ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಮಟ್ಟದಲ್ಲಿಯೆ ಜಾಗೃತಿ ಮೂಡಿಸುವುದು ಅಗತ್ಯ

ಕೊಪ್ಪಳ ನ.  : ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ಶಾಲಾ ಮಟ್ಟದಿಂದಲೇ ಪ್ರಾರಂಭವಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅನ್ನದಾನಯ್ಯ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಇವರ ಸಹಯೋಗದೊಂದಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಬುಧವಾರ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ಮಕ್ಕಳಿಗೆ ಈ ದೇಶದ ಸಂವಿಧಾನದಲ್ಲಿ ನೀಡಲಾಗಿರುವ ಎಲ್ಲ ಹಕ್ಕುಗಳ ಬಗ್ಗೆ ಆಯಾ ಮಕ್ಕಳು ತಮ್ಮ ಶಾಲಾ ಮಟ್ಟದಲ್ಲಿಯೇ ತಿಳಿದುಕೊಳ್ಳುವಂತೆ ಮಾಡಲು, ಶಾಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು.  ಇಲ್ಲದಿದ್ದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸುವ ಗೋಜಿಗೆ ಹೋಗದಂತಾಗುತ್ತದೆ.  ವಿಶೇಷವಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬಹಳಷ್ಟು ಮಹಿಳೆಯರು ಅವಿದ್ಯಾವಂತರಾಗಿದ್ದು, ಅವರನ್ನು ಸಾಕ್ಷರರನ್ನಾಗಿ ಮಾಡಬೇಕಾಗಿದೆ.  ಅನಕ್ಷರತೆಯ ಪರಿಣಾಮ ಬಹಳಷ್ಟು ಮೂಢ ನಂಬಿಕೆಗಳು, ಕಾನೂನಿನ ಬಗ್ಗೆ ತಿಳುವಳಿಕೆಯ ಕೊರತೆ ಮಹಿಳೆಯರ ಸಂವಿಧಾನಾತ್ಮಕ ಹಕ್ಕುಗಳಿಗೆ ರಕ್ಷಣೆ ಇಲ್ಲದಂತೆ ಮಾಡಿದೆ.  ಈ ನಿಟ್ಟಿನಲ್ಲಿ ಮಹಿಳೆಯರು ಸಾಕ್ಷರರಾಗಬೇಕು.  ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚಿದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅನ್ನದಾನಯ್ಯ ಅವರು ಅಭಿಪ್ರಾಯಪಟ್ಟರು.
  ಕಾರ್ಯಾಗಾರದಲ್ಲಿ ಮಾನವ ಹಕ್ಕುಗಳು ಹಾಗೂ ಮಹಿಳೆಯರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಮೈಸೂರಿನ ಜೆ.ಎಸ್.ಎಸ್. ಕಾನೂನು ವಿದ್ಯಾಲಯದ ಪ್ರಾಂಶುಪಾಲ ಕೆ. ಸುರೇಶ್ ಅವರು ಮಾತನಾಡಿ, ನಮ್ಮ ದೇಶದ ಸಂವಿಧಾನ ಒಂದು ಮಗು ಹುಟ್ಟುವ ಮುನ್ನವೇ ಅದಕ್ಕೆ ಹಕ್ಕು ನೀಡುವಂತೆ ವ್ಯವಸ್ಥೆ ರೂಪಿಸಿದೆ.  ಮಾನವ ಹಕ್ಕುಗಳ ಕಾಳಜಿಯು ಜಾಗತಿಕ ಮಟ್ಟದಲ್ಲಿ ಕಾಲೂರಿದೆ.  ಅದರ ಮಹತ್ವವು ಎಲ್ಲ ಆಂತರಿಕ ರಾಜ್ಯಗಳ, ಅಂತರ ರಾಜ್ಯಗಳ ರಾಜಕೀಯ ಸಂಬಂಧಗಳಲ್ಲಿ ಬೆಳೆದುಕೊಂಡಿದೆ.  ಮಾನವ ಹಕ್ಕುಗಳ ಸಂರಕ್ಷಣೆಯ ಅರಿವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಇಂದಿನ ಸಮಾಜಗಳನ್ನು, ರಾಜ್ಯಗಳನ್ನು, ಆಡಳಿತಗಳನ್ನು ಮತ್ತು ಕಾನೂನುಗಳನ್ನು ಅಳೆಯುವ ಮಾನದಂಡವಾಗಿದೆ.  ನಾಗರೀಕರಿಗೆ ಸಮಾಜದಲ್ಲಿ ನ್ಯಾಯಯುತವಾಗಿ, ಮಾನವೀಯತೆಯಿಂದ ಮತ್ತು ಘನತೆಯಿಂದ ಬಾಳಲು ಮಾನವ ಹಕ್ಕುಗಳು ಸಹಕರಿಸಲಿವೆ.  ಯಾವುದೇ ಒಂದು ದೇಶದ ಜನರ ಅರಿವಿನ ಮಟ್ಟ ಹೆಚ್ಚಾದಾಗ ಆ ದೇಶದ ಪ್ರಜಾತಂತ್ರ ವ್ಯವಸ್ಥೆ ಉತ್ತಮವಾಗಿ ರೂಪಗೊಳ್ಳಲು ಸಾಧ್ಯವಾಗಲಿದೆ ಎಂದರು.
  ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವಾಸುದೇವ ಶರ್ಮ ಅವರು ಮಕ್ಕಳ ಹಕ್ಕುಗಳು, ಅವುಗಳ ರಕ್ಷಣಾ ವಿಧಾನ, ಉಲ್ಲಂಘನೆಗೆ ಶಿಕ್ಷೆ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
  ಸಮಾರಂಭದಲ್ಲಿ ಕಾರ್ಯಾಗಾರವನ್ನು ಸಂಘಟಿಸಿದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಲ್ಲೇಶ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ತರಬೇತಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸುಮಾರು ೩೫ ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error

Related posts

Leave a Comment