ಎಂಜಲೆಲೆಯ ಮೇಲೆ ಸಮೂಹ ಪ್ರಜ್ಞೆ- ನಾ. ದಿವಾಕರ್


ಇದು ಭಾರತೀಯ ಸಮಾಜದ ವೈಪರೀತ್ಯವೋ ಅಥವಾ ವೈರುಧ್ಯವೋ ಹೇಳಲಾಗುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ನಮ್ಮ ಸಮಾಜ ಮುಂದಿಡುವ ಪ್ರತಿಯೊಂದು ಹೆಜ್ಜೆಗೂ ಎರಡು ಹೆಜ್ಜೆ ಹಿಂದೆ ಸರಿಯುತ್ತಿದೆ. ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಲೇ ಪ್ರಾಚೀನತೆಯತ್ತ ಸಾಗುತ್ತಿದೆ. ವೈಜ್ಞಾನಿಕ ಮನೋಭಾವ, ವೈಚಾರಿಕತೆ ಮುಂತಾದ ಪ್ರಬುದ್ಧ ವಿಚಾರಗಳನ್ನು ವೈಭವೀಕರಿಸುತ್ತಲೇ ನಮ್ಮ ಸಮಾಜ ಪ್ರಾಚೀನ ಕಾಲದ ಕಂದಾಚಾರಗಳಿಗೆ ಬಲಿಯಾಗಿ ಅಪಹಾಸ್ಯಕ್ಕೀಡಾಗುತ್ತಿದೆ. ಒಂದೆಡೆ ಮಂಗಳಯಾನದ ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದೆಡೆ ಶನಿಕಾಟದಿಂದ ಪಾರಾಗಲು ಎಲ್ಲೆಡೆ ಶನೇಶ್ವರನ ಪೂಜೆ. ಶನಿಗ್ರಹಕ್ಕೆ ಒಂದು ಮಾನವ ಸ್ವರೂಪ. ಒಂದು ದೈವೀಕ ಚೌಕಟ್ಟು. ನಭೋ ಮಂಡಲದಲ್ಲಿದ್ದ ಒಂದು ಗ್ರಹ ಇನ್ನಿಲ್ಲವಾದರೂ ನಮ್ಮ ಸಮಾಜದಲ್ಲಿ ಕಂಡು ಕೇಳದ ನವಗ್ರಹಗಳಿಗೆ ಪೂಜೆ ಪುನಸ್ಕಾರಗಳು ಮಾತ್ರ ನಿಂತಿಲ್ಲ. ಮರೆಯಾದ ಗ್ರಹ ನವಗ್ರಹದ ಸದಸ್ಯತ್ವವನ್ನೇ ಹೊಂದಿರಲಿಲ್ಲ ಎನ್ನುವುದು ಬೇರೆ ಮಾತು. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಹೀಗೆ ನವಗ್ರಹ ಸ್ತೋತ್ರ ಪಠಿಸುತ್ತಾ ಕಲ್ಲಿನ ಗ್ರಹರೂಪಿ ಶಕ್ತಿಗಳ ಸುತ್ತ ಪ್ರದಕ್ಷಿಣೆ ಹಾಕುವ ಪ್ರಬುದ್ಧ ಪ್ರಜ್ಞಾವಂತ ಮನಸ್ಸುಗಳಿಗೆ ತಾವು ಸುತ್ತು ಹಾಕುವ ಪ್ರತಿಮೆಗಳು ಏನನ್ನು ಪ್ರತಿನಿಧಿಸುತ್ತವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಈ ಪರಿಭಾವಿತ ನವಗ್ರಹಗಳ ಪೈಕಿ ನಾಲ್ಕು, ಅಂದರೆ ಸೂರ್ಯ, ಚಂದ್ರ, ರಾಹು ಮತ್ತು ಕೇತು ಗ್ರಹಗಳೇ ಅಲ್ಲ ಎನ್ನುವ ಸಂಗತಿ ಅರಿತಿದ್ದರೂ ಮನದಾಳದಲ್ಲಿ ನೆಲೆಸಿರುವ ಭೀತಿ ಅರಿವನ್ನು ಮಂಕಾಗಿಸುತ್ತದೆ.
