ಬದುಕ ಪಯಣದ ಹಾದಿಯಲಿ

ನಾವು ಪಾಠವನ್ನು ಎಲ್ಲಿಂದ ಕಲಿಯುತ್ತೇವೆ, ಅಧ್ಯಯನದಿಂದಲೋ? ತರಬೇತಿಯಿಂದಲೋ? ಬೇರೆ ವ್ಯಕ್ತಿಗಳಿಂದಲೋ? ಉತ್ತರಿಸುವುದು ಕಷ್ಟ. ಆದರೆ ಸಮರ್ಪಕ ಉತ್ತರ ನಾವು ಕಲಿಯುವುದು ಬದುಕಿನ ನಮ್ಮ ವೈಯಕ್ತಿಕ ಅನುಭವಗಳಿಂದ, ಆದರೆ ನಾವು ನಮ್ಮ ಅನುಭವಗಳನ್ನು ಗಂಭೀರವಾಗಿ ಅವಲೋಕಿಸದೇ ಹಾಗೆಯೇ ಹಾದು ಹೋಗಲು ಬಿಡುತ್ತೇವೆ.
ಸಮಸ್ಯೆಗಳ ಪರಿಹಾರಕ್ಕಾಗಿ ಕಷ್ಟದಲ್ಲಿದ್ದಾಗ ವ್ಯಕ್ತಿಗಳಿಂದ ಪುಸ್ತಕಗಳಿಂದ ಪರಿಹಾರ ಹುಡುಕಲು ಹೋರಾಡಿ ನೋವು ಅನುಭವಿಸುತ್ತೇವೆ,. ಹೀಗಾಗಿ ನಮ್ಮ ಬದುಕು ನಮ್ಮ ಪಾಲಿನ ಬಹುದೊಡ್ಡ ಗೈಡ್.

ಬದುಕಿನಲ್ಲಿ ತೊಂದರೆ, ನೋವು ಸಮಸ್ಯೆಗಳು ಬಂದೇ ಬರುತ್ತವೆ ಅವುಗಳಿಂದ ಪಾರಾಗಲು ಸಾಧ್ಯವೇ ಇಲ್ಲ. ಕಷ್ಟ ಬಂದಾಗ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಅಲ್ಲಲ್ಲಿ ಅಲೆದಾಡುತ್ತೇವೆ, ಓಡಾಡುತ್ತೇವೆ. ಓಡಾಡಿದರೆ ಹೊತ್ತು ಮುಳುಗುವುದಿಲ್ಲ, ಹೊತ್ತು ಮುಳುಗಲು ಸಂಜೆಯವರೆಗೂ ಕಾಯಲೇಬೇಕು. ಭ್ರಮೆಯಿಂದ ಓಡಾಡಬಹುದು, ಆದರೆ ಭ್ರಮೆ, ಆತಂಕ ನಮ್ಮನ್ನು ನಮಗರಿವಿಲ್ಲದಂತೆ ಓಡಾಡಿಸುತ್ತದೆ.
ನೀವು ಹೇಳಬಹುದು, ಅಯ್ಯೋ ಹೇಳುವುದು ಸುಲಭ, ಎದುರಿಸುವುದು ಕಷ್ಟ ಎಂದು ನಾನು ನಿಮ್ಮ ವಾದವನ್ನು ಒಪ್ಪುತ್ತೇನೆ. ಈ ವಾದವನ್ನು ವೈಯಕ್ತಿಕವಾಗಿ ಅನಿಭವಿಸಿಯೇ ಹೇಳುತ್ತಿದ್ದೇನೆ.
ಆಸೆಯೇ ದುಃಖಕ್ಕೆ ಮೂಲ, ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ಧ ಹೇಳಿದರೂ ಆಸೆಯಿಂದ ಸಾಸಿವೆ ತರದೇ ನಾವು ಒದ್ದಾಡುತ್ತೇವೆ.
ನನ್ನ ದಶಕದ ತರಬೇತಿ, ವ್ಯಕ್ತಿಗಳೊಂದಿಗಿನ ಸಂವಹನ ಎದುರಿಸಿದ ವೈಯಕ್ತಿಕ ಕಷ್ಟಗಳು, ನಾನಾಗಿಯೇ ಆಹ್ವಾನಿಸಿಕೊಂಡ ಅದ್ವಾನಗಳು ನನಗೆ ಸಾಕಷ್ಟು ಪಾಠ ಕಲಿಸಿವೆ.
ವ್ಯಾಧಿ ಬಂದಾಗ ಒದರು ಎನ್ನುವಂತೆ ಒಬ್ಬನೇ ಒಂಟಿಯಾಗಿ ಒದರಿದ್ದೇನೆ, ಚೀರಿದ್ದೇನೆ, ಅತ್ತಿದ್ದೇನೆ, ನರಳಾಡಿದ್ದೇನೆ. ಆದರೆ ಆ ನರಳಾಟಕ್ಕೆ ಅರ್ಥವಿದೆಯೇ?
