ಭಗವದ್ಗೀತೆ ಮೇಲೆ ಪ್ರಮಾಣ ಮಾಡಿಸಿದ ಬಿಜೆಪಿ ನಾಯಕರು

 ಬೆಂಗಳೂರು, ಡಿ.21: ಗುರುವಾರ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಶಾಸಕರ ಮೇಲೆ ನಂಬಿಕೆ ಕಳೆದುಕೊಂಡಿರುವ ಬಿಜೆಪಿ, ತಮ್ಮ ಶಾಸಕರನ್ನೆಲ್ಲಾ ರೆಸಾರ್ಟ್ ಬಂಧನದಲ್ಲಿರಿಸಿ, ಸಿಎಂ ಪರ ಮತ ಚಲಾಯಿಸುವಂತೆ ಎಲ್ಲ ಶಾಸಕರನ್ನು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿದೆ. ಪಕ್ಷದೊಳಗಿನ ಭಿನ್ನಮತ, ಗುಂಪುಗಾರಿಕೆ, ಆಂತರಿಕ ಕಚ್ಚಾಟ ಮತದಾನದ ವೇಳೆ ಶಾಸಕರನ್ನು ಅಡ್ಡಮತದಾನದತ್ತ ಸೆಳೆಯಬಹುದೆಂಬ ಆತಂಕಕ್ಕೀಡಾಗಿರುವ ಬಿಜೆಪಿ, ಇಂದು ತಮ್ಮ ಶಾಸಕರನ್ನೆಲ್ಲ ತುಮಕೂರು ರಸ್ತೆಯ ಗೋಲ್ಡನ್ ಫಾರ್ಮ್ ರೆಸಾರ್ಟ್‌ನಲ್ಲಿ ‘ಗೃಹಬಂಧನ’ ದಲ್ಲಿರಿಸಿತ್ತು.
ತಮ್ಮ ಶಾಸಕರ ಮೇಲೆ ತಮಗೆ ವಿಶ್ವಾಸವಿದ್ದು, ಅವರನ್ನು ಯಾವುದೇ ಕಾರಣಕ್ಕೂ ರೆಸಾರ್ಟ್‌ಗೆ ಕರೆದೊಯ್ಯುವುದಿಲ್ಲ ಎಂದು ಹೇಳುತ್ತಲೇ ಮುಖ್ಯಮಂತ್ರಿ ಸದಾನಂದ ಗೌಡ ಕೊನೆಗೆ ತಮ್ಮೆಲ್ಲ ಶಾಸಕರನ್ನು ರೆಸಾರ್ಟ್ ಬಂಧನದಲ್ಲಿರಿಸುವ ಮೂಲಕ ಅಡ್ಡಮತದಾನ ನಡೆಯದಂತೆ ಎಚ್ಚರ ವಹಿಸಿದ್ದಾರೆ. ರೆಸಾರ್ಟ್‌ನಲ್ಲಿಯೇ ಪಕ್ಷದ ಶಾಸಕಾಂಗ ಸಭೆ ನಡೆಸಿದ ಬಿಜೆಪಿ, ತಮ್ಮ ಪಕ್ಷದ ಶಾಸಕರ ಮೇಲೆ ನಂಬಿಕೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ದೇವರ ಮೇಲೆ ಭಯಪಡಿಸಿ ಅಡ್ಡಮತದಾನಕ್ಕೆ ಅವಕಾಶ ನೀಡದಿರಲು ‘ಎಲ್ಲ ಶಾಸಕರು ಸದಾನದ ಗೌಡರಿಗೆ ಮತಹಾಕುತ್ತೇವೆ’ ಎಂದು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿಕೊಂಡಿದೆ. ಜೊತೆಗೆ ಭಗವದ್ಗೀತೆಯ ಪ್ರತಿಯನ್ನು ಕೂಡಾ ಎಲ್ಲ ಶಾಸಕರಿಗೆ ವಿತರಿಸಿರುವ ಬಿಜೆಪಿ ನಾಯಕರು, ಶಾಸಕರೆಲ್ಲರೂ ದೇವರ ಮೇಲಿನ ಭಯದಿಂದಾದರೂ ಅಡ್ಡಮತದಾನ ಮಾಡದಿರುವಂತೆ ನೋಡಿಕೊಂಡಿದ್ದಾರೆ.
