ಅಲ್ಲಿ ಭಗತ್ ಸಿಂಗ್ ಚೌಕ ಇಲ್ಲಿ ಬುರ್ಖಾ ವಿವಾದ

 ಸನತ್‌ಕುಮಾರ್‌ ಬೆಳಗಲಿ
ಪಾಕಿಸ್ತಾನದ ಲಾಹೋರದಲ್ಲಿ ನಗರದ ಚೌಕವೊಂದಕ್ಕೆ ಶಹೀದ್ ಭಗತ್ ಸಿಂಗ್ ಹೆಸರನ್ನಿಡಲಾಗಿದೆ. ಇದೆ ಲಾಹೋರನ ಜೈಲಿನಲ್ಲಿ 1931ರ ಮಾರ್ಚ್ 23ರಂದು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಗಿತ್ತು. ಅವರನ್ನು ನೇಣಿಗೇರಿಸಿದ ಸ್ಥಳವನ್ನು ಮುಂಚೆ ಸದ್ಮಾನ್ ಚೌಕ್ ಎಂದು ಕರೆಯಲಾಗಿತ್ತು. ಅವಿಭಜಿತ ಭಾರತದ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಒಂದು ಜನಾಂಗದ ಪಾತ್ರ ಮಾತ್ರವಿರಲಿಲ್ಲ. ಎಲ್ಲ ಜಾತಿ ಧರ್ಮಗಳ ಜನರ ಪಾತ್ರ ಇದರಲ್ಲಿತ್ತು ಎಂಬುದನ್ನು ಬಿಂಬಿಸಲು ಭಗತ್ ಸಿಂಗ್ ನಾಮಕರಣವನ್ನು ಈ ಚೌಕಕ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನದ ನಗರಾಡಳಿತ ಇಲಾಖೆ ಮೂಲಗಳು ತಿಳಿಸಿವೆ. ಈ ನಾಮಕಾರಣಕ್ಕಾಗಿ ಅಲ್ಲಿನ ನಾಗರಿಕ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಸಂತಸ ಉಕ್ಕೇರಿತು. ಭಾರತ-ಪಾಕಿಸ್ತಾನಗಳು ಶತ್ರು ರಾಷ್ಟ್ರಗಳಲ್ಲ ಎಂಬ ಡಾ. ಲೋಹಿಯಾ ಮಾತು ನೆನಪಿಗೆ ಬಂತು, ಎರಡೂ ಒಂದಾಗಿ ಒಕ್ಕೂಟ ರಚಿಸಬೇಕೆಂದು ಅವರು ಹೇಳಿದ್ದರು. ಅಂದಿನ ಪತ್ರಿಕೆಯಲ್ಲಿ ಒಂದು ಪುಟದಲ್ಲಿ ಈ ಸುದ್ದಿಯನ್ನು ಓದಿ ಪುಟ ತಿರುವಿದಾಗ ಇನ್ನೊಂದು ಸುದ್ದಿ ಕಣ್ಣಿಗೆ ಬಿತ್ತು. ಕುಕ್ಕೆ ಸುಬ್ರಹ್ಮಣ್ಯ ಕಾಲೇಜು ಆವರಣದಲ್ಲಿ ಬುರ್ಖಾ ನಿಷೇಧ ಎಂಬ ಸುದ್ದಿ ಗಮನ ಸೆಳೆಯಿತು.
