ಮೇಲ್ಜಾತಿಯ ಧ್ರುವೀಕರಣದ ಅಪಾಯ

– ಸನತ್‌ಕುಮಾರ ಬೆಳಗಲಿ
ಜಾಗತೀಕರಣದ ಝಳದಲ್ಲಿ ಸಾಮಾಜಿಕ ನ್ಯಾಯದ ಆಶಯಗಳು ಕಮರಿ ಹೋಗುತ್ತಿರುವಾಗಲೇ ಜಾತಿ ಧ್ರುವೀಕರಣದ ವ್ಯಾಧಿ ಕರ್ನಾಟಕವನ್ನು ಆವರಿಸತೊಡಗಿದೆ.ಸಮಾಜದ ದಮನಿತ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಒಂದುಗೂಡಲು ತೊಡಗಿದರೆ ಆತಂಕಪಡಬೇಕಾಗಿಲ್ಲ.ಆದರೆ ಆಸ್ತಿ-ಅಂತಸ್ತುಗಳಲ್ಲಿ ಬಲಿಷ್ಠವಾಗಿರುವ ಜಾತಿಗಳು ಒಂದುಗೂಡಲು ತೊಡಗಿದರೆ, ಅದು ಅಪಾಯದ ಮುನ್ಸೂಚನೆ. ರಾಜ್ಯದಲ್ಲಿ ಒಂದೆಡೆ ದುರ್ಬಲ ಜಾತಿಗಳು ಮತ್ತು ವರ್ಗಗಳು ಒಡೆದು ಛಿದ್ರವಾಗುತ್ತಿವೆ. ಶೂದ್ರ ಮತ್ತು ದಲಿತ ಸಂಘಟನೆಗಳ ನಡುವೆ ವಿಭಜನೆಯ ಅಡ್ಡಗೋಡೆ ಎದ್ದುನಿಂತಿದೆ. ಆದರೆ ಬ್ರಾಹ್ಮಣ, ಲಿಂಗಾಯಿತ ಮತ್ತು ಒಕ್ಕಲಿಗರು ಒಳಪಂಗಡಗಳನ್ನು ಬದಿಗೊತ್ತಿ ಒಂದುಗೂಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೇಲ್ಜಾತಿಗಳ ಧ್ರುವೀಕರಣದ ಪ್ರಕ್ರಿಯೆ ಬಿರುಸಾಗಿ ಸಾಗಿದೆ.ಎಲ್ಲೆಡೆ ಈಗ ಜಾತಿ ಸಮಾವೇಶಗಳ ಅಬ್ಬರ ಕೇಳಿ ಬರುತ್ತಿದೆ. ಕಳೆದ ಮೂರು ವಾರಗಳಿಂದ ರಾಜ್ಯದ ಎರಡು ಪ್ರಮುಖ ಜಾತಿಗಳ ಜಗದ್ಗುರುಗಳ ಗುರುವಂದನೆ ಕಾರ್ಯಕ್ರಮ ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ಕಳೆದ ತಿಂಗಳು ತುಮಕೂರಿನಲ್ಲಿ ಸಿದ್ದಗಂಗಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ನಡೆಯಿತು. ನಂತರ ಕೋಲಾರದಲ್ಲಿ ಒಕ್ಕಲಿಗರ ಗುರುತಿಲಕ ಬಾಲಗಂಗಾಧರನಾಥ ಸ್ವಾಮಿಗಳ ಗುರುವಂದನೆ ನಡೆಯಿತು.
ಇದು ಸಾಲದೆಂಬಂತೆ ರಾಜ್ಯ ಒಕ್ಕಲಿಗರ ಸಂಘ ಜೂನ್ 3ರಂದು ಅದೇಅ ಆದಿಚುಂಚನಗಿರಿ ಸ್ವಾಮಿಗಳ ಗುರುವಂದನೆ ಕಾರ್ಯ ಕ್ರಮ ನಡೆಸಿತು. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬ್ರಾಹ್ಮಣರು ಪೇಜಾವರ ಮತ್ತು ರಾಘವೇಶ್ವರ ಸ್ವಾಮಿಗಳನ್ನು ಮುಂದಿಟ್ಟು ಕೊಂಡು ಸಮಾವೇಶ ನಡೆಸಿ ದರು. ಬಹುಶಃ ವಿಧಾನಸಭೆ ಚುನಾವಣೆಯವರೆಗೆ ಈ ಗುರುವಂದನೆ ಕಾರ್ಯಕ್ರಮ ಗಳು ನಿರಂತರವಾಗಿ ನಡೆಯುವ ಸಂಭವವಿದೆ.
