fbpx

ಗದುಗಿನ ಚಿನ್ನಾಭರಣ ಅಲಂಕೃತ ಸರಕಾರಿ ಕಾಮಣ್ಣ : ಶತಮಾನೋತ್ಸವ ಪೂರ್ಣಗೊಳಿಸಿದ ಸಂಭ್ರಮ

ವಿಶೇಷ ವರದಿ  * ಬಸವರಾಜ ದಂಡಿನ

ಗದಗ,  : ಗದಗ ಕಿಲ್ಲಾ ಚಂದ್ರಸಾಲಿಯಲ್ಲಿ ಪ್ರತಿ ವರ್ಷ ಪ್ರತಿಷ್ಠಾಪಿಸುತ್ತ ಬಂದಿರುವ ಕಾಮರತಿಗೆ ಶತಮಾನೋತ್ಸವ ಪೂರ್ಣಗೊಳಿಸಿದ ಸಂಭ್ರಮವಿದೆ.
ನೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಪೋಲೀಸ್ ಕಚೇರಿ (ಸ್ಟೇಷನ್) ಇದ್ದುದರಿಂದ ಈ ಭಾಗವನ್ನು ಕಚೇರಿ ಎಂದೂ, ಕಚೇರಿ ಕಾಮನೆಂದೂ ಆಗಿನ ತಹಶೀಲ್ದಾರ ಕಚೇರಿಯಿಂದ ಕಾಮನೋತ್ಸವ ಖರ್ಚು ವೆಚ್ಚಕ್ಕೆಂದು ಸರಕಾರಿ ಹಣ ನೀಡುತ್ತಿದ್ದರಿಂದ ಇಲ್ಲಿನ ಕಾಮಣ್ಣನನ್ನು ಸರಕಾರಿ ಕಾಮನೆಂದೂ ಕರೆಯಲಾಗುತ್ತಿದೆ.
೫೦ ಕೆ.ಜಿ. ಬಂಗಾರ :
ಸರಕಾರಿ ಕಾಮನೋತ್ಸವ ಸಂದರ್ಭದಲ್ಲಿ ಈ ಭಾಗದ ಜನರು ರತಿಗೆ ತಮ್ಮ ತಮ್ಮ ಮನೆಯಿಂದ ಚಿನ್ನಾಭರಣಗಳನ್ನು ಹಾಕಿ ಖುಷಿಯೊಂದಿಗೆ ಸಂತೃಪ್ತಿ ಪಡೆಯುತ್ತಾರೆ.
ಮಕ್ಕಳಾಗದ ಮಹಿಳೆಯರು ಉಡಿ ತುಂಬಿ ಚಿನ್ನಾಭರಣಗಳನ್ನು ಹಾಕಿದರೆ ಮಕ್ಕಳ ಭಾಗ್ಯ ಪಡೆಯುವರೆಂಬ ನಂಬಿಕೆ ಹುಟ್ಟಿಕೊಂಡಿದ್ದರಿಂದಲೇ ಇಲ್ಲಿನ ರತಿಗೆ ಭರ್ಜರಿ ಆಭರಣಗಳನ್ನು ಹಾಕಿ ಸಂಭ್ರಮಿಸುತ್ತಾರೆ.
ಕನಿಷ್ಠ ಸುಮಾರು ೧೦ ರಿಂದ ೨೦ ಕೆ.ಜಿ ಯಷ್ಟು ಬಂಗಾರವನ್ನು ಇಂದಿಗೂ ರತಿಯ ಕೊರಳಿಗೆ ಗದಗ ಬೆಟಗೇರಿಯ ಅವಳಿ ನಗರದ ಗಣ್ಯರು ಹಾಕುತ್ತಾರೆ. ಕಳೆದ ವರ್ಷ ೪೦ ಕೆ.ಜಿಗೆ ಹೆಚ್ಚಿನ ಪ್ರಮಾಣದ ಚಿನ್ನಾಭರಣದಿಂದ ಅಲಂಕಾರ ಮಾಡಲಾಗಿತ್ತು ಈ ವರ್ಷ ಕಾಮ ರತಿಗೆ ವಿಶೇಷವಾಗಿ ಬಣ್ಣ ಲೇಪನ ಮಾಡಲಾಗಿದ್ದು ಈ ಹಿನ್ನಲೆಯಲ್ಲಿ ಯುವಕ ಮಂಡಳ ಮತ್ತು ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಭಕ್ತ ವೃಂದ ಕ್ವಿಂಟಲ್ ಚಿನ್ನಾಭರಣ ತೊಡಿಸುವ ಸಂಕಲ್ಪ ಹೊಂದಿದ್ದಾರೆ ಎನ್ನಲಾಗಿದೆ.
ಬೇರೆ ಬೇರೆ ಮನೆತನದವರು ತಮ್ಮ ಮನೆಯಲ್ಲಿನ ಚಿನ್ನಾಭರಣಗಳನ್ನು ಗುರುತು ಹಾಕಿ, ವಿಳಾಸ, ತೂಕದ ವಿವರದ ಚೀಟಿಯನ್ನು ಬರೆದು ಹಿರಿಯರ ಸಮಕ್ಷಮದಲ್ಲಿ ಒಪ್ಪಿಸುತ್ತಾರೆ. ಹಿರಿಯರ ಕಮೀಟಿ ಅದಕ್ಕೊಂದು ರಿಜಿಸ್ಟರ್‌ದಲ್ಲಿ ಸಂಪೂರ್ಣ ವಿವರ ಬರೆದು ಅದರ ಕ್ರಮ ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಚಿನ್ನಾಭರಣದ ಸರಕ್ಕೆ ಕಟ್ಟುವರು. ಐದು ದಿನಗಳವರೆಗೂ ಕಾಮನೋತ್ಸವ ಮಂಡಳಿಯ ಪದಾಧಿಕಾರಿಗಳು ಪೋಲೀಸರ ಉಸ್ತುವಾರಿಯಲ್ಲಿ ಸರ್ಪಗಾವಲಿಯಲ್ಲಿ ಹಗಲು ರಾತ್ರಿ ಕಾಯುತ್ತಾರೆ, ಈ ಸಲ ಇಲ್ಲಿ ನಿಗಾ ಮತ್ತು ಭದ್ರತೆಯ ಹಿನ್ನಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಯೋಜನೆಯೊಂದಿಗೆ ಹದ್ದಿನ ಕಣ್ಣು ರೀತಿಯಲ್ಲಿ ಕಾಯಲಾಗುತ್ತಿದೆ.