‘ಸುಬ್ರಹ್ಮಣ್ಯ ದೇವಳದ ಆಡಳಿತದಲ್ಲಿರುವ ವಿದ್ಯಾ ಸಂಸ್ಥೆಗಳ ಆವರಣದ ಒಳಗೆ ಬುರ್ಖಾಧಾರಣೆ ನಿಷೇಧ ಎಂಬ ಆದೇಶವನ್ನು ಆಡಳಿತ ಮಂಡಲಿ ಹೊರಡಿಸಿದ್ದರಿಂದ ಬುರ್ಖಾಧಾರಿ ವಿದ್ಯಾರ್ಥಿನಿಯರು ನಡುರಸ್ತೆಯಲ್ಲೇ ಬುರ್ಖಾ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುವ ಶೋಚನೀಯ ಪರಿಸ್ಥಿತಿ. ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ದೇವಳದ ಆಡಳಿತ ಮಂಡಲಿ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ಭಾರತೀಯ ಸಂಸ್ಕೃತಿಗೆ (ಅಂದರೆ ಹಿಂದೂ ಸಂಸ್ಕೃತಿ) ಪೂರಕ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಈ ನಿಷೇಧ ಹೇರಲಾಗಿದೆಯಂತೆ. ಆದರೆ ಇದನ್ನು ಒಪ್ಪದ ಮುಂಡೋಡಿ ಸಂಘಪರಿವಾರದ ಒತ್ತಡಕ್ಕೊಳಗಾಗಿ ಈ ಆದೇಶ ಹೊರಟಿದೆ ಎಂದು ಹೇಳಿದ್ದಾರೆ.
ಇವೆರಡು ಸುದ್ದಿಗಳನ್ನು ಒಟ್ಟಿಗೆ ಇಟ್ಟುಕೊಂಡು ಯೋಚಿಸುತ್ತ ಕುಳಿತೆ. ‘ತಲೆ ಭಾರವಾಯಿತು’. ಪಾಕಿಸ್ತಾನ ಹೇಳಿ ಕೇಳಿ ಧರ್ಮಾಧಾರಿತ ದೇಶ. ಜಾತ್ಯತೀತ ಎಂದು ಅದು ಎಲ್ಲೂ ಹೇಳಿಕೊಂಡಿಲ್ಲ. ಅಂಥ ದೇಶ ಹುತಾತ್ಮ ಭಗತ್ ಸಿಂಗ್‌ರನ್ನು ಗೌರವಿಸಿ ನಗರದ ಕೇಂದ್ರ ಸ್ಥಳವೊಂದಕ್ಕೆ ಅವರ ಹೆಸರನ್ನಿಟ್ಟಿತು. ಆದರೆ ಭಾರತ ಪಾಕಿಸ್ತಾನದಂತೆ ಅಲ್ಲ, ಇದು ಜಾತ್ಯತೀತ ರಾಷ್ಟ್ರ. ಎಲ್ಲ ಮತ ಧರ್ಮಗಳ ಜನರಿಗೆ ಅವರವರ ನಂಬಿಕೆಗಳನುಸಾರ ನಡೆಯಲು ಇಲ್ಲಿ ಸ್ವಾತಂತ್ರವಿದೆ. ಇಂಥಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಶಾಲೆಯೊಂದು ಒಂದು ಸಮುದಾಯದ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಬಾರದೆಂದು ಆದೇಶ ಹೊರಡಿಸುವುದು ನ್ಯಾಯವೇ? ಇದು ಇಲ್ಲಿಗೆ ಮುಗಿಯಲಿಲ್ಲ.
ಬುರ್ಖಾ ಧಾರಣೆ ನಿಷೇಧವನ್ನು ಪ್ರಜ್ಞಾವಂತರೊಬ್ಬರು ವಿರೋಧಿಸುತ್ತಿದ್ದಂತೆ ಇದಕ್ಕಾಗಿ ಕಾಯ್ದು ಕುಳಿತಂತಿದ್ದ ಹಿಂದೂ ಸಂಸ್ಕೃತಿಯ ಸ್ವಯಂ ಘೋಷಿತ ರಕ್ಷಕರು ಕೆರಳಿ ವಿಚಿತ್ರ ಮೃಗದಂತೆ ವರ್ತಿಸತೊಡಗಿದರು. ಹಿಂದೂ ಜಾಗರಣ ವೇದಿಕೆಯ ಪರವಾಗಿ ಭಟ್ಟರೊಬ್ಬರು ಹೇಳಿಕೆಯನ್ನು ನೀಡಿ ‘‘ಹಿಂದುಗಳ ಶ್ರದ್ಧಾಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜಿನ ಬುರ್ಖಾ ವಿವಾದಾಸ್ಪದವಾಗಬಾರದು. ಇದು ಕ್ಷೇತ್ರದ ಪಾವಿತ್ರತೆಗೆ ಕುಂದು ತರುವ ಕೆಲಸ. ಕಾಂಗ್ರೆಸ್ ಇದನ್ನು ಮಾಡುತ್ತಿದೆ’’ ಎಂದು ಹೇಳಿಕೆ ನೀಡಿದರು.
