ಬಾಲೆಯರ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ- ಶಂಭುಲಿಂಗನಗೌಡ

  ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಹೇಳಿದರು.
  ಕೊಪ್ಪಳ ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ‘ಮೀನಾ ಮೇಳ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
  ಒಟ್ಟು ಜನಸಂಖ್ಯೆಯಲ್ಲಿ ಪುರುಷರು-ಮಹಿಳೆಯರ ಲಿಂಗ ಸಮಾನತೆಯನ್ನು ಹೇಗೆ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುವುದೋ, ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ.  ಈ ನಿಟ್ಟಿನಲ್ಲಿ ಬಾ ಬಾಲೆ ಶಾಲೆಗೆ, ಚಿಣ್ಣರ ಅಂಗಳದಂತಹ ಕಾರ್ಯಕ್ರಮಗಳಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ.  ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಲಾಗಿರುವ ‘ಮೀನಾ ಮೇಳ’ ಈ ನಿಟ್ಟಿನಲ್ಲಿ ಉತ್ತಮ ಸಹಕಾರಿಯಾಗಿದೆ.  ಮೀನಾ ಎಂಬುದು ಕೇವಲ ಹೆಸರಲ್ಲ.  ಇದು ಬಾಲಕಿಯರ ಶಿಕ್ಷಣ ಉತ್ತೇಜಿಸಲು ರಾಷ್ಟ್ರಮಟ್ಟದಲ್ಲಿ ರೂಪಿಸಲಾಗಿರುವ ಒಂದು ಉತ್ತಮ ಕಾರ್ಯಕ್ರಮದ ಹೆಸರಾಗಿದೆ.  ಈ ಮೀನಾ ಎಂಬ ಹೆಸರು ಎಲ್ಲ ಬಾಲೆಯರ ಪ್ರತಿನಿಧಿ, ಉತ್ತೇಜನ, ಅನುಕಂಪ ಹಾಘೂ ಸಹಕಾರ ಮನೋಭಾವದ ದ್ಯೋತಕವಾಗಿದೆ ಎಂದು ಶಂಭುಲಿಂಗನಗೌಡ ಹಲಗೇರಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ಪಾಕಿಸ್ತಾನದಲ್ಲಿ ಉಗ್ರರ ಗುಂಡಿಗೂ ಹೆದರದೆ, ಬಾಲೆಯರ ಶಿಕ್ಷಣಕ್ಕಾಗಿ ಹಠ ತೊಟ್ಟ ‘ಮಲಾಲಾ’ ಎಂಬ ಬಾಲೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತೀಕದಂತೆ ಉಳಿದಿದ್ದಾಳೆ.  ಶಿಕ್ಷಣಕ್ಕಾಗಿನ ತುಡಿತ ಎಲ್ಲ ಹೆಣ್ಣು ಮಕ್ಕಳಲ್ಲಿ ಮೂಡಬೇಕು ಎಂದರು.  ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭು ಕಿಡದಾಳ ಅವರು ಮಾತನಾಡಿ ಸರ್ಕಾರದ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮಗಳು ಸಕಾಲದಲ್ಲಿ ಅನುಷ್ಠಾನಗೊಳ್ಳಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಮುಂತಾದ ಅನಿಷ್ಠ ಪದ್ಧತಿಗಳು ಹಾಗೂ ಮೂಢನಂಬಿಕೆಗಳಿಗೆ ಅನೇಕ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ.  ಇನ್ನಾದರೂ ಜನರು ಅನಿಷ್ಠ ಪದ್ಧತಿಗಳಿಗೆ ತಮ್ಮ ಮಕ್ಕಳ ಭವಿಷ್ಯ ಹಾಳುಮಾಡದಿರಲಿ ಎಂದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಕ್ಕಳ ಹಕ್ಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಠದ ಅವರು ಭಾಗವಹಿಸಿದ್ದರು.  ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಬಿ.ಆರ್.ಸಿ. ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಅವರು ಸ್ವಾಗತಿಸಿದರು.  ಹಳೇಗೊಂಡಬಾಳ ಶಾಲೆಯ ಬಾಲೆಯರಾದ ಯಶೋದಾ ಹಾಗೂ ಇಮಾಂಬಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
Please follow and like us:
error