ಜಾತ್ಯತೀತ ಜನತಂತ್ರ ಅವಸಾನದ ಅಂಚಿನಲ್ಲಿ

ಭಾರತದ ಪ್ರಜಾಪ್ರಭುತ್ವ ಕವಲು ದಾರಿಗೆ ಬಂದು ನಿಂತಿದೆ. ಸ್ವಾತಂತ್ರದ ಆರು ದಶಕಗಳ ಇತಿಹಾಸದಲ್ಲಿ ಇಂಥ ಸನ್ನಿವೇಶ ಹಿಂದೆಂದೂ ನಿರ್ಮಾಣವಾಗಿರಲಿಲ್ಲ, ಈಗ ಜೈಲಿನಲ್ಲಿರಬೇಕಾದವರು ಸಂಸತ್ತಿನಲ್ಲಿದ್ದಾರೆ. ಸಂಸತ್ತಿನಲ್ಲಿರಬೇಕಾದವರು ಬೀದಿಯಲ್ಲಿದ್ದಾರೆ. ಇಲ್ಲವೇ ಜೈಲಿನಲ್ಲಿದ್ದಾರೆ. ಯೋಗಿ ಆದಿತ್ಯನಾಥ, ಸಾಧ್ವಿ ನಿರಂಜನ ಜ್ಯೋತಿ, ಸಾಕ್ಷಿ ಮಹಾರಾಜ್, ಗಿರಿರಾಜ ಸಿಂಗ್, ಸುಷ್ಮಾ ಸ್ವರಾಜ್ ಇವರೆಲ್ಲ ಉದುರಿಸುತ್ತಿರುವ ಮಾತುಗಳನ್ನು ಕೇಳಿದರೆ ಈ ದೇಶದ ಜನತಂತ್ರದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಆತಂಕ ಪಡುವುದಷ್ಟೇ ನಮಗೆ ಉಳಿದ ದಾರಿಯಾಗಿದೆ.
ಈ ಎಲ್ಲ ವಿಕೃತ ಮಾತುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜಾಣ ವೌನ ತಾಳಿದ್ದಾರೆ. ಈಗ ಅವರದು ಉದಾರವಾದಿ ಪಾತ್ರಾಭಿನಯ. ಹಿಂದೆ ಅಡ್ವಾಣಿ ಈ ರೀತಿ ಉದ್ರೇಕಕಾರಿಯಾಗಿ ಮಾತಾಡುವಾಗ ಅಟಲ್ ಬಿಹಾರಿ ವಾಜಪೇಯಿ ಇದೇ ರೀತಿ ಉದಾರವಾದಿ ಪಾತ್ರಧಾರಿಯಾಗಿದ್ದರು. ಮೋದಿ ಬೆಂಕಿ ಉಗುಳುವಾಗ ಅಡ್ವಾಣಿ ಸಂಭಾವಿತರಂತೆ ಮಾತನಾಡುತ್ತಿದ್ದರು, ಇದೆಲ್ಲ ನಾಗಪುರದ ಆರೆಸ್ಸೆಸ್ ನಿರ್ದೇಶಕರು ವಹಿಸಿಕೊಟ್ಟ ಪಾತ್ರದ ಅಭಿನಯವಷ್ಟೇ. ಆದರೆ ಇವರೆಲ್ಲರ ಅಂತಿಮ ಗುರಿ ಅದೊಂದೇ. ಹಿಂದೂರಾಷ್ಟ್ರ ನಿರ್ಮಾಣ. ಈ ಗುರಿ ಸಾಧನೆಗಾಗಿ ಇವರೆಲ್ಲ ಅವರವರಿಗೆ ವಹಿಸಿಕೊಟ್ಟ ಪಾತ್ರ ನಿರ್ವಹಿಸುತ್ತಿದ್ದಾರೆ. ಹಿಂದೂ ಎಂಬುದು ಧರ್ಮವಲ್ಲ. ಅದೊಂದು ಜೀವನ ಶೈಲಿ ಎಂದು ವಾದಿಸುತ್ತ ಬಂದವರು ಅದಕ್ಕಾಗಿ ಸುಪ್ರೀಂಕೋರ್ಟಿನ ತೀರ್ಪನ್ನು ಉಲ್ಲೇಖಿಸುತ್ತ ಬಂದವರು. ಈಗ ಏಕಾಏಕಿಯಾಗಿ ಬಣ್ಣ ಬದಲಿಸಿ ಅದಕ್ಕೆ ಧರ್ಮದ ಸ್ವರೂಪ ನೀಡಿ ಅಲಿಗಡದಲ್ಲಿ ಕ್ರಿಸ್ಮಸ್ ದಿನ ಕ್ರೈಸರು ಮತ್ತು ಮುಸಲ್ಮಾನರ ಮರು ಮತಾಂತರ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಹಿಂದೂ ಧರ್ಮ ಸೇರುವ ಮುಸಲ್ಮಾನರಿಗೆ ಐದು ಲಕ್ಷ ರೂ., ಕ್ರೈಸ್ತರಿಗೆ ಎರಡು ಲಕ್ಷ ರೂಪಾಯಿ ಲಂಚ ನೀಡಲು ನಿಧಿ ಸಂಗ್ರಹಿಸುತ್ತಿದ್ದಾರೆ. ಸರ್ವರೊಂದಿಗೆ ಸರ್ವರ ಏಳಿಗೆ ಎಂದು ಬೂಸಿ ಬಿಡುವ ನರೇಂದ್ರ ಮೋದಿ ಇದಕ್ಕೆ ವೌನ ಪ್ರೋತ್ಸಾಹಕರಾಗಿದ್ದಾರೆ.
