fbpx

ಬ್ರಹ್ಮ ಚಿತ್ರ ವಿಮರ್ಶೆ

…ಮಹಾಬ್ರಹ್ಮ! 
      “ಪ್ರಪಂಚಾನೇ ಆಳಿರೋ ಅಲೆಕ್ಸಾಂಡರ್ ಸತ್ತು ಹೋದ, ಹಿಟ್ಲರ್ರೂ ಸತ್ತು ಹೋದ, ನಾಳೆ ನೀವು ಸಾಯ್ತಿರಾ. ನಾನೂ ಸಾಯ್ತಿನಿ, ಸಾಯೋತನಕ ಒಳ್ಳೇದ್ ಮಾಡಿ, ಒಳ್ಳೇದ್ ಆಗುತ್ತೆ.” ಎಂದು ಬ್ರಹ್ಮ ಹೇಳೋ ಹೊತ್ತಿಗೆ ಥೇಟರ್ ಖಾಲಿಯಾಗಿರುತ್ತೆ. ಸೋ ಬ್ರಹ್ಮನ ಮಾತು ಬ್ರಹ್ಮನಿಗಷ್ಟೇ ಕೇಳುತ್ತೆ. ಯಾಕಂದ್ರೆ ಈ ಡೈಲಾಗ್ ಬರೋದು ಚಿತ್ರದ ಕ್ಲೈಮ್ಯಾಕ್ಸ್‌ನ ಕಟ್ಟ ಕಡೆಗೆ!
      ಇದನ್ನು ಹೇಳೋದಕ್ಕಾಗಿ ಚಿತ್ರ ಮಾಡಿದಂತಿರುವ ಚಂದ್ರು ಈ ಮಾತನ್ನ ಇನ್ನೊಂದೈದು ನಿಮಿಷ ಮುಂಚೆ ಹೇಳಿದ್ರೆ ಬಹುಶಃ ಎಲ್ರೂ ಕೇಳಿಸ್ಕೋತಿದ್ರು. ಆದ್ರೂ ಬ್ರಹ್ಮನ ಆರ್ಭಟ ಜೋರಾಗಿದೆ. ನಾಲ್ಕು ಅವತಾರದಲ್ಲಿ ಉಪೇಂದ್ರನನ್ನು ಬ್ರಹ್ಮನನ್ನಾಗಿ ಮಾಡಿದ್ದು ವಿಶೇಷ. ಚಿತ್ರದ ಮೇಕಿಂಗ್‌ಗೆ ಶಿಳ್ಳೆ ಹೊಡೀಬೇಕು, ಚಪ್ಪಾಳೆ ತಟ್ಟಬೇಕು. 
      ಕಥೆಯಲ್ಲಿ ಹೇಳಿಕೊಳ್ಳುವಂಥ ವಿಶೇಷವಿರದಿದ್ದರೂ ಯಥಾರೀತಿ ಚಂದ್ರು ಸಿನಿಮಾಗೆ ಇರುವ ಎಲ್ಲ ಕ್ವಾಲಿಟಿಗಳಿವೆ. ಇಂಥ ಚಿತ್ರಗಳು, ಅಂಬರೀಶ್, ಪ್ರಭಾಕರ್ ಕಾಲದಿಂದ ಹಿಡಿದು, ‘ಕಿಚ್ಚ’ ಸುದೀಪ್‌ವರೆಗೆ ಬಂದಿವೆ. ಆದರೆ ಕಥೆಯನ್ನು ಢಿಫರೆಂಟ್ ಅಗಿ ಹೇಳುವ ಚಂದ್ರು ಜಾಣತನ ಇಲ್ಲೂ ಮುಂದುವರೆದಿದೆ. 