ಈಗ ಅರ್ಥವಾದದ್ದನ್ನು, ಅರ್ಥಪೂರ್ಣ ಅನಿಸಿದ್ದನ್ನು ಹೇಳುವುದು ಯಾಕೋ ಅಗತ್ಯವೆನಿಸಿದೆ. ನಮ್ಮ ದುಃಖಕ್ಕೆ ಕಾರಣ ಹುಡುಕದೇ, ದುಃಖವನ್ನು ಸಮರ್ಥವಾಗಿ ಎದುರಿಸಿ, ಆ ದುಃಖದಲ್ಲಿಯೇ ಸಂತೋಷವಾಗಿರಲು ಕಲಿಯೋಣ. ದುಃಖಕ್ಕೆ ಕಾರಣ ಹುಡುಕಿ, ಅದನ್ನು ಅರಿತುಕೊಂಡು, ಜೀವಂತವಿರುವ ವ್ಯಕ್ತಿಯ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡುವ ಕೆಲಸ ಬೇಡ.
ನಮ್ಮಿಂದಾದ ತಪ್ಪುಗಳು ನಮ್ಮ ಎಚ್ಚರಿಕೆಯಾಗಿರಲಿ, ಆ ಎಚ್ಚರಿಕೆಯ ಮಧ್ಯೆ ಸಂತಸವಾಗಿರಲು ಪ್ರಯತ್ನಿಸೋಣ. ಅಂತಹ ಪ್ರಯತ್ನಗಳ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಲು ಪ್ರಾಮಾಣಿಕವಾಗಿ ನನ್ನ ಬರಹಗಳ ಮೂಲಕ ಪ್ರಯತ್ನಿಸುತ್ತೇನೆ.
ಮನುಷ್ಯನ ಗುಣಧರ್ಮ ಹುಡುಕಾಟ. ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಹುಡುಕುವುದು ಅವನ ಸ್ವಭಾವ. ಈ ವಾಸ್ತವ ಗೊತ್ತಿದ್ದರೂ ನಮ್ಮ ಹುಡುಕಾಟ ನಿಲ್ಲುವುದಿಲ್ಲವಲ್ಲ?
ಹರೆಯದ ಪ್ರಾಯದಲ್ಲಿ ಎಲ್ಲವೂ ಸುಂದರ, ಅಪ್ಯಾಯಮಾನ, ಆಕರ್ಷಣೆ. ಗಂಡಾದರೆ ಹೆಣ್ಣಿಗೆ, ಹೆಣ್ಣಾದರೆ ಗಂಡಿಗಾಗಿ ಹುಡುಕಾಟ. ಹೆಣ್ಣು, ಹೊನ್ನು, ಮಣ್ಣು ಮನುಷ್ಯನ ಆಕರ್ಷಣೆಯೂ ಹೌದು, ದೌರ್ಬಲ್ಯವೂ ಹೌದು. 
ಎಲ್ಲವೂ ಅಗತ್ಯವಿರುವಷ್ಟು ಇದ್ದರೆ ಸರಿ,  ಆದರೆ ಆಕರ್ಷಣೆ ವ್ಯಾಮೋಹವಾಗಿ ಹೆಚ್ಚಾದರೆ ದೌರ್ಬಲ್ಯ.
ಈ ಮೂರನ್ನು ಬಿಟ್ಟು ಬದುಕುತ್ತೇವೆ ಎಂದರೆ  ನಾವು ಸಂತರಾಗುತ್ತೇವೆ, ಆದರೆ ಬಿಟ್ಟಿದ್ದೇವೆ ಎಂದು ಹೇಳಿದರೆ ಆಷಾಢಭೂತಿ (ಹಿಪೋಕ್ರ್ಯಾಟ್ಸ್)ಗಳಾಗುತ್ತೇವೆ.
ಹದಿಹರೆಯದಲ್ಲಿ ಹೆಣ್ಣು ಅಥವಾ ಗಂಡು ಆಕರ್ಷಣೆಯಾದರೆ, ಮಧ್ಯೆ ವಯಸ್ಸು ತಲುಪಿದೊಡನೆ ಮನಸ್ಸು ಹೊನ್ನಿಗಾಗಿ ಅಂದರೆ ಗಳಿಸುವ ಧನದಾಹಕ್ಕೆ ಆಸೆ ಪಡುತ್ತದೆ. ಮಧ್ಯ ವಯಸ್ಸು ದಾಟಿ ಪ್ರೌಢಾವಸ್ಥೆಗೆ ತಲುಪಿದಾಗ ಮಣ್ಣು ಅಂದರೆ ಆಸ್ತಿ ಗಳಿಸುವ ಹುಚ್ಚುಗಳ ಮಧ್ಯೆ ಬದುಕ ಸಾಗಿಸುವ ನಾವು ಸಂತಸ, ನೆಮ್ಮದಿ, ಆರೋಗ್ಯ ಕಾಪಾಡಿಕೊಳ್ಳಲು ಹಪಹಪಿಸುತ್ತೇವೆ. ಹಾಗಾದರೆ ಯಾವುದನ್ನು ನಾವು ಪಡೆಯುತ್ತೇವೆ, ಎಲ್ಲಿ ಸಲ್ಲುತ್ತೇವೆ ಎಂದು ಅವಲೋಕಿಸುವುದೇ ಜೀವನ.
                                                             – ಸಿದ್ದು ಯಾಪಲಪರವಿ
Please follow and like us:
error