ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ ಮತದಾನ.

ಕೊಪ್ಪಳ ಫೆ. ೨೦ (ಕ ವಾ) ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯ  ಶನಿವಾರದಂದು ಕೊಪ್ಪಳ ಜಿಲ್ಲೆಯಾದ್ಯಂತ ಸುಗಮ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ  ಜಿಲ್ಲೆಯಲ್ಲಿ ೩,೯೪,೨೮೧-ಪುರುಷ ಹಾಗೂ  ೩,೮೯,೦೫೯-ಮಹಿಳಾ ಮತದಾರರು ಸೇರಿದಂತೆ ಒಟ್ಟು ೭,೮೩,೩೪೦ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದರು.  ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಪುರುಷ-೯೩,೩೩೬, ಮಹಿಳೆ-೯೦,೯೨೫ ಸೇರಿದಂತೆ ಒಟ್ಟು ೧,೮೪,೨೬೧ ಮತದಾರರು, ಕೊಪ್ಪಳ ತಾಲೂಕಿನಲ್ಲಿ ಪುರುಷ-೧,೦೪,೨೯೫, ಮಹಿಳೆ-೧,೦೨,೧೧೦ ಸೇರಿದಂತೆ ಒಟ್ಟು ೨,೦೬೪೦೫ ಮತದಾರರು, ಗಂಗಾವತಿ ತಾಲೂಕಿನಲ್ಲಿ ಪುರುಷ-೧,೦೮,೯೩೭, ಮಹಿಳೆ-೧,೧೧,೨೦೨ ಸೇರಿದಂತೆ ಒಟ್ಟು ೨,೨೦,೧೩೯ ಮತದಾರರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಪುರುಷ-೮೭,೭೧೩ ಮತ್ತು ಮಹಿಳೆ-೮೪,೮೨೨ ಸೇರಿದಂತೆ ಒಟ್ಟು ೧,೭೨,೫೩೫ ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.ಕೊಪ್ಪಳ ಜಿಲ್ಲಾ ಪಂಚಾಯತಿಯ ೨೯ ಕ್ಷೇತ್ರಗಳಿಗೆ ೧೧೭ ಅಭ್ಯರ್ಥಿಗಳು ಮತ್ತು ತಾಲೂಕಾ ಪಂಚಾಯತಿಯ ೧೦೯ ಕ್ಷೇತ್ರಗಳಿಗೆ ೩೪೭ ಅಭ್ಯರ್ಥಿಗಳು ಕಣದಲ್ಲಿದ್ದರು.  ಪಂಚಾಯತಿ ಚುನಾವಣೆಗಾಗಿ ಒಟ್ಟು ೯೪೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಜಿಲ್ಲೆಯಲ್ಲಿ ಬಹುತೇಕ ಮತದಾನ ಸುಗಮ ಹಾಗೂ ಶಾಂತಿಯುತವಾಗಿ ಜರುಗಿದೆ.  ಬೆಳಿಗ್ಗೆ ೦೭ ಗಂಟೆಯಿಂದ ಪ್ರಾರಂಭವಾದ ಮತದಾನ ಆರಂಭದಲ್ಲಿ ಸ್ಪಲ್ಪ ಮಂದಗತಿಯಲ್ಲಿ ಸಾಗಿದ್ದರಿಂದ ಬೆಳಿಗ್ಗೆ ೦೯ ಗಂಟೆಯ ವೇಳೆಗೆ ಕೇವಲ ಶೇ. ೭. ೫ ರಷ್ಟು ಆಗಿತ್ತು.  