ಕೊಪ್ಪಳ ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ-ಬರ ತೀವ್ರತೆ ಮನವರಿಕೆ.

ಕೊಪ್ಪಳ, ಫೆ. ೨೫ (ಕ ವಾ) ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ. ಮಿಶ್ರಾ ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಗುರುವಾರದಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಡೆಕೊಪ್ಪ, ಕಲಕೇರಿ, ವಣಗೇರಿ ಹಾಗೂ ಬರಪೀಡಿತ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತಲ್ಲದೆ, ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.
     ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ. ಮಿಶ್ರಾ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಲಹೆಗಾರ ಡಾ. ಬ್ರಜೇಶ್ ಶ್ರೀವಾಸ್ತವ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ (ವೆಚ್ಚ) ಎಸ್‌ಎಸ್‌ಓ ಅಧಿಕಾರಿ ಆರ್.ಬಿ. ಕೌಲ್  ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ  ವಿವಿಧ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಪರಿಶೀಲನೆ ನಡೆಸಿ ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.
    
 ಬರ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ ಕೇಂದ್ರ
ಅಧ್ಯಯನ ತಂಡ, ಮೊದಲಿಗೆ ಕುಷ್ಟಗಿ ತಾಲೂಕು ಕಲಕೇರಿ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಮೇವು
ನಿಧಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಲಾಗಿರುವ ಒಣ ಮೇವಿನ ಬಗ್ಗೆ ಹಾಗೂ
ಕೆಲ ತಿಂಗಳುಗಳ ಹಿಂದೆ ಗೋಶಾಲೆ ಪ್ರಾರಂಭಿಸಿ ಮೇವು ವಿತರಣೆ ಮಾಡಿರುವ ಕುರಿತಂತೆ
ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.  ನಂತರ ವಣಗೇರಿ ಗ್ರಾಮದ ಬಳಿಯ ಹೊಲವೊಂದಕ್ಕೆ
ತೆರಳಿ ರೈತರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುತು.  ಹಿಂಗಾರು ಮಳೆಯ ಕೊರತೆಯಿಂದ ಬೆಳೆ
ಹಾನಿಯಾದ ಬಗ್ಗೆ, ಬೆಳೆಯ ಜೋಳ, ಸೂರ್ಯಕಾಂತಿ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ
ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಮಳೆ ಕೊರತೆ ಸಂದರ್ಭದಲ್ಲಿ ಪರ್ಯಾಯ
ಬೆಳೆ ಬೆಳೆಯುವ ಬಗ್ಗೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿರುವ ಕುರಿತಂತೆಯೂ
ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
         ತರುವಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ.
ಮಿಶ್ರಾ  ಅವರು, ಕೊಪ್ಪಳ ಜಿಲ್ಲೆಯ ಗ್ರಾಮಗಳಲ್ಲಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು
ಗಮನಿಸಲಾಗಿದೆ.  ಮೇವಿನ ಕೊರತೆ, ಮಳೆಯ ಕೊರತೆಯಿಂದ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು
ಹಾಗೂ ರೈತರೊಂದಿಗೆ ಮಾಹಿತಿ  ಪಡೆದುಕೊಳ್ಳಲಾಗಿದ್ದು, ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ
ಬೆಳೆಗಳು ಹಾಳಾಗಿರುವುದು ಕಂಡುಬಂದಿದೆ.  ಜಿಲ್ಲೆಯ ಬರ ಪರಿಸ್ಥಿತಿ ಮನವರಿಕೆಯಾಗಿದ್ದು,
ಸಂಗ್ರಹಿತ ವರದಿಯನ್ನು ಒಂದು ವಾರದ ಒಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು
ಎಂದರು.
       ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ.
ಪ್ರವೀಣ್‌ಕುಮಾರ ಜಿ.ಎಲ್., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.
ರಾಮಚಂದ್ರನ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಜಂಟಿಕೃಷಿ ನಿರ್ದೇಶಕ
ರಾಮದಾಸ್,  ಪಶುಸಂಗೋಪನೆ ಇಲಾಖೆ ಜಂಟಿನಿರ್ದೇಶಕ ಡಾ. ಹಲಗಪ್ಪ ಹಾಗೂ ಉಪನಿರ್ದೇಶಕ ಡಾ.
ಜಯರಾಂ, ಅವರು ಕೇಂದ್ರ ಅಧ್ಯಯನ ತಂಡದೊಂದಿಗೆ ಉಪಸ್ಥಿತರಿದ್ದು, ಅಗತ್ಯ ಮಾಹಿತಿಯನ್ನು
ಒದಗಿಸಿಕೊಟ್ಟರು.
     ಕೇಂದ್ರ ಬರ ಅಧ್ಯಯನ ತಂಡವು ಕುಷ್ಟಗಿ ತಾಲೂಕಿನ ತಳುವಗೇರಾ
ಗ್ರಾಮಕ್ಕೆ ಭೇಟಿ ನೀಡಿತು. ಇಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ
ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಉದ್ಯೋಗಖಾತ್ರಿ
ಯೋಜನೆ ಕುರಿತಂತೆ ಮಾಹಿತಿ ಪಡೆದುಕೊಂಡಿತು.  ನಂತರ ಕುಷ್ಟಗಿಯ ಸರ್ಕ್ಯೂಟ್‌ಹೌಸ್‌ನಲ್ಲಿ
ಜಿಲ್ಲೆಯಲ್ಲಿ ಹಿಂಗಾರು ಮಳೆಯ ಕೊರತೆ, ಬೆಳೆ ಹಾನಿ ಹಾಗೂ ಜಿಲ್ಲೆಯ ಬರದ ತೀವ್ರತೆ
ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಸಮಗ್ರ ಮಾಹಿತಿಯನ್ನು ಬರ ಅಧ್ಯಯನ
ತಂಡಕ್ಕೆ ಒದಗಿಸಲಾಯಿತು.

Please follow and like us:
error