ಹಾದಿಗೊಬ್ಬ ಬೀದಿಗೊಬ್ಬ ಜ್ಯೋತಿಷಿ, ಗುರೂಜಿ ಸೃಷ್ಟಿಯಾಗಿದ್ದು ದಿನಬೆಳಗಾದರೆ ದೃಶ್ಯ ಮಾಧ್ಯಮಗಳ ಮೂಲಕ ಈ ಅಸ್ತಿತ್ವವೇ ಇಲ್ಲದ ಗ್ರಹಗಳ ಬಗ್ಗೆ, ಗ್ರಹಗಳೇ ಅಲ್ಲದ ಗ್ರಹಗಳ ಬಗ್ಗೆ ಪುಂಖಾನುಪುಂಖವಾಗಿ ಉಪನ್ಯಾಸ ನೀಡುತ್ತಿದ್ದಾರೆ. ಆಚಾರ ವಿಚಾರಗಳ ನೆಪದಲ್ಲಿ ಗ್ರಹಚಾರಗಳನ್ನು ಗೃಹಾಚಾರಗಳನ್ನಾಗಿ ಪರಿವರ್ತಿಸಿ ಪ್ರಜ್ಞಾವಂತ ಮನಸ್ಸುಗಳನ್ನೂ ಕಂಗೆಡಿಸುವ ರೀತಿಯಲ್ಲಿ ಜನರ ಮನದಾಳದಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಟಿವಿ ಪರದೆಯ ಮೇಲೆ ವಿರಾಜಮಾನರಾದ ಗುರೂಜಿಯೊಬ್ಬರು ಹೆಕ್ಕಿ ತೆಗೆಯುವ ವೀಳ್ಯದೆಲೆಯಲ್ಲಿ ಇರುವ ಲೋಪವನ್ನು ಒಂದು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಆರೋಪಿಸಿ, ನವಗ್ರಹಗಳಿಗೆ ಸಂಬಂಧ ಕಲ್ಪಿಸಿ, ಜನರ ಭವಿಷ್ಯವನ್ನು ನಿರ್ಧರಿಸುವ ಸರ್ಕಸ್ ದಿನನಿತ್ಯ ನಡೆಯುತ್ತಿದೆ. ಇದನ್ನು ಬ್ರಹ್ಮಜ್ಞಾನ ಎನ್ನಬೇಕೋ ಅಥವಾ ಬ್ರಹ್ಮಾಂಡವನ್ನೇ ನಡುಗಿಸುವ ಹಿರಣ್ಯಕಷಿಪುವಿನಂತಹ ಅಜ್ಞಾನವೆನ್ನಬೇಕೋ ಹೇಳಲಾಗದು. ಆದರೂ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಗ್ರಹಗಳಿಗಷ್ಟೇ ಸೀಮಿತವಾಗಿದ್ದ ಜನಸಾಮಾನ್ಯರ ಗ್ರಹಚಾರಗಳು ಈಗ ಜನರ ವಾಸಸ್ಥಾನದಲ್ಲಿರುವ ವಿನ್ಯಾಸಗಳಿಗೂ ವಿಸ್ತರಿಸಿದೆ. ಮನೆಯೊಳಗಿನ ನೀರಿನ ತೊಟ್ಟಿ, ಕಸದ ತೊಟ್ಟಿ, ಕಕ್ಕಸು ಕೋಣೆ, ಸ್ನಾನದ ಮನೆ, ಅಡುಗೆಯ ಜಾಗ, ತುಳಸಿಕಟ್ಟೆ ಹೀಗೆ ನಿತ್ಯ ಬಳಕೆಯಾಗುವ ಎಲ್ಲ ಪರಿಕರಗಳ ಮೇಲೂ ಗ್ರಹಗಳ ಕೃಪಾಕಟಾಕ್ಷವಿದೆ ಎಂದು ಪಂಡಿತೋತ್ತಮರು ವ್ಯಾಖ್ಯಾನಿಸುತ್ತಿದ್ದಾರೆ. ಈ ಜ್ಞಾನವಿಸ್ತರಣಾ ಯೋಜನೆಗೆ ಸಾಥ್ ನೀಡುತ್ತಿರುವುದು ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು.
