ಭೈರಪ್ಪ ವಿವಾದ ಸೃಷ್ಟಿಸುವುದಿಲ್ಲ; ವಿವಾದಗಳು ಸುತ್ತಿಕೊಳ್ಳುತ್ತವೆ: ಸಿಎಂ

 | ಪ್ರಾಂತೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ಭೈರಪ್ಪ ಒತ್ತಾಯ
ಬೆಂಗಳೂರು, ‘ಒಬ್ಬ ಮನುಷ್ಯನ ಜೀವನದಲ್ಲಿ ‘ಬೈಚಾನ್ಸ್’(ಆಕಸ್ಮಿಕ)ಆಗಿ ಏನೆಲ್ಲಾ ಸಿಗಬೇಕೋ,ಅದೆಲ್ಲ ನನಗೆ ಸಿಕ್ಕಿದೆ.ಅದು ಮುಖ್ಯಮಂತ್ರಿ ಪದವಿ ಆಗಿರಬಹುದು ಅಥವಾ ಪ್ರತಿಷ್ಠಿತ ಜ್ಞಾನಪೀಠ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವ ಭಾಗ್ಯ ಸಿಕ್ಕಿದ್ದಾಗಿರಬಹುದು.’ ಹೀಗೆಂದು ಹೇಳಿದವರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನನ್ನ ಮುಖ್ಯಮಂತ್ರಿ ಅವಧಿಯಲ್ಲೇ ಡಾ.ಚಂದ್ರಶೇಖರ್ ಕನ್ನಡ ಸಾಹಿತ್ಯ ಲೋಕಕ್ಕೆ ಎಂಟನೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಬೆನ್ನಲ್ಲೆ ಡಾ.ಎಸ್.ಎಲ್.ಭೈರಪ್ಪ ಮೂಲಕ ಕನ್ನಡ ಭಾಷೆಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ನಮಗೆ ಸಿಕ್ಕಿದೆ.ಇವರಿಬ್ಬರನ್ನು ಸನ್ಮಾನಿಸುವುದು ನನ್ನ ಪಾಲಿನ ಸೌಭಾಗ್ಯ.ರಾಜಕಾರಣಿಗಳು ಬೇರೆ-ಬೇರೆ ರೀತಿಯ ದಾಖಲೆಗಳು ತಮ್ಮ ಹೆಸರಲ್ಲಿ ಇರಬೇಕು ಎಂದು ಬಯಸುವಾಗ,ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರುವುದು ಮತ್ತು ಆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತಿರುವುದು ನನ್ನ ಪಾಲಿನ ದಾಖಲೆ ಎಂದು ಸಿಎಂ ಹೇಳಿದರು.
ಟೀಕೆ ಸಹಜ:ಯಾವುದೂ ಒಂದು ಹೊಸತನ ಅರಿಸಿ,ಸವಾಲುಗಳನ್ನು ಸ್ವೀಕರಿಸಿ ಹೊರಡುವವರಿಗೆ ಟೀಕೆ-ಟಿಪ್ಪಣಿಗಳು ಸಹಜ.ಆ ರೀತಿಯ ಟೀಕೆಗಳನ್ನು ತನ್ನ ಪಾಲಿನ ಸಲಹೆ ಎಂದು ಭಾವಿಸಿಕೊಳ್ಳುವವರು ತೀರಾ ಕಡಿಮೆ.ಆದರೆ ಭೈರಪ್ಪನವರು ತಮ್ಮ ವಿರುದ್ಧದ ಟೀಕೆಗಳಲ್ಲಿ ಹೊಸತನ ಕಂಡುಕೊಂಡವರು.ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪ ಅವರದ್ದು ಬಹುಚರ್ಚಿತ ವ್ಯಕ್ತಿತ್ವ.ಅವರು ಯಾವತ್ತೂ ವಿವಾದಗಳನ್ನು ಸೃಷ್ಟಿ ಸಿಲ್ಲ,ವಿವಾದಗಳನ್ನು ಅವರನ್ನು ಸುತ್ತಿಕೊಂಡವು ಎಂದು ಸಿಎಂ ಸದಾನಂದಗೌಡ ಬಣ್ಣಿಸಿದರು.