ಒಂದೆಡೆ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿ ಮೇಲೆ ಮತ್ತೆ ಕಣ್ಣಿಟ್ಟಿದ್ದು, ಯಾಗ, ಪೂಜೆ ಪುರಸ್ಕಾರದಲ್ಲಿ ತೊಡಗಿರುವುದು ಸದಾನಂದ ಗೌಡರಿಗೆ ಚಿಂತೆಯನ್ನುಂಟು ಮಾಡಿದ್ದರೆ, ಇನ್ನೊಂದೆಡೆ ಪಕ್ಷದೊಳಗಿನ ಆಂತರಿಕ ಕಚ್ಚಾಟ, ಗುಂಪುಗಾರಿಕೆ ನಡುಕವನ್ನುಂಟು ಮಾಡಿದೆ. ಇದನ್ನೆಲ್ಲ ಒಟ್ಟಾಗಿ ಕೊಂಡೊಯ್ಯ ಬೇಕಾದ ಹೊಣೆಗಾರಿಕೆ ಸದಾನಂದ ಗೌಡರ ಮೇಲಿರುವುದರಿಂದ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿ ಅಡ್ಡಮತದಾನ ತಡೆಯುವ ತಂತ್ರವನ್ನು ಅವರು ನಡೆಸಿದ್ದಾರೆ.
ರೆಸಾರ್ಟ್‌ನಲ್ಲಿ ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷ ತಾಯಿ ಇದ್ದಂತೆ, ಶಾಸಕರು ಮಕ್ಕಳಿದ್ದಂತೆ. ನಂಬಿಕೆ, ವಿಶ್ವಾಸದ ಮೇಲೆ ಮತ ನೀಡಿ, ಪಕ್ಷದ ತತ್ವ-ಸಿದ್ಧಾಂತ ಕಾಪಾಡಿ ಎಂದು ಶಾಸಕರಿಗೆ ಕಿವಿ ಮಾತು ಹೇಳಿದರು. ಪಕ್ಷದೊಳಗೆ ಗುಂಪುಗಾರಿಕೆ ಇರುವುದರಿಂದ ಅಡ್ಡಮತದಾನ ನಡೆಯುವುದನ್ನು ತಪ್ಪಿಸಲು ಬಿಜೆಪಿ ತನ್ನ ಎಲ್ಲ ಶಾಸಕರನ್ನು ಇಂದು ರೆಸಾರ್ಟ್ ಬಂಧನದಲ್ಲಿರಿಸಿದೆ. ನಾಳೆ ಬೆಳಗ್ಗೆ 9 ಗಂಟೆಗೆ ವಿಧಾನಸೌಧದಲ್ಲಿ ಮತ್ತೆ ಪಕ್ಷದ ಶಾಸಕಾಂಗ ಸಭೆ ನಡೆಸಲು ಮುಂದಾಗಿರುವ ಬಿಜೆಪಿ ತಮ್ಮ ಶಾಸಕರಿಗೆ ಮತ್ತೊಂದು ಸುತ್ತಿನ ಸಲಹೆ, ಸೂಚನೆಗಳನ್ನು ನೀಡಲಿದೆ.