ಹಿಂದುಳಿದ ಜಾತಿ-ಜನವರ್ಗಗಳು ಕೂಡ ಸುಮ್ಮಅನೆ ಕುಳಿತಿಲ್ಲ. ಇತ್ತೀಚೆಗೆ ದಾವಣಗೆರೆಯಲ್ಲಿ ಕುರುಬರ ಸಮ್ಮೇಳನ ನಡೆಯಿತು. ಅಲ್ಲಲ್ಲಿ ಛಲವಾದಿ ಸಮಾವೇಶಗಳು, ಮಾದಿಗ ಮೀಸಲಾತಿ ಹೋರಾಟದ ಸಭೆಗಳು ನಡೆಯುತ್ತಿವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ತಳಪಾಯದಲ್ಲಿರುವ ಈ ಜನಗಳು ಒಂದುಗೂಡಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿಲ್ಲ.ಕುರುಬರ ಸಮಾವೇಶವನ್ನು ಎಲ್ಲ ಹಿಂದುಳಿದ ವರ್ಗಗಳ ಸಮಾವೇಶವನ್ನಾಗಿ ಮಾಡಬಹುದಿತ್ತು.ದಲಿತರು ಬಲಗೈ ಮತ್ತು ಎಡಗೈ ಪಂಗಡಗಳು ಪ್ರತ್ಯೇಕ ಸಭೆ-ಹೋರಾಟಗಳನ್ನು ನಡೆಸುವ ಬದಲು ಒಂದುಗೂಡಿ ತಮ್ಮನ್ನು ಬಾಧಿಸುತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಶೋಷಿತ ವರ್ಗಗಳ ಮತ್ತು ಜಾತಿಗಳಲ್ಲಿ ಛಿದ್ರೀಕರಣದ ಪ್ರಕ್ರಿಯೆ ತೀವ್ರವಾಗಿದೆ.
ಈ ಮೇಲು ಜಾತಿಗಳ ಸಮಾವೇಶಗಳ ಹಿಂದೆ ರಾಜಕೀಯ ಅಧಿಕಾರವನ್ನು ಸ್ವಾಧೀನಪಡಿಸಿ ಕೊಳ್ಳುವ ಮಸಲತ್ತು ಎದ್ದು ಕಾಣುತ್ತಿದೆ. ಯಡಿಯೂರಪ್ಪ ಲಿಂಗಾಯಿತರ ಪ್ರಾತಿನಿಧಿಕ ಸಂಕೇತವಾಗಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಒಕ್ಕಲಿಗ ನಾಯಕರೆಂದು ಬಿಂಬಿಸಲ್ಪಡುತ್ತಿದ್ದಾರೆ. ಇವರೆಲ್ಲರ ಮೇಲೆ ಸವಾರಿ ಮಾಡುವ ವಿಪ್ರರು ತಮ್ಮದೇ ರಹಸ್ಯ ಅಜೆಂಡಾ ಇಟ್ಟುಕೊಂಡು ಆಟವಾಡುತ್ತಿದ್ದಾರೆ. ಈ ಎಲ್ಲ ಧ್ರುವೀಕರಣದ ಹಿಂದೆ ಮಠಾಧೀಶರ ನೇರ ಕೈವಾಡ ಎದ್ದು ಕಾಣುತ್ತದೆ. ಆದರೆ ಈ ಮೇಲ್ಜಾತಿಗಳಲ್ಲಿ ಇರುವ ಬಡವರಿಗೆ ಈ ಜಾತಿ ಸಂಘಟನೆಯಿಂದ ಯಾವುದೇ ಪ್ರಯೋಜನ ವಿಲ್ಲ. ಬೆಳೆ ವಿಫಲವಾಗಿ ಮೇಲ್ಜಾತಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅವರ ಜಾತಿಯ ಸಂಘಟನೆ ಮತ್ತು ಸ್ವಾಮಿಗಳು ನೆರವಿಗೆ ಬರಲಿಲ್ಲ. ಆದರೆ ಅಧಿಕಾರದ ಕುರ್ಚಿ ಹಿಡಿಯಲು ಬಡವರ ಕುತ್ತಿಗೆಗೆ ಜಾತಿಯನ್ನು ಬಿಗಿದು ತಮ್ಮ ಸ್ವಾರ್ಥ ಸಾಧಿಸಲು ಮೇಲ್ಜಾತಿಗಳಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ.ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಒಂದೇ ವೇದಿಕೆಗೆ ತಂದು ಪ್ರಬಲವಾದ ರಾಜಕೀಯ ಶಕ್ತಿಯೊಂದನ್ನು ರೂಪಿಸಿದರು. ಆಗ ಎಡ ಪ್ರಗತಿಪರ ಶಕ್ತಿಗಳನ್ನು ತಮ್ಮ ಜೊತೆಗೆ ಕೂಡಿಸಿಕೊಂಡಿದ್ದರು. ಈ ರಾಜಕೀಯ ಶಕ್ತಿಯ ಮೂಲಕ ಅಧಿಕಾರಕ್ಕೆ ಬಂದು ಭೂ ಸುಧಾರಣೆಯಂತಹ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹಾವನೂರು ವರದಿ ಅನುಷ್ಠಾನಕ್ಕೆ ಬಂತು ಅಂತಲೇ ರಾಜಕೀಯ ಅಧಿಕಾರ ಕೈತಪ್ಪಿ ಹೋದದ್ದರಿಂದ ರೊಚ್ಚಿಗೆದ್ದ ಲಿಂಗಾಯಿತ ಮತ್ತು ಒಕ್ಕಲಿಗರಲ್ಲಿನ ಮೇಲ್ವರ್ಗಗಳ ಪಟ್ಟಭದ್ರ ಹಿತಾಸಕ್ತಿಗಳು ಅರಸು ಸರಕಾರದ ವಿರುದ್ಧ ಭೂಮಿ ಆಕಾಶ ಒಂದು ಮಾಡಿ ಕೂಗಾಡಿದರು. ಕೈತಪ್ಪಿ ಹೋದ ಅಧಿಕಾರಕ್ಕಾಗಿ ಚಡಪಡಿಸಿದರು.ಅರಸು ನಂತರ ಸಾಮಾಜಿಕ ನ್ಯಾಯದ ಅವನತಿ ಆರಂಭವಾಯಿತು. ತಾವು ತುಂಬ ಭರವಸೆಯಿಟ್ಟು ಬೆಳೆಸಿದ ದಲಿತ ಮತ್ತು ಹಿಂದುಳಿದ ನಾಯಕರು ಕೊನೆಯವರೆಗೂ ತಮ್ಮ ಜಾತಿಗೆ ಉಳಿಯಲಿಲ್ಲ ಎಂಬ ನೋವು ಅರಸರನ್ನು ಸಾಯುವವರೆಗೆ ಬಾಧಿಸಿತು. ಇಂದಿರಾ ಗಾಂಧಿಯವರ ಕೃಪೆಯಿಂದ ಮುಖ್ಯಮಂತ್ರಿಯಾದ ಗುಂಡೂರಾಯರು ರಾಜ್ಯದ ಪ್ರಥಮ ಬ್ರಾಹ್ಮಣ ಮುಖ್ಯಮಂತ್ರಿ ಎನಿಸಿದರು. ಅರಸು ಸಂಪುಟದಲ್ಲಿ ಜೊತೆಗಿದ್ದ ದುರ್ಬಲ ವರ್ಗಗಳ ರಾಜಕಾರಣಿಗಳು ಗುಂಡೂರಾವ್ ಪಾಳಯಕ್ಕೆ ಜಿಗಿದು ಮಂತ್ರಿಗಳಾದರು.
ತೊಂಬತ್ತರ ದಶಕದಲ್ಲಿ ಹಿಂದುತ್ವದ ರಾಜಕಾರಣ ಕರ್ನಾಟಕಕ್ಕೆ ಕಾಲಿರಿಸಿತು. ದೇವರಾಜ ಅರಸು ಒಂದುಗೂಡಿಸಿದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜಾತಿಗಳು ಒಡೆದು ಛಿದ್ರವಾದವು. ಅದರಲ್ಲೂ ಮುಖ್ಯ ವಾಗಿ ಹಿಂದುಳಿದ ಜಾತಿಗಳು ಚೂರುಚೂರಾಗಿ ಕೋಮುವಾದಿ ರಾಜಕಾರಣದ ಬಲೆಗೆ ಬಿದ್ದವು. ಅರಸು ಅವರ ಭೂಸುಧಾರಣಾ ಶಾಸನದ ಪ್ರಯೋಜನ ಪಡೆದ ಕರಾವಳಿ ಮತ್ತು ಮಲೆನಾಡಿನ ಹಿಂದುಳಿದ ಜಾತಿಗಳ ಯುವಕರು ಕೇಸರಿ ಬಾವುಟ ಹಿಡಿದರು. ಇನ್ನೊಂದೆಡೆ ವೀರೇಂದ್ರ ಪಾಟೀಲರ ನಂತರ ನಾಯಕರ ಹುಡುಕಾಟದಲ್ಲಿದ್ದ ಉತ್ತರ ಕರ್ನಾಟಕದ ಲಿಂಗಾಯಿತರು ಯಡಿಯೂರಪ್ಪ ನವರನ್ನುತಮ್ಮ ನಾಯಕನ್ನಾಗಿ ಮುಂದೆ ತಂದು ನಿಲ್ಲಿಸಿದರು. ಬಿಜೆಪಿ ಮೊದಲ ಬಾರಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು.
