ಕೊಪ್ಪಳ ಜಿಲ್ಲೆಯ ಇತಿಹಾಸ

ಕೊಪಣ ನಗರ   ಎಂದು ಪ್ರಸಿದ್ದಿ ಪಡೆದಿದ್ದ ಇಂದಿನ ಕೊಪ್ಪಳ ಪ್ರಾಚೀನ ಕಾಲದಲ್ಲಿ ಬೌದ್ದ, ಜೈನ ಧರ್ಮಗಳ ವಾಸಸ್ಥಳವಾಗಿದ್ದು ತರುವಾಯ ಶೈವ , ವೀರಶೈವ ಧರ್ಮಗಳ ಬೀಡಾಗಿ ನಿಂತಿತು. ಈ ಸ್ಥಳ ಕ್ರಿ.ಪೂ.೩ನೇ ಶತಮಾನದಷ್ಟು ಪ್ರಾಚೀನ ಪುರಾಣ ಕಾಲದಿಂದಲೂ ಪ್ರಸಿದ್ದಿ ಹೊಂದಿರುವ  ಈ ನಗರ  ಅರ್ಜುನನು ಶಿವನಿಂದ ಪಾಶುಪತಾಸ್ತ್ರವನ್ನು  ಪಡೆಯಲು ತಪಸ್ಸು ಮಾಡಿದ   ಇಂದ್ರಕೀಲ ಪರ್ವತ   ಇಲ್ಲಿಯ  ಪರ್ವತ ಸಾಲುಗಳಲ್ಲಿ ಒಂದು.  ಮಳಲ ಲಿಂಗವನ್ನು  ಪೂಜಿಸಲು ಈಶ್ವರನು  ಪ್ರತ್ಯಕ್ಷವಾದ ಸ್ಥಳ  ಇಲ್ಲಿಯ ಮಳೆಯ ಮಲ್ಲೇಶ್ವರ ,  ಇದು ಪುರಾಣಗಳಲ್ಲಿಯ ಕೊಪ್ಪಳ.
    ಇಲ್ಲಿ ದೊರೆತ ತಲೆಬುರುಡೆ, ಮಣ್ಣಿನ ಪಾತ್ರೆ, ಆಯುಧ ಮೊದಲಾದವು ಇದು ಪ್ರಾಚೀನ ಕಾಲದಿಂದಲೂ ಮಾನವರ  ವಾಸಸ್ಥಳವಾಗಿತ್ತೆಂದು  ಸಾಕ್ಷಿ ಹೇಳುತ್ತಿವೆ.  ಇಲ್ಲಿಯ ಸುಪ್ರಸಿದ್ದ ಗವಿಮಠದ ಮೇಲಿನ ಗುಹೆಗಳಲ್ಲಿ ಶಿಲಾಯುಗದ ಆದಿಮಾನವನ  ವರ್ಣರಂಜಿತ ಚಿತ್ರಗಳೂ ದೊರೆತಿವೆ. ಮೋರೆರ ಅಂಗಡಿ, ಮೋರೇರ ಅಗಸಿ, ಮಿಂಚರ ಬಂಡೆ ಬಯಲು ಮೊದಲಾದವು ಈ ಸ್ಥಳದ    ಇತಿಹಾಸವನ್ನು ಕ್ರಿಸ್ತ ಪೂರ್ವದತ್ತ   ಒಯ್ಯತ್ತಿವೆ. ಕರ್ನಾಟಕದಲ್ಲಿ ದೊರೆಯುವ ಮೊಟ್ಟಮೊದಲ ಶಾಸನಗಳು ಅಶೋಕನ ಧರ್ಮಶಾಸನಗಳು ಅವುಗಳಲ್ಲಿ ಎರಡು ಕೊಪ್ಪಳದಲ್ಲಿ  ಇರುವುದು.  ಅಂದಿನ ಕಾಲದಲ್ಲಿ ಈ ಸ್ಥಳ ಪಡೆದಿದ್ದ ಪ್ರಸಿದ್ದಿಯನ್ನು ಮಹತ್ವವನ್ನು ಸಾರುತ್ತಿವೆ. ಕನ್ನಡ ನೆಲದ ಮೇಲೆ ಆಳ್ವಿಕೆಯನ್ನು ನಡೆಸಿದ ಪ್ರಥಮ ಪ್ರಭು ಅಶೋಕ  ಎಂಬುದನ್ನು ಸಾರುತ್ತಿವೆ. ಮೌರ್ಯರ ತರುವಾಯ   ನಾಡು ಶಾತವಾಹನರ  ಆಳ್ವಿಕೆಗೆ ಒಳಪಟ್ಟಿತ್ತು. ಇವರು ಈ ನಾಡನ್ನು ಸುಮಾರು ೫೫೦ ವರ್ಷಗಳ ಕಾಲ ಆಳಿದರು. ಎರಡು ಅಶ್ವಮೇಧ ಯಾಗಗಗಳನ್ನು  ಒಂದು ರಾಜಸೂಯ ಯಾಗವನ್ನು ಮಾಡಿದ ಈ ವಂಶದ ಕನ್ನ  ಅಥವಾ ಕೃಷ್ಣ ಮಹಾರಾಷ್ಟ್ರದಿಂದ ಪೂರ್ವತಿರದ ಕಳಿಂಗದವರೆಗೆ ಆಳಿದನೆಂದು ತಿಳಿದುಬರುತ್ತದೆ. ಕೊಪ್ಪಳ  ತಾಲೂಕಿನ ಚಿಕ್ಕಸಿಂದೋಗಿಯಲ್ಲಿ ಈ ವಂಶಕ್ಕೆ ಸಂಬಂಧಿಸಿದ ೫೫೩೪ ಬೆಳ್ಳಿಯ ಮುದ್ರಾಂಕಿತ ನಾಣ್ಯಗಳ ರಾಶಿ ದೊರೆತಿರುವದನ್ನು  ಇಲ್ಲಿ ಸ್ಮರಿಸಬಹುದಾಗಿದೆ. 