ಬಿಜೆಪಿಯ ಬಹುತೇಕ ಶಾಸಕರನ್ನು ಇಂದು ಬೆಳಗ್ಗೆ ನಗರದ ಶಾಸಕರ ಭವನದಿಂದ ನೇರವಾಗಿ ಎರಡು ಪ್ರತ್ಯೇಕ ಬಸ್‌ಗಳ ಮೂಲಕ ತುಮಕೂರು ರಸ್ತೆಯಲ್ಲಿರುವ ಗೋಲ್ಡನ್ ಫಾರ್ಮ್ ರೆಸಾರ್ಟ್‌ಗೆ ಕರೆದೊಯ್ಯಲಾಯಿತು. ಉಳಿದ ಸಚಿವರು, ಶಾಸಕರು ತಮ್ಮ ಖಾಸಗಿ ವಾಹನದಲ್ಲಿ ರೆಸಾರ್ಟ್‌ಗೆ ತಲುಪಿದರು. ರೆಸಾರ್ಟ್‌ನಲ್ಲಿಯೇ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಸಿದ್ದು, ಮುಖ್ಯಮಂತ್ರಿ ಸದಾನಂದ ಗೌಡರಿಗೆ ಮತ ಹಾಕುವಂತೆ ಸೂಚಿಸಲಾಗಿದೆ. ಯಾರೂ ಮತದಾನದ ವೇಳೆ ಅಡ್ಡಮತದಾನ ಮಾಡದೆ ತಮ್ಮ ಅಭ್ಯರ್ಥಿಗೆ ಕಡ್ಡಾಯವಾಗಿ ಮತಹಾಕುವಂತೆ ಸಭೆಯಲ್ಲಿ ಕಟ್ಟಪ್ಪಣೆ ನೀಡಲಾಗಿದೆ.
ಇಂದು ರಾತ್ರಿ ರೇಸಾರ್ಟ್‌ನಲ್ಲಿಯೇ ಶಾಸಕರೆಲ್ಲರೂ ವಾಸ್ತವ್ಯ ಹೂಡಿದ್ದು, ನಾಳೆ ಬೆಳಗ್ಗೆ ಮತದಾನದ ವೇಳೆ ನೇರ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಲಿದ್ದಾರೆ. ಬಿಜೆಪಿಯೊಳಗಿನ ಭಿನ್ನಮತದ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಬಹುದು, ಜೊತೆಗೆ ಬಿಜೆಪಿ ಶಾಸಕರ ಮನವೊಲಿಸಿ ಕಾಂಗ್ರೆಸ್ ತಮ್ಮ ಅಭ್ಯರ್ಥಿ ಪರ ಅಡ್ಡಮತದಾನ ಮಾಡಬಹುದೆಂಬ ಭಯದಿಂದ ಬಿಜೆಪಿ ತಮ್ಮ ಶಾಸಕರನ್ನೆಲ್ಲ ರೆಸಾರ್ಟ್ ಬಂಧನದಲ್ಲಿರಿಸಿದೆ. ನಾಳೆ ನಡೆಯುವ ಮತದಾನದ ವೇಳೆ ಯಾವ ರೀತಿಯ ರಣತಂತ್ರ ನಡೆಸಬೇಕು. ಜೊತೆಗೆ ಅಡ್ಡಮತದಾನಕ್ಕೆ ಯಾರೂ ಮುಂದಾಗದಂತೆ ಎಚ್ಚರಿಕೆ ಕೂಡಾ ಶಾಸಕಾಂಗ ಸಭೆಯಲ್ಲಿಂದು ಶಾಸಕರಿಗೆ ನೀಡಲಾಗಿದೆ. ಎಲ್ಲ ಶಾಸಕರಿಗೂ ಬಿಜೆಪಿ ವಿಪ್‌ನ್ನು ಜಾರಿ ಮಾಡಿದೆ.
ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಅಶೋಕ್, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಸುರೇಶ್ ಕುಮಾರ್, ಲಕ್ಷ್ಮಣ್ ಸವದಿ, ಈಶ್ವರಪ್ಪ ಮತ್ತಿತರರು ಶಾಸಕರೊಂದಿಗೆ ಹಲವು ಸುತ್ತಿನ ಮಾತುಕತೆ ಕೂಡಾ ನಡೆಸಿದರು. ವಿಧಾನ ಪರಿಷತ್ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರನ್ನು ಇರಿಸಲಾಗಿರುವ ರೆಸಾರ್ಟ್‌ವೊಂದಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಇತರ ಬಿಜೆಪಿ ನಾಯಕರು ಬುಧವಾರ ಭೇಟಿ ನೀಡಿದ  ಕೃಪೆ : ವಾರ್ತಾಭಾರತಿ
Please follow and like us:
error