fbpx

ಹೆಚ್‌ಐವಿ ಪೀಡಿತರಿಗೆ ಸರ್ಕಾರಿ ಸೌಲಭ್ಯ ಸರಿಯಾಗಿ ತಲುಪಲಿ- ಕೃಷ್ಣ ಉದಪುಡಿ

ಜಿಲ್ಲೆಯಲ್ಲಿರುವ ಹೆಚ್‌ಐವಿ ಸೋಂಕಿತರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಿ, ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ೨೦೦೭ ರಿಂದ ಈವರೆಗೆ ಕೊಪ್ಪಳದ ಎಆರ್‌ಟಿ ಕೇಂದ್ರದಲ್ಲಿ ೬೯೩೮ ಮತ್ತು ಗಂಗಾವತಿಯ ಎಆರ್‌ಟಿ ಕೇಂದ್ರದಲ್ಲಿ ೨೧೯೦ ಸೇರಿದಂತೆ ಒಟ್ಟು ೯೧೨೮ ಹೆಚ್‌ಐವಿ ಸೋಂಕಿತರು ನೋಂದಣಿಯಾಗಿದ್ದಾರೆ.  ಹೆಚ್‌ಐವಿ ಸೋಂಕಿತರಿಗೆ ಅಥವಾ ಅವರ ಮಕ್ಕಳಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಬೇಕು.  ವಿಶೇಷ  ಪಾಲನಾ ಯೋಜನೆಯಡಿ ಜಿಲ್ಲೆಯ ಒಟ್ಟು ೩೯೨ ಮಕ್ಕಳಿಗೆ ಈಗಾಗಲೆ ಪ್ರತಿ ತಿಂಗಳು ೬೫೦ ರೂ. ವಿಶೇಷ ಮಾಸಿಕ ವೇತನ ಪಾವತಿಸಲಾಗುತ್ತಿದ್ದು, ಈ ಯೋಜನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನೂ ೩೨೨ ಮಕ್ಕಳಿಗೆ ಈ ಸೌಲಭ್ಯ ದೊರಕಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.  ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ನಿಟ್ಟಿನಲ್ಲಿ ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೂಡಲೆ ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಹೆಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುವ ಯಾವುದೇ ಬಗೆಯ ಪರೀಕ್ಷೆ ಅಥವಾ ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಜಿಲ್ಲಾಧಿಕಾರಿಗಳು ಈ ಹಿಂದೆ ಆದೇಶ ಹೊರಡಿಸಿದ್ದಾರೆ.  ಆದರೆ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಈ ಆದೇಶದ ಪಾಲನೆ ಆಗುತ್ತಿಲ್ಲ ಎಂದು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸುವ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.  
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು, ಜಿಲ್ಲೆಯಲ್ಲಿ ಒಟ್ಟು ೯೧೨೮ ಹೆಚ್‌ಐವಿ ಸೋಂಕಿತರು ಎಆರ್‌ಟಿ ಕೇಂದ್ರಗಳಲ್ಲಿ ನೋಂದಣಿಯಾಗಿದ್ದು, ಈ ಪೈಕಿ ೬೬೬೩ ಜನರು ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ.  ೧೮೭೬  ಹೆಚ್‌ಐವಿ ಸೋಂಕಿತರು ಇದುವರೆಗೂ ಮೃತಪಟ್ಟಿದ್ದಾರೆ.  ೪೮೫ ರೋಗಿಗಳು ಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟುಹೋಗಿದ್ದಾರೆ.  ಸದ್ಯ ಜಿಲ್ಲೆಯಲ್ಲಿ ೪೨೩೭ ಜನ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.  ಕಳೆದ ೨೦೧೪ ರ ಅಕ್ಟೋಬರ್ ರಿಂದ ಡಿಸೆಂಬರ್ ವರೆಗೆ ಜಿಲ್ಲೆಯಲ್ಲಿ ೧೧೨೪೧ ಜನರನ್ನು ಹೆಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ೨೧೫ ಜನರಲ್ಲಿ ಹೆಚ್‌ಐವಿ ಪಾಸಿಟೀವ್ ಕಂಡುಬಂದಿದೆ.  ಕೊಪ್ಪಳ ತಾಲೂಕಿನಲ್ಲಿ ೬೬, ಗಂಗಾವತಿ-೮೭, ಕುಷ್ಟಗಿ-೩೨, ಯಲಬುರ್ಗಾ ತಾಲೂಕಿನಲ್ಲಿ-೩೦ ಜನರಲ್ಲಿ ಹೆಚ್‌ಐವಿ ಪಾಸಿಟೀವ್ ಕಂಡುಬಂದಿದೆ.  ೧೦೧೧೭ ಗರ್ಭಿಣಿಯರ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ೧೪ ಮಹಿಳೆಯರಲ್ಲಿ ಹೆಚ್‌ಐವಿ ಪಾಸಿಟೀವ್ ಪತ್ತೆಯಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಸೇರಿದಂತೆ ಎಲ್ಲ ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!