ಟಿಪ್ಪುಮತ್ತು ಕ್ರೈಸ್ತರು

ಇಸ್ಮತ್ ಫಜೀರ್
ವಿಕೃತ ಇತಿಹಾಸಕಾರರಿಂದ ಅತೀ ಹೆಚ್ಚು ಘಾಸಿಗೊಳಗಾದ ಭಾರತದ ಇತಿಹಾಸ ಪುರುಷರಲ್ಲಿ ಟಿಪ್ಪು ಪ್ರಮುಖರು.ಒಮ್ಮೆ ಟಿಪ್ಪು ಹಿಂದೂ ವಿರೋಧಿ,ಮತ್ತೆ ಟಿಪ್ಪು ಕನ್ನಡ ವಿರೋಧಿ, ಮಗದೊಮ್ಮೆ ಟಿಪ್ಪು ಬಲವಂತದ ಮತಾಂತರಿಯೆಂದು ಹೀಗೆ ವಿಕೃತ ಮನಸ್ಸುಗಳು ಮತ್ತು ಇತಿಹಾಸ ಲಂಪಟರು ವಾದಿಸುತ್ತಾ ಟಿಪ್ಪುವಿನ ವ್ಯಕಿತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇಂತಹ ಯಾವ ಸಂದರ್ಭದಲ್ಲೂ ಪ್ರತಿಗಾಮಿಗಳ ಕೈ ಮೇಲಾಗಲು ನಾಡಿನ ಪ್ರಜ್ಞಾವಂತ ಲೇಖಕರು ಮತ್ತು ಚಳವಳಿ ಕಾರರು ಬಿಡಲೇ ಇಲ್ಲ. ಹುತಾತ್ಮ ಸಾಕೇತ್ ರಾಜನ್ ಬರೆದ “The making history” ಎಂಬ ಬೃಹತ್ ಗ್ರಂಥದ ಎರಡನೇ ಭಾಗದಲ್ಲಿ  Semi Feudalism and Merchant Pioneers of anti colonialism – The Mysore Kingdom of Haider Ali and Tippu Sulthan (17611799)” ಎಂಬ 200 ಪುಟಗಳಷ್ಟು ದೀರ್ಘ ಅಧ್ಯಾಯ ದಲ್ಲಿ ಟಿಪ್ಪುವಿನ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ. ಟಿಪ್ಪುಎಂತಹ ಜನಪರ ರಾಜನಾಗಿದ್ದ ಮತ್ತು ಟಿಪ್ಪುಏಕೆ ಓರ್ವ ಮಾದರಿ ರಾಜ ಎಂಬುದರ ಕುರಿತಂತೆ ಸುದೀರ್ಘ ಚರ್ಚೆಗಳು ಅಲ್ಲಿವೆ. ಟಿಪ್ಪುವಿನ ಕುರಿತಂತೆ ಬರೆಯುವ ಯಾವನೇ ಲೇಖಕನೂ ಓದಲೇಬೇಕಾದಂತಹ ಸಂಶೋಧನಾತ್ಮಕ ವಿವರಗಳು ಅದರಲ್ಲಿವೆ. ಈಗ ಟಿಪ್ಪುವಿನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸರದಿ ಅಲನ್ ಮಚಾಡೋ ಎಂಬ ಲೇಖಕನವದು.
