ಕೆಂಡಸಂಪಿಗೆ ಚಿತ್ರ ವಿಮರ್ಶೆ.

ಉಲ್ಟಾ ಕೇಸ್! : “ಕುತೂಹಲ’ ದಿ ಎಂಡ್ ಆನ್ ೨೦೧೬! ಅರ್ಧ ಕತೆ ಹೇಳಿ ಇನ್ನರ್ಧವನ್ನ ೨೦೧೬ ಕ್ಕೆ ನೋಡಿ ಎನ್ನುವ ಪರಿಪಾಠ ಹಾಕಿದ
ಸಿನಿಮಾಗಳ ಸಾಲಿಗೆ ಕನ್ನಡದ ಮತ್ತೊಂದು ಸಿನಿಮಾ ಕೆಂಡಸಂಪಿಗೆ ಸೇರಿಕೊಂಡಿದೆ. ನಿರ್ದೇಶಕ
ಸೂರಿಯವರ ಕಡ್ಡಿಪುಡಿ ಸಿನಿಮಾ ಸಹ ೨ ನೇ ಭಾಗ ಇದೆ ಎನ್ನುವ ಸುಳಿವು ನೀಡಿತ್ತು. ಅದಿನ್ನೂ
ಬಹಿರಂಗವಾಗಿ ಘೋಷಣೆಯಾಗಿಲ್ಲ. ಬಹಳಷ್ಟು ಜನ ಭಾಗ-೨, ಭಾಗ-೩ ಎಂದು ಸಿನಿಮಾ
ಮಾಡುತ್ತಾರೆ. ಆದರೆ ನಿರ್ಮಾಪಕ ಕಮ್ ನಿರ್ದೇಶಕ ಸೂರಿಯವರ ಕೆಂಡಸಂಪಿಗೆ ಉಲ್ಟಾ.
ಕೆಂಡಸಂಪಿಗೆಯ ಎರಡನೇ ಭಾಗವನ್ನ ರೀಲೀಸ್ ಮಾಡಿದ್ದಾರೆ. ಮೊದಲನೇ ಭಾಗ ೨೦೧೬ ಕ್ಕೆ
ಬಿಡುಗಡೆಯಾಗುತ್ತದೆ ಎಂದು ಘೋಷಿಸಿದ್ದಾರೆ. ಅಫ್ಕೋರ್ಸ್ ಜನ ಕೂಡಾ ಮೊದಲನೇ ಭಾಗಕ್ಕೆ
ಕಾಯುವಂಥ ಸಿನಿಮಾ ಕೆಂಡಸಂಪಿಗೆ! ಫೈನಲೀ ಕೆಂಡಸಂಪಿಗೆಯ `ಕುತೂಹಲ’ ದಿ ಎಂಡ್ ಆನ್ ೨೦೧೬!

ತೆಲುಗು, ತಮಿಳಿನಲ್ಲಿ ಬಂದಿದ್ದ ಬಾಹುಬಲಿ ಸಿನಿಮಾದ ಮುಂದುವರೆದ ಭಾಗ
೨೦೧೬ಕ್ಕೆ ಮುಂದೂಡಲ್ಪಟ್ಟಿದೆ. ಕೆಂಡಸಂಪಿಗೆಯ ಮೊದಲಿನ ಭಾಗ ಸಹ ೨೦೧೬ಕ್ಕೆ
ಮುಂದುವರೆಯುತ್ತದೆ. ಈ ಎರಡೂ ಸಿನಿಮಾಗಳ ವೈಶಿಷ್ಠ್ಯವೆಂದರೆ ಚಿತ್ರ ಮುಗಿದರೂ ಕುತೂಹಲ
ತಣಿಯದಿರುವುದು. ವ್ಯತ್ಯಾಸವೆಂದರೆ ಬಾಹುಬಲಿ ಮೊದಲನೇ ಭಾಗ ಬಿಡುಗಡೆಯಾಗಿದೆ.
ಕೆಂಡಸಂಪಿಗೆ ಎರಡನೇ ಭಾಗ ಗಿಣಿಮರಿ ಕೇಸ್ ಹೆಸರಿನಲ್ಲಿ ಬಿಡುಗಡೆಯಾಗಿದೆ.
ವೈರುಧ್ಯವೆಂದರೆ ಬಾಹುಬಲಿ ಬಿಗ್ ಬಜೆಟ್ ಸಿನಿಮಾ, ಕೆಂಡಸಂಪಿಗೆ ಕಡಿಮೆ ಬಂಡವಾಳದ
ಸಿನಿಮಾ.
