ಮಾ. ೯ ರಂದು ಮತದಾರರ ನೋಂದಣಿಗೆ ವಿಶೇಷ ಅಭಿಯಾನ- ಕೆ.ಪಿ. ಮೋಹನ್‌ರಾಜ್

 ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಮಾ. ೯ ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಮತದಾರರು ಅಂದು ತಪ್ಪದೆ ಮತಗಟ್ಟೆಗೆ ಬಂದು, ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಮನವಿ ಮಾಡಿಕೊಂಡಿದ್ದಾರೆ.
  ಮಾ. ೦೯ ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯ ಸಹಿತ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ಹಾಜರಿರುತ್ತಾರೆ.  ಮತದಾರರು ಆಯಾ ಮತಗಟ್ಟೆಗಳಿಗೆ ತೆರಳಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.  ಒಂದು ವೇಳೆ ಮತದಾರರ ಗುರುತಿನ ಚೀಟಿ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ, ಅಂತಹವರಿಗೆ ಮತದಾನ ಮಾಡಲು ಅವಕಾಶ ದೊರೆಯುವುದಿಲ್ಲ.  ಆದ್ದರಿಂದ ಮತದಾರರ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ, ಒಂದು ವೇಳೆ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ಕೂಡಲೆ ನಮೂನೆ-೬ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅದೇ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬೇಕು.  ಅಲ್ಲದೆ ಮತದಾರರ ಪಟ್ಟಿ ಪರಿಷ್ಕರೆಗೂ ಸಹ ಅವಕಾಶವಿದ್ದು, ಯಾವುದೇ ತಿದ್ದುಪಡಿ ಇದ್ದಲ್ಲಿ ಸಂಬಂಧಪಟ್ಟ ನಮೂನೆಯನ್ನು ಭರ್ತಿ ಮಾಡಿ ಸ್ಥಳದಲ್ಲಿಯೇ ಸಲ್ಲಿಸಬಹುದಾಗಿದೆ.  ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಒದಗಿಸಲಾಗಿದೆ.  ೧೮ ವರ್ಷ ವಯಸ್ಸು ಪೂರ್ಣಗೊಂಡಿರುವವರು ಸಹ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಇದೊಂದು ಸುವರ್ಣ ಅವಕಾಶವಾಗಿದ್ದು, ಅಂತಹವರು ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ ದಾಖಲೆಯೊಂದಿಗೆ ನಮೂನೆ-೬ ಅನ್ನು ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಿದಲ್ಲಿ, ಅಂತಹ ಅರ್ಹರಿಗೆ ಇದೇ ಲೋಕಸಭೆ ಚುನಾವಣೆಗೆ ಮತದಾನಕ್ಕೆ ಅವಕಾಶ ಲಭ್ಯವಾಗಲಿದೆ.  ಜಿಲ್ಲೆಯ ಎಲ್ಲ ಯುವಕರು, ಯುವತಿಯರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನೀಡಿರುವ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಹಾಗೂ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಮನವಿ ಮಾಡಿಕೊಂಡಿದ್ದಾರೆ.
Please follow and like us:

Related posts

Leave a Comment