You are here
Home > Koppal News > ಹಿರಿಯ ನಾಗರೀಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ : ಶಾಸಕ ರಾಘವೇಂದ್ರ ಹಿಟ್ನಾಳ

ಹಿರಿಯ ನಾಗರೀಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ : ಶಾಸಕ ರಾಘವೇಂದ್ರ ಹಿಟ್ನಾಳ

ಹಿರಿಯ ನಾಗರೀಕರನ್ನು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದ್ದು, ಯುವ ಪೀಳಿಗೆ ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಜಿಲ್ಲಾ ಪೊಲೀಸ್ ಕಾರ್ಯಾಲಯ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಸಾಹಿತ್ಯ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ನೆರವೇರಿಸಿ ಅವರು ಮಾತನಾಡಿದರು.
  ಹಿರಿಯ ನಾಗರೀಕರು ಬದುಕಿನಲ್ಲಿ ಪಡೆದ ಅನುಭವದ ಲಾಭವನ್ನು ಯುವ ಪೀಳಿಗೆ ಪಡೆದುಕೊಳ್ಳಬೇಕು.  ಅಂತಹ ಹಿರಿಯರನ್ನು ಗೌರವಿಸುವ ಸಲುವಾಗಿ ಸರ್ಕಾರದ ವತಿಯಿಂದ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಮನೆಗಳಲ್ಲಿ ಹಿರಿಯರನ್ನು ತುಚ್ಛವಾಗಿ ನಡೆಸಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ.  ಇಂತಹ ಮನೋಭಾವನೆ ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  ವಯೋವೃದ್ಧರ ಬದುಕನ್ನು ಹಸನಾಗಿಸಲು ಸರ್ಕಾರ ಅವರಿಗೆ ಮಾಸಾಶನ, ಬಸ್ ಪ್ರಯಾಣದಲ್ಲಿ ರಿಯಾಯಿತಿ ಹೀಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.  ಹಿರಿಯ ನಾಗರಿಕರ ಸಹಾಯಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೆ ೧೦೯೦ ಟೋಲ್ ಫ್ರೀ ಸಹಾಯವಾಣಿ ಪ್ರಾರಂಭಿಸಲಾಗಿದೆ.  ಅಲ್ಲದೆ ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳಿಗೆ ಸರ್ಕಾರ ಅನುದಾನವನ್ನು ಒದಗಿಸುತ್ತಿದೆ.  ಹಿರಿಯ ನಾಗರೀಕರನ್ನು ಗೌರವಿಸುವ ಮೂಲಕ, ದೇಶದ ಸಂಸ್ಕೃತಿಯನ್ನು ಯುವಪೀಳಿಗೆ ಎತ್ತಿ ಹಿಡಿಯಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕರೆ ನೀಡಿದರು.
  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ನಾಗರೀಕರು ಮಾನಸಿಕವಾಗಿ ತೊಂದರೆಗೊಳಗಾದಲ್ಲಿ ಅಂತಹವರಿಗೆ ಅಗತ್ಯ ವೈದ್ಯಕೀಯ ಸಲಹೆ ಮತ್ತು ರಕ್ಷಣೆ ಒದಗಿಸಲು ಇಲಾಖೆ ನೆರವಾಗಲಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ೧೦೯೦ ಟೋಲ್ ಪ್ರೀ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ೧,೦೭,೩೫೦ ಹಿರಿಯ ನಾಗರಿಕರಿರುವುದಾಗಿ ಅಂದಾಜಿಸಲಾಗಿದ್ದು, ಇದರಲ್ಲಿ   ಇದುವರೆಗೂ ೩೦,೮೫೧ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನೀಡಲಾಗಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಜಿಲ್ಲೆಯಲ್ಲಿ ಎರಡು ವೃದ್ಧಾಶ್ರಮಗಳನ್ನು ನಡೆಸುತ್ತಿದ್ದು, ೫೦ ಜನ ವೃದ್ಧರು ಸದುಪಯೋಗ ಪಡೆಯುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ೬೦,೬೪೧ ಜನರು ಸರ್ಕಾರದ ವಿವಿಧ ಯೋಜನೆಯಡಿ ವೃದ್ಧಾಪ್ಯವೇತನ ಪಡೆಯುತ್ತಿದ್ದಾರೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಕಾರ್ಯಕ್ರಮ ಕುರಿತು ಮಾತನಾಡಿದರು.   ಕೊಪ್ಪಳ ಪಿ.ಎಸ್.ಐ. ನಾಗರೆಡ್ಡಿ, ಗಣ್ಯರಾದ ಶರಣಗೌಡ ಬಿರಾದಾರ, ಅಲ್ಲಮಪ್ರಭು ಬೆಟ್ಟದೂರು, ಕಾಳಮ್ಮ ಐ.ಪತ್ತಾರ ಉಪಸ್ಥಿತರಿದ್ದರು.  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರೀಕರಿಗೆ ಸನ್ಮಾನಿಸಲಾಯಿತು.  ಅಲ್ಲದೆ ಹಿರಿಯ ನಾಗರೀಕರಿಗಾಗಿ ಏರ್ಪಡಿಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

Leave a Reply

Top