ಗವಿಮಠದಲ್ಲಿ ಶುರುವಾಗಿದೆ ರೊಟ್ಟಿಗಳ ಸಪ್ಪಳ.

ಕೊಪ್ಪಳ-17- ಶ್ರೀ ಗವಿಮಠದ ಮಹಾ ರಥೋತ್ಸವ ದಿನಾಂಕ ೨೬-೦೧-೨೦೧೬ ರಂದು ಜರುಗಲಿರುವ ಪ್ರಯುಕ್ತ ಮಹಾದಾಸೋಹಕ್ಕೆ  ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ  ಭಕ್ತರಿಂದ ರೊಟ್ಟಿ, ಧವಸ ಧಾನ್ಯಗಳನ್ನು, ಶ್ರೀಗವಿಮಠಕ್ಕೆ ಅರ್ಪಿಸುತಲಿದ್ದಾರೆ. ಕುಷ್ಟಗಿ ನಗರದ ತೆಗ್ಗಿನ ಓಣಿಯ ಭಕ್ತರು ೧೦೦೦೦ ರೊಟ್ಟಿ, ಕಡಲೆಪುಡಿ ಚಟ್ನೆ, ತಾವರಗೇರಿ ಭಕ್ತರಿಂದ ೩೦೦೦ ರೊಟ್ಟಿಗಳು ಗವಿಮಠದ ಮಹಾ ದಾಸೋಹಕ್ಕೆ ಸಮರ್ಪಿಸಿದ್ದಾರೆ.  ಜಾತ್ರೆಗೆ  ಇನ್ನು ೧ ವಾರ ಸಮಯ ಇರುವದರಿಂದ ಈಗೀನಿಂದಲೇ ಭಕ್ತರು ಶ್ರೀಗವಿಮಠದ ದಾಸೋಹಕ್ಕೆ  ರೊಟ್ಟಿ, ಧವಸ ಧಾನ್ಯಗಳನ್ನು ಹಾಗೂ ತರಕಾರಿಯನ್ನು ಸಮರ್ಪಿಸುತ್ತಿದ್ದಾರೆ. ರಥೋತ್ಸವದ ವೇಳೆಗೆ ಸುಮಾರು ೧೨ ಲಕ್ಷ ಕ್ಕಿಂತಲೂ ಅಧಿಕ ರೊಟ್ಟಿಗಳು ಜಾತ್ರಾ ದಾಸೋಹಕ್ಕೆ ಬರುತ್ತವೆ ಎಂದು ಗವಿಮಠದ ತಿಳಿಸಿದೆ.

               
ಬಿರುಸಿನ ಸಿದ್ದತೆ : ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿ ನೂತನ ವರ್ಷ ಜನೆವರಿ ೨೬ ರಂದು ರಥೋತ್ಸವ ಜರುಗುವ ಪ್ರಯುಕ್ತ  ಬಿರುಸಿನ ಕಾರ್ಯ ಚಟುವಟಿಕೆಗಳು ಸಾಗುತ್ತಿವೆ. ಮಹಾರಥೋತ್ಸವ ಸಾಗಲಿಕ್ಕಾಗಿ ಮೈದಾನದ ಆವರಣ, ಗವಿಮಠದ ಹೊರ-ಒಳಾಂಗಣ, ಭಕ್ತ ಹಿತಚಿಂತನಾ ಸಭೆ ಜರುಗುವ ಕೈಲಾಸ ಮಂಟಪ ಶೃಂಗಾರಗೊಳ್ಳುತ್ತಲಿವೆ. ಅಲ್ಲದೇ ಈಗಾಗಲೇ ಗವಿಮಠವವು ವಿದ್ಯೂತ್ ದೀಪಗಳಿಂದ ಅಲಂಕೃತವಾಗಿದ್ದೂ ಜಾತ್ರೆಯ ವೇಳೆಗೆ ಇನ್ನಷ್ಟು ಝಗಮಗಿಸುತ್ತಿದೆ.

