fbpx

ನಿಗದಿತ ಶುಲ್ಕ ಪಡೆದು ಜಮೀನಿನ ನಕ್ಷೆ ನೀಡದಿರುವುದು ಸೇವಾ ನ್ಯೂನತೆ- ಗ್ರಾಹಕರ ವೇದಿಕೆ ತೀರ್ಪು.


ಕೊಪ್ಪಳ ಆ. ೦೭ ನಿಗದಿತ ಶುಲ್ಕವನ್ನು ಪಡೆದು, ಜಮೀನಿನ ೧೧ಇ ನಕ್ಷೆಯನ್ನು ತಹಸಿಲ್ದಾರರು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು, ನೀಡದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಇದು ಸೇವಾ ನ್ಯೂನತೆ ಎಂದು ಪರಿಗಣಿಸಿ ಕೊಪ್ಪಳ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.  ಕೊಪ್ಪಳ ತಾಲೂಕು ಅಗಳಕೇರಾದ ವೆಂಕಟೇಶ್ ಎಂಬುವವರು ಅಗಳಕೇರಾ ಸೀಮಾದ ಸರ್ವೆ ನಂ. ೧೧೨/ಎ ನಲ್ಲಿನ ೦೧ ಗುಂಟೆ ವಿಸ್ತೀರ್ಣದ ಭೂಮಿಗೆ ಸಂಬಂಧಿಸಿದಂತೆ ೧೧ಇ ನಕ್ಷೆಯನ್ನು ಪಡೆಯುವ ಸಲುವಾಗಿ ಕೊಪ್ಪಳ ತಹಸಿಲ್ದಾರರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ೬೦೦ ರೂ. ಗಳನ್ನು ೨೦೧೩ ರ ಜುಲೈ ೨೪ ರಂದು ಪಾವತಿಸಿದರು.  ಆದರೆ ಕೆಲವು ತಿಂಗಳುಗಳು ಗತಿಸಿದರೂ, ನಕ್ಷೆಯನ್ನು ನೀಡದ ಕಾರಣ, ವೆಂಕಟೇಶ್ ಅವರು ಲೀಗಲ್ ನೋಟೀಸ್ ಅನ್ನು ಜಾರಿ ಮಾಡಿಸಿದರು.  ಆದರೂ ವಿಳಂಬಕ್ಕೆ ಸೂಕ್ತ ಕಾರಣವನ್ನು ನೀಡದೆ, ನಕ್ಷೆಯನ್ನೂ ಸಹ ನೀಡದಿರುವುದು ಸೇವಾ ನ್ಯೂನತೆ ಎಂದು ಪರಿಗಣಿಸಿ, ಪರಿಹಾರ ಒದಗಿಸುವಂತೆ ಹಾಗೂ ನಕ್ಷೆಯನ್ನು ದೊರಕಿಸಿಕೊಡುವಂತೆ ವೆಂಕಟೇಶ್ ಅವರು ಗ್ರಾಹಕರ ವೇದಿಕೆಯ ಮೊರೆ ಹೋದರು.

