ನಿನ್ನಿಂದಲೇ ಚಿತ್ರ ವಿಮರ್ಶೆ -ಪ್ರೀತಿ ಎಂಬ ಯುದ್ಧಭೂಮಿಯಲಿ ಪ್ರೇಮದ ಹರಸಾಹಸ..!

ಪ್ರೀತಿ ಎಂಬ ಯುದ್ಧಭೂಮಿಯಲಿ ಪ್ರೇಮದ ಹರಸಾಹಸ..!

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ನೋಡಿ ವರ್ಷದ ಬಳಿಕ ಮತ್ತೇ ತೆರೆಯ ಮೇಲೆ ಕಾಣಿಸಿಕೊಂಡಿರುವ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಥೇಟರ್ ತುಂಬಾ ಜನವೋ ಜನ. ಕುಳಿತುಕೊಳ್ಳಲು ಸೀಟಿರಲಿ, ಟಾಕೀಸಿನಲ್ಲಿ ನಿಲ್ಲಲೂ ಜಾಗವಿಲ್ಲ. ಅ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿರುವ ನಿನ್ನಿಂದಲೇ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಲು ಇನ್ನಿಲ್ಲದ ಕಸರತ್ತು ಮಾಡಿದೆ. ಫಲಿತಾಂಶ ಫಸ್ಟ್‌ಕ್ಲಾಸ್ ಅಲ್ಲ, ಹಾಗಂತ ಫೇಲೂ ಅಲ್ಲ, ಸುಮಾರು ಅಥವಾ ಸರಾಸರಿ ಅಂದ್ರು ನೋಡಿದೋರೆಲ್ಲಾ!
     ಟೈಟಲ್ ನೋಡಿದಾಕ್ಷಣ ಅಥವಾ ಕೇಳಿದಾಕ್ಷಣ ಇದೊಂದು ಲವ್ ಸ್ಟೋರಿ ಎಂಬುದು ಅಪರೂಪಕ್ಕೆ ಸಿನಿಮಾ ನೋಡುವವರಿಗೂ ಗೊತ್ತಾಗುತ್ತೆ ಬಿಡಿ. ಆದರೆ ಎಲ್ಲ ಲವ್ ಸ್ಟೋರಿಯಲ್ಲಿ ಇರುವಂತೆ ಇಲ್ಲಿನ ಪ್ರೇಮಿಗಳು ಬರೀ ಮರ ಸುತ್ತುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಆಕಾಶದಲ್ಲಿ ತೇಲಾಡುತ್ತಾರೆ. ೬೦೦೦ ಅಡಿ ಎತ್ತರದ ವಿಮಾನದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಬಂದು ಸಾಹಸ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ. ಗೆದ್ದ ಖುಷಿಯಲ್ಲಿ ಕೊಡುವ ಮುತ್ತು ಚಿತ್ರವನ್ನು ಮುಂದಕ್ಕೆ ಪಾಸ್ ಮಾಡುತ್ತಾ ಸಾಗುತ್ತದೆ. 
     ನಾಯಕಿ ಅಲ್ಲಿಯವರೆಗೂ ಸುಮ್ಮನಿದ್ದು ಮುತ್ತು ಸಿಕ್ಕ ಬಳಿಕ ಐ ಲವ್ ಯೂ ಎನ್ನುತ್ತಾಳೆ. ನಾಯಕ ನೀನು ನನ್ನ ಬೆಸ್ಟ್ ಫ್ರೆಂಡಷ್ಟೇ ಎನ್ನುತ್ತಾನೆ. ಆಗ ಅವರಿಬ್ಬರ ಮಧ್ಯೆ ಇರೋದು ಸ್ನೇಹಾನಾ ಪ್ರೀತಿನಾ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ೪೫ ದಿನದಲ್ಲಿ ನಾಯಕನೇ ನಾಯಕಿಗೆ ಮದುವೆ ಗಂಡನ್ನು ಹುಡುಕಿಕೊಡುವ ಸವಾಲು ಸ್ವೀಕರಿಸುತ್ತಾನೆ. ಅಫ್‌ಕೋರ್ಸ್ ಆ ಕೆಲಸವನ್ನೂ ಸಿನ್ಸಿಯರ್ ಆಗಿ ಮಾಡುತ್ತಾನೆ ಕೂಡಾ. ಆಗ ಪ್ರೇಕ್ಷಕರೇ ಕನ್‌ಫ್ಯೂಸ್. ಇದೇನಿದು ನಾಯಕ ಲವ್ ಮಾಡುವುದು ಬಿಟ್ಟು ತನ್ನ ಹುಡುಗಿಗೆ ವರ ನೋಡೋ ಕೆಲಸ ಶುರು ಹಚ್ಕೋಂಡನಲ್ಲಪ್ಪಾ ಎನ್ನುತ್ತಾ ಈ ಕಥೆ ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ಯೋಚಿಸುತ್ತಿದ್ದಂತೆ ಪುನೀತ್ ಅಭಿನಯದ ಆರಸು ಚಿತ್ರ ಕಣ್ಮುಂದೆ ಬಂದು ಹೋಗುತ್ತದೆ. 
