ಆಧಾರ್ ಕಾರ್ಡ್ ಪಡೆಯುವುದು ಎಲ್ಲರಿಗೂ ಕಡ್ಡಾಯ: ಜಿಲ್ಲಾಧಿಕಾರಿ ತುಳಸಿ

ಕೊಪ್ಪಳ ಜು. ೦೪ (ಕ.ವಾ): ಭಾರತ ಸರ್ಕಾರ ಪ್ರತಿಯೊಬ್ಬ ನಾಗರೀಕರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಆಧಾರ್ ಕಾರ್ಡ್ ಪಡೆಯುವುದು ಎಲ್ಲರಿಗೂ ಕಡ್ಡಾಯವಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಜುಲೈ ೨೭ ರಿಂದ ಈ ಕಾರ್ಡನ್ನು ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದ್ದಾರೆ.
ಆಧಾರ್ ಯೋಜನೆ ಕುರಿತಂತೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಆಧಾರ್ ಪ್ರತಿಯೊಬ್ಬ ಶ್ರೀಸಾಮಾನ್ಯನ ಹಕ್ಕು. ಆಧಾರ್ ಯೋಜನೆಯ ೧೨ ಅಂಕಿಗಳ ಸಂಖ್ಯೆಗಳನ್ನು ಪಡೆಯುವುದರಿಂದ ರಾಜ್ಯ/ಕೇಂದ್ರ ಸರ್ಕಾರದ ಸೇವೆಗಳನ್ನು ಸುಗಮವಾಗಿ ಪಡೆಯಬಹುದು. ೧೨ ಅಂಕಿಗಳ ಸಂಖ್ಯೆ ವಿತರಿಸಲು ನಿವಾಸಿಗಳ ಬೆರಳಚ್ಚು, ಅಕ್ಷಿಪಟಲ ಸ್ಕ್ಯಾನ್, ಭಾವಚಿತ್ರದಂತಹ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಿ ೩೦ ದಿನದೊಳಗೆ ಸಂಖ್ಯೆಗಳು ಲಭ್ಯವಾಗುತ್ತವೆ. ಈಗ ತಾನೆ ಹುಟ್ಟಿದ ಮಗುವಿನಿಂದ ವಯೋವೃದ್ಧರವರೆಗೆ ಎಲ್ಲರಿಗೂ ಸಂಖ್ಯೆ ಲಭ್ಯವಾಗಲಿದ್ದು, ಈ ಸಂಖ್ಯೆ ಪಡೆಯಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಈ ಸೇವೆ ಸಂಪೂರ್ಣ ಉಚಿತವಾಗಿದೆ. ಮಕ್ಕಳಿಗೆ ಶಾಲೆಗೆ ಸೇರಿಸಲು, ವೃದ್ಯಾಪ್ಯ ವೇತನ, ಆರೋಗ್ಯ ಸೇವೆ ಲಾಭ ಮತ್ತು ಉದ್ಯೋಗ ಪಡೆಯಲು ಆಧಾರ್ ಯೋಜನೆ ರಹದಾರಿಯಾಗಲಿದೆ. ಇದಕ್ಕಾಗಿ ಪ್ರತಿಯೊಬ್ಬ ನಿವಾಸಿಯು ಗುರುತಿಗಾಗಿ, ವಿಳಾಸಕ್ಕಾಗಿ, ಜನ್ಮ ದಿನಾಂಕಕ್ಕಾಗಿ, ರಾಜ್ಯ/ ಕೇಂದ್ರ ಸರ್ಕಾರದಿಂದ ಪಡೆಯುತ್ತಿರುವ ಸೇವೆಗಳ ಮೂಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಯೋಜನೆಯನ್ನು ಈಗಾಗಲೆ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದು, ಈಗಾಗಲೆ ಉಭಯ ಜಿಲ್ಲೆಗಳ ೪೦ ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಆಧಾರ್ ಕಾರ್ಡ್ ವಿತರಿಸಲಾಗಿದೆ. ಗುಲಬರ್ಗಾ ವಿಭಾಗದ ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಜೂ. ೨೭ ರಿಂದ ಈ ಯೋಜನೆ ಜಾರಿಗೆ ಬಂದಿದ್ದು, ಜುಲೈ ೨೭ ರಿಂದ ಕೊಪ್ಪಳ ಜಿಲ್ಲೆಯಾದ್ಯಂತ ನಾಗರಿಕರಿಗೆ ಆಧಾರ್ ಕಾರ್ಡ್ ನೀಡಲು ಪ್ರಮುಖ ಸ್ಥಳಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಇಲ್ಲದೇ ಇರುವ ನಾಗರೀಕರಿಗೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆಯುವುದಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ನಾಗರೀಕರು ಆಧಾರ್ ಕಾರ್ಡ್ ತಪ್ಪದೆ ಪಡೆಯಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಆಧಾರ್ ಯೋಜನೆಯ ನೋಂದಣಿಗಾಗಿ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡು, ಈ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Please follow and like us:
error