fbpx

‘ಅಲ್ಲಾಬಕ್ಷ್’ಭಾರತ ಸ್ವಾತಂತ್ರ ಸಂಗ್ರಾಮದ ಅಜ್ಞಾತ ಹುತಾತ್ಮ

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹುತಾತ್ಮರಾದವರಲ್ಲಿ ಅಲ್ಲಾಬಕ್ಷ್ ಅಜ್ಞಾತರಾಗುಳಿದ ಪ್ರಖ್ಯಾತ ಹೋರಾಟಗಾರರಾಗಿದ್ದರು.ಅವರು ಸ್ವತಂತ್ರ ಹಾಗೂ ಸರ್ವರನ್ನೊಳಗೊಂಡ ಭಾರತಕ್ಕಾಗಿ ಬಲಿದಾನ ಮಾಡಿದ್ದರು. 2013ನೆ ಮೇ 14ರಂದು ಅಲ್ಲಾ ಬಕ್ಷ್‌ರು ಹುತಾತ್ಮರಾಗಿ 70 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಬೆಳಕಿಗೆ ಬಾರದ ಅವರ ತ್ಯಾಗದ ನೆನಪನ್ನು ಮಾಡುವುದು ಸಕಾಲಿಕವಾಗಿದೆ.1942ರ ಕ್ವಿಟ್ ಇಂಡಿಯಾ ಚಳವಳಿಯ ದಿನಗಳಲ್ಲಿ ಅಲ್ಲಾ ಬಕ್ಷ್ ಸಿಂಧ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದರು. ಅವರು ಸಿಂಧ್‌ನ ಎಲ್ಲರನ್ನೂ ಪ್ರತಿನಿಧಿಸುವ ‘ಇತ್ತೇಹಾದ್ ಪಾರ್ಟಿ’ಯ ಮುಖ್ಯಸ್ಥರಾಗಿದ್ದು, ಸಿಂಧ್‌ನ ಮುಸ್ಲಿಂ ಬಾಹುಳ್ಯದ ಪ್ರಾಂತದಲ್ಲೂ ಮುಸ್ಲಿಂ ಲೀಗ್ ಕಾಲೂರುವುದನ್ನು ತಡೆದಿದ್ದರು.ಅಲ್ಲಾಬಕ್ಷ್ ಮತ್ತವರ ಪಕ್ಷವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಂಗವಾಗಿರಲಿಲ್ಲ. ಆದರೂ, ಭಾರತದ ಸ್ವಾತಂತ್ರ ಹೋರಾಟ ಹಾಗೂ ಕ್ವಿಟ್ ಇಂಡಿಯಾ ಚಳವಳಿಗಳ ಕುರಿತು ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ಲರು ಅಲ್ಲಿನ ಸಂಸತ್ತಿನಲ್ಲಿ ನೀಡಿದ್ದ ನಿಂದನಾತ್ಮಕ ಹೇಳಿಕೆಯನ್ನು ವಿರೋಧಿಸಿ ಅವರು, ಬ್ರಿಟಿಷ್ ಸರಕಾರ ತನಗೆ ನೀಡಿದ್ದ ಎಲ್ಲ ಬಿರುದುಗಳನ್ನು ಹಿಂದಿರುಗಿಸಿದ್ದರು.
ಈ ರೀತಿ ಮಾಡಿದ ವೇಳೆ ಅವರು, ‘‘ಇದು ಬ್ರಿಟಿಷ್ ಸರಕಾರ ಅಧಿಕಾರವನ್ನು ಬಿಟ್ಟುಕೊಡಲು ಬಯಸುವುದಿಲ್ಲವೆಂಬ ಭಾವನೆಯ ಒಪ್ಪಂದದ ಫಲಿತಾಂಶವಾಗಿದೆ. ಚರ್ಚಿಲ್ಲರ ಭಾಷಣವು ಎಲ್ಲ ಆಶಾವಾದವನ್ನು ಹುಡಿಗುಟ್ಟಿದೆ’’ ಎಂದಿದ್ದರು. ಬಕ್ಷ್‌ರ ಈ ಪ್ರತಿಭಟನೆಯನ್ನು ಅರಗಿಸಿಕೊಳ್ಳಲು ಬ್ರಿಟಿಷ್ ಆಡಳಿತದಿಂದ ಸಾಧ್ಯವಾಗಲಿಲ್ಲ. ಇದರ ಫಲಿತಾಂಶವಾಗಿ 1942ರ ಅಕ್ಟೋಬರ್ 10ರಂದು ರಾಜ್ಯಪಾಲ ಸರ್ ಹಫ್‌ಡೌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದರು.