ಹಿಂದುತ್ವವಾದದಿಂದ ಆರಂಭವಾದ ದಲಿತ- ಹಿಂದುಳಿದ ವರ್ಗಗಳ ಛಿಧ್ರೀಕರಣ ಪ್ರಕ್ರಿಯೆ ಪರವಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸಂಘ ಪರಿವಾರದ ಸೂತ್ರದ ಗೊಂಬೆಯಂತೆ ಕಾರ್ಯ ನಿರ್ವಹಿಸತೊಡಗಿತು. ಸಾಮಾಜಿಕ ನ್ಯಾಯದ ಆಶಯಗಳು ಸಮಾಧಿಯಾಗಿ ಭಗವದ್ಗೀತೆ ಅಭಿಯಾನ, ಗೋ ಹತ್ಯೆ ನಿಷೇಧ,ಮತಾಂತರ ನಿರ್ಬಂಧ,ಶಾಲಾ ಪಠ್ಯಪುಸ್ತಕಗಳ ಕೇಸರೀಕರಣ ದಂತಹ ತನ್ನ ಕಾರ್ಯಸೂಚಿಯನ್ನು ಆರೆಸ್ಸೆಸ್ ಸರಕಾರದ ಮೂಲಕ ಜಾರಿಗೆ ತರತೊಡಗಿತು. ಕಬಳಿಕೆಯಲ್ಲಿ ಮಾತ್ರ ಅಪಾರ ಆಸಕ್ತಿಯನ್ನು ಹೊಂದಿದ್ದ ಯಡಿಯೂರಪ್ಪ ಅವರಿಗೆ ಇದ್ಯಾವುದೂ ಅಪಾಯಕಾರಿ ಅನ್ನಿಸಲಿಲ್ಲ. ಆರೆಸ್ಸೆಸ್ ಶಾಖೆಯಲ್ಲಿ ಬೆಳೆದ ಯಡಿಯೂರಪ್ಪನವರಿಗೆ ಈ ಅಜೆಂಡಾ ಜಾರಿಗೆ ಅಡ್ಡಿಯಾಗಲಿಲ್ಲ.
ಬರೀ ನುಂಗುವುದರಲ್ಲಿ ತೊಡಗಿ ನುಂಗಿದ್ದನ್ನು ದಕ್ಕಿಸಿಕೊಳ್ಳಲಾಗದೇ ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ.ಯಡಿಯೂರಪ್ಪ ಜಾಗದಲ್ಲಿ ಮುಖ್ಯಮಂತ್ರಿ ಯಾಗಿರುವ ಸದಾನಂದ ಗೌಡರಿಗೆ ತಮ್ಮ ಕುರ್ಚಿಯನ್ನು ಉಳಿಸಿ ಕೊಳ್ಳಲು ಒಕ್ಕಲಿಗ ಎಂಬ ಜಾತಿಯ ಅಸ್ತ್ರ ಬೇಕಾಗಿದೆ. ಈ ಗೌಡರನ್ನು ಮುಂದಿಟ್ಟುಕೊಂಡು ತಮ್ಮ ಲೂಟಿಯನ್ನು ಮುಂದುವರೆಸಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳಿಗೂ ಕೂಡ ಜಾತಿಯ ರಕ್ಷಾಕವಚ ಬೇಕಾಗಿದೆ. ಅದಕ್ಕಾಗಿ ಗುರುವಂದನೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಮಾವೇಶ ನಡೆಸು ತ್ತಿದ್ದಾರೆ. ಪಕ್ಷಬೇಧವಿಲ್ಲದೇ ಒಕ್ಕಲಿಗ ರೆಲ್ಲ ಒಂದು ಎಂದು ತೋರಿಸಲು ದೇವೇಗೌಡ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ, ಸದಾನಂದಗೌಡ, ಅಶೋಕ್, ಅಂಬರೀಶ, ಡಿಕೆಶಿ ಇವರೆಲ್ಲ ಫೋಟೋ ಹಾಕಿ ಪ್ರಚಾರ ಮಾಡುತ್ತಿದ್ದಾರೆ.
Please follow and like us:
error