ಕದಂಬ ವಂಶದ ಸ್ಥಾಪಕ  ಮಯೂರ ವರ್ಮನ ಶಾಸನದಲ್ಲಿ ಕೂಪಣ ಚಮ  ಎಂಬ ಹೆಸರಿನಲ್ಲಿ ಕೊಪ್ಪಳದ  ಉಲ್ಲೇಖ ವಿರುವುದನ್ನು ಕಾಣಬಹುದು.
ಕರ್ನಾಟಕದ   ಇತಿಹಾಸಕ್ಕೆ  ಒಂದು ನಿರ್ದಿಷ್ಟ ಸ್ವರೂಪ ಕೊಟ್ಟ   ಅರಸರಲ್ಲಿ ಪ್ರಮುಖರು  ಅವರಲ್ಲಿ ಪ್ರಸಿದ್ದ ದೊರೆ ಶಖ ಪುರುಷ ಎರಡನೇ ಪುಲಿಕೇಶಿ  ಈತನ ಕಾಲದಲ್ಲಿ  ಪ್ರವಾಸಕ್ಕೆ ಬಂದ ಚೀನಾದ ಯಾತ್ರಿಕ  ಹುಯೆನತ್ಸಾಂಗ ಕನ್ನಡ ನಾಡಿನ ಪ್ರಸಿದ್ದ ಸ್ಥಳಗಳನ್ನು ಹೆಸರಿಸುವಾಗ  ಈ ಸ್ಥಳವನ್ನು ಕೊಂಕಿನ ಪುಲವು ಎಂದು ಲೇಖಿಸಿದ್ದಾನೆ. ಆಶೋಕನ ತರುವಾಯ ಮೌನ ಧರಿಸಿದ್ದ  ಇಲ್ಲಿನ ಶಾಸನ ಸಂಪತ್ತು ತನ್ನ ಮೌನದ ಮುದ್ರೆಯೊಡೆಯುತ್ತಿರುವುದು ಕೊಪ್ಪಳಕ್ಕೆ ನಾಲ್ಕು ಮೈಲಿ ದೂರದಲ್ಲಿರುವ ಹಲಗೇರಿ ಶಾಸನ ದಿಂದ ಇದು ಬದಾಮಿ ಚಾಲುಕ್ಯ ಅರಸ ವಿಜಯಾದಿತ್ಯ   ಈ ಸ್ಥಳದೊಂದಿಗೆ ಹೊಂದಿದ್ದ  ಸಂಬಂಧ ಸಾರುತ್ತಿದೆ. ಕ್ರಿ.ಶ. ೯೬೪ರ ಕುಕನೂರು ತಾಮ್ರ ಶಾಸನ ಗಂಗರಸ ಮಾರಸಿಂಹನನ್ನು ಉಲ್ಲೇಖಿಸುತ್ತದೆ. ಇಲ್ಲಿ ಕೊಪ್ಪಳ ನೇರ ಪ್ರಸ್ತಾಪ  ಇಲ್ಲದಿದ್ದರೂ ಕುಕನೂರು ಕೊಪ್ಪಳಕ್ಕೆ ಅತೀ ಸಮೀಪದಲ್ಲಿರುವುದರಿಂದ   ಎಲ್ಲಾ ಭಾಗ ಗಂಗ ಆಡಳಿತಕ್ಕೆ ಒಳಪಟ್ಟಿತ್ತು ಎಂದು ಹೇಳಬಹುದಾಗಿದೆ
ರಾಷ್ಟ್ರಕೂಟರ ಪ್ರಸಿದ್ದ ದೊರೆ ಅಮೋಘ ವರ್ಷ ನೃಪತುಂಗನ ಆಶ್ರಯದಲ್ಲಿದ್ದ ಶ್ರೀ ವಿಜಯ ರಚಿಸಿದ ಕವಿರಾಜ ಮಾರ್ಗದಲ್ಲಿ  – ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುದಾವಳಯ ವಿಲೀನ ವಿಶದ ವಿಷಯ ವಿಶೇಷಂ(೧-೩೬)  ಅದರೊಳಗಂ ಕಿಸುವೊಳಲಾವಿದಿತ ಮಹಾಕೂಪಣ ನಗರದಾ ಪುಲಿಗೇರಿಯಾ ಸದಭಿಸ್ತುತ ಮಪ್ಪೊಕ್ಕುಂ ದದ ನಡುವಣ ನಾಡೆ ನಾಡೆ ಕನ್ನಡ ತಿರುಳ್  (೧-೩೬)   ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವ್ಯಾಪಿಸಿದೆ. ಇಲ್ಲಿ ಇರುವ ಜನಪದವು ಜಗತ್ತಿನ ಸುಪ್ರಸಿದ್ದ ವಿಷಯಗಳಿಗೆ ಮಿಗಿಲು. ಆ ಜನಪದದೊಳಗೆ ಕಿಸುವೊಳಲು ( ಇಂದಿನ ಪಟ್ಟದಕಲ್ಲು ) ಕೂಪಣ ನಗರ(  ಇಂದಿನ ಕೊಪ್ಪಳ) ಪುಲಿಗೇರಿ ( ಇಂದಿನ ಲಕ್ಷ್ಮೇಶ್ವರ )   ಒಂಕುಂದ (  ಇಂದಿನ ಬೆಳಗಾವಿ ಜಿಲ್ಲೆಯ   ಒಕ್ಕುಂದ )  ಈ ನಾಲ್ಕು ಊರುಗಳು ಕನ್ನಡದ ನುಡಿದೇವಿಯ ಚಿತ್ರಕ್ಕೆ ನಾಲ್ಕು ದಿಕ್ಕುಗಳಲ್ಲಿ  ಹಚ್ಚಿಟ್ಟ ನಂದಾದೀವಿಗೆಯಂತ ಭಾಸವಾಗುತ್ತವೆ.
ಕ್ರಿ.ಶ.ಸುಮಾರು ೯೬೪ರ ಉಪ್ಪಿನ ಬೆಟಗೇರಿಯ ಶಾಸನವು ಅವನ ಮಹಾಸಾಮಂತಾಧಿಪತಿಯಾದ ಶಂಕರ ಗಂಡನು ಕೊಪ್ಪಳದಲ್ಲಿ ಜೀನಾಲಯ ಕಟ್ಟಿಸಿದ .  ಇದು ಅವನ ಜಯದೀರ  ಎಂಬ ಬಿರುದಿಗೆ ಪ್ರಸಿದ್ದಿಗೆ ಕಾರಣವಾಯಿತು.
ಚಾಲುಕ್ಯ ಸಾಮ್ರಾಜ್ಯದ ವಾರಸುದಾರರಾಗಿ ಬಂದ ಕಳಚೂರ್ಯದಲ್ಲಿ ಬಿಜ್ಜಳನನ್ನು ಕುಕನೂರ ಶಾಸನ ಮನದುಂಬಿ ಬಣ್ಣಿಸಿದೆ. ಇಲ್ಲಿಯ ಹನ್ನೆರೆಡು ಶಾಸನಗಳು ರಾಯ ಮುರಾರಿದೇವ ಮತತ್ತು ಸಂಕಮದೇವರು ಕೊಪ್ಪಳಕ್ಕೆ ೩ ಮೈಲಿ ಅಂತರದಲ್ಲಿರುವ ಮೊದಗನುರಿನಲ್ಲಿ ಸುಖ ಸಂಕಥಾ ವಿನೋದದಿಂದ ರಾಜ್ಯಗೈಯತ್ತಿದ್ದನೆಂದು ಹೇಳಿವೆ.
