ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಹೊಣೆ ಶಿಕ್ಷಕರ ಮೇಲಿದೆ- ಶಿವರಾಜ ತಂಗಡಗಿ

  ದೇಶದ ಭವಿಷ್ಯದ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದ್ದು, ಇದನ್ನು ಗಮನದಲ್ಲಿರಿಸಿಕೊಂಡು, ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಭ್ಯ ನಾಗರೀಕತೆಯನ್ನು ಕಲಿಸುವಂತಾಗಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸಾಮಾನ್ಯ ಶಿಕ್ಷಕನೊಬ್ಬ ತಮ್ಮ ಪರಿಶ್ರಮದ ಫಲವಾಗಿ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರಲು ಸಾಧ್ಯ, ಅಲ್ಲದೆ ಇಡೀ ದೇಶದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ದಿವಂಗತ ರಾಧಾಕೃಷ್ಣನ್ ಅವರೇ ಸಾಕ್ಷಿಯಾಗಿದ್ದಾರೆ.  ತಮ್ಮ ಶಿಷ್ಯನೊಬ್ಬ ಉನ್ನತ ಸ್ಥಾನಕ್ಕೇರಿದಾಗ ಅಥವಾ ಅತ್ಯುತ್ತಮ ಸಾಧನೆಗೈದಾಗ, ಅತ್ಯಂತ ಸಂತಸ ಪಡುವವರ ಪೈಕಿ ತಂದೆ-ತಾಯಿ ಮೊದಲಿಗರಾದರೆ, ನಂತರದ ಸ್ಥಾನ ಆ ಶಿಷ್ಯನ ಗುರುವಿನದು ಎಂದರೆ, ಗುರು-ಶಿಷ್ಯನ ಅನ್ಯೋನ್ಯ ಸಂಬಂಧ ಎಂತಹದು ಎಂಬುದು ಗೊತ್ತಾಗುತ್ತದೆ.  ಮಕ್ಕಳಿಗೆ ಇಂದಿನ ಶಿಕ್ಷಣ ಪದ್ಧತಿ ಹೆಚ್ಚಿನ ಹೊರೆ ಹಾಗೂ ಮಾನಸಿಕ ಒತ್ತಡ ಎಂಬುದಾಗಿ ಹೇಳಲಾಗುತ್ತದೆಯಾದರೂ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಅಣಿಗೊಳಿಸುವ ಹೊಣೆ ಶಿಕ್ಷಕರ ಮೇಲಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ.  ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ ನೀಡುವುದರ ಜೊತೆಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಶಾಲಾ ದಾಖಲಾತಿಯನ್ನು ಹೆಚ್ಚಿಸಲಾಗುತ್ತಿದೆ.  ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗಾಗಿ ನಮ್ಮ ಸರ್ಕಾರ ವಾರಕ್ಕೆ ಮೂರು ಬಾರಿ ಹಾಲು ನೀಡುವಂತಹ ಕ್ಷೀರಭಾಗ್ಯ ಯೋಜನೆಯನ್ನು ಈಗಾಗಲೆ ಅನುಷ್ಠಾನಕ್ಕೆ ತಂದಿದೆ.  ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳು, ಮೂಲಭೂತ ಸೌಕರ್ಯ ಕಲ್ಪಿಸುವ ಜೊತೆಗೆ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.  ಕೊಪ್ಪಳ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು.  ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿ ಹಾಕಬೇಕಾಗಿದೆ.  ಜಿಲ್ಲೆಯಲ್ಲಿ ಕೆಲವೇ ಕೆಲವು ಶಿಕ್ಷಕರು ಮದ್ಯಪಾನ ಮಾಡಿಕೊಂಡು ಶಾಲೆಗೆ ಹಾಜರಾಗುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಇಂತಹ ಕೆಲವು ಶಿಕ್ಷಕರಿಂದ ಇಡೀ ಶಿಕ್ಷಕ ಸಮುದಾಯದ ಗೌರವಕ್ಕೆ ಕಳಂಕ ಬರುವಂತಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.  