ಶೀಘ್ರ ನೂತನ ಕ್ರೀಡಾ ನೀತಿ ಜಾರಿ: ಕ್ರೀಡಾ ಸಚಿವ ಅಪ್ಪಚ್ಚು ರಂಜನ್

  ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೂ ಸಹ ಉತ್ತಮ ಅವಕಾಶ ಲಭಿಸುವ ವೇದಿಕೆ ಕಲ್ಪಿಸುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೂತನ ಕ್ರೀಡಾ ನೀತಿಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಅವರು ಹೇಳಿದರು.

  ಕೊಪ್ಪಳದ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

  ರಾಜ್ಯದಲ್ಲಿ ಕ್ರೀಡಾಳುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಗರ ಕೇಂದ್ರೀಕೃತ ವ್ಯವಸ್ಥೆ ಇದ್ದು, ಇದರಿಂದ ಗ್ರಾಮೀಣ ಕ್ರೀಡಾ ಪಟುಗಳಿಗೆ ಹೆಚ್ಚಿನ ಅವಕಾಶ ದೊರೆಯುವುದು ಕಷ್ಟ ಸಾಧ್ಯವಾಗಲಿದೆ.  ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ, ಹಾಗೂ ರಾಜ್ಯದ ಸಮಗ್ರ ಕ್ರೀಡಾ ನೀತಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ.  ಒಲಂಪಿಕ್ ಮುಂತಾದ ಅಂತರ ರಾಷ್ಟ್ರೀಯ ಕ್ರೀಡೆಗಳಲ್ಲಿ ಚೀನಾ, ಅಮೇರಿಕಾ ಮುಂತಾದ ದೇಶಗಳ ಕ್ರೀಡಾಪಟುಗಳು ಪದಕ ಗಳಿಕೆಯಲ್ಲಿ ಇತರೆ ದೇಶಗಳಿಗಿಂತ ಮುಂದಿದ್ದು, ಅಂತಹ ದೇಶಗಳು ತಮ್ಮ ಕ್ರೀಡಾಪಟುಗಳಿಗೆ ಸತತ ತರಬೇತಿ ನೀಡಿ ಅಂತರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುತ್ತವೆ.  ಆದರೆ ನಮ್ಮಲ್ಲಿ ಕೇವಲ ೬ ತಿಂಗಳ ಮೊದಲು ತರಬೇತಿಯನ್ನು ಚುರುಕುಗೊಳಿಸುವ ಯತ್ನ ನಡೆಯುತ್ತದೆ.  ಇಂತಹ ಅನೇಕ ನೀತಿಗಳಲ್ಲಿ ಲೋಪಗಳಿವೆ.  ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿದ ದೇಶಗಳ ಕ್ರೀಡಾ ನೀತಿಯ ಅಧ್ಯಯನ ನಡೆಸಿ, ಅಂತಹ ಸುಧಾರಿತ ಕ್ರೀಡಾ ನೀತಿಯನ್ನು ನಮ್ಮಲ್ಲೂ ಜಾರಿಗೆ ತರುವ ಪ್ರಯತ್ನ ನಡೆದಿದ್ದು, ನೂತನ ಕ್ರೀಡಾ ನೀತಿಯನ್ನು ಶೀಘ್ರದಲ್ಲೆ ನಮ್ಮಲ್ಲೂ ಜಾರಿಗೆ ತರಲಾಗುವುದು ಎಂದರು.
ವಿವೇಕಾನಂದ ಯುವಶಕ್ತಿ ನಿಗಮ: ಈಗಾಗಲೆ ನಮ್ಮ ಸರ್ಕಾರ ರಾಜ್ಯ ಯುವ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಸಕ್ತ ಆಯವ್ಯಯದಲ್ಲಿ ಅನುದಾನವನ್ನು ಮೀಸಲಿರಿಸಿದೆ.  ಯುವಜನತೆ ರಾಷ್ಟ್ರದ ಶಕ್ತಿಯಾಗಿದ್ದು, ಯುವಕರು ಸ್ವಾವಲಂಬಿಗಳಾಗಬೇಕು, ಅವರ ಭವಿಷ್ಯ ಉಜ್ವಲವಾಗಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ, ಯುವಜನತೆಯನ್ನು ಕೇಂದ್ರೀಕರಿಸಿಕೊಂಡು ನೂತನವಾಗಿ ವಿವೇಕಾನಂದ ಯುವಶಕ್ತಿ ನಿಗಮ ಸ್ಥಾಪನೆಗೆ ಮುಂದಾಗಿದೆ.  ಈ ಮೂಲಕ ಯುವಜನರನ್ನು ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಶ್ರಮಿಸಲಿದೆ ಎಂದರು.
