ಅರಣ್ಯೀಕರಣ : ಪ್ರತಿ ವಿದ್ಯಾರ್ಥಿಗೊಂದು ಗಿಡ ದತ್ತು- ಆರ್.ಆರ್. ಜನ್ನು

 ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ೨೫ ಲಕ್ಷ ಗಿಡಗಳನ್ನು ನೆಟ್ಟು ಅರಣ್ಯೀಕರಣಗೊಳಿಸುವ ಅಭಿಯಾನದಡಿ, ಪ್ರತಿ ವಿದ್ಯಾರ್ಥಿ ಒಂದು ಗಿಡವನ್ನು ಸಂರಕ್ಷಿಸಿ, ಪೋಷಿಸುವ ಹೊಣೆಗಾರಿಯೊಂದಿಗೆ ಆ ಗಿಡವನ್ನು ದತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಹಾಗೂ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದೊಂದಿಗೆ ತಾಲೂಕಿನ ಟಣಕನಕಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯೀಕರಣ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಈ ವರ್ಷ ೨೫ ಲಕ್ಷ ಗಿಡಗಳನ್ನು ನೆಟ್ಟು ಹಸಿರನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಅರಣ್ಯೀಕರಣ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ರೋಟರಿ ಕ್ಲಬ್ ಕೈಜೋಡಿಸಿರುವುದು ಶ್ಲಾಘನೀಯವಾಗಿದೆ.  ಟಣಕನಕಲ್ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಟ್ಟು ೨೫೦ ವಿದ್ಯಾರ್ಥಿಗಳಿದ್ದು, ವಸತಿ ಶಾಲೆ ಆವರಣದಲ್ಲಿ ೨೫೦ ಗಿಡಗಳನ್ನು ನೆಡುತ್ತಿರುವುದು, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಉತ್ತೇಜನಕಾರಿಯಾಗಲಿದೆ.  ಪ್ರತಿ ವಿದ್ಯಾರ್ಥಿಗೂ ಒಂದು ಗಿಡವನ್ನು ಸಂರಕ್ಷಿಸಿ, ಪೋಷಿಸಿ, ಹೆಮ್ಮರವನ್ನಾಗಿಸುವ ನಿಟ್ಟಿನಲ್ಲಿ ಆ ಗಿಡವನ್ನು ದತ್ತು ನೀಡುವಂತೆ ತಿಳಿಸಿದರು.  ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳ ಆವರಣದಲ್ಲಿ ಜೊತೆಗೆ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಹಸಿರೀಕರಣಗೊಳಿಸಲು ಅಲ್ಲಿನ ಸ್ಥಳೀಯ ಸಂಸ್ಥೆಗಳು ಶ್ರಮಿಸಬೇಕಿದೆ.  ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಸಂರಕ್ಷಿಸುವುದರ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.  ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು, ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪಾಲಕರು, ಪೋಷಕರಿಗೆ ದುಂಬಾಲು ಬೀಳಬೇಕು.  ಇದರಿಂದ ಜಿಲ್ಲೆಯಲ್ಲಿ ಉತ್ತಮ ಪರಿಸರ ನಿರ್ಮಾಣವಾಗುವುದರ ಜೊತೆಗೆ, ಉತ್ತಮ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಅಲ್ಲದೆ ವಸತಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಅರಣ್ಯೀಕರಣಕ್ಕೆ ಚಾಲನೆ ನೀಡಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಆವರಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೊಂದರಂತೆ ಗಿಡಗಳನ್ನು ನೆಟ್ಟು, ಶಾಲಾ ವನಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.  