‘‘ಬುರ್ಖಾ ತೆಗೆಸದಿದ್ದರೆ ಹಿಂದೂ ಸಂಘಟನೆಗಳು ಸುಮ್ಮುನಿರುವುದಿಲ್ಲ ಎಂದು ಬೆದರಿಕೆ ಹಾಕಿದರು. ಬುರ್ಖಾ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ದೇವಳದ ಆಡಳಿತ ಮಂಡಲಿ ವಿರುದ್ಧವೂ ಪ್ರತಿಭಟಿಸುವುದಾಗಿ ಈ ಹಿಂದೂ ರಕ್ಷಕರು ಬೆದರಿಕೆ ಹಾಕಿದ್ದಾರೆ. ಶಾಲಾ ಸಮವಸ್ತ್ರ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರ ಆಕ್ಷೇಪವಿಲ್ಲ. ಈಗಲೂ ಸಮವಸ್ತ್ರ ಧರಿಸಿಯೇ ಅವರು ಕಾಲೇಜಿಗೆ ಬರುತ್ತಾರೆ. ಆದರೆ ಶಾಲೆಯ ತರಗತಿ ಕೊಠಡಿಯಲ್ಲಿ ಅವರು ಬುರ್ಖಾ ಧರಿಸುವುದಿಲ್ಲ.
ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಮಹಿಳೆಯರ ವಿಶ್ರಾಂತಿ ಕೊಠಡಿಗೆ ಹೋಗಿ ಬುರ್ಖಾ ಕಳಚಿ ಬ್ಯಾಗಿನಲ್ಲಿಟ್ಟುಕೊಂಡು ಎಲ್ಲರಂತೆ ಶಾಲಾ ಸಮವಸ್ತ್ರದಲ್ಲಿ ಕ್ಲಾಸ್‌ರೂಂನಲ್ಲಿ ಬಂದು ಪಾಠ ಕೇಳುತ್ತಾರೆ. ಆದರೂ ಇದನ್ನು ಸಹಿಸಲು ಸಂಘಪರಿವಾರ ಸಿದ್ಧವಿಲ್ಲ. ಶಾಲಾ ಆವರಣದಲ್ಲೇ ಅವರು ಬುರ್ಖಾ ತೆಗೆದಿಟ್ಟು ಬರಬೇಕಂತೆ. ಇಲ್ಲವಾದರೆ ಪ್ರತಿಭಟಿಸಲಾಗುವುದಂತೆ. ಹಿಂದೂ ಜಾಗರಣ ವೇದಿಕೆಯ ಈ ಬೆದರಿಕೆಗೆ ತಾನೊಂದು ರಾಜಕೀಯ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯೂ ಬೆಂಬಲ ನೀಡಿದೆ.