ಹಿಂದೂ ಮಹಾಸಭಾ, ವಿ.ಡಿ. ಸಾವರ್ಕರ್ ಹಾಗೂ ಆರೆಸ್ಸೆಸ್‌ನೊಂದಿಗೆ ಸಂಬಂಧ ಹೊಂದಿದ್ದ ನಾತೂರಾಮ್ ಗೋಡ್ಸೆ, 1948ರ ಜ.30ರಂದು ಮಹಾತ್ಮ ಗಾಂಧಿಯವರ ಹತ್ಯೆ ನಡೆಸಿದನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಸ್ವಾತಂತ್ರದ ಅಗ್ರ ಹೋರಾಟಗಾರ ಹಾಗೂ ಭಾರತ ವಿಭಜನೆಯ ತೀವ್ರ ವಿರೋಧಿಯಾಗಿದ್ದ ಅಲ್ಲಾ ಬಕ್ಷ್‌ರನ್ನು ಮುಸ್ಲಿಂ ಲೀಗ್‌ನಿಂದ ಸುಪಾರಿ ಪಡೆದಿದ್ದ ವೃತ್ತಿಪರ ಕೊಲೆಗಡುಕರು 1943ರ ಮೇ 14ರಂದು ಸಿಂಧ್‌ನಲ್ಲಿ ಹತ್ಯೆ ನಡೆಸಿದರೆಂಬುದು ಎಷ್ಟು ಜನರಿಗೆ ತಿಳಿದಿದೆ?
ಪಾಕಿಸ್ತಾನ ರಚನೆಯ ವಿರುದ್ಧ ಭಾರತದಾದ್ಯಂತ ಸಾಮಾನ್ಯ ಮುಸ್ಲಿಂ ವರ್ಗದ ಭಾರೀ ಬೆಂಬಲವನ್ನು ಒಟ್ಟುಗೂಡಿಸಲು ಬಕ್ಷ್ ಸಮರ್ಥರಾಗಿದ್ದರೆಂಬ ಕಾರಣಕ್ಕಾಗಿಯೇ ಅವರ ಕೊಲೆ ನಡೆದಿತ್ತು. ಅಲ್ಲದೆ ಇಸ್ಲಾಮಿಕ್ ಪ್ರಾಂತವಾಗಿದ್ದ ಸಿಂಧ್‌ನ ಹೊರತಾಗಿ ಪಾಕಿಸ್ತಾನದ ರಚನೆಯು ಆಗುವಂತಿರಲಿಲ್ಲ. ಜಾತ್ಯತೀತರಾಗಿದ್ದ ಬಕ್ಷ್ ಹಾಗೂ ಸಿಂಧ್‌ನಲ್ಲಿ ಅವರಿಗಿದ್ದ ಜನ ಬೆಂಬಲ ಪಾಕಿಸ್ತಾನ ನಿರ್ಮಾಣಕ್ಕೆ ದೊಡ್ಡ ತಡೆಗೋಡೆಯಾಗಿತ್ತು.
1942ರಲ್ಲಿ ಅಲ್ಲಾಬಕ್ಷ್ ಸರಕಾರದ ಉಚ್ಚಾಟನೆ ಹಾಗೂ 1943ರಲ್ಲಿ ಅವರ ಹತ್ಯೆ, ಸಿಂಧ್‌ನೊಳಗೆ ಮುಸ್ಲಿಂ ಲೀಗ್‌ನ ಪ್ರವೇಶಕ್ಕೆ ದಾರಿ ತೆರೆದುಕೊಟ್ಟಿತ್ತು. ಬ್ರಿಟಿಷ್ ಸರಕಾರವು ಸಿಂಧ್‌ನಲ್ಲಿ ಮುಸ್ಲಿಂ ಲೀಗ್ ಹಾಗೂ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ನೇತೃತ್ವದ ಮೈತ್ರಿ ಸರಕಾರವನ್ನು ನೇಮಿಸಿತ್ತು. ಅದೇ ಸಮಯದಲ್ಲಿ ಈ ಎರಡು ಪಕ್ಷಗಳು ಬಂಗಾಳ ಹಾಗೂ ಈಶಾನ್ಯ ಮುಂಚೂಣಿ ಪ್ರಾಂತದಲ್ಲೂ ಮೈತ್ರಿ ಸರಕಾರಗಳನ್ನು ನಡೆಸುತ್ತಿದ್ದವು.