ಚಿತ್ರದ ಆರಂಭವನ್ನೇ ಎರಡು ಭಾಗಗಳಾಗಿ ವಿಭಜಿಸಿರುವ ಸೂರಿ,
ಕಾಗೆಬಂಗಾರ ಕಥೆಯ ಮೂಲಕ ಶುರುವಾಗುವ ಕೆಂಡಸಂಪಿಗೆಯಲ್ಲ್ಲಿ ಗಿಣಿಮರಿಯ ಕಥೆಯನ್ನಷ್ಟೇ
ಹೇಳಿ ಮುಗಿಸಿದ್ದಾರೆ. ಆರಂಭಗೊಂಡಿರುವ ಕಾಗೆಬಂಗಾರದ ಕಥೆ ೨೦೧೬ ರಲ್ಲಿ ನೋಡಲು
ಸಿಗುತ್ತದೆ ಎಂದು ಸಿನಿಮಾ ಕೊನೇಯ ಸೀನ್‌ನಲ್ಲಿ ಹೇಳುತ್ತಾರೆ.
ನೀರಿನಲ್ಲಿ
ಸಿಲುಕಿ ಒದ್ದಾಡುತ್ತಿದ್ದ ಆಕೆಯ ಪ್ರಾಣವನ್ನ ಕಾಪಾಡಿದವನಿಗೆ ಪ್ರೀತಿ ಕೊಡ್ತಾಳೆ. ಆತ
ತಮ್ಮ ಕಂಪನಿಯ ಸಾಮಾನ್ಯ ನೌಕರನೆಂಬುದು ಗೊತ್ತಿದ್ದರೂ ಸಿನಿಮಾ, ಸುತ್ತಾಟ ನಡೆದಿರುವಾಗ
ಅಮ್ಮನ ಕಣ್ಣಿಗೆ ಬೀಳ್ತಾಳೆ. ಚಿಕ್ಕವಳಿದ್ದಾಗ ಸ್ಕೂಲ್‌ನಿಂದ ತಡವಾಗಿ ಮನೆಗೆ
ಬಂದಿದ್ದಕ್ಕೆ ರಾತ್ರಿಯಿಡೀ ಮನೆಯ ಹೊರಗೆ ಹಾಕಿದ ಕಟ್ಟುನಿಟ್ಟಿನ ತಾಯಿಯನ್ನ ಕಂಡರೆ
ಆಕೆಗೆ ಭಯ. ಹಾಗಾಗಿ ತಾಯಿಗೆ ತನ್ನ ಪ್ರೀತಿ ಹೇಳಿಕೊಳ್ಳಲು ಹೆದರುತ್ತಾಳೆ.

ಪ್ರೀತಿಯಿಂದ ಸಾಕಿದ ಗಿಣಿ, ಎಲ್ಲಿ ಗಿಡುಗನ ಪಾಲಾಗುತ್ತದೆಯೋ ಎಂದು ಹೆದರಿ, ಪೊಲೀಸ್
ಕಮಿಷ್ನರ್‌ಗೆ ವಿಚಾರಿಸಿಕೊಳ್ಳಲು ತಾಯಿ ಹೇಳ್ತಾಳೆ. ಇದನ್ನೆ ದಾಳವಾಗಿ ಬಳಸಿಕೊಳ್ಳುವ
ಕಮಿಷ್ನರ್, ಒಂದೇ ಕಲ್ಲು ಎರಡು ಹಣ್ಣು ಎಂಬಂತೆ ಡ್ರಗ್ಸ್ ಕೇಸ್‌ನಲ್ಲಿ ಷೇರು ಕೇಳಿದ
ಪಿಎಸ್‌ಐ ಒಬ್ಬನನ್ನ ಹುಡುಗನ ಕೈಯಿಂದ ಕೊಲೆ ಮಾಡಿಸುವ ನಾಟಕ ಮಾಡ್ತಾನೆ. ಇಲ್ಲಿಂದ
ಬೆಳೆಯುವ ಗಿಣಿಮರಿ ಕೇಸ್ ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ,
ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ ಕೊನೆಗೆ ಬೆಳಗಾವಿವರೆಗೆ ಜರ್ನಿ ಕಥೆಯಾಗಿ
ಮಾರ್ಪಡುತ್ತದೆ, ಕೊನೆಗೆ ನಾಯಕ ರವಿ ಬೆಳಗಾವಿಯಲ್ಲಿ ಸತ್ತು, ಮತ್ತೇ ಮುಂಬೈನ
ಹೊಟೇಲ್‌ವೊಂದರ ಮಾಣಿಯಾಗಿ ಬದುಕುತ್ತಾನೆ. ಅದು ಡಿಸಿಪಿ ನೀಡಿದ ಪುನರ್ಜನ್ಮದಿಂದ!