ಇದನ್ನೆಲ್ಲ ಓದುತ್ತಿದ್ದಾಗ ನನ್ನ ಜೊತೆಗೆ ಪ್ರಕೃತಿ ಚಿಕಿತ್ಸೆಗೆ ಬಂದಿದ್ದ ಹೈದರಾಬಾದ್‌ನ ವೈದ್ಯರೊಬ್ಬರು ಇದೇನಿದು ಎಲ್ಲಿಗೆ ಬಂತು ನಮ್ಮ ದೇಶ ಎಂದು ಕೇಳಿದರು. ಏನಾಗಿದೆ ಈ ಜನರಿಗೆ ಎಂದು ನಿಟ್ಟುಸಿರು ಬಿಟ್ಟರು. ನಮ್ಮ ಪ್ರಜ್ಞಾವಂತರ ಇಂಥ ನಿಟ್ಟುಸಿರೇ ಈ ಅವಿವೇಕಿಗಳ ಕೋತಿ ಕುಣಿತಕ್ಕೆ ಕಾರಣವಾಗಿದೆ. ಏಕೆ ಹೀಗಾಯಿತೆಂದು ನಿರಾಶೆಯಿಂದ ಮಾತನಾಡುವ ಬದಲಾಗಿ ಇಂಥ ಪ್ರಜ್ಞಾವಂತರು ಶಿಲಾಯುಗಕ್ಕೆ ಸೇರಿದ ಸಂಘಪರಿವಾರದ ಅವಿವೇಕಿಗಳ ವಿರುದ್ಧ ಧ್ವನಿಯೆತ್ತಿದರೆ ಎಂದೋ ಇವರನ್ನು ಮೂಲೆಗುಂಪು ಮಾಡಬಹುದಾಗಿತ್ತು. ಆದರೆ ಪ್ರಜ್ಞಾವಂತರಾದರೂ ಎಷ್ಟು ಜನರಿದ್ದಾರೆ? ಕೆಲವೇ ಕೆಲವರಿದ್ದಾರೆ. ಅವರು ಬಾಯಿ ಬಿಟ್ಟು ಬಹಿರಂಗವಾಗಿ ಮಾತಾಡುವುದಿಲ್ಲ. ಮಾತಾಡುವ ಕೆಲವೆ ಕೆಲವರನ್ನು ಮೂಲೆಗುಂಪು ಮಾಡಲಾಗುತ್ತದೆ.
ಬುರ್ಖಾ ಧರಿಸುವ ಪ್ರಶ್ನೆ ಅವರವರ ವಿವೇಚನೆಗೆ ಬಿಟ್ಟಿದ್ದು. ಮುಸ್ಲಿಂ ಸಮಾಜದಲ್ಲೇ ಬುರ್ಖಾ ಧರಿಸುವುದನ್ನು ಒಪ್ಪದ ಮಹಿಳೆಯರಿದ್ದಾರೆ. ಇದನ್ನು ವಿರೋಧಿಸಿ ಪುಣೆಯ ಸಮಾಜವಾದಿ ಹೋರಾಟಗಾರ ಹಮೀದ್ ದಳವಾಯಿ 9 ದಶಕಗಳ ಹಿಂದೆಯೇ ಧ್ವನಿಯೆತ್ತಿದ್ದರು. ಈಗ ಅದು ಚರ್ಚಿಸುವ ವಿಷಯವಲ್ಲ. ಬುರ್ಖಾ ಧರಿಸುವುದನ್ನು ಕುಂಕುಮ ಹಣೆಗೆ ಹಚ್ಚುವುದನ್ನು, ಬಳೆ ತೊಡುವುದನ್ನು ಸಂವಿಧಾನ ನಿರ್ಬಂಧಿಸಿಲ್ಲ. ಕಾನೂನಿನ ಪ್ರಕಾರ ಇದ್ಯಾವುದೂ ಅಪರಾಧವಲ್ಲ. ಹೀಗಿರುವಾಗ ತಾವು ಹಿಂದೂ ರಕ್ಷಕರೆಂದು ಘೋಷಿಸಿಕೊಳ್ಳುವ ಪಡಪೋಷಿಗಳು ‘ಬುರ್ಖಾ ಧರಿಸಕೂಡದು’ ಎಂದು ಬೆದರಿಕೆ ಹಾಕುವುದು ಫ್ಯಾಸಿಸಂ ಅಲ್ಲದೇ ಬೇರೇನೂ ಅಲ್ಲ.
