ಕನಕಗಿರಿ ಉತ್ಸವ : ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು- ಶಿವರಾಜ ತಂಗಡಗಿ

ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವ ರೀತಿಯಲ್ಲಿ ಕನಕಗಿರಿ ಉತ್ಸವ ಫೆ. ೨೩ ಮತ್ತು ೨೪ ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಉತ್ಸವ ಅಂಗವಾಗಿ ಕವಿಗೋಷ್ಠಿ, ಕೃಷಿ ಉತ್ಸವ, ಫಲಪುಷ್ಪ ಪ್ರದರ್ಶನ, ವಿವಿಧ ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.

  ಕನಕಗಿರಿಯಲ್ಲಿ ಕನಕಗಿರಿ ಉತ್ಸವ ನಿಮಿತ್ಯ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕನಕಗಿರಿ ಉತ್ಸವದ ಅಂಗವಾಗಿ ಖ್ಯಾತ ಚಲನಚಿತ್ರ ನಟ ದರ್ಶನ್, ಸುದೀಪ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಕಾರ್ಯಕ್ರಮ, ಸೇರಿದಂತೆ ಹಲವು ಖ್ಯಾತನಾಮ ನಟ, ನಟಿಯರು, ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಸಂಗೀತದ ರಸದೌತಣವನ್ನು ಉಣಬಡಿಸಲಿದ್ದಾರೆ.  ಫೆ. ೨೩ ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದು, ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೇರಿದಂತೆ ಹಲವು ಸಚಿವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಫೆ. ೨೪ ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ.  ಉತ್ಸವದ ಅಂಗವಾಗಿ ಫೆ. ೨೩ ರಂದು ಬೆಳಿಗ್ಗೆ ೮-೩೦ ಗಂಟೆಗೆ ಕನಕಗಿರಿಯ ಅಗಸಿ ಬಳಿಯಿಂದ ರಾಜಬೀದಿ, ಬಸ್‌ಸ್ಟ್ಯಾಂಡ್ ಮೂಲಕ ಪ್ರಮುಖ ವೇದಿಕೆಯವರೆಗೆ ಹಲವು ಜಾನಪದ, ಸಾಂಸ್ಕೃತಿಕ ಕಲಾವಿದರನ್ನೊಳಗೊಂಡ ತಂಡಗಳು ಪಾಲ್ಗೊಂಡು ಭವ್ಯ ಮೆರವಣಿ ನಡೆಸಿಕೊಡಲಿದ್ದಾರೆ.  ಕನಕಾಚಲಪತಿ ದೇವಸ್ಥಾನದ ಬಳಿ ಕವಿಗೋಷ್ಠಿಯನ್ನು ಆಯೋಜಿಸಲಾಗುವುದು.   ಉತ್ಸವಕ್ಕೆ ಸುಮಾರು ೧ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಎಲ್ಲ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು.  ಉತ್ಸವಕ್ಕೆ ಉಡಚಪ್ಪ ನಾಯಕರ ವಂಶಸ್ಥರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು.  ಉತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧ ತಾಲೂಕು, ಗ್ರಾಮಗಳಿಂದ   ಸಾರ್ವಜನಿಕರು ಬಂದು ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
  ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‌ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.  
  ಸಭೆಗೂ ಪೂರ್ವದಲ್ಲಿ ಕನಕಗಿರಿ ಉತ್ಸವ ನಡೆಸಲು ನಿರ್ಮಿಸಲಾಗುತ್ತಿರುವ ಪ್ರಮುಖ ವೇದಿಕೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಸಚಿವರು ಪರಿಶೀಲಿಸಿದರು.
ಕನಕಗಿರಿ ಉತ್ಸವ : ಫೆ. ೨೧ ರಿಂದ ಕ್ರೀಡಾಕೂಟಗಳು ಪ್ರಾರಂಭ- ಶಿವರಾಜ ತಂಗಡಗಿ
  ಈ ಬಾರಿಯ ಕನಕಗಿರಿ ಉತ್ಸವ ಫೆ. ೨೩ ಮತ್ತು ೨೪ ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಇದಕ್ಕೆ ಪೂರಕವಾಗಿ ಗ್ರಾಮೀಣ ಕ್ರೀಡಾಕೂಟಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆ. ೨೧ ರಿಂದಲೇ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
  ಕನಕಗಿರಿಯಲ್ಲಿ ಕನಕಗಿರಿ ಉತ್ಸವ ನಿಮಿತ್ಯ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕನಕಗಿರಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ಫೆ. ೨೧ ರಿಂದಲೇ ಪ್ರಾರಂಭವಾಗಲಿದ್ದು,  ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಫೆ. ೨೧ ರಂದು ಸಂಜೆ ೪ ಗಂಟೆಗೆ ವಾಲಿಬಾಲ್ ಮತ್ತು ಫೆ. ೨೨ ರಂದು ಸಂಜೆ ಕಬಡ್ಡಿ ಪಂದ್ಯಾವಳಿಯನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಆಯೋಜಿಸಲಾಗಿದೆ.  ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ.  ಮಹಿಳೆಯರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.  ರಂಗೋಲಿ ಸ್ಪರ್ಧೆ ಫೆ. ೨೩ ರಂದು ಬೆಳಿಗ್ಗೆ ೮-೩೦ ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಕುಸ್ತಿ ಪಂದ್ಯಗಳು ಫೆ. ೨೪ ರಂದು ಬೆಳಿಗ್ಗೆ ೯ ರಿಂದ ನಡೆಯಲಿದೆ.  ರಾಜ್ಯದ ಇತರೆ ಭಾಗಗಳಿಂದ ಬರುವ ಕ್ರೀಡಾಪಟುಗಳಿಗೆ ಸಮರ್ಪಕ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು.  ಕ್ರೀಡಾ ಕೂಟದ ಯಶಸ್ವಿಗೆ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‌ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Please follow and like us:
error