ಸಿಂಧ್‌ನಲ್ಲಿ ಅಲ್ಲಾ ಬಕ್ಷ್ ಹಾಗೂ ಅವರಂತಹ ಕೋಮು ವಿರೋಧಿ ರಾಜಕೀಯಗಳ ನಿರ್ಮೂಲನೆಗೆ ಬ್ರಿಟಿಷ್ ಆಡಳಿತಗಾರರು, ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾಸಭಾಗಳು ಬಹಿರಂಗವಾಗಿ ಒಂದುಗೂಡಿರುವುದನ್ನು ಕಾಣಬಹುದಿತ್ತು. ಆಝಾದ್ ಮುಸ್ಲಿಂ ಕಾನ್ಫರೆನ್ಸ್, ಹೆಸರಿನಲ್ಲಿ ಕೆಳವರ್ಗದ ಹಾಗೂ ಹಿಂದುಳಿದ ಜಾತಿಗಳ ಮುಸ್ಲಿಮರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವಲ್ಲಿ ಮುಹಮ್ಮದ್ ಇಬ್ರಾಹೀಂ, ಹಿಘ್ಝರ್ರಹ್ಮಾನ್, ಎಂ.ಎಂ. ಅನ್ನಾಂ ಹಾಗೂ ಇಶಾಕ್ ಸಂಭವಿಯವರಂತಹ ಮುಸ್ಲಿಂ ನಾಯಕರೊಂದಿಗೆ ಕೈಜೋಡಿಸಿದುದು ಬಹುಶಃ ಬಕ್ಷ್ ಕೋಮು ರಾಜಕೀಯ ಹಾಗೂ ದ್ವಿರಾಷ್ಟ್ರ ರಾಜಕೀಯಗಳ ವಿರುದ್ಧ ನೀಡಿದ್ದ ಬಹುದೊಡ್ಡ ಕೊಡುಗೆಯಾಗಿತ್ತು.

ಆಝಾದ್ ಮುಸ್ಲಿಂ ಕಾನ್ಫರೆನ್ಸ್ 1940ರ ಎ.27ರಿಂದ 30ರವರೆಗೆ ದಿಲ್ಲಿಯಲ್ಲಿ ಸಮ್ಮೇಳನವೊಂದನ್ನು ನಡೆಸಿದ್ದು, ಅದರಲ್ಲಿ ಭಾರತದ ಸುಮಾರು ಎಲ್ಲ ಭಾಗಗಳಿಂದ 1,400ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಮುಸ್ಲಿಂ ಲೀಗ್ ಪರವಾಗಿದ್ದ ಬ್ರಿಟಿಷ್ ಪತ್ರಿಕೆಗಳು ಅದೊಂದು ಭಾರತೀಯ ಮುಸ್ಲಿಮರ ಬಹುದೊಡ್ಡ ಸಮ್ಮೇಳನವೆಂಬುದನ್ನು ಒಪ್ಪಿಕೊಳ್ಳಲೇಬೇಕಾಯಿತು. ಈ ಮಹತ್ವದ ಸಮ್ಮೇಳನದ ಅಧ್ಯಕ್ಷತೆಯನ್ನು ಅಲ್ಲಾಬಕ್ಷ್‌ರೇ ವಹಿಸಿದ್ದು, ಭಾರತವು ಅಖಂಡ ಭೂಭಾಗವಾಗಿ ಭೌಗೋಳಿಕ ಹಾಗೂ ರಾಜಕೀಯ ಗಡಿಗಳನ್ನು ಹೊಂದಿರಬೇಕು ಹಾಗೂ ಮತ-ಜನಾಂಗ ಭೇದವಿಲ್ಲದೆ ಎಲ್ಲ ನಾಗರಿಕರ ಸಾಮಾನ್ಯ ಅಖಂಡ ಭೂಮಿಯಾಗಿರಬೇಕೆಂಬ ನಿರ್ಣಯವನ್ನು ಸಮ್ಮೇಳನ ಅಂಗೀಕರಿಸಿತ್ತು.
ಪಾಕಿಸ್ತಾನ ರಚನೆಯ ಯೋಜನೆ ಅಪ್ರಾಯೋಗಿಕ ಹಾಗೂ ಸಮಷ್ಠಿಯಲ್ಲಿ ದೇಶದ ಹಾಗೂ ದೃಷ್ಟಿಯಲ್ಲಿ ಮುಸ್ಲಿಮರ ಹಿತಾಸಕ್ತಿಗೆ ಅಪಾಯಕಾರಿಯೆಂಬ ನಿರ್ಣಯವನ್ನೂ ಅದು ಕೈಗೊಂಡಿತ್ತು.ಮುಸ್ಲಿಂ ಲೀಗ್ ಮತ್ತದರ ಕೋಮು ರಾಜಕೀಯವನ್ನು ವಿರೋಧಿಸುವಲ್ಲಿ ಅಲ್ಲಾಬಕ್ಷ್‌ರಂತಹ ಮುಸ್ಲಿಮರು ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರೆಂಬುದು 1940ರ ದಿಲ್ಲಿ ಸಮ್ಮೇಳನದ ಅವರ ಅಧ್ಯಕ್ಷೀಯ ಭಾಷಣದಿಂದ ಸ್ಪಷ್ಟವಾಗುತ್ತದೆ. ಮುಸ್ಲಿಂ ಲೀಗ್‌ನ ಸಿದ್ಧಾಂತವನ್ನು ವಿರೋಧಿಸಲು ಅಲ್ಲಾ ಬಕ್ಷ್ ಚಾರಿತ್ರಿಕ ಸಂಗತಿಗಳನ್ನು ಮುಂದಿರಿಸಿದ್ದರು ಹಾಗೂ ತಾನು ಎತ್ತಿದ್ದ ಸೈದ್ಧಾಂತಿಕ ವಿರೋಧಕ್ಕೆ ಉತ್ತರಿಸುವಂತೆ ಅದರ ನಾಯಕರನ್ನು ಆಹ್ವಾನಿಸಿದ್ದರು.