     ವೇದಿಕೆಯ ಸಮನ್ಸ ಜಾರಿಯಾದ ನಂತರ, ತಹಸಿಲ್ದಾರರು ಜಿಲ್ಲಾ ಸರ್ಕಾರಿ ಅಭಿಯೋಜಕರ ಮೂಲಕ ವೇದಿಕೆಗೆ ಲಿಖಿತ ತಕರಾರು ಸಲ್ಲಿಸಿ, ಅಗಳಕೇರಾ ಸೀಮಾದ ಸರ್ವೆ ನಂ. ೧೧೨/ಎ ಆಕಾರ ಬಂದ್ ಕ್ಷೇತ್ರಕ್ಕೂ ಹಾಗೂ ಪಹಣಿ ಕ್ಷೇತ್ರಕ್ಕೂ ವ್ಯತ್ಯಾಸವಿದ್ದು, ಕ್ಷೇತ್ರದ ಹೊಂದಾಣಿಕೆ ಕುರಿತು ಕಂಪ್ಯೂಟರ್ ತಂತ್ರಜ್ಞಾನದಂತೆ ಮೇಲಾಧಿಕಾರಿಗಳಿಗೆ ತಿದ್ದುಪಡಿಗೆ ಸಲ್ಲಿಸಲಾಗಿದೆ.  ಪರಿಷ್ಕೃತ ಪಹಣಿ ಬಂದ ನಂತರ, ಮೋಜಿಣಿ ತಂತ್ರಾಂಶದ ಮೂಲಕ ಪರವಾನಗಿ ಭೂಮಾಪಕರಿಗೆ ಅಳತೆಗಾಗಿ ಸೂಚಿಸಿ, ನಂತರ ೧೧ಇ ನಕ್ಷೆ ತಯಾರಿಸಬೇಕಾಗುತ್ತದೆ ಎಂಬ ಹಿಂಬರಹವನ್ನು ಅರ್ಜಿದಾರರಿಗೆ ನೀಡಿರುವುದರಿಂದ ಯಾವುದೇ ಸೇವಾ ನ್ಯೂನತೆಯಾಗಿಲ್ಲ ಎಂದು ವಾದಿಸಿದರು.  
     ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಹಾಗೂ ಸದಸ್ಯರುಗಳಾದ ರವಿರಾಜ್ ಕುಲಕರ್ಣಿ, ಸುಜಾತ ಅಕ್ಕಸಾಲಿ ಅವರು, ನಿಗದಿತ ಶುಲ್ಕವನ್ನು ಪಡೆದು, ನಂತರ ನಕ್ಷೆಯನ್ನು ನೀಡದೆ ಇರುವುದಕ್ಕೆ ಕಾರಣಗಳನ್ನು ನೀಡಿರುತ್ತಾರೆಯೋ ಹೊರತು, ಸೂಕ್ತ ಕ್ರಮ ಕೈಗೊಂಡಿಲ್ಲ.  ನಕ್ಷೆ ನೀಡದೇ ಇರುವುದಕ್ಕೆ ಕಾರಣವಾಗಿರುವ ಸೂಕ್ತ ದಾಖಲೆಗಳನ್ನು ಹಾಜರುಪಡಿಸದೇ ಇರುವುದರಿಂದ, ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಲಾಗಿದೆ.  ತಹಸಿಲ್ದಾರರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು ದೂರುದಾರರಿಗೆ ೧೧ಇ ನಕ್ಷೆಯನ್ನು ಒದಗಿಸಬೇಕು.  ಸೇವಾ ನ್ಯೂನತೆಗೆ ಪರಿಹಾರವಾಗಿ ೧೫ ಸಾವಿರ, ಮಾನಸಿಕ ಹಿಂಸೆಗೆ ಪರಿಹಾರವಾಗಿ ೫ ಸಾವಿರ ಹಾಗೂ ಪ್ರಕರಣದ ಖರ್ಚು ೨೫೦೦ ಗಳನ್ನು ಒಂದು ತಿಂಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದ್ದಾರೆ.
ಮೇವಿನ ಬೀಜದ ಮಿನಿಕಿಟ್‌ಗಳ ಉಚಿತ ವಿತರಣೆ.
ಕೊಪ್ಪಳ, ಆ.೦೭ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ, ಕೊಪ್ಪಳ ಜಿಲ್ಲೆಯಲ್ಲಿ ಮೇವಿನ ಆಂತರಿಕ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮೇವಿನ ಬೀಜದ ಮಿನಿಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
     ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಮೇವಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಬರಪರಿಹಾರ ನಿಧಿಯಿಂದ ಮೇವಿನ ಬೀಜದ ಮಿನಿಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮೇವಿನ ಬೀಜದ ಕಿಟ್‌ಗಳು ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಲಭ್ಯವಿದ್ದು, ನೀರಾವರಿ ಸೌಲಭ್ಯ ಹೊಂದಿರುವ ಅಥವಾ ಆಸಕ್ತ ರೈತರು ಪಡೆದುಕೊಳ್ಳಬಹುದಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಅಂಚೆ ಕಚೇರಿಗಳಿಗೆ ಸ್ವಂತ ಕಟ್ಟಡ ಕೊಪ್ಪಳ ಸಂಸದರ ಮನವಿ.
ಕೊಪ್ಪಳ, ಆ.೦೭ ಕೊಪ್ಪಳ ಜಿಲ್ಲೆಗೆ ಅಂಚೆ ಇಲಾಖೆಯ ವಿಭಾಗೀಯ ಮತ್ತು ಸಾರ್ಟಿಂಗ್ ಕಛೇರಿ ಮಂಜೂರು ಮಾಡುವಂತೆ ಹಾಗೂ ಜಿಲ್ಲೆಯ ಅಂಚೆ ಕಚೇರಿಗಳಿಗೆ ಸ್ವಂತ ಕಟ್ಟಡ ನೀಡುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಮನವಿ ಮಾಡಿದ್ದಾರೆ.
     ಈ ಕುರಿತಂತೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಅವರು, ೧೯೯೭-೯೮ನೇ ಸಾಲಿನಲ್ಲಿ ಪ್ರಾರಂಭಗೊಂಡ ಹೊಸ ಏಳು ಜಿಲ್ಲೆಗಳ ಪೈಕಿ ಕೊಪ್ಪಳ ಹೊರತುಪಡಿಸಿ ಉಳಿದ ೦೬ ಜಿಲ್ಲೆಗಳಿಗೆ ಅಂಚೆ ಇಲಾಖೆಯ ವಿಭಾಗೀಯ ಮತ್ತು ಸಾರ್ಟಿಂಗ್ ಕಚೇರಿಗಳು ಮಂಜೂರಿಯಾಗಿವೆ. ಅಲ್ಲದೇ, ಕೊಪ್ಪಳ ಜಿಲ್ಲೆಯನ್ನು ಪಕ್ಕದ ಗದಗ್ ಜಿಲ್ಲೆಗೆ ಜೋಡಿಸಲಾಗಿದ್ದು, ಇದರಿಂದ ಆಡಳಿತಾತ್ಮಕ ಸಮಸ್ಯೆಗಳಲ್ಲದೆ, ಸಾರ್ವಜನಿಕರು ಮತ್ತು ನೌಕರರಿಗೆ ತುಂಬಾ ತೊಂದರೆಯನ್ನುಂಟು ಮಾಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ೨೭೧ ಅಂಚೆ ಕಚೇರಿಗಳಿದ್ದು, ಇವುಗಳ ಪೈಕಿ ಕೇವಲ ೧೧ ಅಂಚೆ ಕಚೇರಿಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಉಳಿದ ಕಚೇರಿಗಳು ಬಾಡಿಗೆ ಆಧಾರದ ಮೇಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗಿದ್ದು, ಈ ಹೊರೆ ತಗ್ಗಿಸಲು ಎಲ್ಲಾ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ ಎಂದು ಸಂಸದರ ಕಚೇರಿ ತಿಳಿಸಿದೆ.
Please follow and like us:
error

Leave a Reply

error: Content is protected !!