ನಾಯಕ ಸತ್ತು-ಬದುಕಿದ ಹಿನ್ನೆಲೆ ಅರಿತ ನಾಯಕಿಯ ನಗೆಯೊಂದಿಗೆ ಗಿಣಿಮರಿ ಕಥೆ
ಮುಗಿಯುತ್ತದೆ. ನಾಯಕ ಮಾಣಿಯಾಗಿ ಕೆಲಸ ಮಾಡುವ ಅದೇ ಹೋಟೇಲ್‌ನಲ್ಲಿ ಕಾಗೆಬಂಗಾರದ ನಾಯಕ
ಪ್ರತ್ಯಕ್ಷವಾಗ್ತಾನೆ. ಇಲ್ಲಿಂದ ಕಾಗೆ ಬಂಗಾರ ಶುರುವಾಗುತ್ತದೆ. ೨೦೧೬ಕ್ಕೆ ಇದು ನೋಡಲು
ಸಿಗುತ್ತದೆ ಎಂದು ಸೂಚನೆ ನೀಡುತ್ತಾರೆ ಸೂರಿ.
ಸಂತೋಷ್ ಮತ್ತು
ಮಾನ್ವಿತಾ ಇಬ್ಬರೂ ಚಿತ್ರರಂಗದಲ್ಲಿ ತಮಗೆ ಭವಿಷ್ಯವಿದೆ ಎಂಬುದನ್ನ ತಮ್ಮ ಮೊದಲ ಸಿನಿಮಾ
ಕೆಂಡಸಂಪಿಗೆಯಲ್ಲಿ ನಿರೂಪಿಸಿದ್ದಾರೆ. ಸಿನಿಮಾದಲ್ಲಿ ಡಿಸಿಪಿಯಾಗಿರುವ ರಾಜೇಶ್
ಗೊತ್ತಾಗದಂತೆ ಹೀರೋ ಫೀಲ್ ಕಟ್ಟಿಕೊಡ್ತಾರೆ. ಪ್ರಕಾಶ ಬೆಳವಾಡಿ ಗೊತ್ತಾದರೂ ಇನ್ನೂ
ಪೂರ್ತಿಯಾಗಿ ವಿಲನ್ ಅನ್ನಿಸಿಕೊಂಡಿಲ್ಲ. ಬಹಳ ದಿನಗಳ ನಂತರ ತೆರೆಯ ಮೇಲೆ
ಕಾಣಿಸಿಕೊಂಡಿರುವ ಚಂದ್ರಿಕಾ ಮಗಳ ಭವಿಷ್ಯವನ್ನಷ್ಟೇ ನೋಡುವ ಸ್ವಾರ್ಥಿ ತಾಯಿಯಾಗಿ
ಇಷ್ಟವಾಗ್ತಾರೆ. ಕಾಗೆಬಂಗಾರದ ಮೂಲಕ ಬಹುತೇಕ ಹೀರೋ ಆಗಲಿರುವ ಸಿದ್ಧಿ ಪ್ರಶಾಂತ ಸಹ ಈ
ಚಿತ್ರದಲ್ಲಿ ಅಲ್ಲಲ್ಲಿ ಮಾತ್ರ ಕಾಣಿಸಿಕೊಂಡರೂ ಕುತೂಹಲದ ಕೇಂದ್ರವಾಗಿಯೇ ಉಳಿಯುತ್ತಾರೆ.