‘ದೇವಾಧಿಪತ್ಯ’ ರಾಷ್ಟ್ರದ ಪರಿಕಲ್ಪನೆಯನ್ನು ವಿರೋಧಿಸುವ ವೇಳೆ ಬಕ್ಷ್, ಇದು ಭಾರತವು ಹಿಂದೂ ಹಾಗೂ ಮುಸ್ಲಿಂ ಭಾರತಗಳೆಂಬ ಎರಡು ದೇಶಗಳನ್ನು ಹೊಂದಿತ್ತೆಂಬ ಸುಳ್ಳು ತಿಳುವಳಿಕೆಯನ್ನು ಆಧರಿಸಿದೆ. ಎಲ್ಲ ಭಾರತೀಯ ಮುಸಲ್ಮಾನರು ಭಾರತ ರಾಷ್ಟ್ರೀಯರಾಗಿರಲು ಹೆಮ್ಮೆ ಪಡುತ್ತಾರೆಂಬುದನ್ನು ಮುಖ್ಯವಾಗಿ ಬೆಟ್ಟು ಮಾಡಬೇಕಾಗಿದೆ. ಅಲ್ಲದೆ ಅವರು ತಮ್ಮ ಆಧ್ಯಾತ್ಮಿಕ ಮಟ್ಟ ಹಾಗೂ ಇಸ್ಲಾಂ ತಮ್ಮ ಜನಾಂಗೀಯ ಧರ್ಮವಾಗಿರುವುದಕ್ಕೆ ಅಷ್ಟೇ ಹೆಮ್ಮೆ ಪಡುತ್ತಾರೆ. ಮುಸ್ಲಿಮರು, ಹಿಂದೂಗಳು ಹಾಗೂ ಇತರರು ಭಾರತದ ಹೆಮ್ಮೆಯ ಪ್ರಜೆಗಳಾಗಿ ಈ ನೆಲದಲ್ಲಿ ವಾಸಿಸುತ್ತಿದ್ದು, ಮಾತೃಭೂಮಿಯ ಪ್ರತಿ ಅಂಗುಲ ನೆಲವನ್ನು, ಅವರ ಸಂಪತ್ತನ್ನು, ಸಾಂಸ್ಕೃತಿಕ ಖಜಾನೆಯನ್ನು ತಮ್ಮ ನ್ಯಾಯ ಬದ್ಧ ಹಕ್ಕು ಹಾಗೂ ಅಗತ್ಯಗಳನುಸಾರ ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.
ಹಿಂದೂ, ಮುಸ್ಲಿಂ ಅಥವಾ ಇತರರು ಭಾರತದ ಸಂಪೂರ್ಣ ಅಥವಾ ಭಾಗಶಃ ಅಧಿಕಾರ ಸ್ಥಾಪಿಸುವ ಹವಣಿಕೆಯಲ್ಲಿದ್ದಾರೆಂಬುದು ಸುಳ್ಳು, ಈ ದೇಶವು ಅಖಂಡವಾಗಿ ಹಾಗೂ ಒಕ್ಕೂಟ ಹಾಗೂ ಸಂಯುಕ್ತ ಘಟಕವಾಗಿ ಇಲ್ಲಿನ ಪ್ರಜೆಗಳೆಲ್ಲರಿಗೂ ಸಮಾನವಾಗಿ ಸೇರಿದೆ ಹಾಗೂ ಭಾರತೀಯ ಮುಸ್ಲಿಮರ ಪರಂಪರಾಗತ ಸಂಸ್ಕೃತಿಯು ಇತರ ಭಾರತೀಯರಂತೆಯೇ ರಕ್ಷಿಸಲ್ಪಟ್ಟಿದೆ. ಇಲ್ಲಿ ಪ್ರತ್ಯೇಕ ಅಥವಾ ವಿಭಜಿತ ಪ್ರದೇಶಗಳಿ ರದೆ ಅಖಂಡವಾಗಿ ಭಾರತೀಯ ಮುಸ್ಲಿಮರು ಹಾಗೂ ಹಿಂದೂಗಳ ಮಾತೃಭೂಮಿಯಾಗಿದೆ. ಇದರ ಒಂದೇ ಒಂದು ಅಂಗುಲ ನೆಲವನ್ನೂ ಇತರರಿಗೆ ನಿರಾಕರಿಸುವ ಅಧಿಕಾರ ಹಿಂದೂ, ಮುಸ್ಲಿಂ ಅಥವಾ ಇತರರಿಗಿಲ್ಲವೆಂದು ಸ್ಪಷ್ಟಪಡಿಸಿದ್ದರು.
