ಹಣ ದುರ್ಬಳಕೆಯಾಗಿಲ್ಲ: ಕೊಪ್ಪಳ ಸಿಡಿಪಿಓ ಸ್ಪಷ್ಟನೆ

ಕೊಪ್ಪಳ ಜು. : ಅಂಗನವಾಡಿಗಳಿಗೆ ಖರೀದಿಸಲಾದ ಟೇಬಲ್‌ಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂ.ಗಳ ದುರ್ಬಳಕೆಯಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೊಪ್ಪಳ ಸಿ.ಡಿ.ಪಿ.ಓ ಕೆ. ಮುನಿರಾಜು ಅವರು ತಿಳಿಸಿದ್ದಾರೆ.
ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತೇಜೋವಧೆಗೆ ಕೆಲವರು ನಡೆಸಿರುವ ವ್ಯವಸ್ಥಿತ ಸಂಚು ಇದಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಯಲಬುರ್ಗಾದ ನಿಸರ್ಗ ಎಂಟರ್ ಪ್ರೈಸಸ್ ನವರು ತಮ್ಮ ದರಪಟ್ಟಿಯಲ್ಲಿನ ನಿಬಂಧನೆ ಹಾಗೂ ಬೇಡಿಕೆಯಂತೆ ೩೭೨ ಟೇಬಲ್‌ಗಳನ್ನು ಅಂಗನವಾಡಿಗಳಿಗೆ ಸರಬರಾಜು ಮಾಡಿದ್ದು, ಇಲಾಖೆಯ ವಿಷಯ ಪರಿಶೀಲಕರು ಈ ಕುರಿತು ಸಂಬಂಧಿಸಿದ ಅಂಗನವಾಡಿಗಳ ಶಿಕ್ಷಕಿಯರು, ಮೇಲ್ವಿಚಾರಕರಿಂದ ದೃಢೀಕರಿಸಿಕೊಂಡಿದ್ದಾರೆ. ೨೦೧೦ ರ ಜೂನ್ ೧೮ ರ ಜಿಲ್ಲಾ ಖಜಾನೆ ಚೆಕ್‌ಗಳನ್ನು ೨೦೧೧ ರ ಜೂ. ೧೭ ರ ಒಳಗಾಗಿ ನವೀಕರಿಸದೇ ಹೋದಲ್ಲಿ, ಈ ಚೆಕ್‌ಗಳು ಮೌಲ್ಯವನ್ನು ಕಳೆದುಕೊಳ್ಳುತ್ತವಾದ್ದರಿಂದ ಈ ಚೆಕ್‌ಗಳನ್ನು ನವೀಕರಿಸಿಕೊಳ್ಳಲಾಗಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಿಕ್ಕಾಗಲಿ ಅಥವಾ ನವೀಕರಿಸದೇ ಹಣವನ್ನು ವ್ಯಪಗತಗೊಳಿಸಲಿಕ್ಕಾಗಲಿ, ಇಲಾಖೆಯಿಂದಾಗಲಿ ಅಥವಾ ಯಾವುದೇ ತನಿಖಾ ವರದಿಯಲ್ಲಾಗಲಿ ಸೂಚಿಸಿರುವುದಿಲ್ಲ. ಎಲ್ಲಾ ಟೇಬಲ್‌ಗಳನ್ನು ಸರಬರಾಜು ಮಾಡಿರುವುದರಿಂದ ಕೂಡಲೆ ಹಣವನ್ನು ಪೂರೈಕದಾರರಿಗೆ ನೀಡಬೇಕೆಂದು ಇಲಾಖೆಯ ಉಪನಿರ್ದೇಶಕರು ಮೌಖಿಕವಾಗಿ ಸೂಚಿಸಿದ್ದರ ಮೇರೆಗೆ ಚೆಕ್‌ಗಳನ್ನು ನವೀಕರಿಸಿ ೨೦೧೧ ರ ಜೂ. ೧೭ ರಂದು ಪೂರೈಕೆದಾರರಿಗೆ ಇಲಾಖೆಯ ವಿಷಯ ಪರಿಶೀಲಕರು ನೀಡಿರುತ್ತಾರೆ. ಇದರಲ್ಲಿ ಯಾವುದೇ ಹಣ ದುರ್ಬಳಕೆಯಾಗಿರುವುದಿಲ್ಲ ಎಂದು ಕೊಪ್ಪಳ ಸಿಡಿಪಿಓ ಕೆ. ಮುನಿರಾಜು ಅವರು ಸ್ಪಷ್ಠೀಕರಣದಲ್ಲಿ ತಿಳಿಸಿದ್ದಾರೆ.

Please follow and like us:
error