ಹೊಯ್ಸಳ ಮನೆತನವ ಗಾಡಸಂಬಂಧ ಪಡೆದಿದ್ದ ಬಗ್ಗೆ ಆಧಾರ ದೊರೆಯುತ್ತಿವೆ. ವಿಷ್ಣುವರ್ಧನನ ಕಾಲದಲ್ಲಿ ಜೈನಧರ್ಮದ  ಎರಡು ಕಣ್ಣುಗಳಂತಿದ್ದ ಶಾಂತಲೆ ಗಂಗರಾರಲ್ಲಿ ಶಾಂತಲೆ ಶ್ರವಣಬೆಳಗೊಳದಂತೆ ಇಲ್ಲಿಯೂ   ಒಂದು ಜೀನಾಲಯ ನಿರ್ಮಿಸಿದನು. ಗಂಗರಾಜನು ಗಂಗವಾಡಿ ತೊಂಬತ್ತಾರು ಸಾಸಿರಕೆಲ್ಲ ಕೊಪಣವನ್ನು ಆದರ್ಶವಾಗಿಟ್ಟುಕೊಂಡಿದ್ದನು ಆದಿತೀರ್ಥದಲ್ಲಿ ಮತ್ತು ಬೆಳಗೊಳದಲ್ಲಿ ಧರಿತ್ರಿಯಲ್ಲಿ ಕೊಂಡು ಕೊನೆದಾಡುವಂತೆ ಜೀನೇಂದ್ರಭವನಂಗಳನ್ನು ಮಾಡಿಸಿದನು, ಅಲ್ಲದೇ  ಏಚಿರಾಜನು ಬೆಳಗವತ್ತಿ ನಾಡನ್ನು ನಿರ್ಮಿಸುವಲ್ಲಿಯೂ ಕೊಪ್ಪಳವನ್ನು ಆದರ್ಶವಾಗಿಟ್ಟುಕೊಂಡಿದ್ದನು. ಹೊಯ್ಸಳ ನಾರಸಿಂಹನ ಮಂತ್ರಿ ಹುಳ್ಳರಾಜ  ಕೊಪ್ಪಳದಲ್ಲಿಯ ಜೀನ ಮಮುನಿಸಂಘಕ್ಕೆ ಸುವರ್ಣ ದಾವನಿತ್ತು ಪುಣ್ಯ ಪುಂಜೈಕ್ಯ ಧಾಮನೆನಿಸಿದನು.
ಕುಮಾರರಾಮನ ಸಾಂಗತ್ಯದಲ್ಲಿ ಕೊಪಣವೊಂದು ಬಲಾಡ್ಯದುರ್ಗವೆಂದು  ಅಲ್ಲಿ ತಿಮ್ಮರಾಜ  ಎಂಬುವನು ಕಂಪಿಲನ ಮಾಂಡಲೀಕನಾಗಿದ್ದನೆಂದು ಬಣ್ಣಸಿದೆ. ಕಮ್ಮಟ ದುರ್ಗದ ಕೊಪಣದ ತಿಮ್ಮರಾಜನ ಕುವರನು ಭಾಗವಹಿಸಿದ್ದನಂತೆ.ಕುಮಾರರಾಮನ ಚಟುವಟಿಕೆಗಳ ಕೇಂದ್ರವಾಗಿತ್ತು  ಆಗಿನ ಕೊಪ್ಪಳ.
ವಿಜಯನರಗರದರಸು ಕೃಷ್ಣದೇವರಾಯನು ತಿಮ್ಮಪ್ಪಯ್ಯ  ಎಂಬುವವನ್ನು ನಾಯಕನನ್ನಾಗಿ ನೇಮಿಸಿದ್ದನೆಂದು ಇಲ್ಲಿಯ     ಇಲ್ಲಿಯ  ಇನ್ನೊಂದು ಶಾಸನ ತಿಳಿಸುತ್ತದೆ. ರಾಮರಾಯನ ಮಗ ಶ್ರೀರಾಮರಾಜನ ಕಾಲದಲ್ಲಿಯೂ ಈ ನಾಡು ಕೊಪ್ಪಳ ಪ್ರದೇಶ  ಎಂದುಪ್ರಸಿದ್ದಿ ಪಡೆದಿದ್ದಾಗಿ ತಿಳಿದು ಬರುತ್ತದೆ. 
ವಿಜಾಪುರದ ಆದಿಲ್ ಷಾಹನ ಕಾಲದಲ್ಲಿ ಈ ಸ್ಥಳವನ್ನು ಮುಜಾಫರ್ ನಗರ ಎಂದು ಕರೆಯುತ್ತಿದ್ದರು.  ೨ನೇ ಇಬ್ರಾಹಿಂ ಆದಿಲ್ ಷಾಹನ ಆಡಳಿತದಲ್ಲಿ ಯಾಕೂಬನೆಂಬುವನು ಈ ಭಾಗದ ಅಧಿಕಾರಿಯಾಗಿದ್ದಾಗ ಘಾಜಿಖಾನ  ಎಂಬುವವನು ಇಲ್ಲಿ ಒಂದು ಮಸೀದಿ ಕಟ್ಟಿಸಿದನು. ಮುಂದೆ ಈ ಸ್ಥಳವು ಮೂರನೇ ಬಹುಲೋಲ ಎಂದು ಕರೆಯಲಾಗುತ್ತಿದ್ದ.   ಅಬ್ದುಲ್ ರಹೀಮಮನಿಗೆ ಜಹಗಿರಾಗಿ ಕೊಡಲ್ಪಟ್ಟಿತ್ತು. ಅವನ ಪ್ರತಿನಿಧಿಯಾಗಿದ್ದ  ಹುಸೇನ ಮಿಯಾನನ್ನು ಕೊಪ್ಪಳ ಕೋಟೆಯನ್ನಿತ್ತರೆ ಅವನನ್ನು ಬಿಡುವದಾಗಿ ತಿಳಿಸಿದನು.    ಮುಂದೆ ಶಿವಾಜಿ  ಇದನ್ನು ಸುಭಾನಜೀರಾವ್ ಎಂಂಬುವವನಿಗೆ ಕೊಟ್ಟನು. ಈ ಪಟ್ಟಣದ ಮೂಲಕ ಮರಾಠರು ತಮ್ಮ ರಾಜ್ಯವನ್ನು ತುಂಗಭದ್ರಾ ನದಿಯ ದಂಡೆಯ ಅದರಾಚೆ ಅಂದರೆ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯವರೆಗೂ ಹಬ್ಬುವಂತೆ ಮಾಡಿದರು.