      ಕೊನೆಗೂ ಸಕಲ ಲಕ್ಷಣಗಳುಳ್ಳ ವರನನ್ನು ಮೈಸೂರಿನಿಂದ ನ್ಯೂಯಾರ್ಕ್‌ಗೆ ಕರೆಸಿ ಹುಡುಗಿ ಎದುರು ನಿಲ್ಲಿಸುತ್ತಾನೆ. ನಾಯಕಿ ನಾನು ಮದುವೆ ಆಗೋದಾದ್ರೆ ನಿನ್ನನ್ನೇ. ಇಲ್ಲಾಂದ್ರೆ ಇನ್ನೆಂದು ಜೀವನದಲ್ಲಿ ನನಗೆ ಕಾಣಿಸಿಕೊಳ್ಳಬೇಡ, ಮಾತನಾಡಿಸಬೇಡ ಎಂದು ಹೇಳಿ ಹೋಗುತ್ತಿದ್ದಂತೆ ಎಂದೂ ಡಿಸ್‌ಅಪಾಯಿಂಟ್ ಆಗದ ಹುಡುಗನ ಮನಸು ಗೊಂದಲದ ಗೂಡಾಗುತ್ತದೆ. ನಾಯಕಿಯನ್ನು ಕಾಣಲು, ಮಾತನಾಡಿಸಲು ಹಾತೊರೆಯುತ್ತಾನೆ. ಒದ್ದಾಡುತ್ತಾನೆ. ರೇಗಾಡುತ್ತಾನೆ. ಕೊನೆಗೆ ಆದು ಸ್ನೇಹ ಆಲ್ಲ ಪ್ರೀತಿ ಎಂದು ಕನ್‌ಕ್ಲೂಸ್‌ಗೆ ಬಂದು ಲವ್ ಎಕ್ಸಪ್ರೆಸ್ ಮಾಡಲು ಹುಡುಗಿ ಇದ್ದ ಕಡೆ ಹೋಗಿ ಇನ್ನೇನು ಐ ಲವ್ ಯೂ ಎಂದು ಹೇಳಬೇಕು ಆಷ್ಟರಲ್ಲಿ ರಸ್ತೆ ದಾಟುತ್ತಿದ್ದ ನಾಯಕಿಗೆ ಆಕ್ಸಿಡೆಂಟ್..
       ಪ್ರೀತಿ ಅನ್ನೋದು ಯುದ್ಧ ಇದ್ದಂತೆ. ಅದನ್ನ ಸ್ಟಾರ್ಟ್ ಮಾಡುವುದು ಸರಳ, ಆದರೆ ಸ್ಟಾಪ್ ಮಾಡುವುದು ಕಷ್ಟ ಎನ್ನುವಂಥ ಅರ್ಥಪೂರ್ಣ ಸಂಭಾಷಣೆಯ ಸಾಲುಗಳು ಚಿತ್ರದುದ್ದಕ್ಕೂ ಇವೆ. ಮಣಿಶರ್ಮಾ ಸಂಗೀತ ಅಲ್ಲಲ್ಲಿ ಇಂಪು, ಕೆಲವು ಕಡೆ ಕಷ್ಟವಾದರೂ ಮೂರು ಹಾಡುಗಳು ಗುನುಗುವಂತಿವೆ. ನ್ಯೂಯಾರ್ಕನ ಲೋಕೇಷನ್‌ಗಳನ್ನು ಸೆರೆ ಹಿಡಿದಿರುವ ರೀತಿ ಹೊಸ ಫೀಲ್ ಕೊಡುತ್ತೆ. ಚಿತ್ರದ ಹೈಲೈಟ್ ಎಂದರೆ ಜೋಜೆನಿಸ್ ಅವರ ಸಂಯೋಜಿಸಿದ ಸ್ಕೈಡೈವಿಂಗ್ ಹಾಗೂ ಪುನೀತ್ ನಟನೆ. ಹೊಸನಟಿ ಎರಿಕಾ ನೋಡಲು ಸುಂದರ, ನಟನೆಯೂ ಇಷ್ಟ. ಆಕೆಯ ಕುಣಿತ ಮತ್ತಷ್ಟೂ ಇಷ್ಟ ಎನ್ನುವ ಮಾತು ಪ್ರೇಕ್ಷಕರ ಕಡೆಯಿಂದ ಸಿಕ್ಕರೆ ಅತಿಶಯೋಕ್ತಿಯಾಗಲಾರದು. ತೆಲುಗುನಟ ಬ್ರಹ್ಮಾನಂದ ಒಂದು ದೃಶ್ಯದಲ್ಲಿ ಬಂದು ಹೋಗಿ ಖುಷಿ ಕೊಡುತ್ತಾರೆ. ಸಾಧು ಕೋಕಿಲ ನಗಿಸಿ ಹೋಗುತ್ತಾರೆ. ಮಿಕ್ಕಂತೆ ಅವಿನಾಶ್, ತಿಲಕ್, ವಿನಾಯಕ ಜೋಷಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಚಿತ್ರದಲ್ಲಿ ಎರಡೇ ಫೈಟ್ ಇರೋದು ಪುನೀತ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರೂ ಸ್ಟಂಟ್ಸ್ ಮೈನವಿರೇಳುವಂತಿವೆ.    
-ಚಿತ್ರಪ್ರಿಯ ಸಂಭ್ರಮ್, ಕೊಪ್ಪಳ.
ninnindale kannada film review kannda cinema ninnindale review

Leave a Reply