ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳ ನೋಂದಣಿ ಕಡ್ಡಾಯ- ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚನೆ.

ಕೊಪ್ಪಳ ಫೆ. ೨೭ (ಕರ್ನಾಟಕ ವಾರ್ತೆ) ಬಾಲ ನ್ಯಾಯ ಕಾಯ್ದೆ-೨೦೦೦, ತಿದ್ದುಪಡಿ ಕಾಯ್ದೆ-೨೦೦೬ ರ ಅನ್ವಯ ಎಲ್ಲಾ ರೀತಿಯ ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಯಧಾಮಗಳು, ತೆರೆದ ತಂಗುದಾಣಗಳು, ನಿರ್ಗತಿಕ ಮಕ್ಕಳ ಕುಟೀರ, ಬಾಲಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರಗಳು, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳು, ಅರ್ಹ ಸಂಸ್ಥೆಗಳು (ಶೈಕ್ಷಣಿಕ ಸಂಸ್ಥೆಗಳ ವಸತಿ ಶಾಲೆಗಳನ್ನು ಹೊರತುಪಡಿಸಿ) ಎಲ್ಲ ರೀತಿಯ ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳನ್ನು ಬಾಲ ನ್ಯಾಯ ಕಾಯ್ದೆ-೨೦೦೦, ತಿದ್ದುಪಡಿ ಕಾಯ್ದೆ-೨೦೦೬ ರ ಅನ್ವಯ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.  ಆದರೆ ಈ ಕಾಯ್ದೆಯಡಿ ನೋಂದಣಿಯಾಗದೆ, ಮಕ್ಕಳಿಗಾಗಿ ಸಂಸ್ಥೆಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.  ಸರ್ವೋಚ್ಛ ನ್ಯಾಯಾಲಯವು ‘ಬಜ್‌ಪನ್ ಬಚಾವೋ’ ಆಂದೋಲನದ ಅಂಗವಾಗಿ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿದಂತೆ, ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ, ಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳು ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಾತ್ರ ಮಕ್ಕಳನ್ನು ರಕ್ಷಣೆಗೆ ದಾಖಲು ಮಾಡಬೇಕಾಗಿರುತ್ತದೆ.  ನೇರವಾಗಿ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ಈಗಾಗಲೆ ನ್ಯಾಯಾಲಯ ಸ್ಪಷ್ಟಪಡಿಸಿದೆ.  ಅಲ್ಲದೆ ಈ ರೀತಿಯ ಸಂಸ್ಥೆಗಳು ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ ೨೦೦೦ ರಡಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ.  ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಇದುವರೆಗೂ ನೋಂದಣಿ ಮಾಡಿಸದೇ ಇರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೂಡಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ನಿಗದಿತ ನಮೂನೆಯನ್ನು ಪಡೆದು ಒಂದು ತಿಂಗಳ ಒಳಗಾಗಿ ನೋಂದಣಿಗೆ ಪ್ರಸ್ತಾವನೆ ಸಲ್ಲಿಸಬೇಕು.  ಈಗಾಗಲೆ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾಗಿದ್ದ ಸಂಸ್ಥೆಗಳ ನೋಂದಣಿ ಅವಧಿ ಮುಗಿದಿದ್ದಲ್ಲಿ, ಕೂಡಲೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.  ತಪ್ಪಿದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ ೩೪೦ ರಡಿ ಅಕ್ರಮ ಬಂಧನವೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ಸಂಸ್ಥೆಯನ್ನು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ, ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು.  ಒಂದು ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಾ. ೦೫ ರಂದು ಮುಧೋಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಕೊಪ್ಪಳ ಫೆ. ೨೭ (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುರು ಪುಟ್ಟರಾಜ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾ. ೦೫ ರಂದು ಸಂಜೆ ೦೬ ಗಂಟೆಗೆ ಮುಧೋಳ ಸರ್ಕಾರಿ ಐಟಿಐ ಕಾಲೇಜು ವೇದಿಕೆಯಲ್ಲಿ ಜರುಗಲಿದೆ.ಜಿ.ಪಂ. ಸದಸ್ಯೆ ನೀಲಮ್ಮ ಅಡಿವೆಪ್ಪ ಭಾವಿಮನಿ ಉದ್ಘಾಟನೆ ನೆರವೇರಿಸುವರು.  ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ತಳವಾರ ಅಧ್ಯಕ್ಷತೆ ವಹಿಸುವರು.  ತಾ.ಪಂ. ಸದಸ್ಯೆ ಹನಮಂತವ್ವ ಶರಣಪ್ಪ ಹಿರೇಮನಿ, ಗ್ರಾ.ಪಂ. ಉಪಾಧ್ಯಕ್ಷೆ ಯಲ್ಲವ್ವ ಶರಣಪ್ಪ ಹಿರೇಹಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
Please follow and like us:
error