ಕೋಮುವಾದವು ಮುಸ್ಲಿಂ ಹಾಗೂ ಹಿಂದೂಗಳಲ್ಲಿನ ಆಳುವ ವರ್ಗಗಳ ಸೃಷ್ಟಿಯಾಗಿದೆ. ಹಿಂದೂ ಹಾಗೂ ಮುಸ್ಲಿಮರಲ್ಲಿ ಈಗಿನ ಸಾಮ್ರಾಜ್ಯಶಾಹಿ ಆಡಳಿತಗಾರರ ಉತ್ತರಾಧಿಕಾರಿಗಳಾಗುವ ಅಭಿಪ್ರಾಯ ಹಾಗೂ ಮಹತ್ವಾಕಾಂಕ್ಷೆ ಹೊಂದಿರುವವರು. ಇಡೀ ದೇಶ ಅಥವಾ ಮಿತವಾದ ಪ್ರದೇಶವೊಂದರ ಆಡಳಿತಗಾರರಾಗುವ ತಮ್ಮ ಕನಸನ್ನು ಸಾಧಿಸುವಲ್ಲಿ ಯಶಸ್ಸು ಗಳಿಸುವ ರಾಜಕೀಯ ಚದುರಂಗದಲ್ಲಿ ಕೆಲವು ಗುಂಪುಗಳ ಬೆಂಬಲ ಪಡೆಯಲು ಕೋಮುವಾದದಂತಹ ತಂತ್ರವನ್ನು ಹುಟ್ಟು ಹಾಕುತ್ತಾರೆಂದು ಬಕ್ಷ್ ಹೇಳಿದ್ದರು.
ಸಮಾಜದ ಸಾಮ್ರಾಜ್ಯಶಾಹಿ ಸ್ವರೂಪವು ಎಲ್ಲ ಮುಸ್ಲಿಮರ ಅಭಿವೃದ್ಧಿಯನ್ನು ಖಚಿತಪಡಿಸುತ್ತಿದ್ದರೆ, ಹಾಗೂ ಸಾಮ್ರಾಟರು ತಮ್ಮದೇ ಆದ ಕೊಳಕಿನ ಬೀಜವನ್ನು ತಮ್ಮಾಳಗೆ ಒಯ್ಯದಿರುತ್ತಿದ್ದರೆ, ಇಂದು ಒಟ್ಟು ರಾಶಿಯಲ್ಲಿ ಅನಾಸಕ್ತ ಹಾಗೂ ಪರಿತ್ಯಕ್ತರಂತೆ ಮಾನವ ಜನಾಂಗದ ಐದನೆಯ ಒಂದರಷ್ಟಿರುವ ಮುಸ್ಲಿಂ ಪಂಥೀಯರನ್ನು ಬಿಟ್ಟು ಒಮಾಲಿಯಾದ್, ಅಬ್ಯಾಸಿದ್, ಸಾರಾಸೆನಿಕ್, ಫಾತಿಮೈಡ್, ಸಸ್ಸಾನಿಕ್, ಮುಘಲ್ ಹಾಗೂ ಟರ್ಕಿಗಳಂತಹ ಮಹಾ ಸಾಮ್ರಾಜ್ಯಗಳು ಪತನವಾಗುತ್ತಿದ್ದವೇ ಎಂದು ಮುಸ್ಲಿಂ ಲೀಗನ್ನು ಪ್ರಶ್ನಿಸಿದ್ದ ಬಕ್ಷ್, ತಮ್ಮ ಸಾಮ್ರಾಜ್ಯ ಶಾಹಿ, ಇತರರನ್ನು ವಂಚಿಸುವ, ಅಧಿಕಾರ ಹೇರುವ ಹಾಗೂ ಹಿಡಿತ ಸಾಧಿಸುವ ಕನಸನ್ನು ತ್ಯಜಿಸು ವಂತೆ ಹಿಂದೂಗಳಿಗೂ ಸಲಹೆ ನೀಡಿದ್ದರು.