ಶಾಲಾ, ಕಾಲೇಜುಗಳು, ಗ್ರಾಮ ಪಂಚಾಯತಿ, ಆಸ್ಪತ್ರೆಗಳು, ಸೇರಿದಂತೆ ಅವಕಾಶವಿರುವ ಎಲ್ಲ ಕಡೆಗಳಲ್ಲಿ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.  ಇದಕ್ಕಾಗಿ ಉದ್ಯೋಗಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು.  ಇದರಿಂದ ಕೂಲಿಕಾರರಿಗೆ ಉದ್ಯೋಗವೂ ಲಭಿಸಲಿದ್ದು, ಜಿಲ್ಲೆಯೂ ಹಸಿರಾಗಲಿದೆ.  ಶಾಲೆಗಳಲ್ಲಿ ಮಕ್ಕಳಿಗೆ ಗಿಡ-ಮರಗಳನ್ನು ಪ್ರೀತಿಯಿಂದ ಬೆಳೆಸಿ, ಉಳಿಸುವ ಬಗ್ಗೆ ತಿಳುವಳಿಕೆ ನೀಡಬೇಕು.  ಮಕ್ಕಳು ತಮ್ಮ ಜನ್ಮ ದಿನಾಚರಣೆಯನ್ನು ಒಂದು ಗಿಡ ನೆಡುವ ಮೂಲಕ ಆಚರಿಸಿದಲ್ಲಿ, ಅರ್ಥಪೂರ್ಣವಾಗಲಿದೆ.  ಈ ಮೂಲಕ ಮಕ್ಕಳ ಸೈನ್ಯವನ್ನು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡಬಹುದಾಗಿದೆ.  ಜಿಲ್ಲೆಯ ಎಲ್ಲ ಶಾಲೆಗಳು ಹಾಗೂ ವಸತಿ ಶಾಲೆಗಳ ಆವರಣದಲ್ಲಿ ಹೂದೋಟ, ಕೈತೋಟ, ವನ ನಿರ್ಮಾಣವಾಗಬೇಕೆನ್ನುವುದು ತಮ್ಮ ಆಶಯವಾಗಿದ್ದು, ಇದಕ್ಕಾಗಿ ಅಗತ್ಯವಿರುವ ಅನುದಾನ ಹಾಗೂ ಸಹಕಾರವನ್ನು ಜಿಲ್ಲಾ ಪಂಚಾಯತಿಯಿಂದ ಒದಗಿಸಲಾಗುವುದು.  ಶಾಲಾ ಮತ್ತು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೈಕಿ, ಶೌಚಾಲಯ ರಹಿತ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂದಿನ ಒಂದು ತಿಂಗಳ ಒಳಗೆ ಅಂತಹ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯ ಹೊಂದುವಂತೆ ಕ್ರಮ ಕೈಗೊಳ್ಳಲಾಗುವುದು.  ಒಟ್ಟಾರೆ ಜಿಲ್ಲೆಯಲ್ಲಿ ಈ ವರ್ಷ ೨೫ ಲಕ್ಷ ಗಿಡಗಳನ್ನು ನೆಟ್ಟು, ಅರಣ್ಯೀಕರಣ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
  ರೋಟರಿ ಕ್ಲಬ್ ಅಧ್ಯಕ್ಷ ವೀರಣ್ಣ ಕಮತರ್ ಅವರು, ಎಲ್ಲ ವಿದ್ಯಾರ್ಥಿಗಳು ಸದ್ಯ ನೆಡುವ ಗಿಡಗಳನ್ನು ಸಂರಕ್ಷಿಸಿ, ಉತ್ತಮವಾಗಿ ಬೆಳೆಸುವುದು ಹಾಗೂ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ಜಿ.ಪಂ. ಸದಸ್ಯೆ ವನಿತಾ ಗಡಾದ್, ತಾಲೂಕಾ ಪಂಚಾಯತಿ ಸದಸ್ಯ ರಮೇಶ್ ಚೌಡ್ಕಿ, ರೋಟರಿ ಕ್ಲಬ್ ಅಧ್ಯಕ್ಷ ವೀರಣ್ಣ ಕಮತರ್, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ಅರಣ್ಯಾಧಿಕಾರಿ ಶಿವಪ್ರಕಾಶ್, 
ಗಣ್ಯರಾದ ಡಾ. ಕೆ.ಜಿ. ಕುಲಕರ್ಣಿ, ಹಲಗೇರಿ ಚಂದ್ರು, ಸಿದ್ದಲಿಂಗಸ್ವಾಮಿ, ಇಂದಿರಾ ಬಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.  ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ವಿಜಯಕುಮಾರ್ ವಂದಿಸಿದರು.
Please follow and like us:
error