ಕೋಮುವಾದ-ಜಾತಿವಾದ ಎಂಬ ಅವಳಿ ಶತ್ರುಗಳು

**ಸನತ್ ಕುಮಾರ ಬೆಳಗಲಿ
ಕೋಮುವಾದ ಮತ್ತು ಜಾತಿವಾದ ಎಂಬ ಎರಡು ಕಡುವೈರಿಗಳ ವಿರುದ್ಧ ರಾಜ್ಯದ ಪ್ರಗತಿಪರರು ಹೋರಾಟ ನಡೆಸಬೇಕಾಗಿದೆ.ಈ ಮಾತನ್ನು ಬೇರೆ ಯಾರೋ ಹೇಳಿದ್ದರೆ, ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ.ಸೈದ್ಧಾಂತಿಕ ಪ್ರಶ್ನೆಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ನಮ್ಮ ನಡುವಿನ ಅಪರೂಪದ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ಈ ಅವಳಿ ಶತ್ರುಗಳನ್ನು ಗುರುತಿಸಿದ್ದಾರೆ.90ರ ದಶಕದ ನಂತರ ಜಾಗತೀಕರಣ ಮತ್ತು ಕೋಮುವಾದ ಎಂಬ ಅವಳಿ ಶತ್ರುಗಳನ್ನು ಗುರುತಿಸಿ, ಅವುಗಳ ವಿರುದ್ಧ ಪ್ರಗತಿಪರರೆಲ್ಲ ತಮ್ಮ ಕೈಲಾದಷ್ಟು ಹೋರಾಟ ಮಾಡುತ್ತ ಬಂದಿದ್ದಾರೆ. ಆದರೆ ಬರಗೂರು ಅವರು ಹೇಳಿದ ಜಾತಿವಾದ ಎಂಬ ಹೊಸ ಶತ್ರು ಯಾವುದು? ಉತ್ತರ ಕರ್ನಾಟದಕದಲ್ಲಿ ಬೆಳೆದ ನನ್ನಂತವರಿಗೆ ಕೋಮುವಾದ ಮತ್ತು ಜಾತಿವಾದ ಬೇರೆ ಬೇರೆ ಎಂಬ ಕಲ್ಪನೆ ಮೊದಲು ಇರಲಿಲ್ಲ. ಅಂತಲೇ ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಶಕ್ತಿಗಳನ್ನು ಜಾತಿವಾದಿಗಳೆಂದು ಕರೆಯುತ್ತಿದ್ದೆವು. ಆದರೆ ಜಾತಿವಾದಕ್ಕೂ ಮತ್ತು ಕೋಮುವಾದಕ್ಕೂ ವ್ಯತ್ಯಾಸವಿದೆ.
ಕೋಮುವಾದದ ಗರ್ಭದಲ್ಲಿ ಅಡಗಿದ ಜಾತಿವಾದ ಕೂಡ ಅತ್ಯಂತ ಅಪಾಯಕಾರಿಯಾದದ್ದು. ಜಾತಿವಾದವನ್ನು ಕೋಮುವಾದಿಗಳು ವಿರೋಧಿಸುತ್ತಾರೆ. ಹಿಂದುತ್ವದ ಆಧಾರದಲ್ಲಿ ರಾಷ್ಟ್ರ ಕಟ್ಟಲು ಹೊರಟ ಅವರಿಗೆ ಶೂದ್ರ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಬೇಕಾಗಿಲ್ಲ. ಅವುಗಳನ್ನು ಜಾತಿವಾದಿ ಎಂದು ಗುರುತಿಸುತ್ತಾರೆ. ಆದರೆ ಪ್ರಗತಿಪರರು ಅಂತಹ ಹೋರಾಟಗಳನ್ನು ಸಾಮಾಜಿಕ ನ್ಯಾಯದ ಹೋರಾಟಗಳೆಂದು ಕರೆಯುತ್ತಾರೆ. ಆದರೆ ಮೇಲ್ಜಾತಿ ಗಳು ಜಾತಿಯಾಧಾರದಲ್ಲಿ ಸಂಘಟಿತವಾದರೆ, ಅದು ಸಾಮಾಜಿಕ ನ್ಯಾಯಕ್ಕೆ ವಿರೋಧ ಎಂಬುದು ಸಮಾನತೆಯಲ್ಲಿ ನಂಬಿಕೆ ಇರುವ ಎಲ್ಲರ ತಿಳಿವಳಿಕೆ. ಕೋಮುವಾದಿಗಳು ಎಂದರೆ ಯಾರು ಎಂಬುದು ಸಾಮಾನ್ಯವಾಗಿ ಎಲ್ಲ ಪ್ರಗತಿಪರರಿಗೆ ಗೊತ್ತಿದೆ. ತಲೆಯ ಮೇಲೆ ಕರಿಟೋಪಿ ಹಾಕಿಕೊಂಡು ಖಾಕಿ ಚಡ್ಡಿ ಧರಿಸಿ ಕೈಯಲ್ಲಿ ಲಾಠಿ ಹಿಡಿದು ಕವಾಯತು ನಡೆಸುವವರನ್ನು ಕೋಮುವಾದಿಗಳೆಂದು ಕರೆಯುತ್ತೇವೆ. ದೇಶದ ಯಾವುದೇ ಮೂಲೆಯಲ್ಲಿ ಕೋಮು-ದಂಗೆ ನಡೆದರೂ ಈ ನಕಲಿ ರಾಷ್ಟ್ರಭಕ್ತರ ಕೈವಾಡ ಇರುತ್ತದೆ. ಮಹಾತ್ಮ ಗಾಂಧಿ ಸೇರಿದಂತೆ ಅನೇಕರನ್ನು ಇಹಲೋಕದಿಂದ ಗಡಿಪಾರು ಮಾಡಿದ ಕುಖ್ಯಾತಿ ಇವರದ್ದು.
ಇನ್ನು ಜಾತಿವಾದಿಗಳೆಂದರೆ ಯಾರು? ಕೋಮುವಾದವನ್ನು ವಿರೋಧಿಸುವ ಪ್ರಗತಿಪರರಲ್ಲೂ ಜಾತಿವಾದದ ಅಂಶಗಳು ಕಾಣುತ್ತವೆ. ಜಾತಿವಾದದ ಗುಂಪಿನಲ್ಲಿ ಅಲ್ಲೊಬ್ಬ-ಇಲ್ಲೊಬ್ಬ ಪ್ರಗತಿಪರರು ಗೋಚರಿಸುತ್ತಾರೆ. ಕೋಮುವಾದಿ ಬಿಜೆಪಿಯನ್ನು ಮುಂಚಿನಿಂದಲೇ ವಿರೋಧಿಸುತ್ತ ಬಂದವರೂ ಕೂಡ ಜಾತಿ ಕಾರಣಕ್ಕಾಗಿ ಯಡಿಯೂರಪ್ಪನವರನ್ನು ಇಷ್ಟಪಡುತ್ತಾರೆ. ಬಹಿರಂಗವಾಗಿ ಅಲ್ಲದಿದ್ದರೂ ಒಳಗೊಳಗೆ ತಮ್ಮ ಸಮಾಜಕ್ಕೆ ಸೇರಿದ ವ್ಯಕ್ತಿ ಮತ್ತೆ ಅಧಿಕಾರಕ್ಕೆ ಬರಲಿಯೆಂದು ಮೌನ ಹಾರೈಕೆ ಸಲ್ಲಿಸುತ್ತಾರೆ.
ಚಿತ್ರದುರ್ಗದ ಮುರುಘಾಮಠದ ಶರಣರನ್ನು ಕರ್ನಾಟಕ ಪ್ರಗತಿಪರರೆಲ್ಲ ತುಂಬ ಇಷ್ಟಪಡುತ್ತಾರೆ. ತಮ್ಮ ಮಠದ ಪರಿಸರದಲ್ಲಿ ಕಂದಾಚಾರವನ್ನು ಬುಡಸಮೇತ ಕಿತ್ತು ಹಾಕಲು ಶರಣರು ನಿರಂತರ ಯತ್ನ ನಡೆಸುತ್ತ ಬಂದಿದ್ದಾರೆ. ರಾಹುಕಾಲದಲ್ಲಿ ಸರಳ ಅಂತರ್ಜಾತಿ ಮದುವೆಗಳನ್ನು ಮಾಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಂಧ್ರದ ಕ್ರಾಂತಿಕಾರಿ ಕವಿ ಗದ್ದರ್ ಅವರನ್ನು ಆಹ್ವಾನಿಸಿ, ಬಸವಶ್ರೀ ಪ್ರಶಸ್ತಿ ನೀಡಿದರು. ಆಗ ಅವರ ವಿರುದ್ಧ ಅನೇಕ ಕಡೆ ಅಪಸ್ವರ ಕೇಳಿ ಬಂದರೂ ಶರಣರು ಸೊಪ್ಪು ಹಾಕಲಿಲ್ಲ. ಅದೇ ರೀತಿ ಮೇಧಾ ಪಾಟ್ಕರ್ ಅವರಿಗೂ ಈ ಪ್ರಶಸ್ತಿ ನೀಡಿದ್ದರು. ಇದು ಇಷ್ಟೇ ಅಲ್ಲ, ಕೋಮು ಸೌಹಾರ್ದ ವೇದಿಕೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಹೋರಾಟಕ್ಕೆ ಹೊಸ ಬಲ ನೀಡಿದ್ದರು.