ತಳ-ಬುಡವಿಲ್ಲದ ವಾದ:ಭೈರಪ್ಪರ ಕೃತಿ,ಕಾದಂಬರಿಗಳಲ್ಲಿ ಶೋಧ ಇರಲ್ಲ ಎಂದು ಟೀಕೆ ಮಾಡುವವರ ವಾದ ಯಾವುದೇ ತಳ-ಬುಡ ಇಲ್ಲದ್ದು.ಅವರ ಎಲ್ಲ ಕೃತಿಗಳೂ ತಲ್ಲಣಗೊಳಿಸುವಂಥದ್ದು.ಭೈರಪ್ಪ ಏನೇ ಬರೆಯಲಿ ಅದು ಶೋಧದ ಪರಿಣಾಮ ಆಗಿರುತ್ತದೆ ಎಂಬುದು ಸ್ಪಷ್ಟ.ಭೈರಪ್ಪನವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿರುವುದು,ರಾಜ್ಯ ಸರಕಾರದಿಂದ ಇಷ್ಟೊಂದು ಅದ್ದೂರಿ ಸನ್ಮಾನ ನಡೆದಿರುವುದು ಗಮನಿಸಿದರೆ,ಮುಂದೆ ಇವರಿಗೆ ಅಂತಾರಾಷ್ಟ್ರೀಯ ಬಹುಮಾನ ಕಾದಿದೆ ಎಂದು ಗೋಚರಿಸುತ್ತದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಘಂಟು ತಜ್ಞ ಡಾ. ಜಿ.ವಿ. ವೆಂಕಟಸುಬ್ಬಯ್ಯ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ, ಪ್ರಧಾನ ಕಾರ್ಯದರ್ಶಿ ಬಸವರಾಜು, ಆಯುಕ್ತ ಮನು ಬಳಿಗಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂತೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ಭೈರಪ್ಪ ಒತ್ತಾಯ
ಬೆಂಗಳೂರು, : ಆಯಾ ಪ್ರಾಂತೀಯ ಭಾಷೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಪ್ರತಿಪಾದಿಸಿದ್ದಾರೆ.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು,ಭಾಷಾ ಮಾಧ್ಯಮದ ವಿಚಾರದಲ್ಲಿ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬುದು ಪೋಷಕರ ಹಕ್ಕು ಎಂದು ಸಂವಿಧಾನದ ಕೆಲವು ಕಲಂಗಳನ್ನು ಉಲ್ಲೇಖಿಸಿ ನ್ಯಾಯಲಯಗಳು ತೀರ್ಪು ನೀಡುತ್ತವೆ.ಹಾಗಾದರೇ ಭಾಷಾವಾರು ಪ್ರಾಂತ್ಯಗಳು ರಚನೆ ಮಾಡಿದ್ದು ಯಾಕೆ ಎಂಬುದನ್ನು ಕೋರ್ಟ್‌ಗಳು ಗಮನಿಸುವುದಿಲ್ಲ ಎಂದು ವಿಶ್ಲೇಷಿಸಿದರು.
ಕರ್ನಾಟಕದ ಭಾಷಾ ಮಾಧ್ಯಮ ವಿವಾದವನ್ನು ಉಲ್ಲೇಖಿಸಿದ ಬೈರಪ್ಪ,ಇಲ್ಲಿ ಕನ್ನಡದ ಪರ, ಇಂಗ್ಲಿಷ್‌ಗೆ ವಿರುದ್ಧ ಅನ್ನುವ ವಾದ ಅಲ್ಲ.ಇದು ಪ್ರತಿಯೊಂದು ರಾಜ್ಯದ ಸಮಸ್ಯೆ.ಈ ಬಗ್ಗೆ ನಮ್ಮ ರಾಜ್ಯದ ಜನಪ್ರತಿನಿಧಿಗಳು ಬೇರೆ ರಾಜ್ಯಗಳ ಜನಪ್ರತಿಧಿಗಳಿಗೆ ಈ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು.‘ಮಕ್ಕಳ ಶಿಕ್ಷಣ ಮಾಧ್ಯಮ ನಿರ್ಧರಿಸುವುದು ಪೋಷಕರ ಹಕ್ಕು’ಎಂಬ ನ್ಯಾಯಲಯದ ವಾದವನ್ನು ತಳ್ಳಿ ಹಾಕುವ ಮಸೂದೆ ತರಲು ಒತ್ತಾಯಿಸಬೇಕು. ಇದಕ್ಕಾಗಿ ದೇಶವ್ಯಾಪಿ ಚಳವಳಿ ಆಗದಿದ್ದರೆ,ನ್ಯಾಯಲಯದ ಇಂತಹ ತೀರ್ಪುಗಳು ನಮ್ಮ ಕುತ್ತಿಗೆಯನ್ನು ಹಿಸುಕುತ್ತವೆ ಎಂದು ಪ್ರತಿಪಾದಿಸಿದು.
ವಿಶೇಷ ಪ್ರೋತ್ಸಾಹ ಧನ ನೀಡಿ:ಇಂಗ್ಲಿಷ್ ಪ್ರಭಾವವನ್ನು ತಗ್ಗಿಸಿ ಕನ್ನಡ ಮಾಧ್ಯಮದ ಕುರಿತು ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡಲು ಕನ್ನಡ ಮಾಧ್ಯಮದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾಸಿಕ 250ರೂ.ವಿಶೇಷ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದ ಭೈರಪ್ಪ,ತಮಗೆ ನೀಡಲಾದ 5ಲಕ್ಷ ರೂ.ಗಳನ್ನು ಇದಕ್ಕೆ ವಿನಿಯೋಗಿಸುವಂತೆ ಮನವಿ ಮಾಡಿ ಆ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು,ಭೈರಪ್ಪ ಅವರು ಉತ್ತಮ ಸಲಹೆ ನೀಡಿದ್ದಾರೆ. ಇದಕ್ಕಾಗಿ ಈ ವರ್ಷದ ಬಜೆಟ್‌ನಲ್ಲಿ 3ಕೋಟಿ ರೂ.ಅನುದಾನ ಮೀಸಲಿಡಲಾಗವುದು.ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದರು.
Please follow and like us:
error