ಆಹಾರ ಇಲಾಖೆ ಅಧಿಕಾರಿಗಳ ದಾಳಿ ೧. ೧೫ ಕೋಟಿ ರೂ. ಮೌಲ್ಯದ ಅಕ್ರಮ ದಾಸ್ತಾನು ವಶ.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶುಕ್ರವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ಸುಮಾರು ೧. ೧೫ ಕೋಟಿ ರೂ. ಮೌಲ್ಯದ ೧೯೭೦ ಕ್ವಿಂ- ಕಡಲೆಕಾಳು, ೬೫೦ ಕ್ವಿಂ.-ಹುರಳಿ ಹಾಗೂ  ೪೨೬ ಕ್ವಿಂ. ಎಳ್ಳು ಜಪ್ತಿ ಮಾಡಿದ್ದಾರೆ.
     ನೆರೆಯ ರಾಜ್ಯದ ಸೊಲ್ಲಾಪುರದ ಕೆಲವು ಟ್ರೇಡರ್‍ಸ್‌ಗಳು ಹಾಗೂ ಬಾಗಲಕೋಟೆ ಜಿಲ್ಲೆಯವರೂ ಸಹ ಕುಷ್ಟಗಿಯಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಕಡಲೆಕಾಳು, ಹುರುಳಿ ಹಾಗೂ ಎಳ್ಳು ದಾಸ್ತಾನು ಇರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಹಣಿ, ಉತಾರೆ, ಜಮೀನಿನ ದಾಖಲೆಗಳು ಅಥವಾ ಖರೀದಿ

ಮಾಡಿದ ಬಗ್ಗೆ ರಸೀದಿಗಳನ್ನಾಗಲಿ ಸಲ್ಲಿಸಿಲ್ಲ.  ಅಲ್ಲದೆ ದಾಸ್ತಾನು ವಹಿವಾಟಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ಲೈಸೆನ್ಸ್ ಪಡೆದಿರುವ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ.  ಸಂಗ್ರಹಣಾ ಶುಲ್ಕ ಪಾವತಿಸುವ ಆಧಾರದ ಮೇಲೆ ದಾಸ್ತಾನು ಮಾಡಿಕೊಂಡಿದ್ದಾಗಿ ಉಗ್ರಾಣ ವ್ಯವಸ್ಥಾಪಕರು ತಿಳಿಸಿದರು.  ದಾಸ್ತಾನಿನ ಬಗ್ಗೆ ಇನ್ನಷ್ಟು ಪರಿಶೀಲಿಸಲಾಗಿ, ನಾಲ್ವರು ದಾಸ್ತಾನು ಮಾಡಿರುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಅಂದರೆ, ಖರೀದಿ ಮಾಡಿರುವುದಕ್ಕೆ ರಸೀದಿ, ರೈತರು ಬೆಳೆದಿದ್ದಲ್ಲಿ ಪಹಣಿ, ವ್ಯವಹಾರಕ್ಕೆ ಲೈಸೆನ್ಸ್ ದಾಖಲೆಗಳು ಯಾವುದೂ ಇರುವುದಿಲ್ಲ.  ದಾಸ್ತಾನುದಾರರು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ದಾಸ್ತಾನು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯನ್ವಯ  ೧೯೭೦ ಕ್ವಿಂ- ಕಡಲೆಕಾಳು, ೬೫೦ ಕ್ವಿಂ.-ಹುರಳಿ ಹಾಗೂ  ೪೨೬ ಕ್ವಿಂ. ಎಳ್ಳು ಜಪ್ತಿ ಮಾಡಲಾಗಿದ್ದು, ಸುಮಾರು ೧. ೧೫ ಕೋಟಿ ರೂ. ಗಳ ಮೌಲ್ಯದ ಅಂದಾಜು ಮಾಡಲಾಗಿದೆ.  ಜಪ್ತಿ ಮಾಡಿಕೊಂಡಿರುವ ಕಡಲೆಕಾಳು, ಹುರುಳಿ ಹಾಗೂ ಎಳ್ಳಿನ ಚೀಲಗಳನ್ನು ಸದ್ಯ ಮುಂದಿನ ಆದೇಶದವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.  ದಾಳಿ ಸಂದರ್ಭದಲ್ಲಿ ಕುಷ್ಟಗಿ ಆಹಾರ ನಿರೀಕ್ಷಕ ಶರಣಪ್ಪ ಅವರು ಉಪಸ್ಥಿತರಿದ್ದರು ಎಂದು ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ತಿಳಿಸಿದ್ದಾರೆ.

Leave a Reply