ಇಂತಹ ಮುರುಘಾಮಠದ ಶರಣರು ಒಮ್ಮಿಂದೊಮ್ಮೆಲೇ ಯಡಿಯೂರಪ್ಪನವರ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿ, 60 ಶಾಸಕರ ಬೆಂಬಲ ಇರುವ ಯಡಿಯೂರಪ್ಪ ಅವರು ಸಹನೆಯಿಂದ ಇದ್ದಾರೆ. ಅವರ ಸಹನೆಯನ್ನು ಪರೀಕ್ಷಿಸಬೇಡಿ. ಅವರನ್ನು ಮುಖ್ಯಮಂತ್ರಿ ಮಾಡಿಯೆಂದು ಅಪ್ಪಣೆ ಕೊಡಿಸಿದರು. ಈ ಮಾತನ್ನು ಪೇಜಾವರರು ಹೇಳಿದ್ದರೆ ಅಚ್ಚರಿಯಾಗುತ್ತಿರಲಿಲ್ಲ. ಆದರೆ ತಮ್ಮನ್ನು ಬಸವಣ್ಣ ಪರಂಪರೆಯ ವಾರಸುದಾರರು ಎಂದು ಕರೆಸಿಕೊಳ್ಳುವ ಶರಣರು ಯಾಕೆ ಹೀಗೆ ಒಮ್ಮೆಲೇ ಬದಲಾಗಿಬಿಟ್ಟರು. ಇದನ್ನು ಜಾತಿವಾದ ಎಂದು ಕರೆಯಬಹುದೇ? ಬರೀ ಜಾತಿವಾದ ಆಗಿರಲಿಕ್ಕಿಲ್ಲ, ಇತರ ವ್ಯಾವಹಾರಿಕ ಕಾರಣಗಳೂ ಇರಬಹುದು.
ಯಡಿಯೂರಪ್ಪ ಬರೀ ಪ್ರಾಮಾಣಿಕ ಲಿಂಗಾಯತನಾಗಿದ್ದರೆ,ತಮ್ಮ ಭಕ್ತನ ಬಗ್ಗೆ ಸ್ವಾಮಿಗಳಿಗೆ ಅನುಕಂಪವಿದೆಯೆಂದು ರಿಯಾಯಿತಿ ತೋರಿಸಬಹುದಾಗಿತ್ತು.ಆದರೆ ಯಡಿಯೂರಪ್ಪ ಬರೀ ಲಿಂಗಾಯತನಲ್ಲ.ಪ್ರಾಮಾಣಿಕನೂ ಅಲ್ಲ.ಆತ ಮನುವಾದದಲ್ಲಿ ನಂಬಿಕೆಯಿರುವ ಆರ್‌ಎಸ್‌ಎಸ್ ಸ್ವಯಂಸೇವಕ.ಭ್ರಷ್ಟಾಚಾರದಲ್ಲಿ ಕುಖ್ಯಾತಿಗಳಿಸಿದವರು.12ನೆ ಶತಮಾನದಲ್ಲಿ ಬಸವಣ್ಣನವರು ಯಾವ ಹೋಮ- ಹವನಗಳನ್ನು ವಿರೋಧಿಸಿದ್ದರೋ ಆ ಕಂದಾಚಾರಗಳನ್ನೆಲ್ಲ ಚಾಚೂ ತಪ್ಪದೇ ಆಚರಿಸುವ ಮೂಲಕ ಲಿಂಗಾಯತ ತತ್ವಕ್ಕೇ ದ್ರೋಹ ಬಗೆದ ವ್ಯಕ್ತಿ ಯಡಿಯೂರಪ್ಪ.ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಡೆದ ಆರ್‌ಎಸ್‌ಎಸ್ ಶಿಬಿರದಲ್ಲೂ ಕೂಡ ಯಡಿಯೂರಪ್ಪ ಚಡ್ಡಿ ಹಾಕಿಕೊಂಡು ಲಾಠಿ ತಿರುವಿ ಬಂದರು.