ಈಗ ಬುರ್ಖಾ ಧರಿಸಕೂಡದೆಂದು ಬೆದರಿಕೆ ಹಾಕುತ್ತಿರುವ ಶಾಲಾ ಆಡಳಿತ ಮಂಡಲಿಯವರನ್ನು ಹೆದರಿಸುತ್ತಿರುವ ಈ ಕೋಮುವಾದಿ ಪುಂಡರು ದೇಶದ ಕಾನೂನನ್ನು ತಮ್ಮ ಕೈಗೆತ್ತಿಕೊಂಡು ನಿಯಂತ್ರಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿರುವುದರಿಂದ ಪೊಲೀಸರೂ ಇವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ದಕ್ಷಿಣ ಕನ್ನಡದ ನಾಗರಿಕರು ಈ ಅವಿವೇಕಿಗಳನ್ನು ಮುದ್ದು ಪ್ರಾಣಿಗಳಂತೆ ಸಾಕುತ್ತಿದ್ದಾರೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಜೆಡಿಎಸ್‌ನಂಥ ಪಕ್ಷಗಳ ಕೋಮುವಾದದ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುತ್ತಿಲ್ಲ. ಕುಕ್ಕೆಯಂಥ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವಂತೆ ದೇಶದ ಅನೇಕ ಕ್ರೈಸ್ತ, ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಓದುತ್ತಾರೆ.
ಅಲ್ಲಿ ಈ ಹಿಂದೂ ವಿದ್ಯಾರ್ಥಿನಿಯರಿಗೆ ‘‘ನೀವು ಕೈಯಲ್ಲಿನ ಬಳೆಯನ್ನು ತೆಗೆದಿಟ್ಟು ಬನ್ನಿ, ಹಣೆಗೆ ಕುಂಕುಮ ಧರಿಸಬೇಡಿ, ಸೀರೆ ಉಡಬೇಡಿ’’ ಎಂದು ಅಲ್ಲಿನ ಕಾಲೇಜುಗಳ ಆಡಳಿತ ಮಂಡಲಿಗಳು ಆದೇಶ ನೀಡಿದರೆ ಅದು ಎಷ್ಟು ಅವಿವೇಕತನ ಮತ್ತು ಅಸಭ್ಯತೆ ಆಗುತ್ತದೋ ಅದೇ ರೀತಿ ಬುರ್ಖಾ ಧರಿಸಬಾರದೆಂದು ಹೇಳುವುದು ಕೂಡ ಅವಿವೇಕತನವಾಗುತ್ತದೆ. ಬುರ್ಖಾ ಧರಿಸುವುದರಿಂದ ಹಿಂದೂ ಸಂಸ್ಕೃತಿಗಾಗಲಿ, ಧರ್ಮಕ್ಕಾಗಲಿ ಅವಮಾನವೇನೂ ಆಗುವುದಿಲ್ಲ. ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಆಂಧ್ರದ ಕೆಲ ಪ್ರದೇಶಗಳಲ್ಲಿ ಹಿಂದೂ ಸಿರಿವಂತ ಮನೆತನದ ಹೆಣ್ಣು ಮಕ್ಕಳು ಕೂಡ ಬುರ್ಖಾ ಧರಿಸುತ್ತಾರೆ. ಧರಿಸುವ ಪೋಷಾಕಿಗೂ ಸಂಸ್ಕೃತಿಗೂ ಯಾವ ಸಂಬಂಧವೂ ಇಲ್ಲ.