ಎಲ್ಲ ಮುಸ್ಲಿಮರೂ ಒಂದು ರಾಷ್ಟ್ರವಾದರೆ ಇಷ್ಟೆಲ್ಲ ದೇಶಗಳೇಕೆ ಹಾಗೂ ಎಲ್ಲ ಹಿಂದೂಗಳೂ ಒಂದು ರಾಷ್ಟ್ರವಾದರೆ ಭಾರತ, ನೇಪಾಳಗಳೆಂಬ ಪ್ರತ್ಯೇಕ ರಾಷ್ಟ್ರಗಳೇಕೆ ಎಂದವರು ಹಿಂದೂ ರಾಷ್ಟ್ರ ಹಾಗೂ ಇಸ್ಲಾಂ ರಾಷ್ಟ್ರಗಳ ಬೆಂಬಲಿಗರನ್ನು ಪ್ರಶ್ನಿಸಿದ್ದರು.ಕಾಂಗ್ರೆಸ್ ಇದುವರೆಗೆ ಕೋಮು ಸಮಸ್ಯೆಯ ಪರಿಹಾರದ ಬಗ್ಗೆ ‘ಆಝಾದ್ ಮುಸ್ಲಿಮ್ಸ್’ನೊಂದಿಗೆ ಮಾತುಕತೆ ನಡೆಸಲು ವಿಫಲವಾಗಿದೆ ಎಂಬ ನೆಲೆಯಲ್ಲಿ ಭಾರತೀಯ ಮುಸ್ಲಿಮರು ಕಾಂಗ್ರೆಸ್‌ನ ವಿರುದ್ಧ ದೂರುವುದಕ್ಕೆ ನ್ಯಾಯಬದ್ಧ ಕಾರಣವನ್ನು ಹೊಂದಿದ್ದಾರೆಂದು ಬಕ್ಷ್ ಕಾಂಗ್ರೆಸನ್ನು ಸರಿಯಾಗಿಯೇ ದೂರಿದ್ದರು.
ಕಾಂಗ್ರೆಸ್ ಕೂಡ ಬ್ರಿಟಿಷ್ ಆಡಳಿತಗಾರ ರಂತೆಯೇ ಮುಸ್ಲಿಂ ಲೀಗ್ ಎಲ್ಲ ಮುಸ್ಲಿಮರನ್ನು ಪ್ರತಿನಿಧಿಸುತ್ತಿದೆಯೆಂದು ನಂಬಿತ್ತು. ದ್ವಿರಾಷ್ಟ್ರ ಸಿದ್ಧಾಂತ ವಿರೋಧಿ ಮುಸ್ಲಿಮರ ಮಾತು ಕೇಳುವ ಹಾಗೂ ಅವರನ್ನು ತಮ್ಮಿಂದಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಗಾಂಧೀಜಿ ನೇತೃತ್ವದ ಕಾಂಗ್ರೆಸ್ ತಣ್ಣಗಿತ್ತು.ಅಲ್ಲಾ ಬಕ್ಷ್ ತನ್ನ ಭಾಷಣದಲ್ಲಿ ಭಾರತದ ಸಂಯುಕ್ತ ಸಂಸ್ಕೃತಿಯನ್ನು ಸಮರ್ಥಿಸಿದ್ದರು.
‘‘ಅವರು ಮುಸ್ಲಿಂ ಸಂಸ್ಕೃತಿಯ ಕುರಿತು ಮಾತನಾಡುವಾಗ ಕಳೆದ ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಹಿಂದೂ ಹಾಗೂ ಮುಸ್ಲಿಮರ ಕಾರಣದಿಂದ ರೂಪುಗೊಂಡಿರುವ ಸಂಯುಕ್ತ ಸಂಸ್ಕೃತಿಯನ್ನು ಅವರು ಮರೆಯುತ್ತಾರೆ. ಭಾರತದಲ್ಲಿ ಅವರಿಂದ ಹುಟ್ಟಿದ ಒಂದು ವಿಧದ ಸಂಸ್ಕೃತಿ ಹಾಗೂ ನಾಗರಿಕತೆಯ ಬಗ್ಗೆ ಮುಸ್ಲಿಮರಿಗೆ ಹೆಮ್ಮೆ ಯಿದೆ ಹಾಗೂ ಅವರದರ ಸಕ್ರಿಯ ಭಾಗಿದಾರರಾಗಿದ್ದಾರೆ. ಕೇವಲ ಕೃತಕ ರಾಜ್ಯಗಳನ್ನು ಸೃಷ್ಟಿಸುವ ಮೂಲಕ ಅದನ್ನೀಗ ಎರಡು ಪ್ರತ್ಯೇಕ ಪ್ರದೇಶಗಳಿಗೆ ಹಿಂದಕ್ಕೊಯ್ಯಲು ಸಾಧ್ಯವಿಲ್ಲ.
ಭಾರತದ ಕಲೆ, ಸಾಹಿತ್ಯ ವಾಸ್ತು ಶಾಸ್ತ್ರ, ಸಂಗೀತ, ಚರಿತ್ರೆ, ತತ್ವಶಾಸ್ತ್ರ ಹಾಗೂ ಆಡಳಿತ ವ್ಯವಸ್ಥೆಗಳಿಗೆ, ವಿಶ್ವದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ವಿಶಿಷ್ಟವಾಗಿ ಪ್ರತ್ಯೇಕ ಸ್ಥಾನ ಗಳಿಸಿರುವ ಸಮನ್ವಯಿತ, ಸಂಯುಕ್ತ ಹಾಗೂ ಸಮ್ಮಿಳಿತ ಸಂಸ್ಕೃತಿಯ ಪಾಲನ್ನು ಸಾವಿರ ವರ್ಷಗಳಿಂದ ಮುಸಲ್ಮಾನರು ನೀಡುತ್ತ ಬಂದಿದ್ದಾರೆ. ಇದನ್ನೆಲ್ಲ ಭಾರತದ ಎರಡು ಮೂಲೆಗಳಿಗೆ ಎಳೆದು, ಈ ಕೊಡುಗೆಯ ಅವಶೇಷವನ್ನೂ ಬಿಡದೆ ಒಯ್ಯುವುದು ನಾಗರಿಕತೆಗೆ ವಿನಾಶಕಾರಕ ನಷ್ಟವಾಗಲಿದೆ. ಅಂತಹ ಪ್ರಸ್ತಾಪ ಕೇವಲ ಸೋಲಿನ ಮನಸ್ತತ್ವದಲ್ಲಷ್ಟೇ ಮಾಡಬಹುದು.