ನಂತರದ ದಿನಗಳಲ್ಲಿ ಈ ಸ್ಥಳ ಹೈದರಾಲಿಯ ಕೈಸೇರಿತು. ಮಹ್ಮದ್ ಉಸ್ಮಾನ ಕೋವಾರ  ಎಂಬಾತನನ್ನು  ಈನಾಡನ್ನು ಆಳಲು ನೇಮಿಸಿದನು. ಇವನು ಕೋಟೆಯ ೨ನೇ ಬಾಗಿಲನ್ನು ಮತ್ತು ಬಹಾದ್ದೂರ ಬಂಡಿಯ ಕೋಟೆಯನ್ನೂ  ನಿರ್ಮಿಸಿದನು.  ಮರಾಠರೊಂದಿಗೆ ಹೋರಾಡಿ ಈ ಸ್ಥಳವನ್ನು ವಶಪಡಿಸಿಕೊಂಡ ಸಂಕೇತವಾಗಿ ಟಿಪ್ಪೂ ಸುಲ್ತಾನ   ಈ ಸ್ಥಳವನ್ನು ಸುಲ್ತಾನಗಡ  ಎಂದು  ಕರೆದನು. ಕಿತ್ತೂರಿನ ಮಲ್ಲಸರ್ಜ ದೊರೆಯನ್ನು ಇಲ್ಲಿಯೇ ಬಂದಿಸಿ ಇಟ್ಟಿದ್ದನು.
೧೭೯೯ರಲ್ಲಿ ಕರ್ನಲ್ ಕಿಡ್ನು ಸವಣೂರು, ಕೊಪ್ಪಳ, ಬೆಂಗಳೂರು ಮೊದಲಾದ ಪಟ್ಟಣಗಳನ್ನು  ಹಿಡಿದುಕೊಂಡನು.  ಕ್ರಿ.ಶ, ೧೮೫೦-೧೮೫೭ರ ಮಧ್ಯದಲ್ಲಿ ಇಲ್ಲಿಯ ವೀರಪ್ಪನೆಂಬ ಜಮೀನ್ದಾರ್ ಈಸ್ಟ ಇಂಡಿಯಾ ಕಂಪನಿ ವಿರುದ್ದ ಬಂಡೆದ್ದನು. ವೀರಪ್ಪನ ಬ್ರಿಟಿಷ್ ವಿರೋದಿ ನೀತಿ ಮುಂಡರಗಿ ಭೀಮರಾಯನಲ್ಲಿ ಮುಂದುವರೆಯಿತು. ಹಮ್ಮಿಗಿ ಕೆಂಚನಗೌಡ   ಈತನಿಗೆ  ಬೆಂಬಲವಾಗಿ ನಿಂತನು  ೧೮೫೮ರಲ್ಲಿ ಬ್ರಿಟಿಷರು ಈ ಬಂಡಾಯವನ್ನು ಬಗ್ಗುಬಡಿದರು.೧೮೬೧ರಲ್ಲಿ ಈ ಭಾಗವನ್ನು ನವಾಜ ಸಾಲಾರಜಂಗ ಅವ್ವಲ್ ಅವರಿಗೆ ಜಹಗೀರಾಗಿ ಕೊಡಲ್ಪಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ಈ ಪ್ರದೇಶ ಸಾಲಾರಜಂಗನ ಆಧಿಪತ್ಯದಲ್ಲಿ ಮುಂದುವರೆಯಿತು.
* ಬೌದ್ಧಧರ್ಮದ  ಪ್ರಥಮ ಪಾಠದಂತಿರುವ  ಶಾಸನಗಳು ಇಲ್ಲಿವೆ.
* ಶ್ರವಣಬೆಳಗೊಳದ ಶಾಸನಗಳು ಕೊಪ್ಪಳವನ್ನು  ಆದೀತೀರ್ಥ, ಮಾತೀರ್ಥ  ಎಂದು ಬಣ್ಣಿಸಿವೆ.