ಭಾರತದಲ್ಲಿನ ಜಾತಿ ವಾಸ್ತವವನ್ನು ಒಪ್ಪಿಕೊಂಡ ಪ್ರಗತಿಪರರು ಮುಲಾಯಂಸಿಂಗ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್‌ರನ್ನು ಬೆಂಬಲಿಸುತ್ತ ಬಂದಿದ್ದಾರೆ.ಆದರೆ ಇವರಿಬ್ಬರು ಅವಕಾಶ ವಂಚಿತ ಹಿಂದುಳಿದ ವರ್ಗದಿಂದ ಬಂದವರು. ಹಿಂದುಳಿದ ಜಾತಿಗಳಲ್ಲಿ ಜನಿಸಿದ್ದು ಮಾತ್ರವಲ್ಲ,ಸಾಮಾಜಿಕ ನ್ಯಾಯದ ಸಮಾಜವಾದಿ ಚಿಂತನೆಯಲ್ಲಿ ನಂಬಿಕೆ ಹೊಂದಿದವರು.ಇವರ ಮೇಲೂ ಭ್ರಷ್ಟಾಚಾರದ ಆರೋಪಗಳಿದ್ದರೂ ಇವರು ಕೋಮುವಾದಿ ಶಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ.ಆದರೆ ಯಡಿಯೂರಪ್ಪ ಪ್ರತಿ ನಿಧಿಸುತ್ತಿರುವುದು ಮೇಲ್ಜಾತಿಗಳನ್ನು ಮತ್ತು ಮನುವಾದಿ ಸಿದ್ಧಾಂತವನ್ನು.ಈ ಯಡಿಯೂರಪ್ಪ ಪೂರ್ಣ ಲಿಂಗಾಯತನಲ್ಲ. ಅತ ಜನಿಸಿದ್ದು ವೀರಶೈವ ಗಾಣಿಗ ಜಾತಿಯಲ್ಲಿ. ಆದರೆ ಬೆಳೆದದ್ದೆಲ್ಲ ವೈದಿಕಶಾಹಿ ಪರಂಪರೆಯಲ್ಲಿ.
ಮುಖ್ಯಮಂತ್ರಿ ಪಟ್ಟಕ್ಕಾಗಿ ಮಾತ್ರ ಜಾತಿಯನ್ನು ಏಣಿಯಾಗಿ ಬಳಸಿಕೊಂಡ ಯಡಿಯೂರಪ್ಪನವರಿಗೆ ನಂಬಿಕೆ ಇರುವುದು ಎರಡೇ ವಿಷಯಗಳಲ್ಲಿ. ಒಂದು ಹಿಂದೂತ್ವ ಮತ್ತು ಸಾರ್ವಜನಿಕ ಸಂಪತ್ತಿನ ಕಬಳಿಕೆ. ಇಂತಹ ಅವಕಾಶವಾದಿ- ಕೋಮುವಾದಿ ಯಡಿಯೂರಪ್ಪನವರನ್ನು ಮುರುಘಾ ಶರಣರು ಬೆಂಬಲಿಸುತ್ತಾರೆಂದರೆ, ಇನ್ನು ಯಾರನ್ನು ನಂಬುವುದು? ಕಾವಿವೇಷ ಧರಿಸಿ, ಪ್ರಗತಿಪರರ ಜೊತೆ ಸೇರುವ ಸ್ವಾಮಿಗಳನ್ನೆಲ್ಲ ಗುಮಾನಿಯಿಂದ ನೋಡಬೇಕಾಗಿ ಬಂದಿದೆ. ಅಂತಲೇ ಬರಗೂರು ಹೇಳಿದಂತೆ ಕೋಮುವಾದದ ವಿರುದ್ಧ ಮಾತ್ರವಲ್ಲ, ಬಲಿಷ್ಠ ಜಾತಿಗಳ ಜಾತಿವಾದದ ವಿರುದ್ಧವೂ ಪ್ರಗತಿಪರರು ಅವಿಶ್ರಾಂತ ಹೋರಾಟ ನಡೆಸಬೇಕಾಗಿದೆ.  * ವಾರ್ತಾಭಾರತಿ ಕೃಪೆ

Leave a Reply