ಇಂತಹ ಒಂದು ಗೊಂದಲಮಯ ಸನ್ನಿವೇಶದಲ್ಲೇ ರಾಜ್ಯ ಹೈಕೋರ್ಟ್ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಮಡೆಸ್ನಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜನಸಮುದಾಯಗಳ ನಂಬಿಕೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ನ್ಯಾಯಾಲಯ ಎಂಜಲೆಲೆಯ ಮೇಲೆ ಉರುಳಾಡುವ ಒಂದು ಪ್ರಾಚೀನ ಪದ್ಧತಿಗೆ ಅಸ್ತು ಎಂದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಮಡೆಸ್ನಾನ ಎಡೆಯಿಲ್ಲದೆ ನಡೆಯುತ್ತಲೇ ಇದೆ. ಇದು ಕಣ್ಣಿಗೆ ಕಾಣುವ ಒಂದು ಅಮಾನವೀಯ ಆಚರಣೆ. ಆದರೆ ನಮ್ಮ ವಿದ್ಯಾವಂತ ಪ್ರಬುದ್ಧ ಸಮಾಜ ದಿನನಿತ್ಯವೂ ಡಿಜಿಟಲ್ ಎಂಜಲೆಲೆಯ ಮೇಲೆ ಉರುಳಾಡುತ್ತಲೇ ಇದೆ ಅಲ್ಲವೇ? ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸ್ವಘೋಷಿತ ಬ್ರಹ್ಮಾಂಡ ಪಂಡಿತರು, ಮಾಧ್ಯಮಗಳು ಏರ್ಪಡಿಸಿದ ಬೌದ್ಧಿಕ ಔತಣಕೂಟಗಳ ಮೂಲಕ ಉಂಡು ಬಿಟ್ಟ ಎಂಜಲೆಲೆಯ ಮೇಲೆ, ತಮಗೆ ಅರಿವಿಲ್ಲದೆಯೇ ಜನಸಾಮಾನ್ಯರು ಉರುಳಾಡುತ್ತಲೇ ಇದ್ದಾರೆ. ಈ ಎಂಜಲೆಲೆಗಳು ಕೈಗೆಟುಕುವುದೂ ಇಲ್ಲ. ಅದರೆ ಮನಸ್ಸಿಗೆ ನಾಟುತ್ತವೆ. ಮೌಢ್ಯ ಎನ್ನುವುದು ಆಚರಣೆಯಲ್ಲಿ ಮಾತ್ರ ಅಡಗಿಲ್ಲ. ಇದು ಮನದಾಳದಲ್ಲಿ ಬೇರೂರಿದೆ. ಈ ಬೇರುಗಳಿಗೆ ನೀರು, ರಸಗೊಬ್ಬರ, ಔಷಧಿ ಸಿಂಪಡಿಸಲು ಬ್ರಹ್ಮಾಂಡ ಪಂಡಿತರು ಲಕ್ಷಾಂತರ ರೂ.ಗಳನ್ನು ಪಡೆದು ಶ್ರಮಿಸುತ್ತಿದ್ದಾರೆ. ಬೇರುಗಳು ಗಟ್ಟಿಯಾಗುತ್ತಿವೆ. ಮನೆಮನೆಗಳಲ್ಲೂ ಮೌಢ್ಯದ ಆರಾಧನೆ ನಡೆಯುತ್ತಿದೆ. ಮೌಢ್ಯದ ವೃಕ್ಷಗಳಿಗೆ ಬೀಜ ಬಿತ್ತಲಾಗುತ್ತಿದೆ.
ಮೌಢ್ಯದ ವಿರುದ್ಧ ಹೋರಾಟಕ್ಕಿಳಿದಿರುವ ಕಾವಿಧಾರಿಗಳಿಗೆ ಕುಕ್ಕೆ ಸುಬ್ರಹ್ಮಣ್ಯದ ಎಂಜಲೆಲೆಗಳು ಮುಖಕ್ಕೆ ರಾಚುತ್ತಿವೆ, ಪೇಜಾವರರ ಅಪ್ರಬುದ್ಧತೆ ಎದ್ದು ಕಾಣುತ್ತಿದೆ. ಆದರೆ ನಿತ್ಯ ಸುಪ್ರಭಾತದಂತೆ ಜನರ ಮನದಾಳದಲ್ಲಿ ಬೇರೂರುತ್ತಿರುವ ಮೌಢ್ಯದ ಅರಿವಾಗುತ್ತಿಲ್ಲ. ಇಂದು ನಾವು ಹೋರಾಡಬೇಕಿರುವುದು ಕುಕ್ಕೆಯಲ್ಲಲ್ಲ. ನಮ್ಮ ತೆಕ್ಕೆಯಲ್ಲಿ. ಕುಕ್ಕೆ ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ನಮ್ಮ ಸಮಾಜದ ತೆಕ್ಕೆಯಲ್ಲಿ ಎಂಜಲೆಲೆಗಳು ಹರಿದಾಡುತ್ತಿವೆ. ಅದರ ಮೇಲೆ ಮಾನವ ಪ್ರಜ್ಞೆ ಉರುಳಾಡುತ್ತಲೇ ಇದೆ. ಮಡೆಸ್ನಾನ ಎಡೆಯಿಲ್ಲದೆ ನಡೆಯುತ್ತಲೇ ಇದೆ. ಇತಿಶ್ರೀ ಹಾಡಲು ಬೇಕಿರುವುದು ವೈಚಾರಿಕತೆ, ವೈಜ್ಞಾನಿಕ ಪ್ರಜ್ಞೆ ಮತ್ತು ಕೊಂಚ ಮಾನವೀಯತೆ. ಇದು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿದೆಯೇ ಅಥವಾ ಬ್ರಹ್ಮಾಂಡ ಪಂಡಿತರ ದಾಳಿಗೆ ಸಿಲುಕಿ ಸಮಾಧಿಯಾಗುತ್ತಿದೆಯೇ? ಇದು ಮೂರ್ತ ಪ್ರಶ್ನೆ.
-ವಾರ್ತಾಭಾರತಿ

Leave a Reply