       ಇಡೀ ಚಿತ್ರ ಸೆಕೆಂಡ್ ಹಾಫ್‌ನಲ್ಲಿ ತೆರೆದುಕೊಳ್ಳುತ್ತೆ. ಅಲ್ಲೀವರೆಗೂ ಉಪೇಂದ್ರ ತಲೆಗಳ ಮೇಲೆ ತಲೆಗಳನ್ನ ಉರುಳಿಸುತ್ತಾರೆ. ದರೋಡೆ ಮೇಲೆ ದರೋಡೆ ಮಾಡ್ತಾನೆ ಇರ‍್ತಾರೆ. ಬರೀ ಡಕಾಯಿತಿ, ಫೈಟಿಂಗ್ ಇದ್ದರೆ ಮಾಸ್ ಆಡಿಯನ್ಸ್ ಖುಷ್ ಆಗ್ತಾರೆ. ಕುಟುಂಬ ವರ್ಗದವರನ್ನು ಹಿಡಿದಿಟ್ಟುಕೊಳ್ಳಬೇಕಲ್ಲ. ಅದಕ್ಕಾಗಿ ನಗಿಸಲು ಒಬ್ಬ ಅದೃಷ್ಟವಂತನನ್ನ(ರಂಗಾಯಣ ರಘು), ಮತ್ತೊಬ್ಬ ಸಾಧು ಮಹಾರಾಜ (ಸಾಧು ಕೋಕಿಲ)ನನ್ನು ಸೃಷ್ಟಿಸಿದ್ದಾರೆ ಚಂದ್ರು. 
         ಬ್ರಹ್ಮ (ಉಪೇಂದ್ರ) ಯಾಕೆ ಡಕಾಯಿತಿ ಮಾಡುತ್ತಿದ್ದ? ದೋಚಿದ ಹಣ, ಒಡವೆ, ವಜ್ರಗಳನ್ನೆಲ್ಲ ಏನು ಮಾಡುತ್ತಿದ್ದ? ಕೊನೆಗೆ ಪೋಲೀಸರ ಕೈಗೆ ಹೇಗೆ ಸಿಕ್ಕಿಬಿದ್ದ. ನ್ಯಾಯಾಲಯ ಏನು ಶಿಕ್ಷೆ ಕೊಟ್ಟಿತು. ಕೊನೆಗೆ ಬ್ರಹ್ಮ ಏನಾದ? ಇವೆ ಚಿತ್ರದ ಹೈಲೈಟ್ಸ್. ಒಂದನ್ನಂತು ಹೇಳಲಡ್ಡಿಯಿಲ್ಲ. ಆದರೆ ಉಳಿದವುಗಳನ್ನು ಹೇಳುವ ಹಾಗಿಲ್ಲ. ಬ್ರಹ್ಮ ಚಿತ್ರದ ಕೊನೆಗೆ ಸಂಸದನಾಗಿ ಕೇಂದ್ರ ಕಾರ್ಮಿಕ ಸಚಿವನಾಗಿ ಕೆಲಸ ಮಾಡುತ್ತಿರುತ್ತಾನೆ. ಆದು ಹೇಗೆ ಎಂಬ ಕುತೂಹಲ ಇದ್ದರೆ ಬ್ರಹ್ಮನನ್ನು ನೋಡಲೇಬೇಕು. 