ನಂತರ ಸ್ವಲ್ಪ ಚುರುಕುಗೊಂಡ ಮತದಾನದ ಕಾರಣ ಬೆಳಿಗ್ಗೆ ೧೧ ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ. ೧೬. ೫೦ ರಷ್ಟು ಮತದಾನವಾಯಿತು. ಶನಿವಾರದಂದು ಬಿಸಿಲಿನ ಝಳ ಹೆಚ್ಚಾಗಿದ್ದರೂ ಕೂಡ, ಮಧ್ಯಾಹ್ನದ ನಂತರವೇ ಮತದಾನ ಪ್ರಕ್ರಿಯೆ ತುರುಸಿನಿಂದ ನಡೆದು, ಮಧ್ಯಾಹ್ನ ೦೧ ಗಂಟೆಯ ವೇಳೆಗೆ ಶೇ. ೩೨. ೭೫ ರಷ್ಟು ಹಾಗೂ ಮಧ್ಯಾಹ್ನ ೦೩ ಗಂಟೆಯ ವೇಳೆಗೆ ಶೇ. ೫೦. ೫೦ ರಷ್ಟು ಮತದಾನ ಸಾಧ್ಯವಾಯಿತು.  ಸಂಜೆ ೦೫ ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.  ಸಂಜೆಯ ಹೊತ್ತಿಗೆ ಬಿಸಿಲಿನ ಝಳ ಕಡಿಮೆಯಾದ ಕಾರಣದಿಂದ, ಮತದಾರರು ಮತದಾನಕ್ಕಾಗಿ ಮತಗಟ್ಟೆಯತ್ತ ಧಾವಿಸುತ್ತಿದ್ದುದು ಕಂಡುಬಂದಿತು.ತಾಲೂಕಿನ ಇರಕಲ್ಲಗಡ ಗ್ರಾಮದಲ್ಲಿ ಬೆಳಿಗ್ಗೆ ೧೦-೪೫ ಗಂಟೆಯ ಹೊತ್ತಿಗೆ ಶೇ. ೧೮
ರಷ್ಟು ಮತದಾನವಾಗಿತ್ತು.  ಚಿಲಕಮುಖಿ ಗ್ರಾಮದಲ್ಲಿ ಬೆಳಿಗ್ಗೆ ೧೧-೩೦ ಗಂಟೆಯವರೆಗೆ ಶೇ.
೩೩ ರಷ್ಟು ಮತದಾನವಾಗಿದ್ದು ಕಂಡುಬಂತು.  ಮೆತಗಲ್ ಗ್ರಾಮದಲ್ಲಿ ಮಧ್ಯಾಹ್ನ ೧೨
ಗಂಟೆಯವರೆಗೆ ಶೇ. ೨೫ ರಷ್ಟು ಮಾತ್ರ ಮತದಾನವಾಗಿತ್ತು.  ಕೂಕನಪಳ್ಳಿ ಗ್ರಾಮದಲ್ಲಿ
ಪರಿಸ್ಥಿತಿ ಭಿನ್ನವಾಗಿತ್ತು.  ಇಲ್ಲಿ ಮಧ್ಯಾಹ್ನ ೧೨.೩೦ ಗಂಟೆಯವರೆಗೆ ಶೇ. ೫೧ ರಷ್ಟು
ಮತದಾನವಾಗಿತ್ತು.  ಹಿಟ್ನಾಳ ಗ್ರಾಮದಲ್ಲಿ ಮಧ್ಯಾಹ್ನ ೧ ಗಂಟೆಯವರೆಗೆ ಶೇ. ೩೭ ರಷ್ಟು
ಮತದಾನವಾಗಿದ್ದು ಕಂಡುಬಂತು.  ಕುತೂಹಲ ಮೂಡಿಸಿರುವ ಗಿಣಿಗೇರಾ ಕ್ಷೇತ್ರದಲ್ಲಿ ಮಧ್ಯಾಹ್ನ
೧-೧೫ ಗಂಟೆಯವರೆಗೆ ಶೇ. ೩೬ ರಷ್ಟು ಮಾತ್ರ ಮತದಾನವಾಗಿತ್ತು.  ಆದರೆ ಬಸಾಪುರ
ಗ್ರಾಮದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮಧ್ಯಾಹ್ನದ ಬಿಸಿಲನ್ನೂ
ಲೆಕ್ಕಿಸದೆ ಮತದಾನಕ್ಕೆ ಮುಂದಾಗಿದ್ದು ಕಂಡುಬಂತು.  ಇಲ್ಲಿ ಮಧ್ಯಾಹ್ನ ೧-೩೦ ಗಂಟೆಯ
ವೇಳೆಗೆ ಶೇ. ೪೭ ರಷ್ಟು ಮತದಾನವಾಗಿದ್ದು ಕಂಡುಬಂದಿತು.ಒಟ್ಟಾರೆ ಜಿಲ್ಲೆಯಲ್ಲಿ ಬಹುತೇಕ
ಶಾಂತಿಯುತ ಮತದಾನವಾಗಿದ್ದು, ಮತ ಎಣಿಕೆ ಕಾರ್ಯ ಫೆ. ೨೩ ರಂದು ಆಯಾ ತಾಲೂಕು
ಕೇಂದ್ರಗಳಲ್ಲಿ ನಡೆಯಲಿದೆ.

Please follow and like us:
error