ಬೆಂಗಳೂರಿನಲ್ಲಿ ಫ್ಲೆಕ್ಸ್, ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧಕ್ಕೆ ಸರ್ಕಾರ ತೀರ್ಮಾನ

ಬೆಂಗಳೂರು :ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಅಂತೆಯೇ, ರಾಜ್ಯವ್ಯಾಪೀ ಪ್ಲಾಸ್ಟಿಕ್ ಕೈಚೀಲಗಳನ್ನೂ ನಿಷೇಧಿಸುವ ನಿರ್ಧಾರವನ್ನೂ ಕೂಡಾ ಸರ್ಕಾರ ಕೈಗೊಂಡಿದೆ. ಪ್ಲಾಸ್ಟಿಕ್ ಕೈಚೀಲಗಳ ನಿಷೇಧ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೊದಲಿಗೆ ಜಾರಿಗೆ ಬರಲಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸಂಜೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಸಭೆಯ ನಂತರ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ಇತ್ತೀಚೆಗೆ ನಗರದಲ್ಲಿ ಫ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಲೋಕಾಯುಕ್ತರಿಂದಲೂ ಅಸಮಾಧಾನ ವ್ಯಕ್ತವಾಗಿದೆ. ಸಾರ್ವಜನಿಕರಿಂದಲೂ ತೀವ್ರ ಆಕ್ಷೇಪ ಬಂದಿದೆ. ಈ ಹಿನ್ನೆಲೆಯಲ್ಲಿ ನಿಷೇಧದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಸಧ್ಯದಲ್ಲಿಯೇ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.ಸರ್ಕಾರಿ ಆದೇಶ ಹೊರಬಿದ್ದ ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ಗಳನ್ನು ಹಾಕುವಂತಿಲ್ಲ. ಇದಕ್ಕಾಗಿಯೇ ಪರವಾನಗಿ ಹೊಂದಿದ ಜಾಹೀರಾತು ಫಲಕಗಳನ್ನು ಬಳಸಿಕೊಳ್ಳಬಹುದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ಫ್ಲೆಕ್ಸ್ ಹಾಕಿದವರೂ ಹಾಗೂ ಫ್ಲೆಕ್ಸ್ ಮುದ್ರಿಸಿದವರೂ, ಈ ಇಬ್ಬರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು  ಸಿದ್ದರಾಮಯ್ಯ ಅವರು ತಿಳಿಸಿದರು.ರಾಜ್ಯದಲ್ಲಿ, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ, ಪ್ಲಾಸ್ಟಿಕ್ ಕೈಚೀಲ ನಿಷೇಧಿಸುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕು. ಹೊರ ರಾಜ್ಯಗಳಿಂದ ಬರುವ ಪ್ಲಾಸ್ಟಿಕ್ ಕೈಚೀಲಗಳನ್ನು ತಡೆಯುವ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.

Please follow and like us:

Related posts

Leave a Comment