       ಹ್ಯಾ, ಇದು ಸೂಪರ್ ಸಿನಿಮಾ ಥರಾ ಪೊಲಿಟಿಕಲ್ ಬ್ಯಾಗ್ರೌಂಡ್ ಸಿನಿಮಾ ಎಂದು ಮೂಗು ಮುರಿಯುವವರಿಗೆ ಹೆಚ್ಚಿಗೆ ಏನೂ ಹೇಳಲಾಗದು. ಸೂಪರ್‌ನ ಕಥೆನೇ ಬೇರೆ, ಬ್ರಹ್ಮನ ಹಣೆಬರಹವೇ ಬೇರೆ ಎಂಬುದನ್ನ ಮಾತ್ರ ಸ್ಪಷ್ಟವಾಗಿ ಹೇಳಬಹುದು. ‘ಭಾರತದಲ್ಲಿ ಪಾಲಿಟಿಕ್ಸ್, ಪಾಲಿಟಿಶಿಯನ್ ಯಾವಾಗ್ ಸಾಯ್ತಾರೋ, ಆವತ್ತು ಇಂಡಿಯಾ ಉದ್ಧಾರ ಆಗುತ್ತೆ’ ಎಂದು ಚಿತ್ರದ ಆರಂಭದಲ್ಲಿ ಮಲೇಶಿಯಾದಲ್ಲಿರೋ ಇಂಡಿಯಾ ಪೂಜಾರಿ ಪಾತ್ರದಿಂದ ಈ ಮಾತನ್ನು ಹೇಳಿಸಿರೋ ಚಂದ್ರು ಕೊನೆಗೆ ನಾಯಕನನ್ನೇ ಒಬ್ಬ ರಾಜಕಾರಣಿಯನ್ನಾಗಿ ಮಾಡಿದ್ದು ನೋಡಿದರೆ ಅವರು ಕೊಡಬೇಕೆಂದುಕೊಂಡಿದ್ದ ಸಂದೇಶದಲ್ಲಿ ಅವರಿಗೆ ಸಂದೇಹ ಇದ್ದಂತೆ ಕಾಣುತ್ತದೆ. ಆದರೂ ಬ್ರಹ್ಮ, ಬರೀ ಬ್ರಹ್ಮನಲ್ಲ, ಮಹಾಬ್ರಹ್ಮ.
      ನಾಯಕಿ ಪ್ರಣೀತಾಗೆ ಹೆಚ್ಚೇನೂ ಕೆಲಸವಿಲ್ಲ. ಹಾಡಿನಲ್ಲಿ ಸೊಂಟ ಕುಲುಕಿಸೋದು, ಆಗೊಮ್ಮೆ, ಈಗೊಮ್ಮೆ ಮುಖ ತೋರಿಸೋದು ಏನ್ ದೊಡ್ಡ ಕಷ್ಟನಾ? ನಟನೆಯ ವಿಷಯಕ್ಕೆ ಬಂದರೆ ಪ್ರಣೀತಾ ಪಾಸಾಗಿದ್ದಾರೆ ಬಿಡಿ. ಚಿತ್ರದಲ್ಲಿನ ವೀರಬ್ರಹ್ಮ (ಉಪೇಂದ್ರನ ತಂದೆ-ನಾಸೀರ್), ರಾಹುಲ್‌ದೇವ್ ಹಾಗೂ ಎಸಿಪಿ ಭುವನ್‌ಸಿಂಗ್ (ಶಯ್ಯಾಜಿ ಶಿಂಧೆ) ಪಾತ್ರಕ್ಕೆ ಕನ್ನಡದ ಕಲಾವಿದರನ್ನೇ ಬಳಸಿಕೊಂಡಿದ್ದರೆ ಚಿತ್ರ ಇನ್ನೂ ನೋಡುವಂತಿರುತ್ತಿತ್ತು. ಅದರಲ್ಲೂ ಎಸಿಪಿ ಪಾತ್ರದಲ್ಲಿ ಶಯ್ಯಾಜಿ ನೋಡುವುದು, ಅವರ ಡೈಲಾಗ್ ಕೇಳುವುದು ಕೊಂಚ ಕಿರಿಕಿರಿ ಎನಿಸುತ್ತದೆ. ಅನಂತ್‌ನಾಗ್, ಅವಿನಾಶ್ ಬಂದ ಪುಟ್ಟ, ಹೋದ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ನಟನೆಯಲ್ಲಿ ಒಂಚೂರು ಓವರ್ ಅನಿಸ್ತಾರೆ. ಇದ್ದುದರಲ್ಲೇ ಸಾಧು, ಬುಲೆಟ್ ಪ್ರಕಾಶ್ ಓಕೆ.
