ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಜ್ಜು : ಕಟ್ಟುನಿಟ್ಟಿನ ನೀತಿ ಸಂಹಿತೆ ಪಾಲನೆಗೆ ಸೂಚನೆ

 ಹದಿನಾರನೆ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಕೊಪ್ಪಳ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ಸೂಚನೆ ನೀಡಿದ್ದಾರೆ.
ವೇಳಾಪಟ್ಟಿ : ಕೇಂದ್ರ ಚುನಾವಣಾ ಆಯೋಗ ಈಗಾಗಲೆ ಪ್ರಕಟಿಸಿರುವ ಚುನಾವಣೆ ವೇಳಾಪಟ್ಟಿ ವಿವರ ಇಂತಿದೆ.  ಮಾ. ೧೯ ರಂದು ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.  ನಾಮಪತ್ರ ಸಲ್ಲಿಸಲು ಮಾ. ೨೬ ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಮಾ. ೨೭ ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಮಾ. ೨೯ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ ೧೭ ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.  ಮತಗಳ ಎಣಿಕೆ ಕಾರ್ಯ ಮೇ. ೧೬ ರಂದು ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಮೇ. ೨೮ ರ ಒಳಗಾಗಿ ಪೂರ್ಣಗೊಳ್ಳಲಿದೆ.  ಚುನಾವಣಾ ನೀತಿ ಸಂಹಿತೆ ಮೇ. ೨೮ ರವರೆಗೂ ಜಾರಿಯಲ್ಲಿರುತ್ತದೆ.
ವಾಹನಗಳು ಜಿಲ್ಲಾಡಳಿತದ ಸುಪರ್ದಿಗೆ : ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ, ಜಿಲ್ಲಾ ಪಂಚಾಯತಿ, ವಿವಿಧ ಸ್ಥಳೀಯ ಸಂಸ್ಥೆಗಳು, ಎಪಿಎಂಸಿ ಗಳು ಸೇರಿದಂತೆ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ವಾಹನಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ ಲೋಕಸಭೆ ಸದಸ್ಯರು, ಜಿಲ್ಲಾ ಪಂಚಾಯತಿ, ಕಾಡಾ, ಜಿಲ್ಲೆಯ ವಿವಿಧ ಎಪಿಎಂಸಿ ಗಳು, ತಾಲೂಕಾ ಪಂಚಾಯತಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಾಹನಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲು ಕ್ರಮ ಜರುಗಿಸಲಾಗಿದೆ.
ಐಬಿ/ಸರ್ಕ್ಯೂಟ್ ಹೌಸ್ ವಶಕ್ಕೆ : ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಬಂಗಲೆಗಳು, ಐ.ಬಿ., ಸರ್ಕ್ಯೂಟ್ ಹೌಸ್‌ಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ.  ಈ ನಿಟ್ಟಿನಲ್ಲಿ ಎಲ್ಲ  ಸರ್ಕಾರಿ ಬಂಗಲೆಗಳು, ಐ.ಬಿ., ಸರ್ಕ್ಯೂಟ್ ಹೌಸ್‌ಗಳನ್ನು ಆಯಾ ತಾಲೂಕಿನ ತಹಸಿಲ್ದಾರರು ತಮ್ಮ ಸುಪರ್ದಿಗೆ ಪಡೆಯಲು ಸೂಚನೆ ನೀಡಲಾಗಿದ್ದು, ಅದರಂತೆ ಕ್ರಮ ವಹಿಸಲಾಗಿದೆ.
ಬ್ಯಾನರ‍್ಸ್, ಫಲಕಗಳ ತೆರವಿಗೆ ಸೂಚನೆ : ಚುನಾವಣಾ ನೀತಿ ಸಂಹಿತೆ ಜಾರಿಯನ್ವಯ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿನ ರಾಜಕೀಯ ವ್ಯಕ್ತಿಗಳ ಭಾವಚಿತ್ರವಿರುವ ಬಂಟಿಂಗ್ಸ್, ಹೋರ್ಡಿಂಗ್ಸ್, ಬ್ಯಾನರ‍್ಸ್ ಇತ್ಯಾದಿ ಪ್ರಚಾರ ಸಾಮಗ್ರಿಗಳನ್ನು ತಕ್ಷಣದಿಂದ ತೆರವುಗೊಳಿಸಲು ಈಗಾಗಲೆ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಚಾರ ಸಾಮಗ್ರಿಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಧಾರ್ಮಿಕ ಸ್ಥಳಗಳ ಬಳಕೆ ನಿಷೇಧ : ಲೋಕಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಚುನಾವಣೆ ಕುರಿತಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಚುನಾವಣಾ ಪ್ರಚಾರ ಕೈಗೊಳ್ಳುವಂತಹ ಯಾವುದೇ ಸಭೆ, ಸಮಾರಂಭ ಅಥವಾ ಇನ್ನಿತರೆ ಕಾರ್ಯಕ್ರಮ ಅಥವಾ ಚಟುವಟಿಕೆ ನಡೆಸುವುದನ್ನು ಖಿhe ಖeಟigious Iಟಿsಣiಣuಣioಟಿs (Pಡಿeveಟಿಣioಟಿ oಜಿ ಒisuse) ಂಛಿಣ, ೧೯೮೮ ಓo. ೪೧ oಜಿ ೧೯೮೮ ರನ್ವಯ ನಿಷೇಧಿಸಲಾಗಿದೆ.  ಈ ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
ಶಸ್ತ್ರಗಳನ್ನು ಒಪ್ಪಿಸಲು ಸೂಚನೆ : ಲೋಕಸಭೆ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ, ಜಿಲ್ಲ್ಲೆಯಲ್ಲಿ ರೈತರು, ಗಣವ್ಯಕ್ತಿಗಳು ಮತ್ತು ಇತರರು ಹೊಂದಿರುವ ಶಸ್ತ್ರಗಳನ್ನು ಪೊಲೀಸ್ ಇಲಾಖೆಗೆ ಒಪ್ಪಿಸುವಂತೆ ಸೂಚನೆ ನೀಡಲಾಗಿದೆ.
  ಲೋಕಸಭೆ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಮೇ ೨೮ ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.  ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಸ್ತ್ರಗಳನ್ನು ಪೊಲೀಸ್ ಇಲಾಖೆಯಲ್ಲಿ ನೀತಿಸಂಹಿತೆ ಮುಗಿಯುವವರೆಗೆ ಪೊಲೀಸ್ ಇಲಾಖೆಯಲ್ಲಿ ಠೇವಣಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ.  ಈ ಆದೇಶ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಆರ್.ಬಿ.ಐ. ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.

Leave a Reply