ಆತ ತನ್ನ ಇತ್ತೀಚೆಗೆ ಬಿಡುಗಡೆಗೊಂಡ “Shades within Shadows” ಎಂಬ ಕಾದಂಬರಿಯಲ್ಲಿ ಟಿಪ್ಪುವಿನ ಮೇಲೆ ಕ್ರೈಸ್ತ ವಿರೋಧಿ ಎಂಬ ಆರೋಪ ಹೊರಿಸಿ ವಿವಾದದ ಕಿಡಿ ಹತ್ತಿಸಲು ಪ್ರಯತ್ನಿಸಿದ್ದಾರೆ. ಆತನೇ ಹೇಳಿಕೊಂಡ ಪ್ರಕಾರ ಅದು ಒಂದು ಸಂಶೋಧನಾತ್ಮಕ ಕಾದಂಬರಿಯಂತೆ.ಆದರೆ ಅದಕ್ಕೆ ಆತ ಬಳಸಿದ ಇತಿಹಾಸದ ದಾಖಲೆಗಳು ವಸಾಹತುಶಾಹಿ ಇತಿಹಾಸ ಕಾರರದ್ದು ಮತ್ತು ಬಲಪಂಥೀಯರೆಂದು ಬಹಿರಂಗಗೊಂಡ ಇತಿಹಾಸಕಾರರದ್ದು.ಆತನ ಕೃತಿ ಖಂಡಿತವಾಗಿಯೂ ಒಂದು ಐತಿಹಾಸಿಕ ಕೃತಿಯೆಂಬ ಮನ್ನಣೆಗೆ ಪಾತ್ರವಾಗಲಾರದು.ಅಂತಹ ಆತಂಕ ನನಗಂತೂ ಇಲ್ಲ.ಆದರೆ ಎರಡು ಅಲ್ಪಸಂಖ್ಯಾತ ಸಮುದಾಯಗಳ ಮಧ್ಯೆ ಅಪನಂಬಿಕೆಯ ಕಿಡಿ ಹೊತ್ತಿಸಲು ಇದು ಹೇತುವಾದೀತೋ ಎಂಬ ಭಯ, ಆತಂಕದಿಂದಾಗಿ ಈ ಲೇಖನ ಬರೆಯುತ್ತಿದ್ದೇನೆ.(ಹಾಗಾಗದಿರಲಿ)ಟಿಪ್ಪುಯಾವುದೇ ಸಂದರ್ಭದಲ್ಲೂ ಯಾವುದೇ ಸಮುದಾಯದ ಜನರೊಂದಿಗೆ ಧಾರ್ಮಿಕ ಕಾರಣಕ್ಕಾಗಿ ಕೆಟ್ಟದಾಗಿ ನಡೆದುಕೊಂಡ ಉದಾಹರಣೆಗಳೇ ಇಲ್ಲ.
ಟಿಪ್ಪುತನ್ನ ಕ್ರೈಸ್ತ ಪ್ರಜೆಗಳೊಂದಿಗೆ ಬಹಳ ನೀಚವಾಗಿ ವರ್ತಿಸುತ್ತಿದ್ದರೆಂದು ಬ್ರಿಟಿಷ್ ಇತಿಹಾಸಕಾರರು ದಾಖಲಿಸಿದ್ದಾರೆ. ಟಿಪ್ಪು ತನ್ನ ಕ್ರೈಸ್ತ ಪ್ರಜೆಗಳೊಂದಿಗೆ ಕೆಲವು ಸಂದರ್ಭಗಳಲ್ಲಿ ಒರಟಾಗಿ ನಡೆದುಕೊಂಡಿದ್ದರೂ ಅದರ ಹಿಂದಿನ ಕಾರಣ ಯಾವತ್ತೂ ಧಾರ್ಮಿಕವಾಗಿರಲಿಲ್ಲ. ಅದು ಕೇವಲ ರಾಜಕೀಯ ಕಾರಣಗಳಿಗಾಗಿ ಮಾತ್ರ ಎಂಬವುದು ಬಹಳ ಸ್ಪಷ್ಟ. ಆ ನಿಟ್ಟಿನಲ್ಲಿ ಇತಿಹಾಸಕ್ಕೆ ಮಾತ್ರ ನಿಷ್ಠರಾಗಿರುವ ಸ್ವಸ್ಥ ಮನಸ್ಸಿನ ಇತಿಹಾಸಕಾರರ ದಾಖಲೆಗಳನ್ನು ಸಂಕ್ಷಿಪ್ತವಾಗಿ ಅವಲೋಕಿಸೋಣ.
