fbpx

ಮಾನವನ ಪ್ರಗತಿಗಾಗಿ ಪರಿಸರದ ನಾಶ ಬೇಡ – ಡಿ.ಕೆ. ರವಿ

 ಮನುಷ್ಯ ತನ್ನ ಪ್ರಗತಿಯ ಮಹತ್ವಾಕಾಂಕ್ಷೆಗೆ ಪರಿಸರವನ್ನು ನಾಶ ಮಾಡುತ್ತಿದ್ದು, ಇದರಿಂದ ಮನುಕುಲಕ್ಕೆ ಆಪತ್ತು ಬಂದೊದಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಆತಂಕ ವ್ಯಕ್ತಪಡಿಸಿದರು.
  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ವೈಜ್ಞಾನಿಕ ಆವಿಷ್ಕಾರಗಳು, ನೂತನ ತಂತ್ರಜ್ಞಾನಗಳ ಬಳಕೆಯಿಂದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿರುವ ಮಾನವ, ಇದಕ್ಕಾಗಿ ಅಮೂಲ್ಯ ಪರಿಸರವನ್ನು ನಾಶಪಡಿಸಲು ಮುಂದಾಗುತ್ತಿರುವುದು, ಮನುಕುಲದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.  ಅಭಿವೃದ್ಧಿಯ ಜೊತೆ ಜೊತೆಗೆ ಗಾಳಿ, ನೀರು, ಆಹಾರದ ಪರಿಶುದ್ಧತೆಯನ್ನು ಕಾಯ್ದುಕೊಳ್ಳಲು ಜಗತ್ತಿನ ಯಾವುದೇ ದೇಶಗಳು ಆದ್ಯತೆ ನೀಡುತ್ತಿಲ್ಲ.  ಕೃಷಿ ಮತ್ತು ಅರಣ್ಯ ಪ್ರದೇಶಗಳ ವಿಸ್ತೀರ್ಣ ನಿರಂತರವಾಗಿ ಕಡಿಮೆಯಾಗುತ್ತಿದ್ದು, ನಗರೀಕರಣ ಮತ್ತು ಜಾಗತೀಕರಣದಿಂದಾಗಿ, ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.  ಪರಿಸರ ಎಂದರೆ ಕೇವಲ ಗಿಡ-ಮರಗಳನ್ನು ಉಳಿಸಿ ಬೆಳೆಸುವುದಷ್ಟೇ ಅಲ್ಲ. ವಯಕ್ತಿಕ ಸ್ವಚ್ಛತೆಯೂ ಸಹ ಶುದ್ಧ ಪರಿಸರದ ಒಂದು ಭಾ

ಗವೇ ಆಗಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೆ ಎಲ್ಲೆಂದರಲ್ಲಿ ತಿಪ್ಪೆಗುಂಡಿಗಳನ್ನು ಹಾಕಿಕೊಂಡು, ಗ್ರಾಮದ ನೈರ್ಮಲ್ಯ ಹಾಳಾಗುತ್ತಿದೆ.  ಡೆಂಗ್ಯು, ಮಲೇರಿಯಾ ಮುಂತಾದ ರೋಗ ಹರಡಲು ಇದು ಸಹ ಪ್ರಮುಖ ಕಾರಣವಾಗಿದೆ.  ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ಸು ಸಾಧಿಸಬೇಕು.  ಪ್ರತಿಯೊಬ್ಬರೂ ಕನಿಷ್ಟ ಒಂದೊಂದು ಸಸಿಗಳನ್ನು ನೆಟ್ಟು, ಅವುಗಳನ್ನು ಕನಿಷ್ಟ ಒಂದು ವರ್ಷ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೆಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಕರೆ ನೀಡಿದರು.

  ಪರಿಸರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಮುನಿರಾಬಾದ್‌ನ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕರು ಹಾಗೂ ಪರಿಸರ ಮತ್ತು ವನ್ಯ ಜೀವಿ ತಜ್ಞರಾದ ಅಬ್ದುಲ್ ಸಮದ್ ಕೊಟ್ಟೂರು ಅವರು ಮಾತನಾಡಿ,  ನಮ್ಮ ಸುತ್ತಮುತ್ತಲ ಪರಿಸರ, ಪ್ರಾಣಿ, ಪಕ್ಷಿ ಮುಂತಾದ ಜೀವಸಂಕುಲಗಳನ್ನು ಸಂರಕ್ಷಿಸಬೇಕಾಗಿದೆ.  ವನ್ಯಜೀವಿಗಳ ಪ್ರಾಣಹರಣದಿಂದ ಪರಿಸರದ ಮೇಲಿನ ಪರಿಣಾಮ ತುಂಬಾ ಅಪಾಯಕಾರಿಯಾಗಿದ್ದು, ಆಹಾರ ಸರಪಳಿಗೆ ಧಕ್ಕೆ ಉಂಟಾಗಲಿದೆ.  ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು, ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದೇಶಗಳಲ್ಲಿ ನಡೆದ ಕೈಗಾರೀಕರಣದ ಕ್ರಾಂತಿ ಹಾಗೂ ಅತಿಯಾದ ವಾಹನಗಳ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಬೃಹತ್ ಪ್ರಮಾಣದಲ್ಲಿ ವಾತಾವರಣವನ್ನು ಸೇರುತ್ತಿದ್ದು, ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿದೆ.  ಇದರಿಂದಾಗಿ ಭೂಮಿಯ ಮೇಲೆ ಹವಾಮಾನದ ತೀವ್ರ ಬದಲಾವಣೆ ಉಂಟಾಗುತ್ತಿದೆ.  ಒಂದೆಡೆ ಅತಿವೃಷ್ಠಿಯಿಂದ ಹಾನಿಯಾದರೆ, ಇನ್ನೊಂದೆಡೆ ಭೀಕರ ಬರಗಾಲ ಮನುಕುಲವನ್ನು ಕಾಡುತ್ತಿದೆ.  ಸದ್ಯದ ಪರಿಸ್ಥಿತಿಯಲ್ಲಿ ಪರಿಸರವನ್ನು ಅತಿಹೆಚ್ಚು ಹಾಳು ಮಾಡುತ್ತಿರುವುದು ಪ್ಲಾಸ್ಟಿಕ್.  ನಮ್ಮ ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದರೆ  ಸಾರ್ವಜನಿಕರು ದೃಢಮನಸ್ಸಿನಿಂದ ಪ್ಲಾಸ್ಟಿಕ್ ತ್ಯಜಿಸಲು ಮುಂದಾಗಬೇಕು.  ಎಲ್ಲರೂ ದೃಢಮನಸ್ಸಿನಿಂದ ಪ್ಲಾಸ್ಟಿಕ್ ತ್ಯಜಿಸಲು ಮುಂದಾಗಬೇಕು ಎಂದರು.
  ಪರಿಸರ ಅಧಿಕಾರಿ ವಿ. ಆನಂದ್ ಅವರು ಸ್ವಾಗತಿಸಿ ನಂತರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ೧೯೭೨ ರ ಜೂನ್ ೦೫ ರಂದು ಒಂದೆಡೆ ಸೇರಿ ಪರಿಸರ ಸಂರಕ್ಷಣೆಗಾಗಿ ಮೊಟ್ಟ ಮೊದಲ ಬಾರಿಗೆ ಚಿಂತನೆ ನಡೆಸಿ, ಜಾಗತಿಕ ಮಟ್ಟದಲ್ಲಿ ಪರಿಸರದ ಮೇಲೆ ಮಾನವ ನಡೆಸುತ್ತಿರುವ ಹಾನಿ ನಿಯಂತ್ರಿಸಲು, ಪರಿಸರ ಸಂರಕ್ಷಣೆಗಾಗಿ ಜನಜಾಗೃತಿ ಮೂಡಿಸಲು ತೀರ್ಮಾನ ಕೈಗೊಂಡ ದಿನದ ನೆನಪಿಗಾಗಿ ಜೂ. ೫ ರ ದಿನವನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ.  ದೇಶದಲ್ಲಿ ಆಹಾರ ಅತ್ಯಮೂಲ್ಯವಾಗಿದ್ದು, ಜಗತ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವ್ಯರ್ಥವಾಗಿ ಕಸವನ್ನು ಸೇರುತ್ತಿದೆ.  ಮದುವೆ ಮುಂತಾದ ದೊಡ್ಡ, ದೊಡ್ಡ ಸಮಾರಂಭಗಳಲ್ಲಿ ಬೃಹತ್ ಪ್ರಮಾಣದಲ್ಲಿ ಆಹಾರವನ್ನು ವ್ಯರ್ಥವಾಗಿ ಬಿಸಾಡುತ್ತಿರುವುದನ್ನು ನಾವು ಕಾಣುತ್ತೇವೆ.  ಜಗತ್ತಿನಲ್ಲಿನ ಆಹಾರದ ಸಮಸ್ಯೆಯನ್ನು ಪರಿಗಣಿಸಿ, ಈ ವರ್ಷ ‘ಯೋಚಿಸು-ಸೇವಿಸು-ಉಳಿಸು’ ಎಂಬ ಘೋಷವಾಕ್ಯವನ್ನು ಪ್ರಕಟಿಸಲಾಗಿದ್ದು, ಯಾರೂ ಸಹ ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.
  ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.  ಡಿಡಿಪಿಐ ಜಿ.ಹೆಚ್. ವೀರಣ್ಣ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಪ್ರೇಮ ಮತ್ತು ಅಶ್ವಿನಿ ಸಂಗಡಿಗರು ಪ್ರಾರ್ಥಿಸಿದರು, ಪ್ರದೀಪ್ ಮಲ್ಲಾಪುರ ವಂದಿಸಿದರು.
Please follow and like us:
error

Leave a Reply

error: Content is protected !!