ಕ್ರಿಯಾಶೀಲ ಸಂಘ ಸಂಸ್ಥೆಗಳಿಗೆ ಇಲಾಖೆ ಪ್ರೋತ್ಸಾಹ ನೀಡುತ್ತಿದೆ -ಕೊಟ್ರಪ್ಪ ಚೋರನೂರು.

ಕೊಪ್ಪಳ, ಜು. ೧೩ ನಾಡಿನ ಕಲೆ, ಸಂಸ್ಕೃತಿ ಉಳಿಸಲು ಶ್ರಮಿಸುತ್ತಿರುವ ನೋಂದಾಯಿತ ಕ್ರಿಯಾಶೀಲ ಸಂಘ ಸಂಸ್ಥೆಗಳಿಗೆ ಇಲಾಖೆ ನೇರವಾಗಿ ಧನ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರಪ್ಪ ಚೋರನೂರು ಹೇಳಿದ್ದಾರೆ.ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ೫ನೆಯ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಾಹಿತ್ಯಭವನದ ಹತ್ತಿರದ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಜು. ೧೨ ರಂದು ಆಯೋಜಿಸಿದ್ದ ಸಮುದಾಯ ಸಾಂಸ್ಕೃತಿಕ ಸಂಭ್ರಮ ಹಾಗೂ ಸಮುದಾಯ ಕವಿಗೋಷ್ಠಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ೨೦೧೪-೧೫ನೆಯ ಸಾಲಿನಲ್ಲಿ ಜಿಲ್ಲೆಯ ೩೦ ಸಂಘ ಸಂಸ್ಥೆಗಳಿಗೆ ಇಲಾಖೆ ಧನ ಸಹಾಯ ನೀಡಿದೆ ಎಂದರು.
    ಮುಖ್ಯ ಅತಿಥಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಇಲ್ಲಿ ನಡೆಯುವ ಕಾರ್ಯಕ್ರಮವೇ ಕೊನೆಯ ಕಾರ್ಯಕ್ರಮವಾದರೂ ಆಗಬಹುದು. ಯಾಕೆ ಅಂತ ನೀವು ಕೇಳಬಹುದು, ಸಾರ್ವಜನಿಕರ ಮಲ ಮೂತ್ರ ವಿಸರ್ಜನೆಯ ಸ್ಥಳವಾಗಿದ್ದ ಈ ಸ್ಥಳವನ್ನು ಉಳಿಸಲು ಇಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆ ತೆರೆಯಲು ಆಗ ಜಿಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಅವರನ್ನು ಕೇಳಿಕೊಂಡಾಗ ಅನುಮತಿ ನೀಡಿ ಬೆಲೆಬಾಳುವ ಪುಸ್ತಕಗಳ ರಕ್ಷಣೆಗೆ ತಾತ್ಕಾಲಿಕ ಗೋಡೆ ಕಟ್ಟಿಕೊಳ್ಳಲು ಕೂಡಾ ಅನುಮತಿ ನೀಡಿದ್ದರು. ಅವರ ಅನುಮತಿ ಮೇರೆಗೆ ಸಂಘಟಕ ಪತ್ರಕರ್ತ ವೈ. ಬಿ. ಜೂಡಿ ಅವರು ಸುಮಾರು ೧,೮೦,೦೦೦(ಒಂದು ಲಕ್ಷ ಎಂsತ್ತು ಸಾವಿರ) ರೂ. ಖರ್ಚು ಮಾಡಿ ಈ ಮಳಿಗೆಯನ್ನು ನಿರ್ಮಿಸಿಕೊಂಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ.
    ಮೊನ್ನೆ ಏಕಾ ಏಕಿ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಸಾಹಿತ್ಯಭವನದ ನವೀಕರಣದ ನೆಪದಲ್ಲಿ ಈ ಪುಸ್ತಕ ಮಳಿಗೆಯನ್ನು ಕೆಡವಿ ತೆರವುಗೊಳಿಸಲು ಮೌಖಿಕವಾಗಿ ಆದೇಶ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಜಿಲಾಧಿಕಾರಿಗಳ ಈ ಕ್ರಮವನ್ನು ನಾನು ಈ ವೇದಿಕೆಯ ಮೂಲಕ ವಿರೋಧಿಸುತ್ತೇನೆ ಎಂದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಚ್. ಎಸ್. ಪಾಟೀಲ ಅವರು ಮಾತನಾಡಿ ಕೊಪ್ಪಳದಲ್ಲಿ ಒಳ್ಳೆದನ್ನು ವಿರೋಧಿಸುವ ಒಂದು ಕೆಟ್ಟ ಸಂಪ್ರದಾಯವಿದೆ. ಸಮುದಾಯದ ಅಭಿವೃದ್ಧಿಯನ್ನು ವಿರೋದಿಸುವ ಪ್ರವೃತ್ತಿ ಇಲ್ಲಿದೆ. ಹೋರಾಟ ಮನೋಭಾವವಿದ್ದರೆ ಸೃಜನಶೀಲತೆ ಹೆಚ್ಚುತ್ತದೆ. ಜಿಲ್ಲಾಡಳಿತ ಈ ಮಳಿಗೆಯನ್ನು ತೆರವುಗೊಳಿಸುವುದನ್ನು ಕೈಬಿಡದಿದ್ದರೆ ಈ ಮಳಿಗೆಯ ಉಳಿವಿಗೆ ಸಾಹಿತಿಗಳು, ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ಮಾಡಲೂ ಹಿಂಜರತಿಯುವುದಿಲ್ಲ ಎಂದರು.
    ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಮೂಲಕ ಅವರನ್ನು ಸಾಹಿತಿಗಳನ್ನಾಗಿ ಮಾಡಬೇಕು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೇದಿಕೆ ಒದಗಿಸಲು ವೈ. ಬಿ. ಜೂಡಿ ಅವರು ಶ್ರಮಿಸುತ್ತಿದ್ದಾರೆ ಎಂದು ಶ್ರೀ ಮಹಾದೇವಯ್ಯದೇವರು, ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾಮಠ ಕುಕನೂರು ಅವರು ಸಮಾರಂಭದ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ. ಸಾದಿಕಲಿ ಉಪಸ್ಥಿತರಿದ್ದರು.
    ಭಾಗ್ಯನಗರದ ದೀಕ್ಷಾ ನಾಟ್ಯ ಕಲಾ ಸಂಸ್ಥೆಯ ಕಲಾವಿದರು, ಹೊಸಪೇಟೆಯ ಕು. ಎಸ್. ಪಿ. ಗಾಯತ್ರಿ ಭರತನಾಟ್ಯ ಪ್ರದರ್ಶನ, ಈಶವ್ವ ಕಂಬಳಿ ಸುಗಮ ಸಂಗೀತ, ಭಾವಗೀತೆಗಳನ್ನು ಮಲ್ಲಿಕಾರ್ಜುನ ಓಜನಹಳ್ಳಿ, ಮಂಜುನಾಥ ಚಿಲವಾಡ್ಗಿ ಮಿಮಿಕ್ರಿ, ಸುಧಾ ಮುತ್ತಾಳ ಸಿನಿಮಾ ನೃತ್ಯ, ಅಭಿನವ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ದೇಶಭಕ್ತಿ ಗೀತೆ, ಕು. ವಿದ್ಯಾಶ್ರೀ ಭಕ್ತಿ ಗೀತೆ ಮತ್ತು ಬೆಣಕಲ್ಲು ಗ್ರಾಮದ ಗಂಗವ್ವ ಹರಿಜನ ಹಾಗೂ ನೀಲವ್ವ ಬಾವಿಮನಿ ಸಂಪ್ರದಾಯದ ಪದಗಳನ್ನು ಹಾಡಿದರು.
    ನಂತರ ನಡೆದ ಸಮುದಾಯ ಕವಿಗೋಷ್ಠಿಯಲ್ಲಿ ಶಾಂತಾದೇವಿ ಹಿರೇಮಠ, ಪುಷ್ಪಾಲತಾ ಏಳುಬಾವಿ, ಸುಧಾ ಮುತ್ತಾಳ, ಶಿವಲೀಲಾ ಹಾದಿಮನಿ, ಸಂಪತ್‌ಕುಮಾರ ಆಕಳವಾಡಿ, ಮೇಘರಾಜರಡ್ಡಿ ಗೋನಾಳ, ಹನುಮಂತಗೌಡ ಪಾಟೀಲ, ಉಮೇಶ ಪೂಜಾರ, ನಾಗರಾಜ ಡೊಳ್ಳಿನ, ಪಿ. ಬಿ. ಪಾಟೀಲ, ಎಸ್. ಎಂ. ಕಂಬಾಳಿಮಠ, ಅನಿಲ ಬಾಚನಳ್ಳಿ, ಶಿಲ್ಪಾ ಕುರಿ, ವೈ. ಬಿ. ಜೂಡಿ ಮುಂತಾದ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಓದಿದರು. ಸಾಹಿತಿ ಈಶ್ವರ ಹತ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಿಮಲಾದೇವಿ ಇನಾಮದಾರ ಮುಖ್ಯ ಅತಿಥಿಯಾಗಿದ್ದರು.
    ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೈ. ಬಿ. ಜೂಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ವಹಿಸಿದರು. ಸಮುದಾಯ ಕವಿಗೋಷ್ಠಿಯನ್ನು ಜಿ. ಎಸ್. ಗೋನಾಳ ನಿರ್ವಹಿಸಿದರು. ಶಿಲ್ಪಾ ಕುರಿ ವಂದಿಸಿದರು.

Leave a Reply