ಇಡೀ ಭಾರತವು ನಮ್ಮ ಮಾತೃಭೂಮಿಯಾಗಿದ್ದು, ಸ್ವಾತಂತ್ರದಂತಹ ಸಮಾನ ಉದ್ದೇಶಗಳಲ್ಲಿ ಇಲ್ಲಿನ ಇತರ ವಾಸಿಗಳೊಂದಿಗೆ ಸೋದರರಂತೆ ನಾವೂ ಜೀವನದ ಎಲ್ಲ ರಂಗಗಳಲ್ಲೂ ಪಾಲುದಾರಿಕೆ ನೀಡಬಲ್ಲೆವು. ಈ ಮಹಾನ್ ದೇಶದ ಸಮಾನ ಪುತ್ರರಾಗುವುದರಿಂದ ನಮ್ಮನ್ನು ಯಾವುದೇ ಸುಳ್ಳು ಅಥವಾ ಸೋಲಿನ ಮನಸ್ತತ್ವಗಳು ದೂರಕ್ಕೊಯ್ಯಲಾರವು’’ ಎಂದವರು ಹೇಳಿದ್ದರು.
ಕೋಮುವಾದದ ವಿರುದ್ಧ ಕರೆ ನೀಡುವ ವೇಳೆ ಅಲ್ಲಾಬಕ್ಷ್, ಕೋಮುವಾದದ ವಿರುದ್ಧ ಚಳವಳಿಯು ತನ್ನ ಅರ್ಹವಾದ ಸ್ವಾತಂತ್ರವನ್ನು ಅನುಭವಿಸುವ ಬಲಿಷ್ಠ, ಆರೋಗ್ಯವಂತ, ಅಭಿವೃದ್ಧಿ ಶೀಲ ಹಾಗೂ ಗೌರವಾನ್ವಿತ ಭಾರತವನ್ನು ಕಟ್ಟುವಂತಹದಾಗಿರ ಬೇಕೆಂದು ಘೋಷಿಸಿದ್ದರು. ಅವರ ಆ ಭವಿಷ್ಯ ಚಿಂತನೆಯ ಮಾತುಗಳು ಇಂದಿಗೂ ಭಾರತಕ್ಕೆ ದಾರಿದೀಪವಾಗಿದೆ. ಆದರೆ, ಅಧಿಕಾರ ಗದ್ದುಗೆಯಿಂದ ಹಿಡಿದು ರಸ್ತೆಗಳಲ್ಲಿರುವ ಜನರವರೆಗೆ ಯಾರೂ ಇಂದು ಅಲ್ಲಾಬಕ್ಷ್‌ರನ್ನಾಗಲಿ ಅವರ ಕಾಳಜಿಯನ್ನಾಗಲಿ ನೆನಪಿಸಿಕೊಳ್ಳದಿರುವುದು ದುರಂತ.
ಅಲ್ಲಾ ಬಕ್ಷ್‌ರಂತಹವರಿಂದ ಮುನ್ನಡೆಸಲ್ಪಟ್ಟಿದ್ದ ರಾಜಕೀಯ ಒಲವು ಮರೆವಿಗೆ ಸರಿದಿರುವು ದೇಕೆಂಬುದರ ಬಗ್ಗೆ ಗಂಭೀರ ತನಿಖೆ ಅಗತ್ಯವಾಗಿದೆ. ಅದರಿಂದಾಗಿ ಬ್ರಿಟಿಷ್ ಯಜಮಾನರಿಗೆ ಹಾಗೂ ಹಿಂದೂ-ಮುಸ್ಲಿಂ ಕೋಮು ವಾದಿಗಳಿಗೆ ಸೂಕ್ತ ನೆಲೆಯೊದಗಿತ್ತು. ಅವರು ಭಾರತವನ್ನು ಮುಖ್ಯ ವಾಗಿ ಹಿಂದೂ-ಮುಸ್ಲಿಂ ಮತಗಳ ನಡುವಿನ ಸಂಘರ್ಷದ ಶಾಶ್ವತ ನೆಲೆಯಾಗಿ ಕಂಡರು. ಪಾಕಿಸ್ತಾನದಲ್ಲಿ ಅಲ್ಲಾಬಕ್ಷ್‌ರನ್ನು ದಕ್ಷಿಣ ಭಾರತದ ಕೆಳ ಜಾತಿಯವ ಹಾಗೂ ಇಸ್ಲಾಂನ ವೈರಿಯೆಂಬಂತೆ ನಡೆಸಿಕೊಂಡುದು ಸ್ವಾಭಾವಿಕವಾಗಿದೆ.