ಟಿಪ್ಪುಕೆಟ್ಟದಾಗಿ ನಡೆದುಕೊಂಡಿರುವುದು ಕರಾವಳಿ ಕ್ರೈಸ್ತರೊಂದಿಗೆ ಮತ್ತು ಗೋವೆಯಿಂದ ಬಂದ ಕ್ರೈಸ್ತರೊಂದಿಗಾಗಿತ್ತು. ಅವರು ಟಿಪ್ಪುವಿನ ಸಾರ್ವಭೌಮತ್ವವನ್ನು ಮನ್ನಿಸುತ್ತಿರಲಿಲ್ಲ.
ಟಿಪ್ಪುವಿ ಗೆದುರಾಗಿ ತಮ್ಮ ಧರ್ಮೀಯರಾದ ಪರಕೀಯ ಬ್ರಿಟಿಷರೊಂದಿಗೆ ಅನೇಕ ಸಂದರ್ಭಗಳಲ್ಲಿ ಅವರು ಕೈ ಜೋಡಿಸಿದ್ದರು. ತನ್ನದೇ ರಾಜ್ಯದ ಪ್ರಜೆಗಳು ತನ್ನ ವಿರುದ್ಧ ತನ್ನ ಬದ್ಧ ವೈರಿ ಗಳೊಂದಿಗೆ ಕೈ ಜೋಡಿಸಿ ರಾಜ್ಯಕ್ಕೆ ದ್ರೋಹ ಬಗೆಯುವುದನ್ನು, ತನ್ನ ಸಾರ್ವಭೌಮತ್ವದ ವಿರುದ್ಧ ಸಂಚನ್ನು ರೂಪಿಸುವುದನ್ನು ಯಾವನೇ ರಾಜನು ಸಹಿಸಿಕೊಳ್ಳುವನೇ? ಒಂದು ವೇಳೆ ಟಿಪ್ಪುವಿನ ಸ್ಥಾನದಲ್ಲಿ ಒಬ್ಬ ಕ್ರೈಸ್ತ ರಾಜನಿದ್ದರೆ ರಾಜ್ಯದ್ರೋಹ ಮತ್ತು ತನ್ನ ಸಾರ್ವಭೌಮತ್ವದ ವಿರೋಧಿಗಳನ್ನು ಸಹಿಸಿಕೊಳ್ಳುತ್ತಿದ್ದನೇ? ಇಂತಹ ಕಟು ಸತ್ಯಗಳನ್ನು ಬ್ರಿಟಿಷ್ ಇತಿಹಾಸಕಾರರು ಮುಚ್ಚಿಟ್ಟಿದ್ದಾರೆ. ತಮ್ಮ ಬದ್ಧ ವೈರಿಯಾದ ಟಿಪ್ಪು ವಿನ ವಿರುದ್ಧ ಮಾಡುವ ಅಪಪ್ರಚಾರ ಯಾರದೇ ಭಾವನೆಗಳನ್ನು ಘಾಸಿಗೊಳಿಸುವಂತಿದ್ದರೂ ಅದು ಬ್ರಿಟಿಷರಿಗೆ ದೊಡ್ಡ ಸಂಗತಿ ಏನೂ ಆಗಿರಲಿಲ್ಲ. ಸುಳ್ಳಾರೋಪದ ಭರದಲ್ಲಿ ತಮ್ಮ ವೈರಿಯ ಚಾರಿತ್ರ್ಯವಧೆ ಮಾಡುವ ನಿಟ್ಟಿನಲ್ಲಿ ಬ್ರಿಟಿಷ್ ಇತಿಹಾಸಕಾರರು ಟಿಪ್ಪುವನ್ನು ಮತಾಂಧನೆಂದು ಚಿತ್ರಿಸಿದ್ದಾರೆ.