ಭಕ್ತರ ಗಮನಕ್ಕಾಗಿ : ಪ್ರತಿ ವರ್ಷದಿಂದ ವರ್ಷಕ್ಕೆ ಶ್ರೀಗವಿಮಠದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವದರಿಂದ ಭಕ್ತರಿಗೆ  ಯಾವುದೇ ಅಡೆತಡೆಗಳು, ಇಕ್ಕಟ್ಟು ಉಂಟಾಗಬಾರದೆಂದು ಈ ಸಾರೇಯೂ ಕಳೆದ ವರ್ಷದಂತೆಯೇ ಶ್ರೀ ಗವಿಮಠದ ಮುಂಭಾಗದಲ್ಲಿನ ಮೈದಾನದಲ್ಲಿ ಯಾವುದೇ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ನೀಡಿಲ್ಲ. ಇದರ ಬದಲಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದನಿಲಯದ ಮುಂಭಾಗದ ವಿಶಾಲವಾದ ಆವರಣ ( ಎ.ಪಿ.ಎಂ.ಸಿ ಅಂಗಡಿಗಳ ಹಿಂದಿನ ಗೋಡೆಯ ಆವರಣ) ದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶವನ್ನು ಶ್ರೀಗವಿಮಠ ಕಲ್ಪಿಸಿದೆ.

ದಾಸೋಹ ಮಂಟಪದ ಸಿದ್ದತೆ :

ಕೊಪ್ಪಳ: ನಗರದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಜಾತ್ರೆಯ ಪೂರ್ವ ಸಿದ್ಧತೆಗಳು ಗವಿಮಠದ ಹೊರ ಹಾಗೂ ಒಳಾಂಗಣಗಳಲ್ಲಿ ಭರದಿಂದ ಸಾಗುತ್ತಿವೆ. ದಕ್ಷಿಣ ಭಾರತದ ಮಹಾ ಕುಂಭಮೇಳವೆಂದೆ ಪ್ರಸಿದ್ಧವಾಗುತ್ತಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರನ ಜಾತ್ರೆ ವರ್ಷದಿಂದ ವರ್ಷಕ್ಕೆ ವಿಭಿನ್ನತೆಯನ್ನು ಪಡೆದುಕೊಳ್ಳುತ್ತ ಸಾಗುತ್ತದೆ. ಜಾತ್ರೆಯ ಆರಂಭದಿಂದ ಅಮವಾಸ್ಯೆಯ ದಿನಗಳವರೆಗೆ ನಡೆಯಲಿರುವ ಮಹಾದಾಸೋಹವು ಪವಾಡಸದೃಶ್ಯವಾಗಿದೆ.

ಈಗಾಗಲೇ ಮಹಾದಾಸೋಹ ಮಂಟಪದ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಪ್ರಸಾದ ಸಿದ್ಧಪಡಿಸುವ ಕೋಣೆಗಳ ಕಾರ್ಯವು ಮುಗಿದಿದ್ದು, ಪ್ರಸಾದ ಸ್ವೀಕರಿಸುವ ಮಂಟಪವು ಸಿದ್ಧಗೊಳ್ಳುತ್ತಿದೆ. ಏಕಕಾಲದಲ್ಲಿ ೬ ರಿಂದ ೮ ಸಾವಿರದವರೆಗೆ ಭಕ್ತರು ಮಹಾದಾಸೋಹದಲ್ಲಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ. ಪ್ರಸಾದ ಸ್ವೀಕರಿಸಲು ಭಕ್ತರು ಹೋಗುವ ಮಾರ್ಗಗಳನ್ನು ಜಿಗ್-ಜಾಗ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಒಳಗಡೆ ಹಸಿರಿನ ಗಿಡಗಳ ಮಧ್ಯೆ ದಾಸೋಹ ಮಂಟಪದ ಬೃಹತ್ ಪೆಂಡಾಲ್‌ನ್ನು ಹಾಕಲಾಗಿದೆ. ಪ್ರಸಾದವನ್ನು ತಯಾರಿಸುವ ಬೃಹತ್ ಕೊಪ್ಪರಿಕೆಗಳನ್ನು ಸಿದ್ದಪಡಿಸಲಾಗಿದೆ. ಪುರುಷ ಮತ್ತು ಸ್ತ್ರೀಯರಿಗೆ ಪ್ರತ್ಯೇಕವಾಗಿ ಪ್ರಸಾದ ಸ್ವೀಕರಿಸುವ ಸ್ಥಳವನ್ನು ತಯಾರಿಸಲಾಗಿದೆ. ಗಾಳಿ, ಮಳೆ, ಧೂಳು ಬಾರದಂತೆ ಮೇಲ್ಚಾವಣಿಗೆ ತಗಡುಗಳನ್ನು ಅಳವಡಿಸಲಾಗಿದ್ದು, ಮಹಾದಾಸೋಹ ಮಂಟಪವು ಭರದಿಂದ ಸಿದ್ದಗೊಳ್ಳುತ್ತಿದೆ.

Please follow and like us:
error