ಬಿಜೆಪಿ ಮಂತ್ರಿ ರೇಣುಕಾಚಾರ್ಯ ನರ್ಸ್‌ನೊಂದಿಗೆ ಕಾಣಬಾರದ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ, ಸುಮ್ಮನಿರುವ ಇವರು ವಿಧಾನಸಭೆಯಲ್ಲಿ ಬಿಜೆಪಿ ಮಂತ್ರಿಗಳು ಬ್ಲೂಫಿಲಂ ವೀಕ್ಷಿಸುತ್ತಿದ್ದಾಗ ತೆಪ್ಪಗಿದ್ದ ಚಡ್ಡಿಗಳು, ಉಡುಪಿಯ ಸೈಂಟ್ ಮೇರಿ ನಡುಗುಡ್ಡೆಯಲ್ಲಿ ಬಿಜೆಪಿ ಶಾಸಕರ ಬೆಂಬಲದಲ್ಲೇ ವಿದೇಶಿ ಹುಡುಗ ಹುಡುಗಿಯರು ಬೆತ್ತಲೆ ಡ್ಯಾನ್ಸ್ ಮಾಡಿದಾಗ ಬಾಯಿ ಮುಚ್ಚಿಕೊಂಡಿದ್ದ ಈ ಹಿಂದೂ ರಕ್ಷಕರು ಈಗ ಒಮ್ಮೆಲೆ ಮೈಯಲ್ಲಿ ಭೂತ ಹೊಕ್ಕಂತೆ ಕುಣಿದಾಡುತ್ತಿದ್ದಾರೆ. ಈಗ ದೇಶದ ನೂರಾಹತ್ತು ಕೋಟಿ ಜನರ ಮುಂದಿರುವ ಸಮಸ್ಯೆ ಯಾರು ಯಾವ ಬಟ್ಟೆ ಧರಿಸಬೇಕೆಂಬುದಲ್ಲ.
ಕಿತ್ತು ತಿನ್ನುತ್ತಿರುವ ಬಡತನ, ಬೆಲೆ ಏರಿಕೆ, ನಮ್ಮ ಕಿರಾಣಿ ಅಂಗಡಿಗಳನ್ನು ಮುಚ್ಚಲು ಬರುತ್ತಿರುವ ವಾಲ್‌ಮಾರ್ಟ್‌ನಂಥ ಮಳಿಗೆಗಳು, ನೆಲೆ ಕಳೆದುಕೊಳ್ಳುತ್ತಿರುವ ಆದಿವಾಸಿಗಳು, ನಾಶವಾಗುತ್ತಿರುವ ಕಾಡು – ಇದರ ಬಗ್ಗೆ ಹೋರಾಡಿ ದೇಶವನ್ನು ಕಾಪಾಡಬೇಕಾದ ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ಇವರೆಲ್ಲ ಅಮೆರಿಕನ್ ಕಂಪೆನಿಗಳ ಅಘೋಷಿತ ದಲ್ಲಾಳಿಗಳಾಗಿ ಅದಕ್ಕಾಗಿ ಅವರಿಗಾಗಿ ಈ ಸೇವೆ ಸಲ್ಲಿಸುತ್ತಿದ್ದಾರೆ. ಬುರ್ಖಾ ವಿರೋಧಿಸಿದರೆ ದೇಶ ಭಕ್ತಿಯಲ್ಲ ಎಂದು ಇವರಿಗೂ ಗೊತ್ತಿದೆ. ಆದರೆ ಅದನ್ನು ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಂಸೆ ನೀಡುವುದು. ಅದಕ್ಕೆ ಆ ಸಮುದಾಯದಿಂದ ಪ್ರತಿರೋಧ ಬರುವುದು. ಆ ಮೂಲಕ ಸಮಾಜದಲ್ಲಿ ಕಲಹದ ಕಿಡಿ ಹೊತ್ತಿಸುವುದು. ಆಗ ಹಿಂದೂ ಓಟ್ ಬ್ಯಾಂಕ್ ನಿರ್ಮಿಸಿ ಮತ್ತೆ ಅಧಿಕಾರಕ್ಕೆ ಬರುವುದು. ಅಧಿಕಾರಕ್ಕೆ ಬಂದ ನಂತರ ಮತ್ತೆ ಗಣಿಗಾರಿಕೆ, ರಿಯಲ್ ಎಸ್ಟೇಟ್, ಲ್ಯಾಂಡ್ ಮಾಫಿಯಾ ಹೆಸರಿನಲ್ಲಿ ದೇಶದ ಸಂಪತ್ತನ್ನು ದೋಚುವುದು ಇವರ ಹುನ್ನಾರ. ಇದನ್ನು ವಿಫಲಗೊಳಿಸಬೇಕಾಗಿದೆ.
Please follow and like us:
error