ಟಿಪ್ಪು ಮೊದಮೊದಲು ಕ್ರೈಸ್ತರ ಅಂತಹ ತಪ್ಪುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಮಂಗಳೂರಿನ ಕ್ರೈಸ್ತರು ಟಿಪ್ಪುವಿನ ತಂದೆ ಹೈದರಾಲಿಯ ಆಳ್ವಿಕೆಯ ಕಾಲದಲ್ಲೂ ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರು. ಇಷ್ಟೆಲ್ಲ ಆಗಿ ದ್ದರೂ ಟಿಪ್ಪು ಆ ಕುರಿತು ಮೊದಮೊದಲು ಅಷ್ಟೊಂದು ಗಂಭೀರವಾಗಿರಲಿಲ್ಲ.ಮತ್ತೆ ಮತ್ತೆ ಅವರ ದುಷ್ಕೃತ್ಯ ಮುಂದುವರಿದಾಗ ಅವರ ವಿರುದ್ಧ ಕಠಿಣವಾಗಿಯೇ ವರ್ತಿಸಿದ್ದು ನಿಜ. ಟಿಪ್ಪುವಿನ ಔದಾರ್ಯ ಮತ್ತು ಸಹನೆಯನ್ನು ಅವರು ದುರ್ಬಳಕೆ ಮಾಡಿದಾಗ ಅವರ ವಿರುದ್ಧ ಕಠಿಣವಾಗಿ ವರ್ತಿಸುವುದು ಟಿಪ್ಪುವಿಗೆ ಅನಿವಾರ್ಯವಾಗಿತ್ತು.
ಮಂಗಳೂರಿನ ಕ್ರೈಸ್ತರು ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವಿಗೆ ಎದುರಾಗಿ ಬ್ರಿಟಿಷರಿಗೆ ಸಂಪೂರ್ಣ ಸಹಕಾರ ನೀಡಿದ್ದರು. ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರ ಕಮಾಂಡರ್ ಇನ್-ಚೀಫ್ ಆಗಿದ್ದ ಮ್ಯಾಥ್ಯೂಸನಿಗೆ ಮಂಗಳೂರಿನ ಸ್ಪಷ್ಟ ಚಿತ್ರಣ ತಿಳಿದಿರಲಿಲ್ಲ. ಆಗ ಸ್ಥಳೀಯ ಕ್ರೈಸ್ತರು ಆತನಿಗೆ ಮಂಗಳೂರಿನಲ್ಲಿ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದ್ದರು ಮಾತ್ರವಲ್ಲ, ಬ್ರಿಟಿಷರ ಪರ ವಾಗಿ ಮೈಸೂರು ಸಂಸ್ಥಾನದ ವಿರುದ್ಧ ಗೂಢ ಚರ್ಯೆಯಲ್ಲೂ ನಿರತರಾಗಿದ್ದರು. ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಂಗಳೂರು ಮತ್ತು ಬಿದನೂರು ಪ್ರಾಂತ್ಯಗಳನ್ನು ಬ್ರಿಟಿಷರು ವಶಪಡಿಸಿಕೊಳ್ಳುವಲ್ಲಿ ಕರಾವಳಿ ಕ್ರೈಸ್ತರು ಪ್ರಧಾನ ಭೂಮಿಕೆ ನಿರ್ವಹಿಸಿದ್ದರು. ಆ ಸಂದ ರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸೈನಿಕ ರಾಗಿ ಕಾರ್ಯನಿರ್ವಹಿಸುತ್ತಿದ್ದ ಮೂವತ್ತು ಮಂದಿ ಕ್ರೈಸ್ತರು ಟಿಪ್ಪುವಿಗೆ ದ್ರೋಹ ಬಗೆದು ಬ್ರಿಟಿಷ್ ಪಾಳಯಕ್ಕೆ ಪಕ್ಷಾಂತರ ಹೊಂದಿದರು. ಅನೇಕ ಕ್ರೈಸ್ತರು ಬ್ರಿಟಿಷರಿಗೆ ಆರ್ಥಿಕ ಸಹಾಯ ವನ್ನೂ ನೀಡಿದ್ದರು.