ಕ್ರೀಡಾ ಸಂಜೀವಿನಿ: ಕ್ರೀಡಾ ಪಟುಗಳಿಗೆ ಸ್ಪರ್ಧೆಯ ಸಂದರ್ಭದಲ್ಲಿ ಅಥವಾ ಆಕಸ್ಮಿಕವಾಗಿ ಅಪಘಾತಗಳಾದಾಗ, ಅಂತಹ ಕ್ರೀಡಾಪಟುಗಳ ಚಿಕಿತ್ಸೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸರ್ಕಾರ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಕ್ರೀಡಾ ಪಟುಗಳಿಗೆ ಜಾರಿಗೊಳಿಸಲು ಈಗಾಗಲೆ ಕ್ರಮ ಕೈಗೊಂಡಿದೆ.  ಇದರಿಂದ ಕ್ರೀಡಾ ಪಟುಗಳ ಚಿಕಿತ್ಸಾ ವೆಚ್ಚಕ್ಕೆ ಗರಿಷ್ಟ ೩ ಲಕ್ಷ ರೂ.ಗಳವರೆಗೆ ವೆಚ್ಚ ಪಾವತಿಸಲು ಅವಕಾಶ ಸಿಗಲಿದೆ.  ಹಂತ ಹಂತವಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
೧೦ನೇ ತರಗತಿಯವರೆಗೆ ಕ್ರೀಡಾಶಾಲೆ: ರಾಜ್ಯದಲ್ಲಿ ಸದ್ಯ ಒಟ್ಟು ೨೩ ಜಿಲ್ಲೆಗಳಲ್ಲಿ ಕ್ರೀಡಾ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಶಾಲೆಗಳಲ್ಲಿ ೭ ನೇ ತರಗತಿಯವರೆಗೆ ಮಾತ್ರ ವ್ಯಾಸಂಗಕ್ಕೆ ಅವಕಾಶವಿದ್ದು, ಈ ಹಂತದವರೆಗೆ ಮಾತ್ರ ಮಕ್ಕಳಿಗೆ ಉತ್ತಮ ತರಬೇತಿ ನೀಡಲು ಸಾಧ್ಯವಾಗುತ್ತಿದೆ.  ಆದ್ದರಿಂದ ಉತ್ತಮ ಕ್ರೀಡಾ ವಿದ್ಯಾರ್ಥಿಗಳಿಗೆ ಕನಿಷ್ಟ ೬ ವರ್ಷಗಳ ಕಾಲ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರೀಡಾ ಶಾಲೆಗಳನ್ನು ೧೦ನೇ ತರಗತಿಯವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.  ಶೀಘ್ರದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
  ನಂತರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಅವರು ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಕ್ರೀಡಾಂಗಣಗಳ ಅಭಿವೃದ್ಧಿ ಕುರಿತಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. 
  ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿಯಾಗಿ ೦೧ ಕೋಟಿ ರೂ.ಗಳ  ಅನುದಾನ ಮಂಜೂರು ಮಾಡಬೇಕು.  ಅಲ್ಲದೆ ಜಿಲ್ಲಾ ಕ್ರೀಡಾಂಗಣ ಸುತ್ತ ಕಾಂಪೌಂಡ್ ನಿರ್ಮಿಸಲು ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.
  ಸಭೆಯಲ್ಲಿ ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಭಾಗವಹಿಸಿದ್ದರು.  ಇದಕ್ಕೂ ಮುನ್ನ ಕ್ರೀಡಾ ಸಚಿವರು ಜಿಲ್ಲಾ ಕ್ರೀಡಾಂಗಣದಲ್ಲಿ ಗುಲಬರ್ಗಾ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಸಾಂಕೇತಿಕ ಚಾಲನೆ ನೀಡಿದರು.
Please follow and like us:
error