ಮುಸಲ್ಮಾನರು ಮತ್ತು ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರು ಮಾಡುವ ಹಬ್ಬಗಳ ದಿನಗಳಂದೇ ಸಂಘಪರಿವಾರ ಇಂಥ ಮರು ಮತಾಂತರದಂಥ ಕಾರ್ಯಕ್ರಮ ನಡೆಸುವುದರಿಂದ ಈ ಅಮಾಯಕ ಜನ ಅಸಹಾಯಕರಾಗಿ ಮೂಕ ಯಾತನೆ ಅನುಭವಿಸುವಂತಾಗಿದೆ. ನೆಮ್ಮದಿ ಮತ್ತು ಉತ್ಸಾಹದಿಂದ ಹಬ್ಬವನ್ನು ಸಂಭ್ರಮಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಸಂಘಪರಿವಾರಕ್ಕೆ ಮೋದಿಯಂಥ ಆಜ್ಞಾಧಾರಕ ಪ್ರಧಾನಿ ಹಿಂದೆಂದೂ ಸಿಕ್ಕಿರಲಿಲ್ಲ. ನಾಗಪುರದ ಆರೆಸ್ಸೆಸ್ ಗುರುಗಳು ಹಾಕಿದ ಗೆರೆಯನ್ನು ಎಂದೂ ದಾಟದ ಮೋದಿ ನೇತೃತ್ವದಲ್ಲಿ ‘ಕಾರ್ಪೊರೇಟ್ ಹಿಂದೂರಾಷ್ಟ್ರ’ ನಿರ್ಮಾಣ ಮಾಡುವ ನೀಲ ನಕ್ಷೆ ಸಿದ್ಧವಾಗಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಯೋಜನಾ ಆಯೋಗವನ್ನು ಹೂತುಹಾಕಿ ತಿಥಿ ಮಾಡಲಾಗಿದೆ. ಇನ್ನು ಮುಂದೆ ದೇಶದ ಯೋಜನೆಗಳ ದಿಕ್ಕು ದೆಸೆಗಳನ್ನು ಅಂಬಾನಿ, ಅದಾನಿ, ಮಿತ್ತಲ್‌ರಂಥ ಬಂಡವಾಳದಾರರು ಹಿತ್ತಲ ಬಾಗಿಲಲ್ಲಿ ನಿಂತು ನಿರ್ಧರಿಸಲಿದ್ದಾರೆ. ಯೋಜನಾ ಆಯೋಗದ ಸಮಾಧಿಯ ನಂತರ ಸಂವಿಧಾನವನ್ನು ಶಿಲುಬೆಗೇರಿಸುವ ಸಿದ್ಧತೆ ಆರಂಭವಾಗಿದೆ. ಅಂತಲೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ ವಿಶ್ವ ಹಿಂದೂ ಪರಿಷತ್ತಿನ ನಾಯಕ ಅಶೋಕ್ ಸಿಂಘಾಲ್‌ಗೆ ಎಷ್ಟು ಸಂತೋಷವಾಗಿತ್ತೆಂದರೆ ‘‘800 ವರ್ಷಗಳ ನಂತರ ದಿಲ್ಲಿಯ ಸಿಂಹಾಸನ ಹಿಂದೂಗಳ ಕೈಗೆ ಸಿಕ್ಕಿದೆ’’ ಎಂದು ಅವರು ಸಂಭ್ರಮಿಸಿದ್ದರು. ಹಿಂದೂಗಳ ಕೈಗೆ ಅಧಿಕಾರ ಅಂದರೆ ಬ್ರಾಹ್ಮಣ್ಯದ ದಿಗ್ವಿಜಯ ಎಂದು ಅರ್ಥ. ಅದನ್ನು ನೇರವಾಗಿ ಹೇಳಿದರೆ ತನ್ನ ಖೆಡ್ಡಾಕ್ಕೆ ಬಿದ್ದಿರುವ ಶೂದ್ರ ಸಲಗಗಳು ತಿರುಗಿ ಬಿದ್ದಾವು ಎಂದು ‘ಹಿಂದೂ’ ಎಂಬ ಶಬ್ದವನ್ನು ಸಂಘದ ನಾಯಕರು ಅತ್ಯಂತ ಜಾಣತನದಿಂದ ಬಳಸುತ್ತಾರೆ.