ಶಿಕ್ಷಕರ ನಡವಳಿಕೆ ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ, ಶಿಕ್ಷಕರು ಅತ್ಯಂತ ಎಚ್ಚರಿಕೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಎಲ್ಲ ದಾನಗಳಲ್ಲಿ ಅಕ್ಷರ ದಾನ ಅತ್ಯಂತ ಶ್ರೇಷ್ಠವಾದುದು.  ಶಿಕ್ಷಕರೇ ರಾಷ್ಟ್ರದ ಅಭಿವೃದ್ಧಿಯ ನಿರ್ಮಾಪಕರಾಗಿರುವುದರಿಂದ, ಹೆಚ್ಚಿನ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.  ಕೊಪ್ಪಳದಲ್ಲಿ ಗುರುಭವನ ನಿರ್ಮಿಸಲು ಅಗತ್ಯ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಸರ್ಕಾರದ ವ್ಯವಸ್ಥೆಯಲ್ಲಿ ರಾಜಕಾರಣಿಗಳಿಗೆ ಅಭಿವೃದ್ಧಿಗಾಗಿ ಶ್ರಮಿಸಲು ಕಾಲಮಿತಿ ಇದೆ.  ಆದರೆ ತಮ್ಮ ಜೀವಮಾನವಿಡೀ ವಿದ್ಯೆಯನ್ನು ಧಾರೆ ಎರೆಯುವಂತಹ ಪವಿತ್ರ ಅವಕಾಶ ಶಿಕ್ಷಕರಿಗೆ ಮಾತ್ರ ಇದೆ.  ಶಿಕ್ಷಕರು ಮತ್ತು ಮಕ್ಕಳ ಪಾಲಕರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಲು ಕಾಲ ಕಾಲಕ್ಕೆ ಪಾಲಕರ ಸಭೆ ನಡೆಸಬೇಕು,  ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ, ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ.  ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಭ್ಯ ಸಂಸ್ಕೃತಿ ಮತ್ತು ಮನೋ ಸ್ಥೈರ್ಯ ವೃದ್ಧಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ಕಿಡದಾಳ ಕಾರ್ಯಕ್ರಮ ಕುರಿತು ಮಾತನಾಡಿದರು.  ಅಂತರರಾಷ್ಟ್ರೀಯ ಪರಿಸರವಾದಿ ರಾಮನಗರ ಜಿಲ್ಲೆ ಹುಲಿಕಲ್ಲಿನ ಸಾಲುಮರದ ತಿಮ್ಮಕ್ಕ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.  
  ಸಮಾರಂಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಜಿ.ಪಂ. ಸದಸ್ಯರುಗಳಾದ ಅಮರೇಶ್ ಕುಳಗಿ, ಈರಪ್ಪ ಕುಡಗುಂಟಿ, ನಾಗನಗೌಡ ಪಾಟೀಲ, ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಕುರಿ, ಮುಂತಾದವರು ಉಪಸ್ಥಿತರಿದ್ದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಬಿ.ವೈ. ದಾಸರ ಪ್ರಾಸ್ತಾವಿಕ ಭಾಷಣ ಮಾಡಿದರು, ಶಿಕ್ಷಣ ಇಲಾಖೆಯ ಬಡದಾನಿ ಅವರು ಸ್ವಾಗತಿಸಿ, ವಂದಿಸಿದರು.
  ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.  ನಿವೃತ್ತ ಶಿಕ್ಷಕರಿಗೂ ಸನ್ಮಾನ ನಡೆಸಲಾಯಿತು.  ಹಿರೇಮ್ಯಾಗೇರಿ ಸ.ಪ.ಪೂ. ಕಾಲೇಜು ಉಪನ್ಯಾಸಕ ಗಂಗಾಧರ ಕುರಟ್ಟಿ ಅವರು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಸಮಾರಂಭಕ್ಕೂ ಮುನ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಗರದ ಶ್ರೀ ಗವಿಸಿದ್ದೇಶ್ವರ ಮಠದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ನಡೆಸಲಾಯಿತು.
Please follow and like us:
error