ಆದರೆ, ತನ್ನ ರಾಷ್ಟ್ರಗೀತೆಯಲ್ಲಿ ಸಿಂಧ್ ಪದವನ್ನು ಹೊಂದಿರುವ ಭಾರತವೂ ಸಹ, ಜಾತ್ಯತೀತ, ಸಂಯುಕ್ತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ಎದ್ದು ನಿಂತಿದ್ದ ಅವರ ಚಾರಿತ್ರದ ಕುರಿತು ಸಂಪೂರ್ಣ ಕುರುಡಾಗಿದೆ. ಅಲ್ಲಾಬಕ್ಷ್ ತನ್ನ ಜೀವನವನ್ನು ಮುಸ್ಲಿಂ ಲೀಗ್‌ನ ಕೋಮು ರಾಜಕೀಯ ಹಾಗೂ ದ್ವಿರಾಷ್ಟ್ರ ಸಿದ್ಧಾಂತವನ್ನು ವಿರೋಧಿಸುವುದರಲ್ಲೇ ಕಳೆದಿದ್ದರು. ಅದಕ್ಕಾಗಿಯೇ ಅವರು ಬಲಿದಾನವಾದರು. ಈ ಮುಸ್ಲಿಂ ನಾಯಕ ದೇಶದ ಸ್ವಾತಂತ್ರಕ್ಕಾಗಿ ಮಾಡಿದ ತ್ಯಾಗ ಇಂದಿಗೂ ಅಜ್ಞಾತವಾಗಿಯೇ ಉಳಿದಿದೆ.
ಇದರ ಬದಲು 1942ರ ಪೂರ್ವದ ಅವಧಿಯಲ್ಲಿಯೇ ಮೈತ್ರಿ ಸರಕಾರ ರಚಿಸಿದ್ದ ಮುಸ್ಲಿಂ ಲೀಗ್‌ನ ಸೈದ್ಧ್ಧಾಂತಿಕ ರಕ್ಷಕರಾಗಿದ್ದ ಸಾವರ್ಕರರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಿರುವುದು ಆಘಾತಕರವಾಗಿದೆ. ಸಾವರ್ಕರರು ಸೆಲ್ಯುಲರ್ ಬಂದಿಖಾನೆಯಲ್ಲಿ ಐದನೆ ಒಂದಂಶದ ಶಿಕ್ಷೆಯನ್ನಷ್ಟೇ ಅನುಭವಿಸಿ ಬ್ರಿಟಿಷ್ ಆಡಳಿತಗಾರರಲ್ಲಿ ಕ್ಷಮಾದಾನವನ್ನೇ ಯಾಚಿಸಿದವರು. ಭಾರತೀಯ ಸಂವಿಧಾನದ ಬದಲು ಮನುಸ್ಮತಿಯನ್ನು ತರ ಬಯಸಿದ್ದ ಹಿಂದುತ್ವದ ನೇತಾರರಾಗಿದ್ದವರು.
ಜಾತಿ ಹಾಗೂ ಜನಾಂಗೀಯ ವಾದದಲ್ಲಿ ನಂಬಿಕೆಯಿದ್ದವರು. ಗಾಂಧಿಯವರ ಹತ್ಯೆಯನ್ನು ಸಂಘಟಿಸಿಯೂ ಸ್ವಾತಂತ್ರದ ಮಹಾ ಹೋರಾಟಗಾರನ ಸ್ಥಾನಕ್ಕೇರಿಸಲ್ಪಟ್ಟವರು. ಆದರೆ ಅಲ್ಲಾ ಬಕ್ಷ್‌ಗೆ ಇಲ್ಲಿ ಸ್ಥಾನವಿಲ್ಲ. ಇದು ಜಾತ್ಯತೀತ ಭಾರತ ಇಂದು ಅನಿವಾರ್ಯವಾಗಿ ಬದುಕುತ್ತಿ ರುವ ಕೋಮು ರಾಜಕೀಯ ಸ್ವರೂಪದ ಜೀವಂತ ಸಾಕ್ಷಿ.
ಶಂಸುಲ್ ಇಸ್ಲಾಂ, ದಿಲ್ಲಿಯ ಸತ್ಯವತಿ ಕಾಲೇಜ್‌ನ
ರಾಜಕೀಯ ವಿಜ್ಞಾನ ವಿಭಾಗದ ಸಹ ಪ್ರೊಫೆಸರ್    –
ಕೃಪೆ ವಾರ್ತಾಭಾರತಿ
Please follow and like us:
error

Leave a Reply

error: Content is protected !!