ಶಿಕ್ಷಕರು ವರ್ಗಾವಣೆ ಆದೇಶ ಪಡೆಯಲು ಗುಲಬರ್ಗಾ ಕಚೇರಿಗೆ ತೆರಳುವ ಅಗತ್ಯವಿಲ್ಲ

  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕುರಿತಂತೆ ಗುಲಬರ್ಗಾ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡು ವರ್ಗಾವಣೆ ಪಡೆದ ಶಿಕ್ಷಕರು, ವರ್ಗಾವಣೆ ಆದೇಶ ಪಡೆಯಲು ಗುಲಬರ್ಗಾ ಕಚೇರಿಗೆ ತೆರಳುವ ಅಗತ್ಯವಿಲ್ಲ, ಶಿಕ್ಷಕರಿಗೆ ಅಂಚೆ ಮೂಲಕವೇ ಆದೇಶ ಕಳುಹಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಲಬರ್ಗಾ ಆಯುಕ್ತಾಲಯದ ನಿರ್ದೇಶಕರು ತಿಳಿಸಿದ್ದಾರೆ.
  ಗುಲಬರ್ಗಾದಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜೂ. ೧೧ ರಂದು ಖುದ್ದಾಗಿ ಗುಲಬರ್ಗಾ ಆಯುಕ್ತಾಲಯಕ್ಕೆ ಹಾಜರಾಗಿ ವರ್ಗಾವಣೆ ಆದೇಶ ಪಡೆಯುವಂತೆ ತಿಳಿಸಲಾಗಿತ್ತು.  ಆದರೆ ದೂರದ ಪ್ರದೇಶದಿಂದ ಖುದ್ದಾಗಿ ಬಂದು ಆದೇಶ ಪಡೆಯಲು ಆಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ವರ್ಗಾವಣೆ ಆದೇಶಗಳನ್ನು ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಅಂಚೆ ಮೂಲಕ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.  ಆದ್ದರಿಂದ ಶಿಕ್ಷಕರು ಖುದ್ದಾಗಿ ಗುಲಬರ್ಗಾಕ್ಕೆ ತೆರಳುವ ಅಗತ್ಯವಿಲ್ಲ ಎಂದು ಗುಲಬರ್ಗಾ ಆಯುಕ್ತಾಲಯದ ನಿರ್ದೇಶಕರು ತಿಳಿಸಿದ್ದಾರೆ.
ಅಭಿನಂದನೆ : ಗುಲಬರ್ಗಾ ಕಚೇರಿಗೆ ಖುದ್ದು  ಹಾಜರಾಗಿ ವರ್ಗಾವಣೆ ಆದೇಶ ಪಡೆಯಲು ಶಿಕ್ಷಕರಿಗೆ ಸೂಚಿಸಿದ್ದ ಆದೇಶದಿಂದ ಶಿಕ್ಷಕರಿಗೆ ಆಗಬಹುದಾದ ತೊಂದರೆ ಮತ್ತು ಅನಾನುಕೂಲತೆಗಳನ್ನು ಪರಿಗಣಿಸಿ, ಆದೇಶ ಪತ್ರಗಳನ್ನು ನೇರವಾಗಿ ಸಂಬಂಧಪಟ್ಟ ಶಿಕ್ಷಕರಿಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರಿಗೆ ಸಲ್ಲಿಸಿದ ಮನವಿಗೆ ಸ್ಪಂದನೆ ದೊರೆತಿದ್ದು, ಸಂಘದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಇಲಾಖೆಯ ಆಯುಕ್ತರು, ನಿರ್ದೇಶಕರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಬಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error