ಕಾಮ ರತಿಯರನ್ನು ಚಂದ್ರಸಾಲಿ ಕಿಲ್ಲಾದ ಓಣಿಯ ಮಧ್ಯದಲ್ಲಿ ವಿಶೇಷವಾದ ಮಂಟಪದಲ್ಲಿ ಹೊಳಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಲಾಗುವದು. ಐದು ದಿನವೂ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು ಕೊನೆಯ ದಿನ ಕಾಮ ರತಿಯನ್ನು ಮಂಟಪದಿಂದ ವಿಶೇಷವಾದ ಅಲಂಕೃತ ವಾಹನದಲ್ಲಿ ಕುಳ್ಳರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ ಕಾಮನೋತ್ಸವದ ಮೆರವಣಿಗೆ ಮುಗಿಯುತ್ತಿದ್ದಂತೆಯೇ ಕಾಮನೋತ್ಸವ ಸಮಿತಿಯು ಹಿರಿಯರ ಪಂಚಕಮೀಟಿಯೊಂದಿಗೆ ಸೇರಿಕೊಂಡು ಚಿನ್ನಾಭರಣಗಳನ್ನು ನೀಡಿದವರ ಮನೆ ಮನೆಗೆ ರಾತ್ರೋರಾತ್ರಿಯೇ ತಲುಪಿಸಿ ಜವಾಬ್ದಾರಿಯಿಂದ ಮುಕ್ತರಾಗುವರು. ಇಷ್ಟು ವರ್ಷದವರೆಗೂ ಚಿನ್ನಾಭರಣದ ವಿಷಯದಲ್ಲಿ ಯಾವುದೇ ರೀತಿಯ ಭಿನ್ನತೆ, ಅಪಸ್ವರ ಬಾರದಿರುವದು ಹಿರಿಯರ ಜವಾಬ್ದಾರಿ ಮತ್ತು ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ ವಿಶ್ವಾಸದ ಪ್ರತೀಕವಾಗಿದೆ.
ಈ ಹಿಂದಿನ ಮತ್ತು ಸಧ್ಯದ ಹಿರಿಯರಲ್ಲಿ ಗೋವಿಂದಸಾ ದಲಬಂಜನ, ಚಿನ್ನುಸಾ ಲದ್ವಾ, ಕೀರ್ತುಸಾ ಬಾಕಳೆ, ಹನಮಂತಸಾ ಖೋಡೆ, ಕೆ.ಆರ್.ಹಬೀಬ, ನಾರಾಯಣ ಖೋಡೆ, ಗಣಪತಸಾ ಬಾಕಳೆ, ಟಿ.ಎಸ್.ಖೋಡೆ, ಶ್ರೀಕಾಂತ ಖಟವಟೆ, ಜವಾಹರ ಬಾಂಢಗೆ, ವಿ.ಜಿ.ಖೋಡೆ, ವಿ.ಸಿ.ಸೋಳಂಕಿ, ಎನ್.ಜಿ.ಖೋಡೆ ಇವರುಗಳು ಸೇರಿದಂತೆ ಮುಂತಾದ ಗುರುಹಿರಿಯರು, ಎಸ್.ಎಸ್.ಕೆ ಸಮಾಜದವರು ಈ ಕಾಮನೋತ್ಸವವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಿಕೊಂಡು ಬಂದ ಸಂಪ್ರದಾಯವಿದೆ.
ಪ್ರತಿ ವರ್ಷ ಕಾಮನೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲು ಒಂದು ತಿಂಗಳು ಮೊದಲೇ ಪೂರ್ವ ಸಿದ್ದತೆಗಳು ಭರದಿಂದ ನಡೆದಿರುತ್ತವೆ ಅದಕ್ಕಾಗಿ ಹಿರಿಯರು ಯುವಕರನ್ನು ಸಂಘಟಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಗುರುತರವಾದ ಜವಾಬ್ದಾರಿಯನ್ನು ವಹಿಸುತ್ತಾರೆ.
ರಂಗಪಂಚಮಿಯಂದು ರಥಿಮನ್ಮಥರ ಬೃಹತ್ ಮೆರವಣಿಗೆಯನ್ನು ನೋಡುವುದೇ ಒಂದು ವಿಶೇಷ ಸಂಭ್ರಮ. ಮೆರವಣಿಗೆಯು ಸರ್ಪಗಾವಲಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಅಂದು ರಗ್‌ಹಲಗೆ, ಕರಡಿ ಮಜಲು, ಡೊಳ್ಳು ಕುಣಿತ, ಝಾಂಜ್ ಮೇಳ, ಯುವಕ ಯುವತಿಯರ ಸಂಭ್ರಮ ಸಡಗರ ನೋಡುವಂತಿರುತ್ತದೆ.
Please follow and like us:
error

Leave a Reply

error: Content is protected !!