ಟಿಪ್ಪುಮಂಗಳೂರಿನಲ್ಲಿ ಯುದ್ಧ ನಿರತರಾಗಿದ್ದ ಸಂದರ್ಭದಲ್ಲಿ ಮಂಗಳೂರಿನ ಕ್ರೈಸ್ತರು ಬ್ರಿಟಿಷರ ಕ್ಯಾಪ್ಟನ್ ಕ್ಯಾಂಪ್‌ಬೆಲ್‌ನಿಗೆ ಪ್ರತ್ಯಕ್ಷ ಸಹಾಯ ನೀಡಿದರು. ಟಿಪ್ಪುವಿನ ವಿರುದ್ಧ ಸಂಚು ರೂಪಿಸುತ್ತಿದ್ದಂತಹ ಮುಸ್ಲಿಮರೇ ಆದ ಖಾಸಿಮ್ ಅಲಿ ಮತ್ತು ಮುಹಮ್ಮದ್ ಅಲಿ ಎಂಬ ರಾಜ್ಯ ದ್ರೋಹಿಗಳೊಂದಿಗೆ ಕೈ ಜೋಡಿಸಿ ಕೊಂಡಿದ್ದರು. ಫಾದರ್ ಮಿರಾಂಡ ಎಂಬಾತನ ಪತ್ರದ ಅವಲೋಕನದಿಂದ ತಿಳಿದು ಬಂದ ಪ್ರಕಾರ ಕರಾವಳಿ ಕ್ರೈಸ್ತರು ಬ್ರಿಟಿಷ್ ಸೇನೆಗೆ ಸಹಕರಿಸಿದ್ದರು. ಎರಡು ಸಾವಿರ ಮೂಟೆ ಅಕ್ಕಿಯನ್ನು ಬ್ರಿಟಿಷರಿಗೆ ಕರಾವಳಿ ಕ್ರೈಸ್ತರು ಒದಗಿಸಿದ್ದರು. (History of Christianity in Canara- S. Silva, edition-1 1958, Karavar Page 205211) ಇಂತಹದ್ದೇ ರಾಜ್ಯ ದ್ರೋಹದ ವಿವಿಧ ಸಂದರ್ಭಗಳಲ್ಲಿ ಟಿಪ್ಪು ಕ್ರೈಸ್ತರನ್ನು ಬಂಧ ನದಲ್ಲಿಟ್ಟಿದ್ದರು. ಬಂಧನದಲ್ಲಿದ್ದ ಕ್ರೈಸ್ತರನ್ನು ಟಿಪ್ಪು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದರೆಂದು ಬೀಟ್ಸನ್, ಮಾರ್ಕ್ಸ್ ವಿಲ್ಕ್ಸ್, ಬೌರಿಂಗ್, ಕ್ರಿಕ್ ಪ್ಯಾಟ್ರಿಕ್ ಮುಂತಾದ ಬ್ರಿಟಿಷ್ ಇತಿಹಾಸಕಾರರು ಸುಳ್ಳು ಸುಳ್ಳೇ ದಾಖಲಿಸಿದ್ದಾರೆ.
ವಾಸ್ತವದಲ್ಲಿ ಟಿಪ್ಪುಕ್ರೈಸ್ತರನ್ನು ಬಲ ವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಲ್ಲ. ಬಂಧನಕ್ಕೊಳಗಾದ ಕ್ರೈಸ್ತರು ಬಂಧ ಮುಕ್ತಿಯ ಆಶೆಗಾಗಿ ಅವರೇ ಸ್ವಇಚ್ಛೆ ಯಿಂದ ಇಸ್ಲಾಂಗೆ ಮತಾಂತರಗೊಂಡದ್ದು. ಹಾಗೆ ನೋಡ ಹೋದರೆ ಟಿಪ್ಪು ಅವರನ್ನು ಕ್ರೈಸ್ತ ಧರ್ಮೀಯರು ಎಂಬ ಕಾರಣಕ್ಕಾಗಿ ಬಂಧನಕ್ಕೊಳಪಡಿಸಿದ್ದೇ ಅಲ್ಲ. ರಾಷ್ಟ್ರಕ್ಕೆ ದ್ರೋಹ ಬಗೆದುದಕ್ಕಾಗಿ ಅವರನ್ನು ಟಿಪ್ಪುಬಂಧನಕ್ಕೊಳಪಡಿಸಿದ್ದು ಎಂಬುವು ದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯವಿದೆ.ರಾಜ್ಯದ್ರೋಹ ಬಗೆದಂತಹ ಸಂದರ್ಭ ದಲ್ಲಿ ರಾಜ್ಯದ್ರೋಹಿಯ ಧರ್ಮ ಟಿಪ್ಪುವಿಗೆ ಮುಖ್ಯವಾಗಿರಲಿಲ್ಲ. ಮುಸ್ಲಿಮರು ರಾಜ್ಯ ದ್ರೋಹ ಮಾಡಿದಾಗಲೂ ಟಿಪ್ಪು ಅವರನ್ನು ಕಠಿಣ ಶಿಕ್ಷೆಗೊಳಪಡಿಸಿದ ಧಾರಾಳ ಉದಾಹ ರಣೆಗಳು ಲಭ್ಯವಿದೆ.
ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಪಾಲನೆಯಲ್ಲಿ ಟಿಪ್ಪುವಿಗೆ ಇಸ್ಲಾಂ ಧರ್ಮ ಎಂದೂ ಅಡ್ಡಿಯಾಗಿರಲಿಲ್ಲ. ಇಸ್ಲಾಂ ನ್ಯಾಯಕ್ಕೆ ಬಹಳಷ್ಟು ಮಹತ್ವ ನೀಡುವ ಧರ್ಮ ಮಾತ್ರವಲ್ಲ, ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸುವ ಧರ್ಮವೂ ಹೌದು. ಆದುದರಿಂದಲೇ ಕಾನೂ ನು ಮತ್ತು ನ್ಯಾಯ ವ್ಯವಸ್ಥೆಯ ಕಟ್ಟುನಿಟ್ಟಿನ ಪಾಲನೆಯ ವಿಚಾರದಲ್ಲಿ ಟಿಪ್ಪು ಸುಲ್ತಾನರಿಗೆ ಸ್ವಧರ್ಮೀಯರು ಎಂಬ ಯಾವುದೇ ಅನು ಕಂಪ, ಕರುಣೆ ಬಂದುದೇ ಇಲ್ಲ. ಟಿಪ್ಪುಧರ್ಮನಿಷ್ಠ ಮುಸ್ಲಿಮರಾಗಿದ್ದರು.
ಧರ್ಮದ ಚೌಕಟ್ಟುಗಳನ್ನು ಟಿಪ್ಪು ಎಂದೂ ಮೀರುತ್ತಿರಲಿಲ್ಲ. ಇಂತಹ ಟಿಪ್ಪುವಿಗೆ ಟಿಪ್ಪುವಿನ ರಾಜ್ಯಕ್ಕೆ ದ್ರೋಹ ಬಗೆದರೆ ಜಾತಿ, ಜನಾಂಗ, ಧರ್ಮ ಇತ್ಯಾದಿ ಭೇದ ಮರೆತು ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿತ್ತು. ಅದು ಟಿಪ್ಪು ಪಾಲಿಸುತ್ತಿದ್ದ ಇಸ್ಲಾಂ ಧರ್ಮದ ದೃಷ್ಟಿಯಲ್ಲಿ ಅನಿವಾರ್ಯವಾಗಿತ್ತು. ಮಲಬಾರಿನ ನಾಯರು, ಮಂಗಳೂರಿನ ಕ್ರೈಸ್ತರು ಮುಂತಾದವರ ಜೊತೆ ಕ್ರೂರವಾಗಿ ವರ್ತಿಸಿದ್ದು ಅವರು ರಾಜ್ಯಕ್ಕೆ ಬಗೆದ ದ್ರೋಹಕ್ಕೆ ಶಿಕ್ಷೆ ಎಂಬ ನಿಟ್ಟಿನಲ್ಲಿ ಮಾತ್ರವಾಗಿತ್ತು. ರಾಜದ್ರೋಹ ಮಾಡಿದ ಕಾರಣಕ್ಕೆ ಟಿಪ್ಪುಕೆಲವು ಮುಸ್ಲಿಮರು ಮತ್ತು ಮೆಹ್ದವಿಗಳ ಜೊತೆಯೂ ಬಹಳ ಕ್ರೂರವಾಗಿಯೇ ವರ್ತಿಸಿದ್ದರು. (ಕರ್ಣಾಟಕ ಚರಿತ್ರೆ ಪ್ರೊ.ಬಿ.ಶೇಖ್‌ಅಲಿ ಸಂ-5, ಪುಟ-550)