* ಈ ಸ್ಥಳವು ತಪಕ್ಕೆಂದು, ಯಾತ್ರೆಗೆಂದು, ಮುಕ್ತಿಗೆಂದು ಹೆಸರುವಾಸಿಯಾಗಿತ್ತು.
* ಕ್ರಿ.ಶ. ೩ನೇ ಶತಮಾನದಿಂದ ಕ್ರಿ.ಶ. ೧೫ನೇ ಶತಮಾನದವರೆಗೆ ಇದು ಜೈನರಕೇಂದ್ರವಾಗಿತ್ತು.
* ಗವಿಮಠದಲ್ಲಿ ದೊರೆತಿರುವ ಹಂಪಯ್ಯನ ಶಾಸನ (ಕ್ರಿ.ಶ. ೧೦೮೬)  ಈ ನಾಡಿನ ವೀರಶೈವ ಧರ್ಮದ ಪ್ರಥಮ   ಉಲ್ಲೇಖ. ಅಲ್ಲಿಂದ    
  ಇಲ್ಲಿಯವರೆಗಗೆ ಈ ಮಠ ವೀರಶೈವ ಧರ್ಮ ಮತ್ತು ಸಂಸ್ಕೃ ತಿಯ  ಸಂಗಮವಾಗಿ ನಿಂತಿದೆ. 
* ವಿಶ್ವಕರ್ಮ ಸಮಾಜದ ಶ್ರೀಶೈಲ ಸ್ವಾಮಿ ಮಠವೂ ಪ್ರಸಿದ್ದಿಯಾಗಿದೆ.
* ಶಿಲ್ಪಕಲೆಯ ದೃಷ್ಟಿಯಿಂಣ್ದ ಕೊಪ್ಪಳ ಮಹತ್ವದ ಕಾಣಿಕೆ ನೀಡಿದೆ.  ಈ ನಾಡು ಜೀನಾಲಯಗಳ ಬೀಡಾಗಿತ್ತು. ಜೈನ ಮಂದಿರಗಳು,   ಮೂರ್ತಿಗಳು ಇಲ್ಲಿಯ ಕೋಟೆ, ಕೊತ್ತಲುಗಳನ್ನು ಕಟ್ಟಲು ಉಪಯೋಗಿಸಲಾಗಿರುವದನ್ನು ನೋಡಬಹುದಾಗಿದೆ. 
* ದೇವಾಲಯಗಳ ಚಕ್ರವರ್ತಿ ಎಂದೇ ಪ್ರಖ್ಯಾತಿ ಪಡೆದಿರುವ  ಇಟಗಿ ಮಹಾದೇವಾಲಯ  ಇಲ್ಲಿಂದ ಸುಮಾರು ೨೦ ಕಿಮಿ ದೂರದಲ್ಲಿದೆ,  
  ನವಲಿಂಗಗಳಿಂದಲೂ , ನವಶಕ್ತಿಪೀಠಗಳಿಂದಲೂ  ಕೂಡಿ ಶಿವಶಕ್ತಿ ಸುರತ್ ಸಂಪುಟ ಕ್ಷೇತ್ರ  ಎಂದು ಬಣ್ಣಿಸಲ್ಪಟ್ಟ  ಕುಕನೂರು ಕೊಪ್ಪಳಕ್ಕೆ   
  ಸಮೀಪದಲ್ಲಿದೆ.
* ಬಿಜ್ಜಳನನ್ನು ಕೊಂದ  ಮೊಲ್ಲೆ ಬೊಮ್ಮಯ್ಯ  ಯಲಬುರ್ಗಾ ತಾಲೂಕಿನ  ರಾವಣಕಿಯವನು .
* ನೈಸರ್ಗಿಕವಾಗಿ ಬಲಾಡ್ಯವಾಗಿರುವ ಕೊಪ್ಪಳ ಕೋಟೆಯನ್ನು ಸರ್ ಮಾಲ್ಕಂ ಎಂಬ ಬ್ರಿಟಿಷ್ ಜನರಲ್ ನು ತಾನು ನೋಡಿದ  ಕೋಟೆಗಳಲ್ಲಿ    
  ಯಾವ ಕುಂದೂ ಇಲ್ಲದ ಬಲಿಷ್ಟ ಕೋಟೆ  ಎಂದು ಬಣ್ಣಿಸಿದ್ದಾನೆ. ಇದು ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟು ಹಂತ ಹಂತವಾಗಿ ಬೆಳೆದು  
  ಬಂದಿರಬೇಕು ಎಂದು ಪಂಡಿತರ ಅಭಿಪ್ರಾಯ
                ಪೂರಕ ಮಾಹಿತಿ :              ಶ್ರೀ ಬಿ.ವಿ.ಶಿರೂರ

ಕೊಪ್ಪಳ ಜಿಲ್ಲೆ ಹಾಗೂ ಸುತ್ತಮುತ್ತಲಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.