ಭಾರತದ ಪ್ರಜಾ ಪ್ರಭುತ್ವವನ್ನು ನುಂಗಿ ನೀರು ಕುಡಿಯಲು ಫ್ಯಾಸಿಸ್ಟ್ ಹಿಂದುತ್ವ ಬಾಯಿ ತೆರೆದು ನಿಂತಿರುವಾಗ ನಾವು ಜಾತ್ಯತೀತ ಜನತಂತ್ರವಾದಿಗಳು ಎಡ ಪಂಥೀಯವರು ಏನು ಮಾಡುತ್ತಿದ್ದೇವೆ? ನಮಗೇನಾಗಿದೆ? ನಮ್ಮ ಪ್ರತಿರೋಧ ಕೇವಲ ಸಾಂಕೇತಿಕವಾಗುತ್ತಿದೆ. ಅಲ್ಲವೆ? ನಿಜವಾಗಿ ನಾವು ಒಂದಾಗಿದ್ದೇವೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಏಕತೆ ಅನೇಕ ಬಾರಿ ತೋರಿಕೆಗೆ ಮಾತ್ರ ಎಂದೆನಿಸಿಕೊಳ್ಳುತ್ತಿದೆ. ಉದಾಹರಣೆಗೆ ಎಡ ಪಂಥೀಯ ಪಕ್ಷಗಳನ್ನೇ ತೆಗೆದುಕೊಳ್ಳೋದಾದರೆ ಲೋಕಸಭೆ ಚುನಾವಣೆ ಫಲಿತಾಂಶ ಬರುವ ವರೆಗೆ ಸೋಷಲಿಸ್ಟ್ ಯುನಿಟಿ ಸೆಂಟರ್ (ಎಸ್‌ಯುಸಿಐ) ಎಂಬ ಎಡ ಪಕ್ಷ ಸಿಪಿಎಂ ಮತ್ತು ಸಿಪಿಐ ಪಕ್ಷಗಳಿಗೆ ಅಸ್ಪಶ್ಯವಾಗಿತ್ತು. ಆದರೆ ಚುನಾವಣೆ ಸೋಲಿನ ನಂತರ ಎಡಪಕ್ಷಗಳ ಏಕತೆಯ ಅನಿವಾರ್ಯತೆಯನ್ನು ಮನಗಂಡ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಎಸ್‌ಯುಸಿಐ ಕಾರ್ಯದರ್ಶಿಯನ್ನು ಕಾಣಲು ಸ್ವತಃ ಕೊಲ್ಕತ್ತಾಗೆ ಹೋದರು. ಇದು ಉತ್ತಮ ಬೆಳವಣಿಗೆ.