1768ರಲ್ಲಿ ಬ್ರಿಟಿಷರು ಮಂಗಳೂರನ್ನು ಜಯಿಸುವಲ್ಲಿ ಮಂಗಳೂರಿನ ಕ್ರೈಸ್ತರ ಪಾತ್ರ ಮಹತ್ವದಾಗಿತ್ತು. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕ್ರೈಸ್ತರು ಮಾಡಿದ ದ್ರೋಹಕ್ಕೆ ಪ್ರತಿಯಾಗಿ ಅವರನ್ನು ಸಾಮೂಹಿಕವಾಗಿ ಗಡಿಪಾರು ಮಾಡಿದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. ಆದರೆ ಎಲ್ಲಾ ಕ್ರೈಸ್ತರ ಜೊತೆಯೂ ಟಿಪ್ಪು ಕಠಿಣವಾಗಿ ವರ್ತಿಸಿರಲಿಲ್ಲ. ಸಿರಿಯನ್ ಕ್ರೈಸ್ತರನ್ನು ಟಿಪ್ಪುಚೆನ್ನಾಗಿ ನೋಡಿಕೊಂಡಿದ್ದರು. ಅರ್ಮೇನಿಯಾದ ಕ್ರೈಸ್ತ ವರ್ತಕರು ಮೈಸೂರಿನಲ್ಲಿ ನೆಲೆಸುವಂತೆ ಪ್ರೋತ್ಸಾಹಿಸಿದ್ದರು ಮತ್ತು ಅವರಿಗೆ ತನ್ನ ಸಂಸ್ಥಾನದಲ್ಲಿ ಅಗತ್ಯ ಸಹಾಯ ಸಹಕಾರಗಳನ್ನು ಟಿಪ್ಪು ನೀಡಿದ್ದರು. ಸೇನೆಯಲ್ಲಿದ್ದ ಸೇವೆಯಲ್ಲಿದ್ದ ಕ್ರೈಸ್ತರಿಗೆ ಟಿಪ್ಪು ಸಂಪೂರ್ಣ ಆರಾಧನಾ ಸಹಾಯ ಸಹಕಾರ ನೀಡಿದ್ದರು.
ಮಂಗಳೂರು ಕ್ರೈಸ್ತರು ಯುದ್ಧದಿಂದ ರಾಜ್ಯಕ್ಕೆ ಆದ ನಷ್ಟ ಮೂರು ಕೋಟಿಯನ್ನು ಭರಿಸುವುದಾದರೆ ಅವರು ಮಂಗಳೂರಿನಲ್ಲಿ ಪುನಃ ಬಂದು ನೆಲೆಸಲು ಅವಕಾಶ ಮಾಡಿಕೊಡುವುದಾಗಿ ಟಿಪ್ಪು ಅವರಿಗೆ ವಾಗ್ದಾನ ನೀಡಿದ್ದರು. ತನ್ನ ಸಾರ್ವಭೌಮತ್ವವನ್ನು ಮನ್ನಿಸಿ ಗೌರವಿಸುವುದಾದರೆ ಗೋವಾದಿಂದ ಹೊಸದಾಗಿ ಕ್ರೈಸ್ತರು ಬಂದು ತನ್ನ ರಾಜ್ಯದಲ್ಲಿ ನೆಲೆಸುವುದಕ್ಕೆ ತನ್ನದೇನೂ ಅಡ್ಡಿ- ಆತಂಕವಿಲ್ಲವೆಂದು ಟಿಪ್ಪು ಕ್ರೈಸ್ತರಿಗೆ ಅಭಯ ನೀಡಿದ್ದರು. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಬಂಧವಿಮುಕ್ತಿಗೊಂಡ ಕ್ರೈಸ್ತರಿಗೆ ಟಿಪ್ಪು ತನ್ನ ಸಂಸ್ಥಾನದಲ್ಲಿ ಅನೇಕ ಹುದ್ದೆಗಳನ್ನೂ ನೀಡಿದ್ದರು (ಮೈಸೂರು ಗೆಜೆಟಿಯರ್-1929).