ಗಂಗಾವತಿ ತಾಲುಕಿನ ಆನೆಗೊಂದಿ, ಆಂಜನಾದ್ರಿ, ಹಿರೇಜಂತಕಲ್, ಕನಕಗಿರಿ, ಹೇಮಗುದ್ದ  ಹಂಪಸ ದುರ್ಗ, ದೇವಿ ಘಾಟ್, ಮುಂತಾದವುಗಳು ಪ್ರಾಚೀನ ತಾಣಗಳಾಗಿವೆ. ಕನಕಗಿರಿ  ನಮ್ಮ ಗಂಗಾವತಿ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪೆ ನೋಡಬೇಕು   ಎಂಬ ಜನವಾಣಿಯೇ ಇದೆ. ಇದರಿಂದಲೇ ತಿಳಿಯಬಹುದು ಕನಕಗಿರಿಯ ಮಹತ್ವ.
ಕನಕಗಿರಿ ವಿಜಯನಗರ ಅರಸರ ಕಾಲದಲ್ಲಿ  ಅದರ  ಆಧೀನ ಪಾಳೇಗಾರಿಕಾ ರಾಜ್ಯವಾಗಿತ್ತು. ಇಲ್ಲಿ ಗುಜ್ಜಲವಂಶದ ಮನೆತನದವರು ಆಡಳಿತ ನಡೆಸಿದರು.
ಇಲ್ಲಿಯ ಕನಕಾಚಲ  ಲಕ್ಷ್ಮೀ ನರಸಿಂಹ ದೇವಾಲಯವು ಅತಿ ಪುರಾತನ ದೇವಾಲಯ ಇದು ಸುತ್ತಮುತ್ತಲಿನ ಲಕ್ಷಾಂತರ ಭಕ್ತಾಧಿಗಳ  ಶ್ರದ್ದಾ ಕೇಂದ್ರವಾಗಿದೆ.
ನಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಇತಿಹಾಸ ಪ್ರಸಿದ್ದ ಸ್ಥಳವಾಗಿದೆ.   ಇದಕ್ಕೆ ಆನೆಗುಂದಿ, ಆನೆಗೊಂದಿ ಎನ್ನುವ ಹೆಸರಿನಿಂದ  ಕರೆಯಲಾಗುತ್ತಿತ್ತು.  ಈ ಗ್ರಾಮದಲ್ಲಿ ಪಂಪಾಪತಿ, ರಂಗನಾಥ, ಲಕ್ಷ್ಮೀ ನರಸಿಂಹ, ಗಣೇಶ ಮೊದಲಾ  ದೇವಾಲಯಗಳಿವೆ. ಚಿಂತಾಮಣಿಮಠ, ಹುಚ್ಚಪ್ಪಯ್ಯನಮಠ, ಮತ್ತು ಜೈನಬಸದಿಯೂ ಇಲ್ಲಿದೆ
ಇದು  ಪುರಾಣ ಪ್ರಸಿದ್ದ ವಾಲಿ, ಸುಗ್ರೀವರ ರಾಜಧಾನಿಯಾಗಿತ್ತು  ಅವರು ಇಲ್ಲಿಯೇ ವಾಸಿಸುತ್ತಿದ್ದರು  ಎಂಬುದು ಜನರ  ನಂಬಿಕೆಯಾದೆ. ಇದನ್ನು ಕಿಷ್ಕಿಂದಾ ನಾಡು ಎಂದು ಕರೆಯಲಾಗುತ್ತಿತ್ತು ಎನ್ನಲಾಗುತ್ತದೆ.
ಹುಲಿಗಿ ಕ್ಷೇತ್ರವು ಕೊಪ್ಪಳ ಜಿಲ್ಲೆಯ  ಧಾರ್ಮಿಕ ಮತ್ತು ಸಾಂಸ್ಕೃತಿಕ  ಕೇಂದ್ರವಾಗಿದೆ.  ಇಲ್ಲಿ ಹುಲಿಗೆಮ್ಮದೇವಿಯ ದೇವಾಲಯವಿದೆ.  ಇಲ್ಲಿಯೇ ಪ್ರತಿ ವರ್ಷ ದೊಡ್ಡದಾದ  ಜಾತ್ರೆ ನqಯತ್ತದೆ.  ದೇಶದ ನಾನಾ  ಮುಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ.
ಮುನಿರಾಬಾದ ಕೊಪ್ಪಳ ಜಿಲ್ಲೆಯ  ಇನ್ನೊಂದು ಪ್ರೇಕ್ಷಣಯ ಸ್ಥಳ .   ತುಂಗಭದ್ರಾನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಗಭದ್ರಾ ಡ್ಯಾಂ ಇರುವುದು ಇಲ್ಲಿಯೇ.    ಈ ಆಣೆಕಟ್ಟೆಯ ಮುಂದೆ ಸುಂದರವಾದ ಜಪಾನಿ ಮಾದರಿಯ ಪಂಪಾವನವಿದೆ. ಇವುಗಳನ್ನು ವೀಕ್ಷಿಸಲು  ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ.
