ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಡಿ. : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸ್ವಯಂ ಸೇವಾ ಸಂಸ್ಥೆಗೆ ನೀಡಲಾಗುವ ೨೦೧೦-೧೧ ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅಪಾರ ಧೈರ್ಯ ಸಾಹಸ ತೋರಿದ ಮಹಿಳೆಗೆ ವೀರ ಮಹಿಳಾ ಪ್ರಶಸ್ತಿ ಹಾಗೂ ಅಸಾಧಾರಣ ಸೇವೆ ಸಲ್ಲಿಸಿರುವ ವ್ಯಕ್ತಿಗೆ ವಯಕ್ತಿಕ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
  ಪ್ರತಿ ವರ್ಷ ಮಾರ್ಚ್ ೦೮ ರಂದು ಆಚರಿಸಲಾಗುವ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಈ ಬಾರಿಯೂ ಅರ್ಹ ಮಹಿಳೆಯರಿಂದ ಹಾಗೂ ಸ್ವಯಂ ಸೇವಾ ಸಂಸ್ಥೆಯವರಿಂದ ಅರ್ಜಿ ಆಹ್ವಾನಿಸಿದೆ.  ಕಳೆದ ೦೫ ವರ್ಷಗಳಲ್ಲಿ ಮಹಿಳಾ ಅಭಿವೃದ್ಧಿ, ಕಲೆ, ಶಿಕ್ಷಣ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.  ಅಲ್ಲದೆ ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ೦೫ ವರ್ಷಗಳಿಗೂ ಕಡಿಮೆ ಇಲ್ಲದಂತೆ ಅಸಾಧಾರಣ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೂ ಪ್ರಶಸ್ತಿ ನೀಡಲಾಗುವುದು.  ಆಪತ್ಕಾಲದಲ್ಲಿ ಸಮಯಪ್ರಜ್ಞೆಯಿಂದ ಅಪಾರ ಧೈರ್ಯ, ಸಾಹಸ ತೋರಿದ ಮಹಿಳೆಗೆ ವೀರ ಮಹಿಳಾ ಪ್ರಶಸ್ತಿ ನೀಡಲಾಗುವುದು. 
  ಉತ್ತಮ ಸೇವಾ ಸಂಸ್ಥೆಗೆ ನೀಡಲಾಗುವ ಪ್ರಶಸ್ತಿಯು ರೂ. ೨೫೦೦೦ ಗಳ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.  ಅದೇ ರೀತಿ ಪ್ರತಿ ಕ್ಷೇತ್ರಕ್ಕೂ ನೀಡಲಾಗುವ ವಯಕ್ತಿಕ ಪ್ರಶಸ್ತಿ ಹಾಗೂ ವೀರ ಮಹಿಳಾ ಪ್ರಶಸ್ತಿಯು ತಲಾ ರೂ. ೧೦೦೦೦ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಅರ್ಹ ಸ್ವಯಂ ಸೇವಾ ಸಂಸ್ಥೆಗಳು, ಮಹಿಳೆಯರು ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಡಿ. ೩೧ ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error