ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ

 ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪತ್ರಿಕಾ ಮಾಧ್ಯಮ, ದೃಶ್ಯ, ಶ್ರವಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಮಾಧ್ಯಮ ಕಣ್ಗಾವಲು ಸಮಿತಿ ರಚಿಸಿ  ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಆದೇಶ ಹೊರಡಿಸಿದ್ದಾರೆ.
      ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೇಬಲ್ ನೆಟ್‌ವರ್ಕ್ ಮೂಲಕ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮದ ಮೂಲಕ  ಪ್ರಚಾರ ನಡೆಸುವುದಕ್ಕೆ ಮುನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಕೇಬಲ್ ಆಪರೇಟರ್‌ಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
     ಚುನಾವಣೆ ಸಂದರ್ಭದಲ್ಲಿ ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು  ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ನಿಯಂತ್ರಣಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸದಸ್ಯರಾಗಿದ್ದು ಜಿಲ್ಲಾ ವಾರ್ತಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
     ಕೇಬಲ್ ಆಪರೇಟರ್‌ಗಳಿಗೂ ಸಹ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಯಾವುದೇ ಬಗೆಯ ವಿಡಿಯೋ ಪ್ರಸಾರವನ್ನು ನಿರ್ಬಂಧಿಸಲಾಗಿದೆ.  ತಾವು ಪ್ರಸಾರ ಮಾಡುವ ಯಾವುದೇ ಚುನಾವಣಾ ಪ್ರಚಾರದ ವಿಷಯಕ್ಕೆ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಿಂದ ಅನುಮತಿ ಪಡೆಯಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರಗೊಳಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವಂತಹ ಯಾವುದೇ ಪ್ರಚಾರದ ವಿಡಿಯೋ ಅಥವಾ ಧ್ವನಿಮುದ್ರಿಕೆ ಪ್ರಸಾರಗೊಂಡಲ್ಲಿ ಅಂತಹ ಕೇಬಲ್ ಆಪರೇಟರ್‌ಗಳ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.  ಈಗಾಗಲೆ ಕೇಬಲ್ ನೆಟ್‌ವರ್ಕ್‌ನ ಎಲ್ಲ ಚಾನೆಲ್‌ಗಳನ್ನು ವೀಕ್ಷಿಸಲು ವಿಡಿಯೋ ವೀಕ್ಷಣಾ ತಂಡವನ್ನು ಆಯಾ ತಾಲೂಕು ಕೇಂದ್ರದಲ್ಲಿ ರಚಿಸಲಾಗಿದ್ದು, ಈ ತಂಡವು ಎಲ್ಲ ಕೇಬಲ್ ನೆಟ್‌ವರ್ಕ್‌ಗಳ ಕಾರ್ಯಕ್ರಮಗಳ ಪ್ರಸಾರದ ಬಗ್ಗೆ ನಿಗಾ ವಹಿಸಲಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ.  ಈ ವರದಿಯ ಆಧಾರದ ಮೇಲೆ ಅಂತಹ ಕೇಬಲ್ ನೆಟ್‌ವರ್ಕ್ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.
     ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ/ವಯಕ್ತಿಕ ಚುನಾವಣಾ ಪ್ರಚಾರವನ್ನು ವಿವಿಧ ಮಾಧ್ಯಮಗಳ ಮೂಲಕ ಮಾಡಲಿದ್ದು, ಇಂತಹ ಪ್ರಚಾರಗಳಲ್ಲಿ ನೈತಿಕತೆ, ಸಭ್ಯತೆ ಸೂಕ್ಷತೆ ಮೀರುವಂತಹ ಅಂಶಗಳನ್ನು ತಮ್ಮ ಪ್ರಚಾರಗಳಲ್ಲಿ ಬಿತ್ತರಿಸುವುದು ಹಾಗೂ ಜಾತಿ-ಮತಭೇದ ಸೃಷ್ಟಿಸುವಂತಹ ಯಾವುದೇ ಕಾರ್ಯಕ್ರಮ ಪ್ರಸಾರ ನಿಯಂತ್ರಿಸುವ ಸಲುವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪುಗಳ ಅನ್ವಯ  ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.  ಕೇಬಲ್ ನೆಟ್‌ವರ್ಕ್ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ನೀಡಬಯಸುವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.  ಅಂತಹ ಅರ್ಜಿಯು ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳನ್ನು ವಿದ್ಯುನ್ಮಾನ ರೂಪದಲ್ಲಿ (ಸಿ.ಡಿ) ಹಾಗೂ ಜೊತೆಗೆ ದೃಢೀಕೃತಗೊಂಡಿರುವ ಅದರ ಸಂಭಾಷಣೆಯ ಹಸ್ತಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.  ಇದಕ್ಕಾಗಿ ನಿಗದಿತ ನಮೂನೆಯನ್ನು  ಚುನಾವಣಾ ಆಯೋಗ ನಿಗದಿಪಡಿಸಿದ್ದು, ಈ ಅರ್ಜಿ ನಮೂನೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದಲ್ಲಿ ಲಭ್ಯವಿರುತ್ತದೆ.   ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗಕ್ಕೆ ಸಲ್ಲಿಸಬೇಕು.  ಅಂತಹ ಜಾಹೀರಾತನ್ನು ಪರಿಶೀಲಿಸಿ, ಪ್ರಚಾರ ವಿಷಯ ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಅರ್ಹತೆಯ ಪ್ರಮಾಣಪತ್ರ ನೀಡುವರು.
     ರಾಜ್ಯ ಚುನಾವಣಾ ಆಯೋಗವು ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಹೊರಡಿಸಿರುವ ಆದೇಶವನ್ನು ಎಲ್ಲ ಕೇಬಲ್ ಆಪರೇಟರ್‌ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.

Leave a Reply