ಇದೊಂದು ಪಕ್ಕಾ ಮಾಸ್ ಫೀಲ್ ಇರೋ ಸಿನಿಮಾ ಆಗಿರುವುದರಿಂದ ಕಾಮಿಡಿಗೆ
ಅಷ್ಟಾಗಿ ಒತ್ತಿಲ್ಲ. ಅಲ್ಲಲ್ಲಿ ಬರುವ ಮಾತುಗಳೇ ಮುಗುಳ್ನಗೆ ತರಿಸುತ್ತವೆ. ಖುಷಿಯ
ಸಂಗತಿ ಎಂದರೆ ಇತ್ತಿಚೆಗೆ ಹೆಚ್ಚುತ್ತಿರುವ ಡಬ್ಬಲ್ ಮೀನಿಂಗ್ ಟ್ರೆಂಡ್
ಕೆಂಡಸಂಪಿಗೆಯಲ್ಲಿಲ್ಲ. ಹರಿಕೃಷ್ಣ ಸೈಲೆಂಟ್ ಸಾಂಗ್‌ಗಳ ಮೂಲಕ ಸೈಲೆಂಟ್ ಆಗಿಯೇ ಖುಷಿ
ಕೊಡ್ತಾರೆ. ನಿಜಕ್ಕೂ ಅಭಿನಂದಿಸಬೇಕಾದದ್ದು ಸತ್ಯ ಹೆಗಡೆಯವರ ಛಾಯಾಗ್ರಹಣದ ಬಗ್ಗೆ. ಇಡೀ
ಜರ್ನಿ ಕಥೆಯನ್ನ ಎಲ್ಲೂ ಬೋರಾಗದಂತೆ ಚಿತ್ರಿಸುವುದು ಸವಾಲೇ ಸರಿ, ಅದರಲ್ಲೂ ಕತ್ತಲೆಯ
ದೃಶ್ಯಗಳನ್ನ ಶೂಟಿಂಗ್ ಮಾಡುವುದು ಸುಲಭವಲ್ಲ. ಹೆಗಡೆಯವರು ಇದನ್ನ ಸಮರ್ಥವಾಗಿ
ನಿಭಾಯಿಸಿದ್ದಾರೆ. ಸುರೇಂದ್ರನಾಥ ಅವರ ಮೂಲಕಥೆ ಹೇಗಿದೆಯೋ ಗೊತ್ತಿಲ್ಲ. ಸೂರಿ ಮಾತ್ರ
ಅದನ್ನ ಅದ್ಭುತ ಚಿತ್ರಕಥೆಯನ್ನಾಗಿಸಿದ್ದಾರೆ. ೧ ಗಂಟೆ ೪೨ ನಿಮಿಷ ಕಳೆದದ್ದೇ
ಗೊತ್ತಾಗಲ್ಲ.
ದೊಡ್ಡ ಬಜೆಟ್‌ನ ಅಬ್ಬರದ ಸಿನಿಮಾಗಳ ಮುಂದೆ, ಅದರಲ್ಲೂ ಈ
ವಾರ ಬಿಡುಗಡೆಯಾದ ಕನ್ನಡದ ೫ ಸಿನಿಮಾಗಳ ಪೈಕಿ ಕೆಂಡಸಂಪಿಗೆಗೆ ಫುಲ್ ಮಾರ್ಕ್ಸ್
ಕೊಡಬಹುದು. ಇದು ಭೂಗತಲೋಕದ ಕಥಾ ಹಂದರ ಹೊಂದಿದ್ದರೂ ಮೊದಲನೇ ಭಾಗ ಪ್ರೀತಿಯ ಸುತ್ತವೇ
ತಿರುಗಿದೆ. ಬಹುಶಃ ಕಾಗೆಬಂಗಾರದ ಕಥೆ ಭೂಗತಲೋಕಕ್ಕೆ ವರ್ಗವಾಗುವ ಸೂಚನೆಯನ್ನ ಸೂರಿ
ಕೊಟ್ಟಿದ್ದಾರೆ. ಅದೇನು ಎನ್ನುವುದನ್ನ ತಿಳಿದುಕೊಳ್ಳಬೇಕಾದರೆ ೨೦೧೬ರ ವರೆಗೆ
ಕಾಯಲೇಬೇಕು.
ಫ್ರಿ ಇರದಿದ್ದರೂ ಫ್ರೀ ಮಾಡಿಕೊಂಡು ಕೆಂಡಸಂಪಿಗೆಯ ಸೊಬಗನ್ನ ಸವಿಯಬಹುದೆಂದು ಶಿಫಾರಸು ಮಾಡುವಷ್ಟು ಚಿತ್ರ ಚೆನ್ನಾಗಿದೆ.   – ಚಿತ್ರಪ್ರಿಯ ಸಂಭ್ರಮ್.

Please follow and like us:
error