ತಂಗಡಗಿಯ ಬೆಂಬಲಿಗರ ಆಟಾಟೋಪ ಪ್ರತಿಭಟನೆ

ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕೊಪ್ಪಳ
{ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ ಹಲ್ಲೆಗೆ ಕಾರಣನಾದ ಗೂಂಡಾ ಹನುಮೇಶ ನಾಯಕ ಹಾಗೂ ಆತನ ಕುಟುಂಬಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಚಿವ ಶಿವರಾಜ ತಂಗಡಗಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಪ್ರತಿಕೃತಿ ದಹನ}
              
ಕೊಪ್ಪಳ ಕ್ಷೇತ್ರದ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿಯ ಬೆಂಬಲಿಗರ ಆಟಾಟೋಪಕ್ಕೆ ಜನತೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಹುಲಿಹೈದರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಶಾಂತಿ-ನೆಮ್ಮದಿಗೆ ತೀವ್ರ ಭಂಗಬಂದಿದ್ದು ಕೊಪ್ಪಳ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯಗೊಂಡಿದೆ.
ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಘಟನೆ ಮಾಸುವ ಮುನ್ನವೇ ತಮ್ಮ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆಂದು ಹುಲಿಹೈದರ ಗ್ರಾಮದ ಯುವಕ ಸಣ್ಣ ಹನುಮಂತಪ್ಪ ಮಾದಿಗ ಎನ್ನುವಾತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ  ಅದೇ ಗ್ರಾಮದ ಅವರ ಕುಟುಂಬದ ಮೇಲೆ ತಂಗಡಗಿ ಬೆಂಬಲಿಗ ಹನುಮೇಶ ನಾಯಕ  ತಮ್ಮ ರಮೇಶ ನಾಯಕ ಹಾಗೂ ಅಶೋಕ ನಾಯಕ ಸೇರಿದಂತೆ ಇನ್ನಿತರರು ಏಕಾಏಕಿ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಸಣ್ಣ ಹನುಮಂತಪ್ಪನ ಸಹೋದರ ಹುಸೇನಪ್ಪನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇಷ್ಟೆಲ್ಲಾ ನಡೆದರೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣ ಹನುಮೇಶ ನಾಯಕನ ಬೆನ್ನಿಗಿದ್ದು, ತಂಗಡಗಿ ಪರೋಕ್ಷವಾಗಿ ಸಾಥ್ ನೀಡಿದ್ದಾರೆ.
ವಿದ್ಯಾರ್ಥಿ ಯಲ್ಲಾಲಿಂಗನ ಪ್ರಕರಣದಲ್ಲಿ ಹನುಮೇಶ ನಾಯಕ ಆರೋಪಿಯಾಗಿದ್ದರೂ ಪೊಲೀಸರು ಇಲ್ಲಿವರೆಗೂ ಆತನನ್ನು ಬಂಧಿಸಿಲ್ಲ. ಪ್ರಭಾವಿ ಸಚಿವರ ಬೆಂಬಲ ಇರುವುದರಿಂದ ಕನಕಗಿರಿ ವ್ಯಾಪ್ತಿಯಲ್ಲಿ ಮತ್ತಷ್ಟು ಗೂಂಡಾಗಿರಿ, ದಬ್ಬಾಳಿಕೆಯನ್ನು ಆತ ಮತ್ತು ಆತನ ಸಹೋದರರು ಮುಂದುವರೆಸಿದ್ದಾರೆ. ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿಗಾಗಿ ಬಂದ ಯೋಜನೆಗಳಲ್ಲಿ ಅಪಾರ ಭ್ರಷ್ಟಾಚಾರ ನಡೆಸಿ ಅಕ್ರಮ ಸಂಪತ್ತು ಗಳಿಸಿಕೊಂಡಿರುವ ಹನುಮೇಶ ನಾಯಕ ಮತ್ತು ಆತನ ಕುಟುಂಬದವರ ವಿರುದ್ದ ಯಾವುದೇ ಕಾನೂನು ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಯಲ್ಲಾಲಿಂಗನ ಕೊಲೆಯ ನಂತರ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಡೆದ ಅವ್ಯಹಾರ ತನಿಖೆ ನಡೆಸುವುದಾಗಿ ಜಿಲ್ಲಾಡಳಿತ ಹೇಳಿತ್ತು ಆದರೂ ಇಲ್ಲಿಯವರೆಗೆ ಯಾವುದೇ  ಅವ್ಯಹಾರ ಬಯಲಿಗೆ ಎಳೆದಿಲ್ಲ. ಇದೆಲ್ಲಾ ಗಮನಿಸಿದರೆ  ಜಿಲ್ಲಾಡಳಿತವೂ ಸಹ ಹನುಮೇಶ ನಾಯಕನ ಅವ್ಯವಹಾರಕ್ಕೆ ಆಂತರಿಕವಾಗಿ ಬೆಂಬಲ ನೀಡುತ್ತಿರುವುದು ಸಾಬೀತಾಗಿದೆ. ಕನಿಷ್ಠ ಮಾಧ್ಯಮಕ್ಕೂ ಹೇಳಿಕೆ ನೀಡದಂತೆ ಜನಸಾಮಾನ್ಯರ ಬಾಯಿ ಮುಚ್ಚಿಸಲು ಹನುಮೇಶ ನಾಯಕ ಮತ್ತು ಆತನ ಕುಟುಂಬ ಹೊರಟಿದ್ದು, ವಾಕ್ ಸ್ವಾತಂತ್ರ್ಯದ ಸಂಪೂರ್ಣ ಕೊಲೆಯಾಗಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ದಲಿತರ ಮೇಲೆ ಹಾಗೂ ಜನಸಾಮಾನ್ಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಚೆಗೆ ಕಲಾಲಬಂಡಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿ ಬಹಿಷ್ಕಾರ ಹಾಕಲಾಗಿದೆ. ಬಹದ್ದೂರು ಬಂಡಿ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿ ಹಿಂಸಿಸಲಾಗಿದೆ. ಮರಕುಂಬಿಯಲ್ಲಿ ದಲಿತರ ಗುಡಿಸಲಿಗೆ ಬೆಂಕಿಹಚ್ಚಿ ನಾಶಗೊಳಿಸಿದ ಘಟನೆ, ಹೊಸಗುಡ್ಡ ಹನುಮವ್ವ ಅತ್ಯಾಚಾರ ಹಾಗೂ ಕೊಲೆ ಘಟನೆ, ಅರಣ್ಯ ಇಲಾಖೆ ಅಧಿಕಾರಿಯನ್ನು ಮನ ಬಂದಂತೆ ಥಳಿಸಿದ ಪ್ರಕರಣ, ತಂಗಡಗಿ ಹಿಂಬಾಲಕರ ಅಚಾರ್ತುಯದಿಂದ ಹೊಸ ಜೂರಟಗಿ ಗ್ರಾಮದ ದಲಿತ ಬಾಲಕನ ಕಣ್ಣು ಹೋದ ಘಟನೆ. ಹೀಗೆ ಮೀಸಲಾತಿ ಕ್ಷೇತ್ರದಿಂದ ಆರಿಸಿ ಬಂದಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಗೂಂಡಾ ಹಿಂಬಾಲಕರಿಗೆ ಬೆಂಬಲ ನೀಡುತ್ತಿರುವುದರಿಂದ ಅಪರಾಧ ಮತ್ತು ಅಕ್ರಮ ಚಟುವಟಿಕೆಗಳು ದ್ವಿಗುಣಗೊಳ್ಳುತ್ತಿದ್ದು, ಅಹಿಂದ ಪರ ಎಂದು ಹೇಳಿಕೊಳ್ಳುವ ಸಿ.ಎಂ.ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವ ಶಿವರಾಜ ತಂಗಡಗಿಯನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸರಕಾರಕ್ಕೆ ಆಗ್ರಹಿಸುತ್ತದೆ.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯ ಆಗಿರುವುದರಿಂದ ಹನುಮೇಶ ನಾಯಕ ಮತ್ತು ಆತನ ಅಕ್ರಮ ಆಸ್ತಿ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು, ಯಲ್ಲಾಲಿಂಗನ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಸಣ್ಣ ಹನುಮಂತ ಮತ್ತು ಆತನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು, ಕೊಪ್ಪಳ ಜಿಲ್ಲೆಯ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಹಲ್ಲೆಗೊಳಗಾದ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ

Leave a Reply