ನಂಬಿಕೆ ಹೊಂದಿದ್ದರು. ಹಿಂದುಳಿದ ವರ್ಗದ ಜನರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ವಸತಿ ನಿಲಯಗಳನ್ನು ಆರಂಭಿಸಿದರು. ೨೦ ಅಂಶಗಳ ಕಾರ್ಯಕ್ರಮಗಳು ಸೇರಿದಂತೆ ಭಾಗ್ಯಜ್ಯೋತಿ, ವೃದ್ಧಾಪ್ಯ ವೇತನ, ಕಾಳಿ ಪ್ರಾಜೆಕ್ಟ್, ಋಣಮುಕ್ತ ಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹುಟ್ಟುಹಾಕಿದ ಅರಸು ಅವರು ಇಂದಿಗೂ ಜನಮಾನಸದಲ್ಲಿ ಅಚ್ಛಳಿಯದೇ ಉಳಿದಿದ್ದಾರೆ. ಹಣವನ್ನು ರಾಜಕೀಯದಿಂದ ದೂರ ಇಡುವ ದೃಷ್ಠಿಯಿಂದ ಅರಸರು ತಮ್ಮ ಹೊಲಗಳನ್ನು ಮಾರಿ ಚುನಾವಣೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೇ, ದೇವರಾಜ ಅರಸರ ಕೊಡುಗೆಗಳು ರಾಜ್ಯದಲ್ಲಿ ಕಮ್ಯುನಿಸ್ಟ್ ಕ್ರಾಂತಿಯ ಬೀಜಗಳನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿದ್ದವು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ರಮಣದೀಪ ಚೌಧರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಸದಸ್ಯ ಅಮ್ಜದ್ ಪಟೇಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ೨೦೧೪-೧೫ ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ತಾಲೂಕಾ ಪಂಚಾಯಿತಿ

ಅಧ್ಯಕ್ಷೆ ಬಾನು ಚಂದುಸಾಬ, ಉಪಾಧ್ಯಕ್ಷ ಬಾಳಪ್ಪ ಬೂದಗುಂಪಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಅಪರ ಜಿಲ್ಲಾಧಿಕಾರಿ ಪ್ರವೀಣ ಕುಮಾರ, ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ಸ್ವಾಗತಿಸಿ, ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಟ್ರಪ್ಪ ಚೋರನೂರು ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ ನಗರದ ಗವಿಮಠದ ಆವರಣದಿಂದ ಏರ್ಪಡಿಸಲಾಗಿದ್ದ ದಿ|| ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ರಮಣದೀಪ್ ಚೌಧರಿ ಅವರು ಚಾಲನೆ ನೀಡಿದರು. ಬಳಿಕ ಮೆರವಣಿಗೆಯು ಗಡಿಯಾರ ಕಂಬದಿಂದ ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Please follow and like us:
error

Leave a Reply

error: Content is protected !!