ಅನೇಕ ಕ್ರೈಸ್ತರನ್ನು ಶ್ರೀರಂಗಪಟ್ಟಣ ಮತ್ತು ಚಿತ್ರದುರ್ಗದಲ್ಲಿ ಸೆರೆಯಲ್ಲಿರಿಸಿದಾಗ ಅವರ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಲು ಟಿಪ್ಪುಅವರಿಗೆ ಅನುಮತಿ ನೀಡಿದ್ದರು. 1789ರಲ್ಲಿ ಗೋವೆಗೆ ಒಂದು ನಿಯೋಗವನ್ನು ಕಳುಹಿಸಿ ಸೆರೆಯಲ್ಲಿರುವ ಕ್ರೈಸ್ತರು ತಮ್ಮ ಧಾರ್ಮಿಕ ಆಚರಣೆಗಳನ್ನು ಕಡೆಗಣಿಸಿರುವುದರಿಂದ ಅವರಿಗಾಗಿ ವಿಶೇಷ ಪಾದ್ರಿಗಳನ್ನು ಕಳುಹಿಸಲು ಅಲ್ಲಿಯ ವೈಸ್‌ರಾಯ್‌ನೂ ಆದ ಆರ್ಚ್ ಬಿಷಪ್‌ರನ್ನು ಕೇಳಿಕೊಂಡಿದ್ದರು. ನಾಶಪಡಿಸಲಾಗಿದ್ದ ಚರ್ಚ್‌ಗಳನ್ನು ಕಟ್ಟಿಸಿಕೊಡುವುದಾಗಿಯೂ ಅವರಿಗೆ ಟಿಪ್ಪು ವಚನ ನೀಡಿದ್ದರು. ರಾಜದ್ರೋಹದ ಅಪರಾಧದ ಮೇಲೆ ಬಂಧಿತರಾಗಿದ್ದ ಅನೇಕ ಪಾದ್ರಿಗಳನ್ನು ಕ್ಷಮಿಸಿ ಬಿಡುಗಡೆ ಮಾಡಿ ಗೋವೆಗೆ ಕಳುಹಿಸಿಕೊಟ್ಟಿದ್ದರು.
ಟಿಪ್ಪು ಕ್ರೈಸ್ತರೊಂದಿಗೆ ಅವರ ಧರ್ಮದ ಕಾರಣಕ್ಕಾಗಿ ಕಠೋರ ವರ್ತನೆ ತೋರಿದ್ದರಾದರೆ ಕ್ರೈಸ್ತರಾದ ಫ್ರೆಂಚರೊಡನೆ ಗೆಳೆತನವಿಟ್ಟುಕೊಳ್ಳಲು ಸಾಧ್ಯವಿತ್ತೇ? ಬ್ರಿಟಿಷರು ಟಿಪ್ಪುತಮ್ಮ ಬದ್ಧ ವೈರಿಯೆಂಬ ಕಾರಣಕ್ಕೆ ತಾವೇ ಸಾಕಿದ ಇತಿಹಾಸಕಾರರೆಂಬ ಇತಿಹಾಸ ಲಂಪಟರಿಂದ ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಬರೆಸಿದರೆಂಬುವುದಕ್ಕೆ ಬೇಕಾದಷ್ಟು ಪುರಾವೆಗಳನ್ನು ಅವರ ಇತಿಹಾಸ ಮತ್ತು ನಮ್ಮ ಸತ್ಯದ ಬುನಾದಿಯ ಮೇಲೆ ನಿಂತ ತರ್ಕದಿಂದ ನೀಡಲು ಸಾಧ್ಯ.
ಆಧಾರ : ಕರ್ಣಾಟಕ ಚರಿತ್ರೆ ಪ್ರೊ.ಬಿ.ಶೇಖ್ ಅಲಿ
-ಹೈದರಾಲಿ-ಟಿಪ್ಪು ಇತಿಹಾಸ ಕಥನ :ಡಾ ಬಾರ್ಕೂರು ಉದಯ
Please follow and like us:
error