ಲೇಖನಿಗೆ ವಿದಾಯ ಹೇಳಿದ ತಮಿಳು ಲೇಖಕ ಸಂಘಪರಿವಾರದ ಕಾಟ!

ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ತನಗನಿಸಿದ್ದನ್ನು ಬರೆಯುವ, ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ ಇಲ್ಲಿ ಎಲ್ಲರಿಗೂ ಇದೆ. ಯಾರದೋ ಮಾತು, ಬರವಣಿಗೆಯಿಂದ ಸಾಮಾಜಿಕ ಅಶಾಂತಿ ಉಂಟಾಗುವ ಸಂದರ್ಭ ಎದುರಾದರೆ ಅಂಥದನ್ನು ನಿರ್ಬಂಧಿಸಲು ಕಾನೂನುಗಳು ಇಲ್ಲಿವೆ. ಹಾಗೆಂದು ತಿಳಿದುಕೊಂಡು ಈ ಸ್ವಾತಂತ್ರ ಚಲಾಯಿಸಲು ಹೊರಟರೆ ಆ ಸ್ವಾತಂತ್ರಕ್ಕೆ ಏಟು ಕೊಡುವ ಸಂವಿಧಾನೇತರ ಶಕ್ತಿಗಳು ಇತ್ತೀಚಿನ ಎರಡು ದಶಕಗಳಲ್ಲಿ ಹುಟ್ಟಿಕೊಂಡಿವೆ. ತಾವು ಹೇಳಿದ್ದೇ ಕಾನೂನು ಎಂದು ಕಡಿವಾಣ ಹಾಕುವ ಈ ಶಕ್ತಿಗಳು ಜನತಂತ್ರಕ್ಕೂ ಅಪಾಯಕಾರಿಯಾಗಿ ಪರಿಣಮಿಸಿವೆ.
ದೇಶಕ್ಕೆ ಸ್ವಾತಂತ್ರ ಬಂದ ಹೊಸದರಲ್ಲಿ ಮಹಾತ್ಮಾಜೀಯನ್ನೇ ಬಲಿ ತೆಗೆದುಕೊಂಡ ಈ ಕರಾಳ ಶಕ್ತಿಗಳು ಮಹಾರಾಷ್ಟ್ರದಲ್ಲಿ ಅಂಧಶ್ರದ್ಧೆಯ ವಿರುದ್ಧ ಸಮರ ಸಾರಿದ ನರೇಂದ್ರ ದಾಬೋಳ್ಕರರನ್ನು ಹಾಡಹಗಲೇ ಕೊಂದು ಹಾಕಿದವು. ಉತ್ತರ ಭಾರತದ ಕಾಲೇಜೊಂದರ ಪ್ರಿನ್ಸಿಪಾಲರೊಬ್ಬರನ್ನು ಕೊಂದು ಹಾಕಿದವು. ಹೆಸರಾಂತ ಕಲಾವಿದ ಎಂ.ಎಫ್.ಹುಸೈನ್ ಅವರ ಆರ್ಟ್ ಗ್ಯಾಲರಿ ಮೇಲೆ 1996ರಲ್ಲಿ ಹಲ್ಲೆ ಮಾಡಿ ನಾಶ ಮಾಡಿದವು. ಕೊನೆಗೆ ಹುಸೈನ್ ಪ್ರಾಣಭೀತಿಗೊಳಗಾಗಿ ದೇಶವನ್ನೇ ತೊರೆದು ಹೋಗಬೇಕಾಯಿತು. ಇದೀಗ ತಮಿಳುನಾಡಿನ ಖ್ಯಾತ ಲೇಖಕರೊಬ್ಬರು ಈ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಲ್ಲಿ ಒಂದು ಪುಸ್ತಕ ಬರೆದು ಪ್ರಕಟಿಸಬೇಕಾದರೆ, ಒಂದು ಚಿತ್ರಬಿಡಿಸಬೇಕಾದರೆ, ಒಂದು ಸಿನೆಮಾ ತೆಗೆಯಬೇಕಾದರೆ, ಸರಕಾರದ ಸೆನ್ಸಾರ್ ಮಂಡಳಿಯ ಅನುಮತಿಗಿಂತ ಮೊದಲು ಸಂವಿಧಾನೇತರ ಅಧಿಕಾರ ಕೇಂದ್ರವೆಂದು ಹೆಸರಾದ ಸಂಘಪರಿವಾರದ ಒಪ್ಪಿಗೆ ಪಡೆಯಬೇಕು. ಇದಕ್ಕೆ ಪಿಕೆ ಸಿನೆಮಾ ಇತ್ತೀಚಿನ ಉದಾಹರಣೆ. ಸೆನ್ಸಾರ್ ಬೋರ್ಡ್ ಇದಕ್ಕೆ ಹಸಿರು ನಿಶಾನೆ ತೋರಿಸಿದರೂ ತೊಗಾಡಿಯಾ ಗ್ಯಾಂಗ್ ಪುಂಡಾಟಿಕೆಗೆ ಇಳಿಯಿತು. ಪಿಕೆ ವಿಷಯದಲ್ಲಿ ಅದು ವಿಫಲಗೊಂಡರೂ ಸುಮ್ಮನೆ ಕುಳಿತಿಲ್ಲ. ಸದಾ ವಿವಾದಗಳಿಗಾಗಿ ಹುಡುಕುತ್ತಲೇ ಇರುವ ಸಂಘಪರಿವಾರದ ಗ್ಯಾಂಗು ಒಂದು ಸಣ್ಣ ನೆಪ ಸಿಕ್ಕರೂ ಸುಮ್ಮನೆ ಬಿಡುವುದಿಲ್ಲ. ತನ್ನ ಕೋಮುವಾದಿ ಅಜೆಂಡಾದ ಸುತ್ತಲೇ ಎಲ್ಲರೂ ಗಾಣದ ಎತ್ತಿನಂತೆ ಸುತ್ತು ಹೊಡೆಯುವಂಥ ವಾತಾವರಣವನ್ನು ಸೃಷ್ಟಿಸುತ್ತದೆ. ತಮಿಳುನಾಡಿನಲ್ಲಿ ಇಂಥ ವಿವಾದವೊಂದನ್ನು ಅದು ಈಗ ಹುಟ್ಟು ಹಾಕಿದೆ. ಪೆರುಮಾಳ್ ಮುರುಗನ್ ತಮಿಳುನಾಡಿನ ಹೆಸರಾಂತ ಕಾದಂಬರಿಕಾರ, ಸಂಘಪರಿವಾರದ ಕೋಮುವಾದಿ ಶಕ್ತಿಗಳಿಂದ ಹಲ್ಲೆಗೊಳಗಾದ ಈ ಸಾಹಿತಿ ಈಗ ಬರವಣಿಗೆಗೆ ವಿದಾಯ ಹೇಳುವುದಾಗಿ ಪ್ರಕಟಿಸಿದ್ದಾರೆ. ‘‘ಲೇಖಕ ಪೆರುಮಾಳ್ ಮುರುಗನ್ ಸತ್ತಿದ್ದಾನೆ. ದೇವರಲ್ಲಿ, ಪುನರ್ಜನ್ಮದಲ್ಲಿ ಈತನಿಗೆ ನಂಬಿಕೆ ಇಲ್ಲ. ಇನ್ನು ಮುಂದೆ ಈತ ಸಾಮಾನ್ಯ ಶಾಲಾ ಶಿಕ್ಷಕನಾಗಿ ಪಿ.ಮುರುಗನ್ ಆಗಿ ತನ್ನ ಪಾಡಿಗೆ ತಾನು ಒಂಟಿಯಾಗಿ ಬದುಕುತ್ತಾನೆ’’ ಎಂದು ತನ್ನ ಫೇಸ್‌ಬುಕ್‌ನಲ್ಲಿ ಇವರು ಪ್ರಕಟಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮಗಳು ಹುಡುಕಾಡಿದರೆ ಈ ಮುರುಗನ್ ನಾಪತ್ತೆಯಾಗಿದ್ದಾರೆ. ‘ತುಂಬ ನೋವಿನಿಂದ ಬರವಣಿಗೆಗೆ ವಿದಾಯ ಹೇಳುವ ಈ ತೀರ್ಮಾನವನ್ನು ಮುರುಗನ್ ಕೈಗೊಂಡಿದ್ದಾರೆ’ ಎಂದು ಅವರ ಸ್ನೇಹಿತರು ಹೇಳುತ್ತಾರೆ. ಅಷ್ಟಕ್ಕೂ ಈ ತೀರ್ಮಾನಕ್ಕೆ ಪೆರುಮಾಳ್ ಏಕೆ ಬಂದರು? ಇಂದು ಬರೆದ ‘ಮಧೋರು ಭಗನ್’ (ಅರ್ಧನಾರೀಶ್ವರ) ಕಾದಂಬರಿ ವಿರುದ್ಧ ಸಂಘಪರಿವಾರದ ಕೋಮುವಾದಿಗಳು ಗಲಾಟೆ ಆರಂಭಿಸಿ ಹಿಂಸಾತ್ಮಕ ವಾತಾವರಣ ನಿರ್ಮಿಸಿದ ನಂತರ ತುಂಬ ನೋವಿನಿಂದ ಈ ರೀತಿ ಇವರು