ಇಟಗಿ ಕೊಪ್ಪಳ  ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಸಿದ್ದ ಗ್ರಾಮವಾಗಿದೆ.   ಇಲ್ಲಿಯ  ಮಹಾದೇವ ದೇವಾಲಯ ಅತೀ ಪ್ರಸಿದ್ದ ದೇವಾಲಯವಾಗಿದೆ.  ಇದನ್ನು ಕ್ರಿ.ಶ. ೧೧೧೨ರಲ್ಲಿ ಚಾಲುಕ್ಯರ ಅರಸ ೬ನೇ ವಿಕ್ರಮಾಧಿತ್ಯನ ಕಾಲದಲ್ಲಿನ ಮಹಾದಂಡನಾಯಕನಾದ ಮಹಾದೇವನು ಕಟ್ಟಿಸಿದ್ದಾನೆ.  ಈ ದೇವಾಲಯದ ಕೆತ್ತನೆಯು ಅದ್ಬುತವಾಗಿದ್ದು ಕಲಾತ್ಮಕವಾಗಿದೆ.  ಅತೀ ಸೂಕ್ಷ್ಮ ಕೆತ್ತನೆಯಿಂದ ಕೂಡಿದ  ಈ ಸುಂದರ ದೇವಲಾಯವನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗಿದೆ.ಜಪಾನಿ ಮಾದರಿಯ  ಪಗೋಡಾಗಳು ಮುನಿರಾಬಾದಿನ ಪಂಪಾವನದ ಆಕರ್ಷಣೆಯ ಕೇಂದ್ರ ಬಿಂದುಗಳು.  ಇಲ್ಲಿಯ ದೊಡ್ಡದಾದ ಪಂಪಾವನದಲ್ಲಿ ಈ ರೀತಿಯ ಹತ್ತಾರು ಪಗೋಡಗಳನ್ನು ಕಾಣಬಹುದು.    ಇವು ತಮ್ಮ ವಿಶಿಷ್ಟ ರಚನೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪುರ ಕುಷ್ಟಗಿ ತಾಲೂಕಿನ ಪ್ರಸಿದ್ದ  ಕ್ಷೇತ್ರ.  ಇದು ತಾವರಗೇರೆಯಿಂದ ೫ ಕಿ.ಮಿ. ದೂರದಲ್ಲಿದೆ. ಇಲ್ಲಿಯ ಸೋಮೇಶ್ವರ ದೇವಸ್ಥಾನವು ಪ್ರಸಿದ್ದ  ಧಾರ್ಮಿಕ ಕ್ಷೇತ್ರವಾಗಿದೆ.  ಇದು  ೧೨ನೇ ಶತಮಾನಕ್ಕೆ ಸಂಬಂಧಿಸಿದ ದೇವಾಲಯ. ಈ ದೇವಾಲಯದಲ್ಲಿ  ಕೋಟಿ ಲಿಂಗಗಳ ವಿಗ್ರಹಗಳಿವೆ. ಈ ದೇವಾಲಯ ಚಿಕ್ಕ ಚಿಕ್ಕ ಮಂಟಪಗಳನ್ನು ಹೊಂದಿದ್ದು ಅವುಗಳಲ್ಲಿ ಸಹಸ್ರ ಲಿಂಗಗಳಿವೆ. ಕೊಪ್ಪಳದ ಗವಿಮಠದ ಜಾತ್ರೆಯು ಸುಪ್ರಸಿದ್ಧ . ಈ ಜಾತ್ರೆಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ಕೊಪ್ಪಳಕ್ಕೆ ಭೇಟಿ ನೀಡಿದವರು. ಮಠಕ್ಕೆ ಭೇಟಿ ನೀಡಿಯೇ ನೀಡುತ್ತಾರೆ. 

ಕೊಪ್ಪಳದ ಪುರಾತನ ಹೆಸರುಗಳು

* ಕೂಪಣ
* ಕೊಪಣ
* ತೀರ್ಥ ಕೊಪಣಪುರ
* ಕೊಪಣಪುರವರ
* ಕೋಪಣಾದ್ರಿ
* ತಿರುಳ್ಗನ್ನಡನಾಡು
* ಕೊಪಣಾದ್ರಿ
* ಕೊಪಣಾಚಲ
* ಆದಿತೀರ್ಥ
* ಕೊಪಣತೀರ್ಥ
* ಮಹಾತೀರ್ಥ
* ಕುಪಣ
* ಕುಪಣತೀರ್ಥ
* ಸುಲ್ತಾನ್ ಗಡ್
* ಮುಜಾಫರ್ ನಗರ
* ಕೊಪಬಾಲ
* ಕುಪ್ಪಲ್

Please follow and like us:
error