ಮುಂಚೆ ನಕ್ಸಲೀಯರು, ಮಾವೋವಾದಿಗಳ ಕಂಡರೆ ಮಾರುದ್ಧ ಸರಿಯುತ್ತಿದ್ದವರು, ಚುನಾವಣಾ ಸೋಲಿನ ನಂತರ ಈಗ ಅವರಿಗೂ ಹತ್ತಿರವಾಗುತ್ತಿದ್ದಾರೆ. ನೂರ್ ಝುಲ್ಫಿಕರ್ ಮತ್ತು ಸಿರಿಮನೆ ನಾಗರಾಜ್ ಮುಖ್ಯವಾಹಿನಿಗೆ ಬಂದು ನಿಂತಾಗ ಅವರನ್ನು ಸ್ವಾಗತಿಸಲು ಉಭಯ ಕಮ್ಯುನಿಸ್ಟ್ ಪಕ್ಷಗಳ ನಾಯಕರು ಬಂದಿದ್ದರು. ಹೈದರಾಬಾದಿನಲ್ಲಿ ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ಸ್ಥಾಪನಾ ದಿನಾಚರಣೆ ನಡೆಸಲು ಸಿಪಿಎಂ ತಮ್ಮ ಸುಂದರಯ್ಯನ ವಿಜ್ಞಾನ ಕೇಂದ್ರದ ಸಭಾಂಗಣವನ್ನು ವರವರರಾಜ್‌ರಿಗೆ ಬಿಟ್ಟುಕೊಟ್ಟಿತ್ತು.
ಈ ಎಲ್ಲ ಬೆಳವಣಿಗಳು ಸ್ವಾಗತಾರ್ಹ. ಆದರೆ ಈ ಏಕತೆ ಬರೀ ತೋರಿಕೆಯ ಏಕತೆ ಆಗಬಾರದು. ಕೇವಲ ದಿಲ್ಲಿ ಮಟ್ಟದ ರಾಜಕೀಯ ತಂತ್ರಗಾರಿಕೆ ಆಗಬಾರದು. ಇದು ತಳಮಟ್ಟದಲ್ಲಿ ಅಂದರೆ ಕಾರ್ಯಕರ್ತರ ಮಟ್ಟದಲ್ಲಿ ಮೂಡಿ ಬರಬೇಕು. ಆಗ ಮಾತ್ರ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಆದರೆ ಅದು ಕೂಡ ಅಂದುಕೊಂಡಷ್ಟು ಸುಲಭವಲ್ಲ.
ಆರೆಸ್ಸೆಸ್ ಬೇರೆಬೇರೆ ಹೆಸರಿನ ಸಾವಿರಾರು ಸಂಘಟನೆಗಳನ್ನು ಕಟ್ಟಿಕೊಂಡು ಆದಿವಾಸಿಗಳು, ಹಿಂದುಳಿದವರು ಮತ್ತು ವಿವಿಧ ಜನ ವರ್ಗಗಳ ನಡುವೆ ತನ್ನ ಬಲೆ ಬೀಸಿದೆ. ಈ ಬಲೆಯನ್ನು ಕತ್ತರಿಸಿ ಹಾಕುವುದು ಅಷ್ಟು ಸುಲಭವಲ್ಲ. ಬರೀ ಕಾರ್ಮಿಕ ಸಂಘಟನೆಗಳಿಂದ ಆರ್ಥಿಕ ಹೋರಾಟಗಳಿಂದ ಈ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ.
ಎಡಪಂಥೀಯ ಮತ್ತು ಪ್ರಗತಿಪರರು ಮೊದಲು ತಮ್ಮ ಬೆಕ್ಕಿನ ಬಿಡಾರದಿಂದ ಹೊರಗೆ ಬರಬೇಕು. ಸಂಕುಚಿತ ಸಣ್ಣತನಗಳನ್ನು ತೊರೆದು ವಿಶಾಲ ತಳಹದಿಯಲ್ಲಿ ಯೋಚಿಸಬೇಕು. ಸಂಕುಚಿತ ಸಣ್ಣತನದಿಂದ ವಿಶಾಲ ಸ್ವರೂಪದ ಫ್ಯಾಸಿಸ್ಟ ವಿರೋಧಿ ಹೋರಾಟ ಕಟ್ಟಲು ಸಾಧ್ಯವಾಗುವುದಿಲ್ಲ.
ವಿಶಾಲವಾದ ಫ್ಯಾಸಿಸ್ಟ್ ವಿರೋಧಿ ರಂಗ ಇಂದಿನ ಚಾರಿತ್ರಿಕ ಆವಶ್ಯಕತೆಯಾಗಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಫ್ಯಾಸಿಸ್ಟರು ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಸಮಾಧಿ ಮಾಡಿ ಜಾತ್ಯತೀತ ಜನತಂತ್ರ ವ್ಯವಸ್ಥೆಯ ಚಟ್ಟ ಕಟ್ಟುವ ದಿನ ದೂರವಿಲ್ಲ.

Leave a Reply