        ಶೇಖರ್ ಚಂದ್ರ ಸಿನಿಮಾಟೋಗ್ರಫಿ ಕಣ್ಮನ ಸೆಳೆಯುತ್ತದೆ. ಥ್ರಿಲ್ಲರ್ ಮಂಜು ಹಾಗೂ ವಿಜಯ್ ಕಾಂಪೋಸ್ ಮಾಡಿರುವ ಫೈಟ್‌ಗಳು ಖುಷಿ ಕೊಡುತ್ತವೆ. ಆರ್.ಚಂದ್ರು ನಿರ್ದೇಶನದ ಜೊತೆಗೆ ಸಂಭಾಷಣೆ ಬರೆದಿದ್ದು ಅಲ್ಲಲ್ಲಿ ಗಮನ ಸೆಳೆಯುತ್ತಾರೆ. ‘ಜನರನ್ನ ಹಿಂದೆ ಬಿಟ್ಟು ಮುಂದೆ ಹೋಗೋನು ಲೀಡರ್ ಅನಿಸಿಕೊಳ್ಳಲ್ಲ. ಜನರ ಮಧ್ಯೆ ಇರೋನೇ ನಿಜವಾದ ಲೀಡರ್’, ‘ಒಬ್ಬ ಸೈನಿಕ ಯುದ್ಧ ಮಾಡೋದು ಎದುರುಗಡೆ ಇರೋ ಜನರ ದ್ವೇಷಕ್ಕಲ್ಲ, ಅವನ ಹಿಂದೆ ಇರೋ ಜನರ ಪ್ರೀತಿಗೆ’ ಎನ್ನುವಂಥ ಡೈಲಾಗ್ಸ್‌ಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ. ಗುರುಕಿರಣ್ ಮ್ಯೂಸಿಕ್‌ನಲ್ಲಿ ಎರಡು ಹಾಡುಗಳು ಕೇಳುವಂತಿವೆ, ನೋಡುವಂತಿವೆ.
       ಇಂದು ನಿರ್ದೇಶಕ ಆರ್.ಚಂದ್ರು ಬರ್ತಡೆ. ‘ಕೋಟಿ ಕೋಟಿ ಹಣ ಗಳಿಸೋನು ಗ್ರೇಟ್ ಅಲ್ಲ, ಕೋಟಿ ಕೋಟಿ ಹೃದಯಗಳಲ್ಲಿ ಇರೋನು ಗ್ರೇಟ್’ ಎಂದು ಚಂದ್ರು ಚಿತ್ರದಲ್ಲಿ ಕೊನೆಗೆ ಹೇಳಿದ್ದಾರೆ. ಅದೇ ಮಾತನ್ನೇ ಚಂದ್ರುಗೂ ಹಾಗೂ ಬ್ರಹ್ಮ ಚಿತ್ರದ ನಿರ್ಮಾಪಕರಾದ ಮಂಜುನಾಥ ಬಾಬಣ್ಣ ಅವರಿಗೂ ಹೇಳುವ ಮೂಲಕ ಬರ್ತಡೆ ಬಾಯ್ ಚಂದ್ರುಗೆ ಒಳ್ಳೇದಾಗಲಿ ಎಂದು ಹಾರೈಸುವಾ. 
      ಒಟ್ಟಿನಲ್ಲಿ ಬ್ರಹ್ಮನನ್ನು ನೋಡಿದರೆ ಕೊಟ್ಟ ಹಣಕ್ಕೆ ಮೋಸ ಇಲ್ಲ ಎನ್ನುವ ಖಾತ್ರಿ ಇದೆ. ಆದರೆ ಫುಲ್ ಮೀಲ್ಸ್ ಗ್ಯಾರಂಟಿ ಇಲ್ಲ.
ಫಲಿತಾಂಶ : ೧೦೦/೫೫
-ಚಿತ್ರಪ್ರಿಯ ಸಂಭ್ರಮ್.          
Please follow and like us:
error

Leave a Reply

error: Content is protected !!