ಭೂಗತರಾಗಿದ್ದಾರೆ. ಪೆರುಮಾಳ್ 2010ರಲ್ಲಿ ಬರೆದ ಮಧೋರು ಭಗನ್ ಕಾದಂಬರಿ ತುಂಬ ಜನಪ್ರಿಯತೆ ಗಳಿಸಿದೆ. ಪೆಂಗ್ವಿನ್ ಪ್ರಕಾಶನ ಇಂಗ್ಲಿಷ್‌ನಲ್ಲಿ ಅನುವಾದಿಸಲ್ಪಟ್ಟ ಈ ತಮಿಳು ಕಾದಂಬರಿಯನ್ನು ಪ್ರಕಟಿಸಿದೆ. ಅನಿರುದ್ಧ ವಾಸುದೇವನ್ ಇದನ್ನು ತಮಿಳಿನಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದಕ್ಕಾಗಿ ಕೆನಡಾ ಸಾಹಿತ್ಯ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಈ ಎಲ್ಲ ಹಿನ್ನೆಲೆ ಹೊಂದಿದ ಕೃತಿಯನ್ನು ಸ್ವತಃ ಲೇಖಕರೆ ವಾಪಸು ಪಡೆದು ನಾಪತ್ತೆಯಾಗುವ ಸ್ಥಿತಿಯನ್ನು ಈ ಕರಾಳ ಶಕ್ತಿಗಳು ನಿರ್ಮಿಸಿವೆ. ಸಾಹಿತ್ಯ ಕೃತಿಯೊಂದರ ಬಗ್ಗೆ ಈ ರೀತಿ ಅಸಹನೆ ವ್ಯಕ್ತವಾಗಿರುವುದು, ಅಶಾಂತಿಯ ವಾತಾವರಣ ಉಂಟಾಗಿರುವುದು ಮುರುಗನ್‌ರನ್ನು ಆತಂಕಕ್ಕೀಡು ಮಾಡಿದೆ. ತನ್ನ ಪುಸ್ತಕವನ್ನು ಬೆಳಕಿಗೆ ತಂದ ಪ್ರಕಾಶಕರಿಗೆ ಇದರಿಂದ ನಷ್ಟ ಉಂಟಾಗಿದ್ದರೆ ಆ ನಷ್ಟವನ್ನು ತಾನು ತುಂಬಿಕೊಡುವುದಾಗಿ ಈ ಲೇಖಕ ಪ್ರಕಟಿಸಿದ್ದಾರೆ. ಈ ಕುರಿತು ನಮಕ್ಕಲ್ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಶಾಂತಿ ಸಂಧಾನ ಸಭೆಯಲ್ಲಿ ಬೇಷರತ್ ಕ್ಷಮೆಯಾಚಿಸಿದ ಪೆರುಮಾಳ್ ಸಂಘಪರಿವಾರ ಆಕ್ಷೇಪಿಸಿದ ಭಾಗಗಳನ್ನು ಪುಸ್ತಕದಿಂದ ತೆಗೆದು ಹಾಕುವುದಾಗಿ ಹೇಳಿದರು. ಈ ಕಾದಂಬರಿಯಲ್ಲಿ ಸಂಘಪರಿವಾರ ಹುಡುಕಿದ ತಪ್ಪು ಯಾವುದು? ಇದು ಮಕ್ಕಳಿಲ್ಲದ ದಂಪತಿಯ ಕತೆ. ನಮಕ್ಕಲ್ ಜಿಲ್ಲೆಯ ತಿರುಚೆಂಗೂಡಿನ ಬೆಟ್ಟದ ಮೇಲಿರುವ ಆರ್ಧನಾರೀಶ್ವರ ಮಂದಿರಕ್ಕೆ ಬೇಡಿಕೊಂಡ ಪರಿಣಾಮವಾಗಿ ಈ ದಂಪತಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ. ಕಾದಂಬರಿಯಲ್ಲಿ ಇವೆಲ್ಲ ನಡೆದದ್ದು 75 ವರ್ಷಗಳ ಹಿಂದೆ. ಈ ಕಥಾವಸ್ತು ಈಗ ವಿವಾದದ ಕಿಡಿ ಹೊತ್ತಿಸಿದೆ. ಬೆಟ್ಟದ ಮೇಲಿರುವ ಈ ಅರ್ಧನಾರೀಶ್ವರನಿಗೆ ಬೇಡಿಕೊಂಡ ಮಾತ್ರಕ್ಕೆ ಮಕ್ಕಳಾಗುವುದಿಲ್ಲ. ಇದಕ್ಕಾಗಿ ಕತ್ತಲಲ್ಲಿ ದೇವಾಲಯದ ಪ್ರದಕ್ಷಿಣೆ ಮಾಡಬೇಕಾಗುತ್ತದೆ. ಆಗ ಅಪರಿಚಿತ ವ್ಯಕ್ತಿ ದೇವರ ರೂಪದಲ್ಲಿ ಬಂದು ವರ ನೀಡುತ್ತಾನೆ. ಈ ರೀತಿ ನಂಬಿಕೆ ತಿರುಚೆಂಗೂಡಿನಲ್ಲಿ ಈ ಹಿಂದೆ ಇತ್ತು. ಇದನ್ನೆ ಕಥಾ ವಸ್ತುವಾಗಿ ಮುರುಗನ್ ತಮ್ಮ ಕಾದಂಬರಿಗೆ ಬಳಸಿಕೊಂಡರು. ಇದು ಪ್ರಕಟವಾಗಿ ನಾಲ್ಕು ವರ್ಷವಾದರೂ ಯಾವ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಸದಾ ವಿವಾದಗಳಿಗಾಗಿ ಹುಡುಕುತ್ತಿರುವ ಕೋಮುವಾದಿಗಳಿಗೆ ಅಶಾಂತಿ ಉಂಟು ಮಾಡಲು ಇದೊಂದು ನೆಪವಾಗಿದೆ. ತಮಿಳುನಾಡು ಒಂದು ಕಾಲದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರರ ವಿಚಾರವಾದಿ ಚಳವಳಿಯ ತಾಣವಾಗಿತ್ತು. ಇದು ಐದು ದಶಕಗಳ ಹಿಂದೆ ಎಷ್ಟು ತೀವ್ರವಾಗಿತ್ತೆಂದರೆ ಪೆರಿಯಾರರು ಬ್ರಾಹ್ಮಣ ದೇವರುಗಳಿಗೆ ಚಪ್ಪಲಿ ಪೂಜೆ ಮಾಡುವಷ್ಟು, ಜನಿವಾರ ಹರಿಯುವಷ್ಟು ಅತಿರೇಕಕ್ಕೆ ಹೋಗಿತ್ತು. ಆಗ ಆರೆಸ್ಸೆಸ್ ಇಲ್ಲಿ ವಿಳಾಸಕ್ಕೂ ಇರಲಿಲ್ಲ. ಆದರೆ ದ್ರಾವಿಡ ಚಳವಳಿ ಹೆಸರಿಗೆ ಮಾತ್ರ ಉಳಿದಿದೆ. ದ್ರಾವಿಡ ಪಕ್ಷಗಳು ಚುನಾವಣಾ ರಾಜಕಾರಣದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿವೆ. ಹೀಗಾಗಿ ಪೆರುಮಾಳರಂಥ ಲೇಖಕರು ಭೂಗತರಾಗಬೇಕಾಗಿ ಬಂದಿದೆ. ತಮಿಳುನಾಡಿನ ಪ್ರಗತಿಶೀಲ ಲೇಖಕರ ಸಂಘ ಪೆರುಮಾಳರ ಬೆಂಬಲಕ್ಕೆ ನಿಂತರೂ ಕೋಮುವಾದಿಗಳ ಪುಂಡಾಟಿಕೆ ಎದುರು ಈ ಬೆಂಬಲ ಪ್ರಯೋಜನಕ್ಕೆ ಬರಲಿಲ್ಲ. ದ್ರಾವಿಡ ಪಕ್ಷಗಳು ಬಾಯಿ ಬಿಡಲಿಲ್ಲ. ಹೀಗಾಗಿ ಶರಣಾಗತಿಯೊಂದೆ ಪೆರುಮಾಳರಿಗೆ ಉಳಿದ ಮಾರ್ಗವಾಗಿತ್ತು. ಇದು ಜಾತ್ಯತೀತ ಜನತಂತ್ರ ಭಾರತದ ಇಂದಿನ ಸ್ಥಿತಿ. ಈ ದೇಶ ಮುಂದೆಲ್ಲಿ ತಲುಪುವುದೋ ಯಾರಿಗೆ ಗೊತ್ತು?

Leave a Reply